
ರಾಜ್ಯದಲ್ಲಿ ಕೊರೋನಾ ವೈರಸ್ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಹೋರಾಟಕ್ಕೆ ಸಜ್ಜಾಗಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಜನತೆ ಮನೆಗಳಿಂದ ಹೊರಬಾರದಂತೆ ನಿರ್ಬಂಧ ಹೇರುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಹೀಗಾದ್ರೆ ದಿನದ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಹೀಗಾಗಿ ಮುಂದೆ ಎದುರಾಗುವ ಪರಿಸ್ಥಿತಿಗೆ ಈಗಿನಿಂದಲೇ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳೋದು ಒಳ್ಳೆಯದು. ಅಂದ್ರೆ ಮನೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇದರಿಂದ ಪದೇಪದೆ ಮನೆಯಿಂದ ಹೊರಹೋಗುವ ಅನಿವಾರ್ಯತೆ ತಪ್ಪುತ್ತದೆ. ಇನ್ನು ಕೊರೋನಾದಿಂದ ತಪ್ಪಿಸಿಕೊಳ್ಳಲು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯೊಳಗೇ ಇರುವ ತೀರ್ಮಾನ ಮಾಡಿರುವ ಕುಟುಂಬಗಳು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳೋದು ಅಗತ್ಯ. ಇಲ್ಲವಾದ್ರೆ ಒಂದೊಂದೇ ಸಾಮಗ್ರಿ ಖಾಲಿಯಾಗುತ್ತಿದ್ದಂತೆ ಅವುಗಳನ್ನು ಖರೀದಿಸಲು ಮನೆಯಿಂದ ಹೊರಗೆ ಬರಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಏನೆಲ್ಲ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.
ನಂಬಿದೋರನ್ನ ನಡುನೀರಲ್ಲಿ ಬಿಡದು ನೆಲ್ಲಿಕಾಯಿ!
ದಿನಸಿ ಸಾಮಗ್ರಿ ಸಂಗ್ರಹಿಸಿಡಿ: ಅಕ್ಕಿ, ಗೋಧಿ, ರಾಗಿ ಮುಂತಾದ ಧಾನ್ಯಗಳ ಜೊತೆಗೆ ನಿತ್ಯದ ಅಡುಗೆಗೆ ಅಗತ್ಯವಾದ ವಸ್ತುಗಳನ್ನು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ಖರೀದಿಸಿಟ್ಟುಕೊಳ್ಳಿ. ಒಂದು ವೇಳೆ ಸರ್ಕಾರ ಮನೆಯಿಂದ ಹೊರಬಾರದಂತೆ ನಿರ್ಬಂಧ ವಿಧಿಸಿದರೆ ಹಾಗೂ ನಿತ್ಯ ವಸ್ತುಗಳ ಖರೀದಿಗೆ ನಿಗದಿತ ಸಮಯ ನೀಡಿದರೆ ನಿಮಗೆ ಯಾವುದೇ ಗಡಿಬಿಡಿ ಅಥವಾ ಒತ್ತಡ ಸೃಷ್ಟಿಯಾಗೋದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮನೆಯೊಳಗೇ ಇರುವುದು ಹೆಚ್ಚು ಸುರಕ್ಷಿತವಾದ ಕಾರಣ ಪದೇಪದೆ ಮಾರ್ಕೆಟ್‍ಗೆ ಹೋಗುವ ಅನಿವಾರ್ಯತೆ ತಪ್ಪುತ್ತದೆ.
ಬೇಗ ಕೆಡದಂತಹ ತರಕಾರಿಗಳನ್ನು ಖರೀದಿಸಿ: ಇನ್ನು ತರಕಾರಿಗಳನ್ನು ಖರೀದಿಸುವಾಗ ಸ್ವಲ್ಪ ಜಾಣತನ ತೋರಿ. ಬೇಗ ಹಾಳಾಗುವ ಸೊಪ್ಪು ಹಾಗೂ ತರಕಾರಿಗಳ ಬದಲಿಗೆ ದೀರ್ಘಕಾಲ ಕೆಡದಿರುವ ಆಲೂಗಡ್ಡೆ, ಬೀಟ್ರೂಟ್ ಮುಂತಾದ ತರಕಾರಿಗಳನ್ನು ಜಾಸ್ತಿ ಪ್ರಮಾಣದಲ್ಲಿ ಖರೀದಿಸಿ. ಬೀನ್ಸ್, ಕ್ಯಾರೆಟ್, ಬೆಂಡೆಕಾಯಿ ಸೇರಿದಂತೆ ಬಹುತೇಕ ತರಕಾರಿಗಳನ್ನು ಒಂದು ವಾರಗಳ ಕಾಲ ಫ್ರಿಜ್‍ನಲ್ಲಿಡಬಹುದು. ಹೀಗಾಗಿ ಫ್ರಿಜ್‍ನಲ್ಲಿ ಜಾಸ್ತಿ ದಿನ ಇಡಬಹುದಾದಂತಹ ತರಕಾರಿಗಳನ್ನು ಕೂಡ ಖರೀದಿಸಿಡಿ. ಹಸಿಮೆಣಸು, ಶುಂಠಿಯಂತಹ ತರಕಾರಿಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಅನೇಕ ದಿನಗಳ ಕಾಲ ಬಳಸಬಹುದು. ಅದೇರೀತಿ ಬಟಾಣಿ ಕಾಳುಗಳನ್ನು ಬಿಡಿಸಿ ಏರ್‍ಟೈಟ್ ಕಂಟೈನರ್‍ನಲ್ಲಿ ಹಾಕಿ ಫ್ರೀಜರ್‍ನಲ್ಲಿಟ್ಟರೆ ಹಲವು ದಿನಗಳ ಕಾಲ ಹಾಳಾಗೋದಿಲ್ಲ. ಕೊತ್ತಂಬರಿ, ಕರಿಬೇವಿನ ಎಲೆಗಳನ್ನು ಕೂಡ ಚೆನ್ನಾಗಿ ತೊಳೆದು ಟಿಶ್ಯೂ ಮೂಲಕ ನೀರಿನಂಶ ಆರಿಸಿ ಡಬ್ಬದಲ್ಲಿ ಹಾಕಿ ಫ್ರಿಜ್‍ನಲ್ಲಿಟ್ಟರೆ ಅನೇಕ ದಿನಗಳ ಕಾಲ ಬಳಸಬಹುದು.
ಈಗ ದಿನಾ ದಿನ ಮಾಡಿ ಪುದೀನಾ ಸ್ಪೆಷಲ್, ಬೇಸಿಗೆಗೆ ಬೆಸ್ಟ್ ಮದ್ದು
ಹಣ್ಣುಗಳನ್ನು ಖರೀದಿಸಿಟ್ಟುಕೊಳ್ಳಿ: ಸೇಬು ಹಣ್ಣನ್ನು ಫ್ರಿಜ್‍ನಲ್ಲಿ ಹಲವು ದಿನಗಳ ಕಾಲ ಶೇಖರಿಸಿಟ್ಟರೆ, ಹಾಳಾಗೋದಿಲ್ಲ. ಇನ್ನು ಚಿಕ್ಕು, ಪಪ್ಪಾಯ, ಅನಾನಸು, ಬಾಳೆಹಣ್ಣು ಮುಂತಾದವನ್ನು ಆಯ್ಕೆ ಮಾಡುವಾಗ ಪೂರ್ತಿ ಹಣ್ಣಾಗದ ಸ್ವಲ್ಪ ಕಾಯಿಯಾಗಿರುವಂತವನೇ ಆರಿಸಿ.
ನಿತ್ಯ ಬಳಕೆ ವಸ್ತುಗಳು ಸಾಕಷ್ಟಿವೆಯೇ, ಚೆಕ್ ಮಾಡಿ: ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳಾದ ಪೇಸ್ಟ್, ಸೋಪು, ಶ್ಯಾಂಪು, ಹ್ಯಾಂಡ್‍ವಾಷ್, ಸ್ಯಾನಿಟೈಸರ್, ಡೆಟಾಲ್ ಮುಂತಾದ ವಸ್ತುಗಳನ್ನು ಖರೀದಿಸಿಟ್ಟುಕೊಳ್ಳೋದು ಒಳ್ಳೆಯದು. ಅದೇರೀತಿ ಕ್ಲೀನಿಂಗ್‍ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಅಗತ್ಯಕ್ಕಿಂತ ಒಂದೆರಡು ಹೆಚ್ಚೇ ಖರೀದಿಸಿ.
ಕಾರ್ ಅಥವಾ ಬೈಕ್‍ಗೆ ಪೆಟ್ರೋಲ್ ತುಂಬಿಸಿಡಿ: ಕಾರ್ ಮತ್ತು ಬೈಕ್‍ಗೆ ಮುನ್ನೆಚ್ಚರಿಕಾ ಕ್ರಮವಾಗಿ ಪೆಟ್ರೋಲ್ ತುಂಬಿಸಿಟ್ಟಿರೋದು ಒಳ್ಳೆಯದು. ಏನಾದ್ರೂ ಎಮರ್ಜೆನ್ಸಿ ಎದುರಾದ್ರೆ ಅಥವಾ ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಿದ್ರೆ ತೊಂದರೆ ಎದುರಾಗೋದಿಲ್ಲ. ಮನೆಯಲ್ಲಿ ಯಾರಾದ್ರೂ ಅನಾರೋಗ್ಯಕ್ಕೆ ತುತ್ತಾದ್ರೆ ತಕ್ಷಣ ಆಸ್ಪತ್ರೆಗೆ ಹೋಗಲು ಇದರಿಂದ ನೆರವಾಗುತ್ತದೆ.
ರೆಸ್ಟೋರೆಂಟ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಏಕಿರುತ್ತೆ ಗೊತ್ತಾ?
ಅಗತ್ಯ ಮೆಡಿಸಿನ್‍ಗಳನ್ನು ಖರೀದಿಸಿಡಿ: ನಿಮ್ಮ ಮನೆಯ ಸದಸ್ಯರು ನಿತ್ಯ ತೆಗೆದುಕೊಳ್ಳಲೇಬೇಕಾದ ಔಷಧಿಗಳಿದ್ದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿಟ್ಟುಕೊಳ್ಳಿ. ಪ್ಯಾರಸಿಟಾಮೋಲ್, ವಿಕ್ಸ್, ಕಾಟನ್ ಸೇರಿದಂತೆ ಕೆಲವೊಂದು ಅಗತ್ಯ ಔಷಧಗಳನ್ನು ಮನೆಯಲ್ಲಿಟ್ಟುಕೊಂಡಿರಿ.
ತಿಂಡಿ-ತಿನಿಸುಗಳನ್ನು ಸ್ಟಾಕ್ ಮಾಡಿ: ಬಿಸ್ಕೇಟ್ಸ್, ಚಾಕೋಲೇಟ್, ಬ್ರೆಡ್, ಮ್ಯಾಗಿ ಸೇರಿದಂತೆ ಸ್ನಾಕ್ಸ್ಗೆ ಬಳಸಬಹುದಾದ ತಿನಿಸುಗಳನ್ನು ಶೇಖರಿಸಿಟ್ಟುಕೊಳ್ಳಿ. ಮನೆಯಲ್ಲಿ ಮಕ್ಕಳಿದ್ದರೆ ಇಂಥ ತಿನಿಸುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.