ನೀವು ಸ್ಪೈಸಿ ಹಾಗೂ ಘಾಟು ಇರುವ ಮಾಂಸಾಹಾರದ ಖಾದ್ಯಗಳನ್ನು ಇಷ್ಟಪಡುವವರಾಗಿದ್ದರೆ, ಮನೆಯಲ್ಲಿಯೇ ತಯಾರಿಸಿದ ಅದ್ಭುತ ಮಸಾಲೆಯೊಂದಿಗೆ ಮಾಡುವ ಈ ಮಸಾಲಾ ಮಟನ್ ಫ್ರೈ ಖಂಡಿತವಾಗಿಯೂ ರುಚಿ ನೋಡಲೇಬೇಕು. ಇದು ಕೇವಲ ಸಾಧಾರಣ ಮಟನ್ ಫ್ರೈ ಅಲ್ಲ, ನಮ್ಮ ಅಜ್ಜಿ-ಮುತ್ತಜ್ಜಿಯರ ಕಾಲದ ಸಂಪ್ರದಾಯದಂತೆ ಹುರಿದು ಜಜ್ಜಿದ ಮಸಾಲಾ ಪುಡಿಯಿಂದ ಮಾಡುವ ಅದ್ಭುತ ಖಾದ್ಯ. ರೆಡಿಮೇಡ್ ಮಸಾಲೆಗಳಿಗಿಂತ ಭಿನ್ನವಾಗಿ, ತಕ್ಷಣವೇ ತಯಾರಿಸುವ ಈ ಮಸಾಲೆಯಿಂದ ಅಡುಗೆ ಮನೆ ಇಡೀ ಘಮಘಮಿಸುತ್ತದೆ. ಮಟನ್ ತುಂಡುಗಳು ಒಳಗಡೆ ಜ್ಯೂಸಿಯಾಗಿದ್ದು, ಹೊರಗಡೆ ಮಸಾಲೆ ಚೆನ್ನಾಗಿ ಹಿಡಿದು ಪರ್ಫೆಕ್ಟ್ ಆಗಿ ರೋಸ್ಟ್ ಆಗುತ್ತವೆ. ಬಕ್ರೀದ್ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಸುಲಭವಾಗಿ ಮಸಾಲಾ ಮಟನ್ ಫ್ರೈ ಹೇಗೆ ಮಾಡುವುದು ಎಂದು ಇಲ್ಲಿ ನೋಡಿ.
ಗಸಗಸೆ: 1 ಟೇಬಲ್ ಸ್ಪೂನ್
ಒಣ ಕೊಬ್ಬರಿ: 3 ಟೇಬಲ್ ಸ್ಪೂನ್
ಧನಿಯಾ (ಕೊತ್ತಂಬರಿ ಬೀಜ): 1.5 ಟೇಬಲ್ ಸ್ಪೂನ್
ಜೀರಿಗೆ: 1 ಟೀಸ್ಪೂನ್
ಸೋಂಪು: ಅರ್ಧ ಟೀಸ್ಪೂನ್
ಕಾಳು ಮೆಣಸು: ಅರ್ಧ ಟೀಸ್ಪೂನ್
ಏಲಕ್ಕಿ: 2
ಚಕ್ಕೆ: 1 ಸಣ್ಣ ತುಂಡು
ಲವಂಗ: 4
ಮಟನ್: ಅರ್ಧ ಕಿಲೋ
ಉಪ್ಪು: 1 ಟೀಸ್ಪೂನ್ (ರುಚಿಗೆ ತಕ್ಕಷ್ಟು)
ಒಂದು ದಪ್ಪ ತಳದ ಪ್ಯಾನ್ ಅನ್ನು ಸ್ಟವ್ ಮೇಲಿಟ್ಟು ಅದರಲ್ಲಿ ಗಸಗಸೆ, ಒಣ ಕೊಬ್ಬರಿ, ಧನಿಯಾ, ಜೀರಿಗೆ, ಸೋಂಪು, ಕಾಳು ಮೆಣಸು, ಏಲಕ್ಕಿ, ಚಕ್ಕೆ ಮತ್ತು ಲವಂಗಗಳನ್ನು ಹಾಕಿ. ಇವುಗಳನ್ನು ಸಣ್ಣ ಉರಿಯಲ್ಲಿ ಸೀದು ಹೋಗದಂತೆ ಕೆಂಪಗೆ ಹುರಿಯಿರಿ. ಇವು ಪೂರ್ತಿ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಈ ಫ್ರೆಶ್ ಮಸಾಲೆಯೇ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
ಈಗ ಒಂದು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಚ್ಛಗೊಳಿಸಿದ ಅರ್ಧ ಕಿಲೋ ಮಟನ್ ಹಾಕಿ. ಅದಕ್ಕೆ 1.5 ಟೀಸ್ಪೂನ್ ಫ್ರೆಶ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಟೀಸ್ಪೂನ್ ಖಾರದ ಪುಡಿ, 1 ಟೀಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಮುಕ್ಕಾಲು ಲೋಟ ನೀರು ಸುರಿದು ಮುಚ್ಚಿ. ಮಟನ್ ಮೆತ್ತಗೆ ಬೇಯಲು ಸುಮಾರು 7 ರಿಂದ 8 ವಿಶಲ್ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಹಬೆ ಪೂರ್ತಿ ಹೋದ ಮೇಲೆ ಮುಚ್ಚಳ ತೆಗೆಯಿರಿ.
ಈಗ ಸ್ಟವ್ ಮೇಲೆ ಒಂದು ಅಗಲವಾದ ಪ್ಯಾನ್ ಇಟ್ಟು 4 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ಮೇಲೆ 2 ಕಡ್ಡಿ ಕರಿಬೇವು, 2 ಹಸಿಮೆಣಸಿನಕಾಯಿ ಸೀಳುಗಳು ಮತ್ತು ಸಣ್ಣಗೆ ಹೆಚ್ಚಿದ 1 ದೊಡ್ಡ ಈರುಳ್ಳಿ ಹಾಕಿ ಬ್ರೌನ್ ಬಣ್ಣ ಬರುವವರೆಗೆ ತಾಳ್ಮೆಯಿಂದ ಹುರಿಯಿರಿ.
ಈರುಳ್ಳಿ ಚೆನ್ನಾಗಿ ಬೆಂದ ಮೇಲೆ, ಕುಕ್ಕರ್‌ನಲ್ಲಿ ಬೇಯಿಸಿಟ್ಟ ಮಟನ್ ತುಂಡುಗಳನ್ನು ಪ್ಯಾನ್‌ಗೆ ಹಾಕಿ. ನಂತರ ನಾವು ತಯಾರಿಸಿಟ್ಟುಕೊಂಡ ಸ್ಪೆಷಲ್ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
ಟಿಪ್: ಅಡುಗೆಗೆ ಆಕರ್ಷಕ ಬಣ್ಣ ಬರಲು 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ.
ಉರಿಯನ್ನು ಮಧ್ಯಮದಲ್ಲಿ ಇಟ್ಟು, ಮಟನ್ ತುಂಡುಗಳಿಗೆ ಮಸಾಲೆ ಪೂರ್ತಿ ಹಿಡಿಯುವಂತೆ ನಿಧಾನವಾಗಿ ರೋಸ್ಟ್ ಮಾಡಿ. ಮಟನ್‌ನಲ್ಲಿರುವ ನೀರೆಲ್ಲಾ ಆವಿಯಾಗಿ ಎಣ್ಣೆ ಮೇಲೆ ತೇಲುವವರೆಗೆ ಹುರಿಯಬೇಕು. ಕೊನೆಯದಾಗಿ ಉಪ್ಪು ಮತ್ತು ಖಾರವನ್ನು ಒಮ್ಮೆ ಪರೀಕ್ಷಿಸಿ ಬೇಕಿದ್ದರೆ ಸೇರಿಸಿಕೊಳ್ಳಿ.
ಅಷ್ಟೇ! ಘಮಘಮಿಸುವ ಸ್ಪೈಸಿ ಮಸಾಲಾ ಮಟನ್ ಫ್ರೈ ಸಿದ್ಧ. ಬಿಸಿ ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಈ ಮಟನ್ ಫ್ರೈ ಅದ್ಭುತ ಕಾಂಬಿನೇಷನ್. ಪ್ಲೇಟ್ ಖಾಲಿ ಆಗುವುದರಲ್ಲಿ ಸಂಶಯವೇ ಇಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.