
ಸಂಜೆ ಸಮಯದಲ್ಲಿ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ ಜೊತೆ ಏನಾದರೂ ಬಿಸಿ ಬಿಸಿಯಾಗಿ ತಿನ್ನಬೇಕು ಅನಿಸಿದಾಗ ಆಲೂಗಡ್ಡೆ ಬೋಂಡಾ ಉತ್ತಮ ಆಯ್ಕೆಯಾಗಿದೆ. ಕಡಿಮೆ ಸಾಮಗ್ರಿಗಳಲ್ಲೇ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸ್ನ್ಯಾಕ್ಸ್ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಇರುತ್ತದೆ.
ಆಲೂಗಡ್ಡೆ ಬೋಂಡಾ ಮಾಡಲು ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 4
ಕಡಲೆ ಹಿಟ್ಟು – 1 ಕಪ್
ಅರಿಶಿನ ಪುಡಿ – 1/2 ಟೀ ಸ್ಪೂನ್
ಇಂಗು – 1/2 ಟೀ ಸ್ಪೂನ್
ಬೆಳ್ಳುಳ್ಳಿ – 10 ಎಸಳು
ಹಸಿಮೆಣಸಿನಕಾಯಿ – 1 ಟೇಬಲ್ ಸ್ಪೂನ್
ಕೊತ್ತಂಬರಿ ಬೀಜ – 1 ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಿರುವಷ್ಟು
ಜೀರಿಗೆ – 1/2 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆರಸ – 1/2 ಟೀ ಸ್ಪೂನ್
ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ತೆಗೆದು, ಕೈಯಿಂದ ಅಥವಾ ಸೌಟ್ ಬಳಸಿ ಚೆನ್ನಾಗಿ ಹಿಸುಕಿಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ನಂತರ ಅರಿಶಿನ ಪುಡಿ, ಇಂಗು ಹಾಗೂ ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಒಗ್ಗರಣೆಗೆ ಹಿಸುಕಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.
ಈಗ ಮತ್ತೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಸ್ವಲ್ಪ ಅರಿಶಿನ, ಇಂಗು, ಉಪ್ಪು ಮತ್ತು ನೀರು ಹಾಕಿ ಬೋಂಡಾಗೆ ಬೇಕಾದಷ್ಟು ದಪ್ಪನೆಯ ಹಿಟ್ಟನ್ನು ತಯಾರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಆಲೂಗಡ್ಡೆ ಉಂಡೆಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಕರಿಯಿರಿ. ಬೋಂಡಾಗಳು ಎಲ್ಲ ಕಡೆ ಚೆನ್ನಾಗಿ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾದ ಬಳಿಕ ತೆಗೆದು ಎಣ್ಣೆ ಹೀರಲು ಪೇಪರ್ ಮೇಲೆ ಇಡಿ.
ಇದೀಗ ಬಿಸಿ ಬಿಸಿಯಾದ ಆಲೂಗಡ್ಡೆ ಬೋಂಡಾ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಸಾಸ್ ಅಥವಾ ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಬಹುದು.
ಟೀ ಟೈಮ್‌ಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್
ಹೊರಗೆ ಗರಿಗರಿಯಾದ ಲೇಯರ್, ಒಳಗೆ ಮಸಾಲೆಯುಕ್ತ ಮೃದುವಾದ ಆಲೂಗಡ್ಡೆ—ಈ ಕಾಂಬಿನೇಷನ್ ಆಲೂಗಡ್ಡೆ ಬೋಂಡಾವನ್ನು ಟೀ ಟೈಮ್‌ನ ಜನಪ್ರಿಯ ಸ್ನ್ಯಾಕ್ಸ್‌ಗಳಲ್ಲಿ ಒಂದಾಗಿಸುತ್ತದೆ. ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಿಸಿ ಬಿಸಿಯಾಗಿ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.