ಏನನ್ನೂ ಬೇಕಾದರೂ ಸಾಧಿಸಬಹುದು ಅನ್ನುತ್ತವೆ ಈ ಜೆನ್ ಕತೆಗಳು

By Suvarna News  |  First Published Jan 7, 2021, 4:24 PM IST

ಕೆಲವೊಮ್ಮೆ ಮನಸ್ಸು ಮಂಕು ಕವಿದಂತಿರುತ್ತದೆ. ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವಂತೆ ಆಗುತ್ತದೆ. ಅಂಥ ಹೊತ್ತಿನಲ್ಲಿ ನಿಮ್ಮ ಕೈಹಿಡಿದು ನಡೆಸುತ್ತವೆ ಈ ಕತೆಗಳು.


ಕತೆ ಒಂದು

ಒಂದು ಊರಿನಲ್ಲಿ ಒಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಒಂದು ಎತ್ತನ್ನು ಎತ್ತಿ ತೋರಿಸಲು ಹೇಳಲಾಗಿತ್ತು. ಹತ್ತಾರು ಜನ ಅದನ್ನು ಎತ್ತಲು ಪ್ರಯತ್ನ ಪಟ್ಟರಾದರೂ ಯಾರೂ ಸಫಲರಾಗಲಿಲ್ಲ. ನೂರಕ್ಕೂ ಹೆಚ್ಚು ಕಿಲೋ ತೂಕ ಇರುವ ಆ ಎತ್ತು ಸಾಧುವಾಗಿತ್ತು. ಆದರೂ ಅದನ್ನು ಎತ್ತಲು ಯಾರಿಂದಲೂ ಆಗಲಿಲ್ಲ. ದೊಡ್ಡ ದೊಡ್ಡ ಕುಸ್ತಿಪಟುಗಳು, ಬಲಾಢ್ಯರು, ಮಲ್ಲರು ಪ್ರಯತ್ನಿಸಿ ಸೋತರು. 

Tap to resize

Latest Videos

undefined

ಅಷ್ಟರಲ್ಲಿ  ಅಲ್ಲಿಗೆ ಒಬ್ಬ ಸಾಮಾನ್ಯ ರೈತ ಬಂದ. ಅವನು ನೋಡಲು ಪೀಚಲನಾಗಿದ್ದ. ಕಟ್ಟುಮಸ್ತಾಗಿಯೇನೂ ಇರಲಿಲ್ಲ. ಅವನು ಆ ಎತ್ತಿನ ಹತ್ತಿರ ಬಂದು, ಸಲೀಸಾಗಿ ಎತ್ತನ್ನು ಎತ್ತಿ ನಾಲ್ಕು ಸುತ್ತು ಗರಗರನೆ ತಿರುಗಿಸಿ ಇಳಿಸಿಬಿಟ್ಟ. ನೋಡುತ್ತಿದ್ದ ಎಲ್ಲರೂ ಚಕಿತರಾದರು. ಸ್ಪರ್ಧೆಯನ್ನು ಆಯೋಜಿಸಿದವರು ಕೇಳಿದರು: ಯಾರಿಂದಲೂ ಆಗದಿದ್ದ ಕೆಲಸ ನಿನಗೆ ಹೇಗೆ ಸಾಧ್ಯವಾಯಿತು ಮಾರಾಯ?

''ಏನಿಲ್ಲ. ಇದು ನನ್ನದೇ ಕೊಟ್ಟಗೆಯಲ್ಲಿ ಬೆಳೆದ ಎತ್ತು. ಇದು ಹುಟ್ಟಿದ ಮೊದಲ ದಿನದಿಂದಲೇ ಇದನ್ನು ಪ್ರತಿದಿನ ಎತ್ತಿ ಆಡಿಸುತ್ತಾ ಇದ್ದವನು ನಾನು. ಪ್ರತಿದಿನವೂ ಎತ್ತುತ್ತ ಇದ್ದದ್ದರಿಂದ ಇದು ಬೆಳೆದದ್ದು ಗೊತ್ತಾಗಲಿಲ್ಲ, ಭಾರವಾದದ್ದೂ ನನಗೆ ಗೊತ್ತಾಗಲಿಲ್ಲ. ಅಭ್ಯಾಸವಾಗಿಬಿಟ್ಟಿತು.''

ನಾವೂ ಹಾಗೇ ಅಲ್ಲವೆ. ನಿಮಗೊಂದು ಭಾಷೆ ಕಲಿಯಬೇಕಿದೆ ಎಂದುಕೊಳ್ಳಿ. ಆದರೆ ಕಷ್ಟವಾಗುತ್ತಿದೆ. ದಿನಕ್ಕೊಂದು ಪದ ಕಲಿತರೂ ವರ್ಷದ ಕೊನೆಗೆ ಮುನ್ನೂರು ಅರುವತ್ತೈದು ಪದಗಳು ಕಲಿಯುತ್ತೀರಿ, ವಾಕ್ಯರಚನೆ ಗೊತ್ತಾಗಿಬಿಡುತ್ತದೆ! ನಿರಂತರ ಅಭ್ಯಾಸವೇ ಏನನ್ನಾದರೂ ಸಾಧಿಸುವ ಗುಟ್ಟು.

ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು! ...

ಕತೆ ಎರಡು

ಒಬ್ಬ ಅಪ್ರತಿಮ ಬಿಲ್ಗಾರನಿದ್ದ. ಅವನು, ಚತುರ ಬಿಲ್ವಿದ್ಯಾ ಪರಿಣತಿ ಸಾಧಿಸಿದವರು ಎನ್ನಬಲ್ಲ ಎಲ್ಲರನ್ನೂ ಎಡತಾಕಿ, ತನ್ನ ಶೌರ್ಯ ಪ್ರದರ್ಶನ ಮಾಡುತ್ತಿದ್ದ. ನನ್ನ ಸಾಧನೆಗೆ ನೀನು ಸರಿಗಟ್ಟಬಲ್ಲೆಯಾ ಎಂದು ಕೆಣಕುತ್ತಿದ್ದ. ಹಾಗೇ ಒಮ್ಮೆ ಒಬ್ಬ ಜೆನ್‌ ಗುರು, ಅವನೂ ಅಪ್ರತಿಮ ಧನುರ್ವಿದ್ಯಾ ಪರಿಣತನೇ, ಅವನನ್ನು ಭೇಟಿಯಾದ. 

"ಗುರುಗಳೇ, ನನ್ನ ಬಾಣ ಪ್ರಯೋಗ ಕೌಶಲವನ್ನು ನೋಡಿ'' ಎಂದವನೇ, ಬಿಲ್ಲಿಗೆ ಬಾಣವನ್ನು ಹೂಡಿದ. ದೂರದ ಮರದಲ್ಲಿ ಮಾಡಿದ ಎತ್ತಿನ ಕಣ್ಣಿನ ಗುರುತನ್ನ ಸರಿಯಾಗಿ ಮಧ್ಯದಲ್ಲಿ ಬೇಧಿಸಿದ. ಮರುಕ್ಷಣವೇ  ಆತ ಪ್ರಯೋಗಿಸಿದ ಇನ್ನೊಂದು ಬಾಣವು, ಮೊದಲ ಬಾಣವನ್ನು ಎರಡಾಗಿ ಸೀಳಿತು. ''ಇದು ನಿಮ್ಮಿಂದ ಸಾಧ್ಯವೆ?'' ಎಂದು ಆತ ಜೆನ್ ಗುರುವಿಗೆ ಸವಾಲು ಹಾಕಿದ.

ಗುರು ಏನೂ ಉತ್ತರಿಸಲಿಲ್ಲ. ಬದಲಾಗಿ ಆ ಬಿಲ್ಗಾರನನ್ನು ಕರೆದುಕೊಂಡು ಒಂದು ಬೆಟ್ಟವನ್ನು ಏರಿದ. ಬೆಟ್ಟದ ಅಂಚಿನಲ್ಲಿ ಒಂದು ಮುರಿದ ಮರ ತೂಗಾಡುತ್ತಿತ್ತು. ಆ ಮರದ ಮುರಿದ ಕೊಂಬೆ ಪಾತಾಳದತ್ತ ಚಾಚಿತ್ತು. ಅದು ಯಾವ ಕ್ಷಣದಲ್ಲೂ ಪಾತಾಳಕ್ಕೆ ಬಿದ್ದೇ ಬಿಡುತ್ತೇನೆ ಎಂಬಂತೆ ಇತ್ತು. ಗುರು ಸಲೀಸಾಗಿ ಆ ಕೊಂಬೆಯ ಮೇಲೆ ನಡೆದುಹೋಗಿ ಅದರ ಮಧ್ಯದಲ್ಲಿ ನಿಂತ. ನಂತರ ಬಿಲ್ಲಿಗೆ ಬಾಣವನ್ನು ಏರಿಸಿ, ದೂರದಲ್ಲಿದ್ದ ಮರದಿಂದ ಒಂದು ಹಣ್ಣನ್ನು ಕೆಡವಿದ. ವಾಪಸ್ ಬಂದು, 'ಇದನ್ನು ಮಾಡು' ಎಂದು ಹೇಳಿದ.

ಬಿಲ್ಗಾರ ಭಯದಿಂದ ಕಂಪಿಸತೊಡಗಿದ. 

ಗುರು ಹೇಳಿದ- ''ನೀನು ಬಾಣಪ್ರಯೋಗದ ಗುರಿಗಾರಿಕೆಯ ಮೇಲೆ ಪ್ರಾವೀಣ್ಯ ಸಾಧಿಸಿರುವೆ. ಆದರೆ ಆ ಬಾಣವನ್ನು ಪ್ರಯೋಗಿಸುವ ಮನಸ್ಸಿನ ಮೇಲೆ ಹಿಡಿತ ಸಾಧಿಸಿಲ್ಲ''

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕಾದುದು ಮುಖ್ಯ.

ಬಾಬಾ ವಂಗಾ 2021ರ ಬಗ್ಗೆ ನುಡಿದ ಭವಿಷ್ಯವೇನು? ...

ಕತೆ ಮೂರು

ಒಂದು ಚಂಡಮಾರುತ ಬಂದು ನಿಂತಿತ್ತು. ಜೆನ್‌ ಗುರು ರ್ಯೊಕೆನ್‌ ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದ. ಚಂಡಮಾರುತಕ್ಕೆ ಸಿಕ್ಕಿದ ಸ್ಟಾರ್‌ಫಿಶ್‌ಗಳು ದಡಕ್ಕೆ ಬಂದು  ಬಿದ್ದು ಮರಳಿ ಹೋಗಲಾಗದೆ ಒದ್ದಾಡುತ್ತಾ ಇದ್ದವು. ರ್ಯೊಕೆನ್ ಒಂದೊಂದನ್ನೇ ಹೆಕ್ಕಿ ಮರಳಿ ನೀರಿಗೆ ಬಿಟ್ಟು ಅವುಗಳನ್ನು ಬದುಕಿಸುತ್ತಿದ್ದ. ಅದನ್ನು ನೋಡಿದ ಒಬ್ಬ ವ್ಯಕ್ತಿ ಕೇಳಿದ- ''ಗುರುಗಳೆ, ಪ್ರತಿ ಸಲ ಚಂಡಮಾರುತ ಬಂದಾಗಲೂ ಇದೇ ರೀತಿ ಸಾವಿರಾರು ಸ್ಟಾರ್‌ಫಿಶ್‌ಗಳು ಬಂದು ದಡಕ್ಕೆ ಬಿದ್ದು ಸಾಯುತ್ತವೆ. ನೀವು ಎಷ್ಟನ್ನಂತ ಬದುಕಿಸಲು ಸಾಧ್ಯ? ನಿಮ್ಮ ಕೆಲಸ ವ್ಯರ್ಥವಲ್ಲವೇ? ಇದು ಏನು ಬದಲಾವಣೆ ಮಾಡುತ್ತದೆ?''

ರ್ಯೊಕೆನ್ ಒಂದು ಸ್ಟಾರ್‌ಫಿಶ್ಸನ್ನು ನೀರಿಗೆ ಬಿಡುತ್ತಾ ಉತ್ತರಿಸಿದರು- ''ಇರಬಹುದು. ಆದರೆ ಈ ಮೀನಿಗಂತೂ ಇದು ಸಾವು- ಬದುಕಿನ ಬದಲಾವಣೆ!''

ನಮ್ಮ ಒಂದು ಪುಟ್ಟ ವರ್ತನೆಯೂ ಇನ್ನೊಬ್ಬರ ಬದುಕಿನ ಮಹತ್ವದ ಘಟನೆ ಆಗಿರಬಹುದು. 

ಈ ವರ್ಷ ಕೊನೆಯ ಆರು ರಾಶಿಯವರಿಗೆ ಲವ್ ಲೈಫ್ ಹೇಗಿರುತ್ತೆ? ...

 

click me!