ಈ ಕಾರ್ತಿಕ ಪೂರ್ಣಿಮೆಯಂದು ಏನು ಮಾಡಿದರೆ ಶುಭವಾಗುತ್ತೆ...!?

By Suvarna News  |  First Published Nov 29, 2020, 4:23 PM IST

ಕಾರ್ತಿಕ ಪೌರ್ಣಿಮೆ, ತ್ರಿಪುರಾರಿ ಪೌರ್ಣಿಮೆ ಎಂಬ ಶ್ರೇಷ್ಠ ಆಚರಣೆಯು ಇದೇ ಸೋಮವಾರವಿದೆ. ಇದು ಶ್ರೇಷ್ಠವಾದ ದಿನ ಆಗಿರುವುದರಿಂದ ಈ ದಿನ ಕೆಲವು ಆಚರಣೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ದಾನ-ಧರ್ಮಗಳನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರಾಗುವುದು, ಈ ದಿನ ದೀಪ ದಾನ ಮಾಡಿದರೆ ಹತ್ತು ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುವುದು. ಹಾಗಾಗಿ ಈ ದಿನದಂದು ಏನು ಮಾಡಿದರೆ ಪುಣ್ಯ ಫಲ ಸಿಗಲಿದೆ ಎಂಬ ಬಗ್ಗೆ ನೋಡೋಣ....


ಕಾರ್ತಿಕ ಮಾಸದ ಹುಣ್ಣಿಮೆ (ಪೌರ್ಣಿಮೆ) ಈ ಬಾರಿ ಇದೇ ನವೆಂಬರ್ 30ರ ಸೋಮವಾರ ಬಂದಿದೆ. ಈ ದಿನಕ್ಕೆ ತ್ರಿಪುರಾರಿ ಪೂರ್ಣಿಮೆ ಎಂದೂ ಹೇಳಲಾಗುತ್ತದೆ. ಈ ದಿನ ಗಂಗಾ ಸ್ನಾನ ಮಾಡುವುದು ಅತ್ಯಂತ ಶುಭ ಎಂಬ ನಂಬಿಕೆಯೂ ಇದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳಿಗೂ ಮುಕ್ತಿ ಸಿಗಲಿದೆ ಎಂದೂ ನಂಬಲಾಗಿದೆ. ಅಂದು ದೇವತುಗಳು ಭೂಮಿಗೆ ಬರುತ್ತಾರೆಂಬ ನಂಬಿಕೆ ಸಹ ಇದೆ.

ಪೌರಾಣಿಕ ಕಥೆಗಳ ಅನುಸಾರ, ರಾಕ್ಷಸ ತ್ರಿಪುರಾಸರನ ವರ್ತನೆ ಮಿತಿ ಮೀರಿ, ದೇವಾನು ದೇವತೆಗಳಿಗೆ ಕಾಟ ಕೊಡಲಾರಂಭಿಸಿದ್ದ. ಇದರಿಂದ ಆತನನ್ನು ಎದುರಿಸಲಾಗದ ದೇವತೆಗಳು ಶಿವನ ಬಳಿಗೆ ಬಂದು ತಮ್ಮನ್ನು ರಕ್ಷಿಸು, ಈ ರಾಕ್ಷಸನಿಂದ ಮುಕ್ತಿ ಕೊಡಿಸು ಎಂದು ನಿವೇದನೆ ಮಾಡಿಕೊಂಡರು. ಇದಕ್ಕಾಗಿ ಶಿವನು ಕಾರ್ತಿಕ ಪೂರ್ಣಿಮೆ ದಿನದಂದೇ ರಾಕ್ಷಸ ತ್ರಿಪುರಾಸುರನ ವಧೆ ಮಾಡಿದನು. ಹೀಗಾಗಿ ಶಿವನಿಗೆ ತ್ರಿಪುರಾರಿ ಎಂಬ ಹೆಸರೂ ಬಂತು. ಈ ದಿನಕ್ಕೆ ತ್ರಿಪುರಾರಿ ಪೂರ್ಣಿಮ ಎಂಬ ಹೆಸರೂ ಬಂತು. ಹಾಗಾದರೆ ಈ ದಿನ ಯಾವ ಕಾರ್ಯಗಳನ್ನು ಮಾಡಿದರೆ ಶುಭ ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..! 

ಸತ್ಯನಾರಾಯಣ ಕಥೆ
ಶ್ರೀ ಮಹಾವಿಷ್ಣುವು ಮತ್ಯ್ಸಅವತಾರವನ್ನು ತಾಳಿದ್ದು ಇದೇ ಕಾರ್ತಿಕ ಪೂರ್ಣಿಮೆಯ ದಿನ ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನ ಶ್ರೀ ವಿಷ್ಣುವಿನ ಆರಾಧನೆ, ಪೂಜೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಮಾಡುವ ವಿಷ್ಣು ಪೂಜೆಗೆ ವಿಶೇಷ ಮಹತ್ವವಿದೆ. ಹಾಗಾಗಿ ಈ ದಿನ ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಸತ್ಯನಾರಾಯಣ ಕಥೆಯನ್ನು ಪಠಿಸುವುದಷ್ಟೇ ಅಲ್ಲದೇ ಅದರ ಶ್ರವಣ ಮಾತ್ರದಿಂದ ಸರ್ವಪಾಪ ನಾಶವಾಗುತ್ತದೆ.

ಇದನ್ನು ಓದಿ: ಕನಸಲ್ಲಿ ನೀರು ನೋಡಿದರೆ ಶುಭವೇ..? ಏನು ಹೇಳುತ್ತೆ ಸ್ವಪ್ನಶಾಸ್ತ್ರ ? 

ದೀಪದಾನ ಮತ್ತು ಗಂಗಾಸ್ನಾನ
ಕಾರ್ತಿಕ ಪೂರ್ಣಿಮೆ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಮಹತ್ವದ್ದೆಂದು ಹೇಳಲಾಗುತ್ತದೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಭಗವಂತ ವಿಷ್ಣುವಿನ ಕೃಪೆ ನಿಮಗೆ ಪ್ರಾಪ್ತಿಯಾಗಲಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಕೇವಲ ಪಾಪ ಮುಕ್ತರಾಗುವುದಲ್ಲದೆ, ರೋಗ-ರುಜಿನಗಳಿಂದ ಸಹ ದೂರವಿರುವಂತೆ ಮಾಡುತ್ತದೆ. ಇಷ್ಟೇ ಅಲ್ಲದೆ, ಈ ಕಾರ್ತಿಕ ಪೂರ್ಣೆಮೆಯ ದಿನ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚುವ ಪರಂಪರೆಯೂ ಇದೆ. ಹೀಗೆ ಮಾಡುವುದರಿಂದ ಸಮಸ್ಯೆಗಳು ದೂರಾಗುತ್ತವೆ. ಮತ್ತು ಈ ಕಾರ್ತಿಕ ದಿನದ ಹಿಂದಿನ ದಿನವನ್ನು ದೇವತೆಗಳ ದೀಪಾವಳಿ (ದೇವದೀಪಾವಳಿ) ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ದಿನ ದೀಪವನ್ನು ದಾನ ಮಾಡಿದರೆ ನಿಮಗೆ ಹತ್ತು ಯಜ್ಞಗಳನ್ನು ಮಾಡಿದಷ್ಟು ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. 

Tap to resize

Latest Videos



ದಾನ ಮತ್ತು ದಕ್ಷಿಣೆ
ಕಾರ್ತಿಕ ಪೂರ್ಣೆಮೆ ದಿನದಂದು ಅವಶ್ಯ ಇರುವವರಿಗೆ ದಾನ-ದಕ್ಷಿಣೆಗಳನ್ನು ಕೊಡುವುದರಿಂದ ಮನೆಯಲ್ಲಿ ಕಲಹಗಳು ದೂರವಾಗುವುದಲ್ಲದೆ, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ದಿನದಂದು ದಾನ ಮಾಡಿದರೆ ಹೆಚ್ಚು ಫಲ ಸಿಗುವುದಲ್ಲದೆ, ಹಣ, ವಸ್ತ್ರ, ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು. ಹೀಗೆ ದಾನ ಮಾಡುವುದರಿಂದ ನಿಮಗೆ ದುಪ್ಪಟ್ಟು ಪುಣ್ಯವು ಪ್ರಾಪ್ತವಾಗುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನು ಓದಿ: ಕಾಮಧೇನು ಶಂಖ ಮನೆಯಲ್ಲಿಟ್ಟರೆ ಇಷ್ಟಾರ್ಥ ಸಿದ್ಧಿ...

ಶಿವ ಪೂಜೆ
ಧಾರ್ಮಿಕ ಕಥೆಗಳ ಅನುಸಾರ ಈ ದಿನ ಶಿವನು ರಾಕ್ಷಸ ತ್ರಿಪುರಾಸುರನನ್ನು ಸಂಹರಿಸಿದ್ದ. ಹಾಗಾಗಿ ಈ ಪ್ರಯುಕ್ತ ಕಾರ್ತಿಕ ಪೂರ್ಣಿಮೆಯಂದು ಈಶ್ವರನ ಪೂಜೆ ಮಾಡುವುದರಿಂದ ಒಳಿತಾಗುತ್ತದೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು. ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ.

click me!