Ramadan ತಿಂಗಳು ಉಪವಾಸ ಆಚರಣೆ ಏಕೆ?

By Kannadaprabha News  |  First Published Apr 6, 2022, 10:01 AM IST

ಉಪವಾಸ ವ್ರತವು ಆತ್ಮನಿಯಂತ್ರಣ, ಶಿಸ್ತು-ಸಂಯಮ, ಆತ್ಮವಿಶ್ವಾಸ, ಸಂಕಲ್ಪ ಶಕ್ತಿಯನ್ನು ಹೆಚ್ಚಿಸುತ್ತದೆ. ಉಪವಾಸ ವ್ರತದಿಂದ ಹಸಿದಿರುವವ ತನ್ನ ಮುಂದೆ ಮೃಷ್ಟಾನ್ನವಿದ್ದರೂ ಅದನ್ನು ಮುಟ್ಟಲಾರ. ಒಂದು ವೇಳೆ ಇದನ್ನು ವರ್ಜಿಸುವುದಾದರೆ ಖಂಡಿತವಾಗಿಯೂ ಎಲ್ಲಾ ಕೆಟ್ಟಕೃತ್ಯಗಳನ್ನು ತಾನು ವರ್ಜಿಸಬಹುದೆಂಬ ಸಹನೆಯ ಪಾಠವನ್ನು ಉಪವಾಸ ಕಲಿಸುತ್ತದೆ.


ಹಿಜರಿ ಕ್ಯಾಲೆಂಡರ್‌ನ 9ನೇ ತಿಂಗಳಾದ ‘ರಂಜಾನ್‌’ ತಿಂಗಳಲ್ಲಿ ಜಾಗತಿಕವಾಗಿ ಮುಸ್ಲಿಮರು ಒಂದು ತಿಂಗಳ ಉಪವಾಸ ವ್ರತವನ್ನು ಆಚರಿಸುತ್ತಾರೆ. ನಮಾಜ್‌, ಕಡ್ಡಾಯ ದಾನ ಝಕಾತ್‌, ಹಜ್‌ನಂತೆ ರಂಜಾನ್‌ ತಿಂಗಳ ಉಪವಾಸ ವ್ರತವೂ ಮುಸಲ್ಮಾನರ ಕಡ್ಡಾಯ ಆರಾಧನೆಯಾಗಿದೆ. ಇಸ್ಲಾಮ್ ಧರ್ಮದಲ್ಲಿ ಉಪವಾಸ ವ್ರತ ಎಂದರೆ ಕೇವಲ ಸೃಷ್ಟಿಕರ್ತನ ಸಂಪ್ರೀತಿಯ ಇಚ್ಛೆಯೊಂದಿಗೆ ಆಹಾರ ಪಾನೀಯ ಸೇವನೆಯನ್ನು ವರ್ಜಿಸುವುದು ಮತ್ತು ವಿಷಯಾಸಕ್ತಿಯಿಂದ ದೂರವಿರುವುದು ಎಂದರ್ಥ.

ರಂಜಾನ್‌ ಉಪವಾಸ ಏಕೆ?

Tap to resize

Latest Videos

ಉಪವಾಸವು ಇಸ್ಲಾಂ ಧರ್ಮೀಯರಲ್ಲಿ ಅತ್ಯಂತ ಮಹತ್ವಪೂರ್ಣ ಆರಾಧನೆಯಾಗಿದೆ. ಪ್ರತಿಯೊಂದು ಜನಾಂಗದಲ್ಲೂ ಪ್ರತಿಯೋರ್ವ ಪ್ರವಾದಿಯೂ ಉಪವಾಸ ವ್ರತವನ್ನಾಚರಿಸುವ ಮಾತನ್ನಾಡಿದ್ದಾರೆ. ಇಂದಿಗೂ ವಿವಿಧ ಧರ್ಮದಲ್ಲಿ ಯಾವುದಾದರೊಂದು ರೂಪದಲ್ಲಿ ಉಪವಾಸ ವ್ರತವನ್ನಾಚರಿಸಲಾಗುತ್ತದೆ.

ರಂಜಾನ್: ಉಪವಾಸ ಮುಗಿಸುವಾಗ ಇಂಥ ತಪ್ಪುಗಳನ್ನೆಲ್ಲಾ ಮಾಡಬೇಡಿ

ಕುರಾನ್‌ ಉಪವಾಸವನ್ನು ಆಚರಿಸಲು ಮುಖ್ಯವಾಗಿ ಎರಡು ಕಾರಣಗಳನ್ನು ತಿಳಿಸಿದೆ: ಅದರಲ್ಲಿ ಪ್ರಮುಖವಾದುದು ‘ತಕ್ವಾ’ ಅಂದರೆ ದೇವಪ್ರಜ್ಞೆ ಅಥವಾ ಧರ್ಮನಿಷ್ಠೆ ಬೆಳೆಸುವುದು. ಕುರಾನಿನ 2ನೇ ಅಧ್ಯಾಯವಾದ ಅಲ… ಬಕರಾದ 183ನೇ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ, ‘ಓ ವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ‘ತಕ್ವಾ’ ಅಂದರೆ ದೇವಪ್ರಜ್ಞೆ, ಧರ್ಮನಿಷ್ಠೆಯ ಗುಣ ವಿಶೇಷವುಂಟಾಗುವುದೆಂದು ಆಶಿಸಲಾಗಿದೆ.

ಕುರಾನಿನ ಈ ಸೂಕ್ತಿಯ ಮೂಲಕ ಸ್ಪಷ್ಟವಾಗಿ ತಿಳಿದು ಬರುವುದೇನಂದರೆ, ಓರ್ವನು ಉಪವಾಸ ವ್ರತ ಆಚರಿಸಿದ ನಂತರ ಫಲಿತಾಂಶದ ರೂಪದಲ್ಲಿ ಆತನಲ್ಲಿ ದೇವಪ್ರಜ್ಞೆ, ನೈತಿಕತೆ ಉಂಟಾಗಬೇಕು. ಇದೇ‘ತಕ್ವಾ’. ಇದೊಂದು ವಿಶಾಲಾರ್ಥವಿರುವ ಪದ. ಸೃಷ್ಟಿಕರ್ತನಾದ ದೇವನು ಯಾವುದೆಲ್ಲಾ ಕಾರ್ಯಗಳನ್ನು ಆಜ್ಞಾಪಿಸಿದ್ದಾನೆಯೋ ಅವುಗಳನ್ನು ಅನುಸರಿಸಬೇಕು, ಯಾವುದೆಲ್ಲಾ ಕೃತ್ಯಗಳನ್ನು ನಿಷೇಧಿಸಿದ್ದಾನೆಯೋ ಅವುಗಳಿಂದ ದೂರ ನಿಲ್ಲಬೇಕು. ಮಾತ್ರವಲ್ಲದೆ ಪ್ರತಿಯೊಂದು ಕೃತ್ಯವನ್ನೂ, ಅದು ರಹಸ್ಯವಾಗಿರಲಿ ಅಥವಾ ಬಹಿರಂಗವಾಗಿರಲಿ ಅವುಗಳೆಲ್ಲವನ್ನೂ ಆ ದೇವನು ವೀಕ್ಷಿಸುತ್ತಿದ್ದಾನೆ, ಆತನ ದೃಷ್ಟಿಯಿಂದ ಅರೆಕ್ಷಣವೂ ಒಂದಿನಿತೂ ನಾವು ಮರೆಯಾಗುವುದಿಲ್ಲ ಎಂಬ ಪ್ರಜ್ಞೆಯೇ ‘ತಕ್ವಾ’.

ಎರಡನೆಯ ಕಾರಣ; ದೇವನಿಗೆ ಕೃತಜ್ಞತೆಯ ರೂಪದಲ್ಲಿ ಉಪವಾಸದ ಆಚರಣೆ. ದೈವಿಕ ಸಂದೇಶವಾದ ‘ಕುರಾನ್‌ ಅವತೀರ್ಣಗೊಂಡ ತಿಂಗಳಾಗಿದೆ ರಂಜಾನ್‌. ಆದ್ದರಿಂದ ಈ ತಿಂಗಳನ್ನು ‘ಕುರಾನಿನ ತಿಂಗಳು’ ಎಂದು ಹೇಳಲಾಗಿದೆ. ಈ ಕುರಿತು ಸ್ವತಃ ಕುರಾನ್‌ ಈ ರೀತಿ ಹೇಳುತ್ತದೆ- ಮಾನವರಿಗೆ ಸನ್ಮಾರ್ಗ, ಮಾರ್ಗದರ್ಶನ ಮತ್ತು ಸತ್ಯ-ಮಿಥ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರಾನ್‌’ ಅವತೀರ್ಣಗೊಂಡ ತಿಂಗಳು ರಂಜಾನ್‌ ಆಗಿರುತ್ತದೆ.

ಹೀಗಿದೆ ನೋಡಿ ಕತ್ನಳ್ಳಿ ಸ್ವಾಮೀಜಿಯ ಯುಗಾದಿ ಭವಿಷ್ಯ

ಅಸತ್ಯ ನುಡಿದರೆ ಉಪವಾಸ ವ್ಯರ್ಥ

ರಂಜಾನ್‌ ತಿಂಗಳ ಉಪವಾಸದ ಮುಖ್ಯ ಉದ್ದೇಶ ಈ ಮೇಲಿನದ್ದಾದರೂ ಇನ್ನೂ ಅನೇಕ ತರಬೇತಿಗಳು ಅದರಿಂದುಂಟಾಗುತ್ತವೆ. ಮನುಷ್ಯನಲ್ಲಿರುವ ಅರಿಷ್ವಡ್ವರ್ಗಗಳನ್ನು ನಿಯಂತ್ರಿಸಿ ಪಾವನವಾಗಲು ಉಪವಾಸವು ಅತಿ ಅಗತ್ಯ. ಮುಹಮ್ಮದ್‌ ಪೈಗಂಬರರು ಹೇಳುತ್ತಾರೆ. ಯಾವುದೇ ವ್ಯಕ್ತಿ ಉಪವಾಸದ ಸಂದರ್ಭದಲ್ಲಿ ಸುಳ್ಳು ಹೇಳುವುದರಿಂದ ಮತ್ತು ಅದರಂತೆ ವರ್ತಿಸುವುದರಿಂದ ದೂರವುಳಿಯದಿದ್ದರೆ, ಅವನು ಉಪವಾಸದಿಂದ ಅನ್ನಾಹಾರ ಸೇವಿಸದೇ ಇರಬೇಕಾದ ಅಗತ್ಯ ಅಲ್ಲಾಹನಿಗಿಲ್ಲ. ಅಂದರೆ ಓರ್ವ ವ್ಯಕ್ತಿ ಉಪವಾಸ ಆಚರಿಸಿಯೂ ದುಷ್ಕೃತ್ಯಗಳಿಂದ ದೂರವುಳಿಯದೇ ಇದ್ದರೆ ಅಂತಹ ಉಪವಾಸ ಆಚರಿಸಿಯೂ ಯಾವುದೇ ಪ್ರಯೋಜನ ಇಲ್ಲ. ಅದೊಂದು ವ್ಯರ್ಥ ಆರಾಧನೆ ಎಂಬುದು ಇದರ ಇಂಗಿತ.

ಉಪವಾಸ ವ್ರತ ಮಾನವನ ಮನಸ್ಸು, ದೇಹಗಳೆರಡರ ಮೇಲೂ ಉತ್ತಮ ಪ್ರಭಾವ ಬೀರುತ್ತದೆ. ಒಂದು ರೀತಿಯಲ್ಲಿ ‘ವಾರ್ಷಿಕ ತರಬೇತಿ’ ಆಗಿರುವ ಈ ಆರಾಧನೆಯಿಂದ ಮನುಷ್ಯ ತನ್ನನ್ನು ಬದಲಾಯಿಸಲು ಸಾಧ್ಯವಿದೆ. ವರ್ಷಪೂರ್ತಿ ‘ಸ್ವೇಚ್ಛೆಯ ಜೀವನ’ದ ಬದಲು ‘ದೇವೇಚ್ಛೆಯ ಜೀವನ’ವನ್ನು ಸಾಗಿಸುವಂತಾಗಬೇಕೆಂಬುದೇ ಇದರ ಉದ್ದೇಶ. ಮಾತ್ರವಲ್ಲದೆ, ಉಪವಾಸ ವ್ರತವು ಆತ್ಮನಿಯಂತ್ರಣ, ಶಿಸ್ತು-ಸಂಯಮ, ಆತ್ಮವಿಶ್ವಾಸ, ಸಂಕಲ್ಪ ಶಕ್ತಿಯನ್ನು ಹೆಚ್ಚಿಸುತ್ತದೆ. ಉಪವಾಸ ವ್ರತದಿಂದ ಹಸಿದಿರುವವ ತನ್ನ ಮುಂದೆ ಮೃಷ್ಟಾನ್ನವಿದ್ದರೂ ಅದನ್ನು ಮುಟ್ಟಲಾರ. ಒಂದು ವೇಳೆ ಇದನ್ನು ವರ್ಜಿಸುವುದಾದರೆ ಖಂಡಿತವಾಗಿಯೂ ಎಲ್ಲಾ ಕೆಟ್ಟಕೃತ್ಯಗಳನ್ನು ತಾನು ವರ್ಜಿಸಬಹುದೆಂಬ ಸಹನೆಯ ಪಾಠವನ್ನು ಉಪವಾಸ ನಮಗೆ ನೀಡುತ್ತದೆ.

ಸಹಾನುಭೂತಿಯ ಪಾಠ

ಉಪವಾಸ ವ್ರತವು ಮನುಷ್ಯನಿಂದ ಸ್ವಾರ್ಥ ಮತ್ತು ಆಲಸ್ಯವನ್ನು ದೂರಗೊಳಿಸುತ್ತದೆ. ಮಹಾನ್‌ ಅನುಗ್ರಹವಾದ ಆಹಾರ, ನೀರಿನ ಮಹತ್ವದ ಬಗ್ಗೆ ಪ್ರಜ್ಞೆಯನ್ನು ಬೆಳೆಸುತ್ತದೆ. ಅದು ಮಾನವನಿಗೆ ಹಸಿವು-ದಾಹದ ತೀವ್ರತೆಯ ಅನುಭವವನ್ನು ನೀಡುತ್ತದೆ. ಈ ಮೂಲಕ ಓರ್ವ ಉಪವಾಸಿಗನು ಇತರರ ಹಸಿವು-ದಾಹವನ್ನು ಅರ್ಥೈಸಬಲ್ಲವನಾಗುತ್ತಾನೆ. ಇದೇ ಪರಾನುಭೂತಿ. ಈ ರೀತಿ ಉಪವಾಸ ವ್ರತವು ಮಾನವನಲ್ಲಿ ತ್ಯಾಗಶೀಲ ಗುಣವನ್ನು ಬೆಳೆಸುತ್ತದೆ. ಇದೇ ತಿಂಗಳಲ್ಲಿ ಮುಸ್ಲಿಮರು ಕಡ್ಡಾಯ ದಾನವಾದ ಝಕಾತನ್ನು ಅರ್ಹರಿಗೆ ನೀಡುತ್ತಾರೆ.

ರಾಮನವಮಿಯ ಹೊಸ್ತಿಲಲ್ಲಿ ಈ ಶಕ್ತಿಶಾಲಿ ಮಂತ್ರಗಳು ನಿಮ್ಮ ಬಲ ಹೆಚ್ಚಿಸಲಿವೆ..

ಒಟ್ಟಿನಲ್ಲಿ ಉಪವಾಸ ವ್ರತವು ದೇವನ ಮಾರ್ಗದರ್ಶನ ದೊರೆತುದಕ್ಕಾಗಿ ಅವನ ಮಹಾನತೆಯನ್ನು ಪ್ರಕಟಿಸಲು, ಅವನಿಗೆ ಕೃತಜ್ಞರಾಗಲು ಮತ್ತು ದೇವ ಪ್ರಜ್ಞೆ ಬೆಳೆಸಲು ಸಹಾಯಕ. ಮಾತ್ರವಲ್ಲದೆ ಮನುಷ್ಯನ ಮನ-ಮಸ್ತಿಷ್ಕದ ಮೇಲೂ, ಶರೀರದ ಮೇಲೂ ಅಪಾರ ಪ್ರಭಾವವನ್ನು ಉಪವಾಸ ಬೀರುತ್ತದೆ ಎಂದು ನಮಗೆ ಈ ಮೂಲಕ ಮನವರಿಕೆಯಾಗುತ್ತದೆ.

ರಂಜಾನ್‌ ತಿಂಗಳು ನಾಡಿಗೂ ದೇಶಕ್ಕೂ ಒಳಿತನ್ನು ತರಲಿ. ಸರ್ವರಿಗೂ ರಂಜಾನ್‌ ತಿಂಗಳ ಶುಭಾಶಯಗಳು.

- ಮಹಮ್ಮದ್‌ ನವಾಝ್‌, ಬೆಂಗಳೂರು

click me!