ಉಡುಪಿ: ಚಿನ್ನದ ತೇರಿನಲ್ಲಿ‌ ಬಂದ ಕಡಗೋಲು ಕೃಷ್ಣ, ವೈಭವದಿಂದ ನಡೆದ ವಿಟ್ಲಪಿಂಡಿ ಉತ್ಸವ

By Gowthami KFirst Published Aug 20, 2022, 5:57 PM IST
Highlights

ಉಡುಪಿಯಲ್ಲಿ ಅಷ್ಟಮಿಯ ಪ್ರಯುಕ್ತ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಉಡುಪಿಯ ಅಷ್ಟಮಿ ಮಹೋತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.20): ಚಿನ್ನದ ತೇರಿನಲ್ಲಿ ಬಾಲಕೃಷ್ಣನ ಮೆರವಣಿಗೆ, ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ‌ ನಡೆ. ಕಣ್ಮಣಿಯಾದ ಕಡಗೋಲು ಕೃಷ್ಣ ಅಷ್ಟಮಠಗಳ ರಥ ಬೀದಿಯಲ್ಲಿ ತನ್ನ ಲೀಲೋತ್ಸವಗಳನ್ಬು ತೋರಿಸುತ್ತಾ ಸಾಗಿಬಂದಾಗ ಭಕ್ತರಿಗೆ ಖುಷಿಯೋ ಖುಷಿ!  ಹೌದು ಉಡುಪಿಯಲ್ಲಿ ಅಷ್ಟಮಿಯ ಪ್ರಯುಕ್ತ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಉಡುಪಿಯ ಅಷ್ಟಮಿ ಮಹೋತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ. ಇಂದು ಚಿನ್ನದ ರಥದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಯಿತು. ಚಾತುರ್ಮಾಸ್ಯ ಕಾಲವಾದ ಕಾರಣ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ, ಹಾಗಾಗಿ ಅಷ್ಟಮಿಗೆಂದೇ ತಯಾರಿಸಲಾಗುವ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅಷ್ಟಮಠಗಳ ಸುತ್ತಲೂ ರಥ ಬೀದಿಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗಿದಂತೆ ಪ್ರದಕ್ಷಿಣಕಾರವಾಗಿ ಚಿನ್ನದ ರಥದಲ್ಲಿ ದೇವರ ಮೆರವಣಿಗೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ನಡೆಸಿ, ಬಳಿಕ ರಥದ ಮುಂದೆ ಭಕ್ತರೊಡನೆ ಸಾಗಿ ಬಂದರು. ಹುಲಿ ವೇಷ ಸೇರಿದಂತೆ ಬಗೆ ಬಗೆಯ ವೇಷಧಾರಿಗಳು ಶ್ರೀ ಕೃಷ್ಣನ ಲೀಲೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠಗಳ ಅಂಗಳದಲ್ಲಿ ನಿಂತ ಭಕ್ತರು ಕೃಷ್ಣ ಜಪ ಮಾಡುತ್ತಾ ಚಿನ್ನದ ರಥಕ್ಕೆ ಕೈಮುಗಿದರು.

Latest Videos

ವಿಟ್ಲಪಿಂಡಿ ಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಹಬ್ಬ. ಶುಕ್ರವಾರ ನಡುರಾತ್ರಿ 11:54ಕ್ಕೆ ಅರ್ಜೆಪ್ರದಾನ ನಡೆಸಿ ಬಳಿಕ ದೇವರಿಗೆ ಸಮರ್ಪಿಸಲಾದ ಉಂಡೆ ಚಕ್ಕುಲಿಗಳನ್ನು ಈ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು. ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ಸಾವಿರಾರು ಮಂದಿಗೆ ಮಧ್ಯಾಹ್ನದ ಅನ್ನದಾಸೋಹ ನಡೆಯಿತು. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿಟ್ಲಪಿಂಡಿ ಮಹೋತ್ಸವ ಅದ್ದೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಅತೀ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ವೈಭವದಿಂದ ವಿಟ್ಲಪಿಂಡಿ ಮಹೋತ್ಸವ ಜರುಗಿತು. ಒಂದೆಡೆ ಮುದ್ದುಕೃಷ್ಣರ ಕಲರವ, ಮತ್ತೊಂದೆಡೆ ನೂರೆಂಟು ಮುಖವರ್ಣಿಕೆಯ ವೇಷಗಳು, ಈ ಬಾರಿಯ ಹಬ್ವದ ಸಂಭ್ರಮಕ್ಕೆ, ನವಿರಾಗಿ ಸುರಿಯುತ್ತಿದ್ದ ತಿಳಿ ಮಳೆ ಕೂಡ ಅಡ್ಡಿಯಾಗಲಿಲ್ಲ. 

ಉಡುಪಿಯಲ್ಲಿ 2 ದಿನ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ರಥಬೀದಿಯಲ್ಲಿ ಮುದ್ದು ಕೃಷ್ಣರ ಕಲರವ

ಕಳೆದ ಎರಡು ದಿನಗಳಿಂದ ಉಡುಪಿಯ ಕಡಗೋಲು ಕೃಷ್ಣ ಲಕ್ಷಾಂತರ ಜನರ ಕಣ್ಮಣಿಯಾಗಿದ್ದಾನೆ. ಪರ್ಯಾಯ ಮಠಾಧೀಶರಿಂದ ಬಗೆ ಬಗೆಯ ಪೂಜೆಗಳನ್ನು ಸ್ವೀಕರಿಸಿ ಸಂಭ್ರಮಿಸಿದ್ದಾನೆ. ಕೃಷ್ಣದೇವರ ಕರುಣೆ ಸದಾ ನಮ್ಮ ಮೇಲಿರಲಿ ಎಂದು ಭಕ್ತರು, ಕೈಮುಗಿದು ಬೇಡಿಕೊಂಡು ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.

ಉಡುಪಿ: ಕೃಷ್ಣನಿಗೆ ಕೃಷ್ಣಾಪುರ ಶ್ರೀಗಳಿಂದ ಅರ್ಘ್ಯ ಪ್ರದಾನ, ಇಂದು ಲೀಲೋತ್ಸವ

ಶಿರೂರು ಲಕ್ಷ್ಮಿ ವರತೀರ್ಥರನ್ನು ಮರೆಯುವಂತಿಲ್ಲ: ಉಡುಪಿಯ ವಿಟ್ಲಪಿಂಡಿ ಮಹೋತ್ಸವಕ್ಕೆ ಹೊಸ ಆಯಾಮ ಕೊಟ್ಟವರು ಶಿರೂರು ಮಠದ ಮಠಾಧೀಶರಾಗಿದ್ದ ಲಕ್ಷ್ಮಿವರ ತೀರ್ಥರು. ಅವರ ಅಕಾಲಿಕ ಮರಣದ ನಂತರ ಉಡುಪಿ ಅಷ್ಟಮಿ ಯಹಳೆಯ ವೈಭವ ಮರುಕಳಿಸಿಲ್ಲ. ಇಂದಿಗೂ ಭಕ್ತರು ವಿಟ್ಲಪಿಂಡಿ ಮಹೋತ್ಸವ ಬಂದರೆ ಶೀರೂರು ಶ್ರೀಪಾದರನ್ನು ನೆನೆಯುತ್ತಾರೆ. ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ ಶಿರೂರು ಲಕ್ಷ್ಮಿ ಅವರ ತೀರ್ಥರ ನೆನಪಿನಲ್ಲಿ ಸಾವಿರಾರು ಚಕ್ಕುಲಿಗಳನ್ನು ತಯಾರಿಸಿ ಉತ್ಸವಕ್ಕೆ ತೆರಳುವ ಭಕ್ತರಿಗೆ ನೀಡಲಾಯಿತು. ಸ್ಥಳದಲ್ಲೇ ಬಿಸಿ ಬಿಸಿ ಚಕ್ಕುಲಿ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಯಿತು. ಲಕ್ಷ್ಮಿ ವರತೀರ್ಥ ಶ್ರೀಪಾದರು ಬದುಕಿದ್ದಾಗ ಭಕ್ತರಿಗೆ ಉಂಡೆ ಚಕ್ಕುಲಿಗಳನ್ನು ಹಂಚಿ ಸಂಭ್ರಮಿಸುವುದು ಮಾತ್ರವಲ್ಲದೆ, ಸಾಂಪ್ರದಾಯಿಕ ಜನಪದ ವೇಷಧಾರಿಗಳಿಗೆ , ಅದರಲ್ಲೂ ಹುಲಿವೇಷಧಾರಿಗಳಿಗೆ ಲಕ್ಷಾಂತರ ರೂಪಾಯಿ ಭಕ್ಷೀಸು ನೀಡುತ್ತಿದ್ದರು. ವಿಟ್ಲಪಿಂಡಿ ಉತ್ಸವ ಬಂದಾಗೆಲ್ಲ ಉಡುಪಿಯ ಜನತೆ ಶಿರೂರು ಸ್ವಾಮೀಜಿಯನ್ನು ನಿರಂತರ ಸ್ಮರಿಸುತ್ತಾರೆ.

click me!