ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

By Suvarna News  |  First Published Apr 10, 2020, 6:18 PM IST

ಅರಿಶಿಣ ಕೇವಲ ಅಡುಗೆ, ಔಷಧಕ್ಕಷ್ಟೇ ಸೀಮಿತವಾಗಿಲ್ಲ. ಅದರಾಚೆಗೂ ಅದರ ಶಕ್ತಿ, ಮಹಿಮೆ ಬಹಳಷ್ಟಿದೆ. ಗ್ರಹಗಳ ನಂಟು ಇದಕ್ಕಿರುವುದು ನಿಮಗೊಂದು ಪ್ಲಸ್ ಪಾಯಿಂಟ್. ನಿಮ್ಮ ಗ್ರಹಗತಿಗಳಲ್ಲಿ ಅರಿಶಿಣ ಪ್ರಭಾವ ಬೀರುವುದಲ್ಲದೆ, ನಿಮ್ಮ ಬಳಿ ಐಶ್ವರ್ಯ ಬಂದು ಸೇರುವಂತೆ ಮಾಡುತ್ತದೆ. ವಿವಾಹ ಆಗದವರಿಗೆ ಕಂಕಣ ಭಾಗ್ಯವನ್ನು ಕರುಣಿಸುವ ಶಕ್ತಿಯೂ ಇದಕ್ಕಿದೆ. ಬನ್ನಿ ಅರಿಶಿಣ ಮಹತ್ವವ ಅರಿಯೋಣ.


ಹಿಂದೂ ಸಂಪ್ರದಾಯಲದಲ್ಲಿ ಅರಿಶಿಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯದಲ್ಲೂ ಇದರ ಪ್ರಭಾವದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಅರಿಶಿಣ ಸಂಪ್ರದಾಯ ಪಾಲನೆಗೆ, ಅಡುಗೆಗಳಿಗೆ ಮಾತ್ರ ಉಪಯೋಗವಾಗುವುದಲ್ಲದೆ, ಕಾಂಚಾಣದ ದಾರಿಯನ್ನೂ ತೋರಿಸುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿ ಕುಂದುವುದು, ಬೇಗ ವಿವಾಹಕ್ಕೂ ಅನುಕೂಲವಾಗಲಿದೆ. ಇಲ್ಲಿ ಬಹುಮುಖ್ಯವಾಗಿ ಗ್ರಹಗಳಿಂದ ಆಗುವ ತೊಂದರೆಗಳನ್ನೂ ಇದು ನಿವಾರಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಉಲ್ಲೇಖವಿದೆ.

ಅರಿಶಿಣದ ಮಹತ್ವ
ಇದೊಂದು ವಿಶೇಷ ಪ್ರಕಾರದ ಔಷಧಿ. ಇದರಲ್ಲಿ ದೈವೀಕ ಗುಣವೂ ಇದೆ. ಹಿಂದೂ ಧರ್ಮದಲ್ಲಿ ಅರಿಶಿಣವನ್ನು ಶುಭ ಮತ್ತು ಮಂಗಳಕಾರಿಯ ಸಂಕೇತವಾಗಿ ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಸ್ವಾದ ತರುವಂತೆ, ಜೀವನದಲ್ಲಿ ಸಂಪತ್ತೂ ಗಳಿಸಿಕೊಡುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ವಿಷವನ್ನು ಹೋಗಲಾಡಿಸುವ ಶಕ್ತಿ ಹೊಂದಿದ್ದಲ್ಲದೆ, ನಕಾರಾತ್ಮಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಇದನ್ನು ಹೋಮ-ಹವನಾದಿಗಳು ಹಾಗೂ ಔಷಧಗಳಲ್ಲೂ ಇದರ ಬಳಕೆಯನ್ನು ಮಾಡಲಾಗುತ್ತದೆ. 

ಇದನ್ನೂ ಓದಿ: ನೀವು ದತ್ತು ಪಡೀತೀರಾ, ಅವಳಿ ಮಕ್ಕಳ ಪೋಷಕರಾಗುತ್ತೀರಾ? ಜಾತಕ ಹೇಳುತ್ತೆ

ಜ್ಯೋತಿಷ್ಯದಲ್ಲಿ ಮಹತ್ವ
ಜ್ಯೋತಿಷ್ಯದಲ್ಲಿ ಅರಿಶಿಣಕ್ಕೆ ಅಗ್ರ ಸ್ಥಾನವೇ ಇದೆ. ಜ್ಯೋತಿಷಿಗಳ ಪ್ರಕಾರ ಗ್ರಹಗಳ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಲು ಅರಿಶಿಣದ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ಗುರುಗ್ರಹಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತದೆ. ಅರಿಶಿಣವು ಹಳದಿ, ಕಿತ್ತಳೆ ಹಾಗೂ ಕಪ್ಪುಬಣ್ಣಗಳಿಂದ ಕೂಡಿದೆ. ಇಲ್ಲಿ ಬಣ್ಣಗಳ ಆಧಾರದ ಮೇಲೆ ಗ್ರಹಗಳ ದೋಷಗಳನ್ನು ನಿವಾರಿಸಬಲ್ಲದಾಗಿದೆ. ಹಳದಿಯು ಗುರುಗ್ರಹ ಸಂಬಂಧಿಸಿದ್ದರೆ, ಕಿತ್ತಳೆ ಅರಿಶಿಣ ಮಂಗಳಕ್ಕೆ ಹಾಗೂ ಕಪ್ಪು ಅರಿಶಿಣ ಶನಿ ಗ್ರಹಕ್ಕೆ ಸಂಬಂಧಿಸಿದ್ದಾಗಿದ್ದು, ಲೋಪ ಪರಿಹಾರವಾಗಲಿದೆ. 

ಅರಿಶಿಣದಿಂದಾಗುವ ಲಾಭಗಳು
ಸಮತೋಲಿತ ಪ್ರಮಾಣದಂತೆ ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಇದನ್ನು ನೀರಿನಲ್ಲಿ ಬೆರಸಿ ಸೂರ್ಯನಿಗೆ ಅರ್ಪಿಸಿದರೆ, ಮದುವೆಗೆ ಸಂಬಂಧಿಸಿದ ಅಡೆತಡೆಗಳು ದೂರಾಗಲಿವೆ. ಹೊಟ್ಟೆ ಅಥವಾ ಕ್ಯಾನ್ಸರ್‌ಗೆ ಸಂಬಂಧಿಸಿದ ರೋಗವಿದ್ದರೆ ಅರಿಶಿಣ ದಾನ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅರಿಶಿಣ ತಿಲಕವನ್ನು ಪ್ರತಿದಿನ ಹಚ್ಚುವುದರಿಂದ ವಾಕ್ಶಕ್ತಿ ಬರಲಿದೆ.

ಇದನ್ನೂ ಓದಿ: ಅಂದು ಕೊಂಡಿದ್ದು ಕೈ ಹಿಡಿಯಲು ವಿಷ್ಣು ಸಹಸ್ರನಾಮ ಸಹಸ್ರ ಯೋಗ!

ನಿಮ್ಮದಾಗಲಿದೆ ಗುರುಬಲ
ನಿಮ್ಮ ಜಾತಕದಲ್ಲಿ ಬೃಹಸ್ಪತಿ (ಗುರು) ನೀಚ ಸ್ಥಾನದಲ್ಲಿದ್ದರೆ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ, ಅರಿಶಿಣವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಳಸಿದರೆ, ಗುರುವು ಬಲಗೊಂಡು ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಉಂಟಾಗಲು ನೆರವಾಗುತ್ತದೆ. ಹಳದಿ ಅರಿಶಿಣವನ್ನು ಗಂಟಿನಲ್ಲಿ ಕಟ್ಟಿ ಕುತ್ತಿಗೆ ಅಥವಾ ತೋಳಿನ ಸುತ್ತ ಧರಿಸಿದರೆ ಹಳದಿ ನೀಲಮಣಿಯಂತೆ ಕಾರ್ಯನಿರ್ವಹಿಸುವ ಮೂಲಕ ಗುರುವನ್ನು ಬಲಪಡಿಸುತ್ತದೆ. ಗುರುವಾರ ಬೆಳಗ್ಗೆ ಅರಿಶಿಣ ಧರಿಸುವುದು ಒಳ್ಳೆಯದು. 

ಕಂಕಣ ಬಲಕ್ಕೆ ಅರಿಶಿಣ
ನಿಮ್ಮ ವಿವಾಹಕ್ಕೆ ಹಲವು ಅಡ್ಡಿ ಆತಂಕಗಳು ಎದುರಾಗುತ್ತಲೇ ಇದ್ದರೆ ನಿಮ್ಮ ಸಹಾಯಕ್ಕೆ ಅರಿಶಿಣ ಬರುತ್ತದೆ. ಸ್ನಾನದ ನೀರಿಗೆ ಸ್ವಲ್ಪ ಪುಡಿ ಅರಿಶಿಣವನ್ನು ಸೇರಿಸಿ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರಿಶಿಣ ನೀರನ್ನು ಅರ್ಪಿಸಿ, ಬಳಿಕ ಇದನ್ನು ಗಂಟಲು ಹಾಗೂ ಹಣೆಗೆ ಹಚ್ಚಿಕೊಳ್ಳಬೇಕು. ಇದನ್ನು ಒಂದು ತಿಂಗಳು ನಿರಂತರವಾಗಿ ಮಾಡಿದಲ್ಲಿ ಕಾರ್ಯಸಿದ್ಧಿಯಾಗುತ್ತದೆ. 

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ನಕಾರಾತ್ಮಕ ಶಕ್ತಿ ಕುಗ್ಗಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅರಿಶಿಣದ ವಿಶೇಷ ಬಳಕೆಯನ್ನು ಮಾಡಬೇಕು. ಇದನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ವ್ಯಕ್ತಿಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಯೂ ದೂರವಾಗಿ ನೆಮ್ಮದಿ ನೆಲೆಸುತ್ತದೆ. ಮತ್ತು ಅರಿಶಿಣ ನೀರಿನ ಸ್ನಾನ ಭಾರಿ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಯ ತೇಜಸ್ಸು ವೃದ್ಧಿಯಾಗುವುದಲ್ಲದೆ, ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. 

click me!