ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

By Suvarna NewsFirst Published Aug 8, 2020, 2:53 PM IST
Highlights

ಪ್ರಥಮ ಪೂಜ್ಯ ಗಣಪತಿಯನ್ನು ಸುಖ, ಶಾಂತಿ ಹಾಗೂ ಸಮೃದ್ಧಿಯ ದಾತಾರನೆನ್ನುತ್ತಾರೆ. ಗಣೇಶನ ವಿಶೇಷ ಆರಾಧನೆಯಿಂದ ವಾಸ್ತುದೋಷವನ್ನು ನಿವಾರಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ಪೂಜಿಸಲು ಕುಳಿತಿರುವ ಗಣೇಶನ ಮೂರ್ತಿ ಶುಭದಾಯಕವಾಗಿದೆ. ಅಷ್ಟೇ ಅಲ್ಲದೆ ಮೂರ್ತಿಯಲ್ಲಿ ಗಣೇಶನ ಜೊತೆ ಮೋದಕ ಮತ್ತು ಮೂಷಕನಿದ್ದರೆ ಇನ್ನೂ ಉತ್ತಮ. ಮನೆಯ ವಾಸ್ತುದೋಷವನ್ನು ನಿವಾರಿಸಿಕೊಳ್ಳಲು ಗಣೇಶನ ಆರಾಧನೆಗೆ ಯಾವ ರೀತಿಯ ಮೂರ್ತಿಯನ್ನು ಮನೆಯಲ್ಲಿಟ್ಟರೆ ಶುಭ, ವಾಸ್ತುದೋಷ ನಿವಾರಣೆಗೆ ಗಣೇಶನನ್ನು ಹೇಗೆ ಒಲಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ.. 

ಪ್ರಥಮ ಪೂಜಿತ ಗಣೇಶನನ್ನು ಭಜಿಸಿದರೆ ಸರ್ವ ಸಂಕಷ್ಟವನ್ನು ನಿವಾರಿಸುತ್ತಾನೆ. ವಿಘ್ನಗಳನ್ನು ಪರಿಹರಿಸುವುದರಿಂದ ವಿಘ್ನನಿವಾರಕನೆಂಬ ಹೆಸರು ಬಂದಿದೆ. ದೂರ್ವೆ (ಗರಿಕೆ) ಪ್ರಿಯ ಗಣೇಶನನ್ನು ಭಕ್ತಿಯಿಂದ ಭಜಿಸಿದರೆ ಸಕಲ ಸಂಕಷ್ಟವನ್ನು ಪರಿಹರಿಸುತ್ತಾನೆ. ಪ್ರತಿಯೊಂದು ಶುಭಕಾರ್ಯದಲ್ಲೂ ಗಣಪತಿಗೆ ಆದಿ ಪೂಜೆ ಸಲ್ಲುತ್ತದೆ. ಪುರಾಣಗಳ ಪ್ರಕಾರ ವಕ್ರತುಂಡನನ್ನು ಸ್ಮರಿಸಿ ಭಜಿಸಿದರೆ ಸಂಕಷ್ಟವನ್ನು ಕಳೆದು ಸುಖವನ್ನು ತಂದುಕೊಡುತ್ತಾನೆಂಬ ಬಗ್ಗೆ ತಿಳಿಸಲಾಗಿದೆ.

ವಾಸ್ತುದೋಷವಿದ್ದಾಗ ಮನೆಯ ಸದಸ್ಯರ ನಡುವೆ ಕಲಹ, ಮಾನಸಿಕ ನೆಮ್ಮದಿ ಇಲ್ಲದಿರುವುದು, ಸ್ವಾಸ್ಥ್ಯ ಸಮಸ್ಯೆ ಕಾಡುವುದು, ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಗಣೇಶನನ್ನು ಪೂಜಿಸಿದರೆ ಈ ದೋಷಗಳಿಂದ ಮುಕ್ತಿಯನ್ನು ಕಾಣಬಹುದಾಗಿದೆ.



ಪೂರ್ವಜರ ಪ್ರಕಾರ ವಾಸ್ತುಪುರುಷನ ಪ್ರಾರ್ಥನೆಗೆ ಒಪ್ಪಿದ ಬ್ರಹ್ಮದೇವ ಮಾನವರ ಕಲ್ಯಾಣಕ್ಕಾಗಿ ವಾಸ್ತುಶಾಸ್ತ್ರದ ನಿಯಮವನ್ನು ರಚಿಸುತ್ತಾನೆ. ಅಷ್ಟೇ ಅಲ್ಲದೆ, ಗಣೇಶನನ್ನು ಪೂಜಿಸಿದ ಹೊರತು ವಾಸ್ತುದೇವನಿಗೆ ಸಂತುಷ್ಟಿ ದೊರಕದು ಎಂಬ ಉಲ್ಲೇಖವಿದೆ. ಹಾಗಾಗಿ ಗಣೇಶನ ಆರಾಧನೆಯಿಂದ ವಾಸ್ತುದೋಷವನ್ನು ನಿವಾರಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ: ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!

ವಾಸ್ತುದೋಷ ನಿವಾರಣೆಗೆ ಹೀಗೆ ಮಾಡಿ
• ವಾಸ್ತುಶಾಸ್ತ್ರದ ಅನುಸಾರ ಜೀವನದಲ್ಲಿ ಸದಾ ಸಂಕಷ್ಟಗಳು ಎಡಬಿಡದೇ ಕಾಡುತ್ತಿದ್ದರೆ ಗಣಪತಿಯ ಫೋಟೋ ಅಥವಾ ಪ್ರತಿಮೆಯನ್ನು ಮುಖ್ಯದ್ವಾರದ ಒಳಗೆ ಮತ್ತು ಹೊರಗೆ ಎರಡೂ ಬದಿಯಲ್ಲಿ ಒಂದೇ ಕಡೆ ಇಡಬೇಕು. ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದರಿಂದ ವಾಸ್ತುದೋಷದಿಂದ ಮುಕ್ತಿ ಪಡೆಯಬಹುದಾಗಿದೆ. ಮನೆಯಲ್ಲಿ ಸುಖ-ಸಮೃದ್ಧಿಯು ನೆಲೆಸುತ್ತದೆ.

• ಮಾವು, ಅಶ್ವತ್ಥ ಮತ್ತು ಬೇವಿನ ಮರದಿಂದ ಮಾಡಿದ ಗಣೇಶನ ಮೂರ್ತಿಯನ್ನು ಮನೆಯ ಪ್ರಮುಖ ದ್ವಾರದ ಬಳಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ.

• ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಶ್ವೇತ ವರ್ಣದ ಗಣೇಶನ ಮೂರ್ತಿ ಅಥವಾ ಫೋಟೋವನ್ನು ಪೂಜಿಸುವುದು ಉತ್ತಮ.

ಇದನ್ನು ಓದಿ: ಆಗಸ್ಟ್‌ನಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೀಗಿರುತ್ತವೆ..!

• ಮನೆಯಲ್ಲಿ ಗಣೇಶನ ಮೂರ್ತಿ ಅಥವಾ ಫೋಟೋವನ್ನು ಹೆಚ್ಚು ಇಡುವುದು ಉತ್ತಮವಲ್ಲ.

• ಗಣೇಶನ ಮೂರ್ತಿಯಲ್ಲಿ ಸೊಂಡಿಲು ಎಡಗಡೆಗೆ ತಿರುಗಿದ್ದರೆ ಅಂತಹ ಮೂರ್ತಿ ಮನೆಯಲ್ಲಿಡಲು ಉತ್ತಮ. ಅದೇ ಬಲಮುರಿ ಗಣೇಶನಿಗೆ ಸರಿಯಾದ ನಿಯಮಬದ್ಧ ಆರಾಧನೆ ಅಗತ್ಯ ಮತ್ತು ಬಲಮುರಿ ಗಣಪನನ್ನು ಪ್ರಸನ್ನಗೊಳಿಸಲು ಕಠಿಣ ಸಾಧನೆಯ ಅಗತ್ಯವಿರುತ್ತದೆ.

ಮನೆಯಲ್ಲಿ ವಾಸ್ತುದೋಷವಿದ್ದರೆ..?
ಮನೆಯ ಯಾವುದಾದರೊಂದು ಮೂಲೆಯಲ್ಲಿ ವಾಸ್ತುದೋಷವಿದ್ದರೆ ಅದನ್ನು ಕೆಡವಬೇಕೆಂದಿಲ್ಲ, ಹಾಗೆಯೇ ಬಿಟ್ಟು ವಾಸ್ತುದೋಷವನ್ನು ನಿವಾರಿಸಿಕೊಳ್ಳಬಹುದಾಗಿದೆ. ಆ ಜಾಗದಲ್ಲಿ ಕುಂಕುಮವನ್ನು ತುಪ್ಪದಲ್ಲಿ ಬೆರೆಸಿ ಅದರಿಂದ ಸ್ವಸ್ತಿಕ್ ಬರೆಯಬೇಕು. ಹೀಗೆ ಮಾಡುವುದರಿಂದ ವಾಸ್ತುದೋಷ ಕ್ರಮೇಣ ನಿವಾರಣೆಯಾಗುತ್ತದೆ. ಗಣೇಶನ ಆಶೀರ್ವಾದದಿಂದ ಮನೆಯಲ್ಲಿ ಸುಖ,ಶಾಂತಿ ದೊರಯುವುದಲ್ಲದೇ ಧನವೃದ್ಧಿ ಸಹ ಆಗುತ್ತದೆ. 

ಕಾರ್ಯಸ್ಥಳದಲ್ಲಿ ವಾಸ್ತುದೋಷವಿದ್ದರೆ?
ಕೆಲಸದ ಸ್ಥಳದಲ್ಲಿ ವಾಸ್ತುದೋಷವಿದ್ದರೆ ಅದನ್ನು ನಿವಾರಿಸಿಕೊಳ್ಳಲು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ವಿಘ್ನನಿವಾರಕನ ಫೋಟೋವನ್ನು ಇಡಬೇಕು. ಮುಖ್ಯವಾಗಿ ಫೋಟೋದಲ್ಲಿರುವ ದೇವರ ಮುಖವು ದಕ್ಷಿಣ ಅಥವಾ ನೈರುತ್ಯ ದಿಕ್ಕನ್ನು ನೋಡುತ್ತಿರಬಾರದು.

ಇದನ್ನು ಓದಿ: ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!

ಹೇಗಿರಬೇಕು ಗಣೇಶನ ವಿಗ್ರಹ?
ಸಂಕಷ್ಟಗಳನ್ನು ಕಳೆಯುವ ಗಣೇಶನಿಗೆ, ವಾಸ್ತುದೋಷವನ್ನು ನಿವಾರಿಸುವ ಶಕ್ತಿಯೂ ಇದೆ. ಮನೆಗೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಗಣೇಶನ ಫೋಟೋವನ್ನು ಇಡುವಾಗ, ಮುದ್ರೆಯ ಬಗ್ಗೆ ಗಮನಹರಿಸಬೇಕು. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಿಸಿಕೊಳ್ಳಬೇಕೆಂದರೆ ಕುಳಿತಿರುವ ಗಣಪತಿಯ ಫೋಟೋವನ್ನು ಇಡಬೇಕು. ಕೆಲಸದ ಸ್ಥಳದಲ್ಲಿರುವ ವಾಸ್ತುದೋಷ ನಿವಾರಣೆಗೆ ನಿಂತಿರುವ ಗಣೇಶನ ಫೋಟೋವನ್ನು ಇಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ನಿಂತಿರುವ ಗಣೇಶನ ಫೋಟೋದಲ್ಲಿ ಗಣಪತಿಯ ಕಾಲು ನೆಲವನ್ನು ಸ್ಪರ್ಶಿಸುತ್ತಿರಬೇಕು. ಇದರಿಂದ ಕೆಲಸದಲ್ಲಿ ಸ್ಥಿರತೆಯನ್ನು ಕಾಣಬಹುದು ಮತ್ತು ಕೆಲಸವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತದೆ.

click me!