ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.
ತಿರುಪತಿ (ಸೆ.26): ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ. ದೇಗುಲದ ಒಟ್ಟು ಸ್ಥಿರಾಸ್ತಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿರುವ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ ಸಮಿತಿ) ಮುಖ್ಯಸ್ಥ ವೈ.ವಿ.ಸುಬ್ಬಾರೆಡ್ಡಿ, ದೇಶದ ವಿವಿಧ ಕಡೆ ಒಟ್ಟು 7123 ಎಕರೆ ಪ್ರದೇಶದಲ್ಲಿ ತಿರುಪತಿ ದೇಗುಲದ 960 ಸ್ಥಿರಾಸ್ತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ದೇಗುಲದ ಆಡಳಿತದಲ್ಲಿ ಪಾರದರ್ಶಕತೆ ತರಲು 2020ರಲ್ಲೇ ದೇಗುಲದ ಆಸ್ತಿ ಕುರಿತು ಶ್ವೇತಪತ್ರ ಹೊರಡಿಸಲು ಟಿಟಿಡಿ ನಿರ್ಧರಿಸಿತ್ತು. ಆದರೆ ಕೋವಿಡ್ ಮತ್ತಿತರೆ ಕಾರಣಗಳಿಂದಾಗಿ ಆಸ್ತಿ ಸಮೀಕ್ಷೆ ಮತ್ತು ಸರ್ವೇ ಸಾಧ್ಯವಾಗಿರಲಿಲ್ಲ. ಇದೀಗ ಆ ಕಾರ್ಯ ಪೂರ್ಣಗೊಂಡಿದ್ದು, ದೇಗುಲವು ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.
ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ!
ಒಟ್ಟಾರೆ ದೇಗುಲದ ಹೆಸರಿನಲ್ಲಿ 8088.89 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 1128 ಸ್ಥಿರಾಸ್ತಿಗಳಿದ್ದವು. ಆದರೆ ಕೆಲ ಸಣ್ಣ ಪುಟ್ಟ ಆಸ್ತಿಗಳ ನಿರ್ವಹಣೆ ಕಾರ್ಯಸಾಧು ಎಲ್ಲ ಎಂಬ ಕಾರಣಕ್ಕೆ 1974-2014ರ ಅವಧಿಯಲ್ಲಿ 293 ಎಕರೆ ಪ್ರದೇಶದಲ್ಲಿನ 61 ಆಸ್ತಿಗಳನ್ನು ಹರಾಜು ಹಾಕಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
300 ಎಕರೆ ಭೂಮಿ ಖರೀದಿ: ದೇಗುಲದ ಮತ್ತು ಭಕ್ತರ ಭವಿಷ್ಯದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ 25 ಕೋಟಿ ರು. ವೆಚ್ಚದಲ್ಲಿ 130 ಎಕರೆ ಭೂಮಿಯನ್ನು ಸರ್ಕಾರದಿಂದ ಖರೀದಿಸಲು ನಿರ್ಧರಿಸಲಾಗಿದೆ. ಜೊತೆಗೆ ತಿರುಪತಿಯ ಎಸ್‌ವಿ ಝೂ ಪಾರ್ಕ್‌ನಿಂfದ ಪೆರೂರುನಲ್ಲಿರುವ ವಕುಲಮಾತಾ ದೇಗುಲದವರೆಗೆ ವರ್ತುಲ ರಸ್ತೆಗೂ ನಿರ್ಧರಿಸಲಾಗಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ವಿಐಪಿ ದರ್ಶನ ಇನ್ನು ತಡ: ಸಾಮಾನ್ಯ ಜನರಿಗೆ ಶ್ರೀವಾರಿ ದರ್ಶನವನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಹಾಲಿ ಗಣ್ಯರಿಗೆ ವಿಶೇಷ ದರ್ಶನ ವ್ಯವಸ್ಥೆಯನ್ನು ನಸುಕಿನ ಜಾವದ ಬದಲು ಬೆಳಗ್ಗೆ 10 ಗಂಟೆಯಿಂದ ಆರಂಭಿಸಲು ನಿರ್ಧರಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಕ್ಕೆ 42 ಲಕ್ಷ ವೆಚ್ಚದ ಧರ್ಮ ರಥ ನೀಡಿದ ಸುಧಾಮೂರ್ತಿ
ಇದಲ್ಲದೆ 14000 ಕೋಟಿ ನಗದು, 14000 ಕೆ.ಜಿ. ಚಿನ್ನ!: ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಸ್ಥಿರಾಸ್ತಿ ಬಗ್ಗೆ ಮಾತ್ರ ಶ್ವೇತಪತ್ರ ಹೊರಡಿಸಿದೆ. ಚರಾಸ್ತಿ ಬಗ್ಗೆ ಹೊರಡಿಸಿಲ್ಲ. ಆದರೆ ಬ್ಯಾಂಕ್‌ಗಳಲ್ಲಿ ಟಿಟಿಡಿ 14 ಸಾವಿರ ಕೋಟಿ ರು. ನಿಶ್ಚಿತ ಠೇವಣಿ ಹೊಂದಿದೆ ಹಾಗೂ ತಿಮ್ಮಪ್ಪನ ಭಂಡಾರದಲ್ಲಿ 14 ಸಾವಿರ ಕೇಜಿ ಚಿನ್ನ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದೂ ಸೇರಿದರೆ ಒಟ್ಟಾರೆ ಆಸ್ತಿ ಮೌಲ್ಯ ಲಕ್ಷ ಕೋಟಿ ರು. ಮೀರಲಿದೆ. 1 ವರ್ಷ ಹಿಂದಷ್ಟೇ (2021ರಲ್ಲಿ) 9 ಸಾವಿರ ಕೇಜಿ ಚಿನ್ನ ಹಾಗೂ 12 ಸಾವಿರ ಕೋಟಿ ರು. ಠೇವಣಿಯನ್ನು ಟಿಟಿಡಿ ಹೊಂದಿತ್ತು.