Navratri 2022: ಇಂದಿನಿಂದ ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ: ಕೊಲ್ಲೂರು, ಶೃಂಗೇರಿಗಳಲ್ಲಿ ಶರನ್ನವರಾತ್ರಿ

By Govindaraj SFirst Published Sep 26, 2022, 2:00 AM IST
Highlights

ಅರಮನೆ ನಗರಿ ಮೈಸೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಸೇರಿದಂತೆ ರಾಜ್ಯದೆಲ್ಲೆಡೆ 9 ದಿನಗಳ ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಲಿದೆ. ಇದೇ ವೇಳೆ, ಕೊಲ್ಲೂರು, ಶೃಂಗೇರಿ, ಸವದತ್ತಿ ಸೇರಿದಂತೆ ರಾಜ್ಯದ ಪ್ರಮುಖ ಶಕ್ತಿಕ್ಷೇತ್ರಗಳಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಬೆಂಗಳೂರು (ಸೆ.26): ಅರಮನೆ ನಗರಿ ಮೈಸೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಸೇರಿದಂತೆ ರಾಜ್ಯದೆಲ್ಲೆಡೆ 9 ದಿನಗಳ ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಲಿದೆ. ಇದೇ ವೇಳೆ, ಕೊಲ್ಲೂರು, ಶೃಂಗೇರಿ, ಸವದತ್ತಿ ಸೇರಿದಂತೆ ರಾಜ್ಯದ ಪ್ರಮುಖ ಶಕ್ತಿಕ್ಷೇತ್ರಗಳಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಮೈಸೂರಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌: ಅರಮನೆ ಹೊರಗೆ ನಡೆಯುವ ಸರ್ಕಾರಿ ದಸರಾ ಜೊತೆಗೆ, ಅರಮನೆಯ ಒಳಾವರಣದಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೂ ಸೋಮವಾರವೇ ಚಾಲನೆ ದೊರೆಯಲಿದೆ. ಅರಮನೆಯ ಒಳಾವರಣದಲ್ಲಿ ರಾಜವಂಶಸ್ಥರು ಕಳೆದ 413 ವರ್ಷಗಳಿಂದ ಸಂಪ್ರದಾಯಬದ್ಧವಾಗಿ ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಖಾಸಗಿ ದರ್ಬಾರ್‌ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ರಾಜಪೋಷಾಕಿನಲ್ಲಿ ಸಿಂಹಾಸನಾರೂಢರಾಗಿ ಪ್ರತಿನಿತ್ಯ ದರ್ಬಾರ್‌ ನಡೆಸಲಿದ್ದಾರೆ. ಜೊತೆಗೆ, ಪ್ರತಿದಿನ ಪೂಜೆ- ಪುನಸ್ಕಾರಗಳು ನಡೆಯಲಿವೆ.

ದಸರಾ ಕುಸ್ತಿಗೆ ಚಾಲನೆ: ದಸರಾ ಪ್ರಯುಕ್ತ ಸೋಮವಾರದಿಂದ ಅ.2 ರವರೆಗೆ ದಸರಾ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯ ಈ ವರ್ಷದ ಆಕರ್ಷಣೆಯಾಗಿ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ಅವರನ್ನು ಆಹ್ವಾನಿಸಲಾಗಿದ್ದು, ಸೆ.29 ರಂದು ಅವರು ಆಗಮಿಸಲಿದ್ದಾರೆ.

ಮೈಸೂರು: ಮೇಲೆಲ್ಲಾ ಥಳಕು, ಒಳಗೆ ಹುಳುಕು: ದೀಪಾಲಂಕಾರ ನೋಡ್ತಾ ಮೈಮರೆತು ಗುಂಡಿಗೆ ಬಿದ್ದೀರಿ ಜೋಕೆ..!

ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ: ಸಂಜೆ 6ಕ್ಕೆ ಮೈಸೂರಿನ ಅರಮನೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ, ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಭಾಗವಹಿಸುವರು. ಶಾಸಕ ಎಸ್‌.ಎ. ರಾಮದಾಸ್‌ ಅಧ್ಯಕ್ಷತೆ ವಹಿಸುವರು.

ರಂಭಾಪುರಿ ಶ್ರೀ ದಸರಾ ದರ್ಬಾರ್‌: ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಜರುಗುವ ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಲಿದೆ. ಮಹೋತ್ಸವ ಈ ಬಾರಿ ಬೇಲೂರಿನಲ್ಲಿ ನಡೆಯಲಿದೆ. ಮಹೋತ್ಸವದ ಅಂಗವಾಗಿ ಶ್ರೀಗಳು ಪ್ರತಿನಿತ್ಯ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಲಿದ್ದು, ಸಂಜೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ನಡೆಯಲಿದೆ. ಸಭೆಯಲ್ಲಿ ಜಗದ್ಗುರುಗಳು ರಾಜ ಪೋಷಾಕು ಧರಿಸಿ, ವೀರಸಿಂಹಾಸನದ ಮೇಲೆ ಆಸಿನರಾಗಲಿದ್ದಾರೆ. ಸಭೆಯಲ್ಲಿ ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ, ಉಪನ್ಯಾಸಗಳು ನಡೆಯಲಿವೆ. ವಿಜಯದಶಮಿಯಂದು ಸ್ವತ: ರಂಭಾಪುರಿ ಶ್ರೀಗಳು ಪೂರ್ಣಕುಂಭ ಹೊತ್ತು ತಂದು ಮಹಾಪೂಜೆ ನೆರವೇರಿಸುತ್ತಾರೆ. ಅಂದೇ ಸಂಜೆ ಶಮೀ ಪೂಜೆ ನೆರವೇರಿಸಿ ಬನ್ನಿ ಮುಡಿದ ನಂತರ ಅದ್ಧೂರಿಯಾಗಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

ಶೃಂಗೇರಿಯಲ್ಲಿ ಶರನ್ನವರಾತ್ರಿ ಆರಂಭ: ಶೃಂಗೇರಿಯ ಶಾರದಾ ಪೀಠದಲ್ಲಿ ಸಂಪ್ರದಾಯದಂತೆ ಮಹಾಲಯ ಅಮವಾಸ್ಯೆಯ ದಿನವಾದ ಭಾನುವಾರ ಶಾರದೆಗೆ ಮಹಾಭಿಷೇಕ ನೆರವೇರುವುದರೊಂದಿಗೆ ಶರನ್ನವರಾತ್ರಿ ಉತ್ಸವ ಆರಂಭಗೊಂಡಿತು. ನವರಾತ್ರಿ ಅಂಗವಾಗಿ ಸೋಮವಾರದಿಂದ ಮುಂದಿನ 9 ದಿನಗಳ ಕಾಲ ವಿವಿಧ ಆಭರಣ, ಸಿಂಗಾರದೊಂದಿಗೆ ಶಾರದೆಗೆ ದಿನಕ್ಕೊಂದು ಅಲಂಕಾರ ಮಾಡಲಾಗುತ್ತದೆ. ಪ್ರತಿದಿನ ಜಗದ್ಗುರುಗಳ ನವರಾತ್ರಿಯ ದರ್ಬಾರ್‌ ನಡೆಯುತ್ತದೆ. ರಾಜಬೀದಿಯಲ್ಲಿ ಪ್ರತಿದಿನ ಸಂಜೆ ರಾಜಬೀದಿ ಉತ್ಸವ ನಡೆಯಲಿದೆ. ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಮಹೋತ್ಸವ, ಮಠದಲ್ಲಿ ಯಾಗ, ಹೋಮಗಳು ನಡೆಯಲಿವೆ.

ಮಂಗಳೂರಿನ ಕುದ್ರೋಳಿಯಲ್ಲಿ ದಸರೆ: ಮಂಗಳೂರಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವಕ್ಕೂ ಸೋಮವಾರವೇ ಚಾಲನೆ ದೊರೆಯಲಿದೆ. ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನ, ಕಲಶ ಪತ್ರಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಈ ವೇಳೆ, ದೀಪ ಬೆಳಗುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಕೇಂದ್ರದ ಮಾಜಿ ವಿತ್ತ ಸಚಿವ, ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಉಪಸ್ಥಿತರಿರಲಿದ್ದಾರೆ. ಮಹೋತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ಸಂಜೆ 7ರಿಂದ 8.30ರವರೆಗೆ ಭಜನಾ ಕಾರ್ಯಕ್ರಮ, 8.30ರಿಂದ ಶ್ರೀ ದೇವಿ ಪುಷ್ಪಾಲಂಕಾರ ಪೂಜೆ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವರ ಬಲಿ ಉತ್ಸವಗಳು ನಡೆಯಲಿವೆ.

ಮಡಿಕೇರಿಯಲ್ಲಿ ದಸರಾ ಸಂಭ್ರಮ: ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಈ ಬಾರಿ ಅದ್ಧೂರಿಯಾಗಿರಲಿದೆ. ಸೋಮವಾರದಂದು ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ಹಾಕುವ ಮೂಲಕ ಮಡಿಕೇರಿ ದಸರಾಗೆ ಪಂಪಿನ ಕೆರೆ ಬಳಿ ಚಾಲನೆ ದೊರಕಲಿದೆ. ಸೆ.27 ರಿಂದ ಅ.5ರ ವರೆಗೆ ಗಾಂಧಿ ಮೈದಾನದಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.2ರಂದು ಜಾನಪದ ದಸರಾ, ಅ.1ರಂದು ಯುವ ದಸರಾ, ಅ.3ರಂದು ಮಕ್ಕಳ ದಸರಾ ನಡೆಯಲಿದೆ. ಅ.5ರಂದು ರಾತ್ರಿ ಮಡಿಕೇರಿಯಲ್ಲಿ ದಶ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ.

Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ

ಶಿವಮೊಗ್ಗದಲ್ಲೂ ದಸರಾ, ಅಂಬಾರಿ: ಮೈಸೂರು ದಸರಾ ಮಾದರಿಯಲ್ಲಿಯೇ ಶಿವಮೊಗ್ಗ ದಸರಾ ಆಚರಣೆಗೆ ನಗರ ಸಜ್ಜಾಗುತ್ತಿದ್ದು, ಸೋಮವಾರ ಚಾಲನೆ ದೊರೆಯಲಿದೆ. ದಸರಾ ಅಂಬಾರಿ ಹೋರುವ ಸಕ್ರೆಬೈಲಿನ ಸಾಗರ ನೇತೃತ್ವದ ಗಜಪಡೆಗೆ ಸೆ.27ರಿಂದ 8 ದಿನಗಳ ಕಾಲ ತಾಲೀಮು ಆರಂಭವಾಗಲಿದೆ. ವಿಜಯದಶಮಿಯಂದು ನಡೆಯಲಿರುವ ಅಂಬಾರಿ ಮೆರವಣಿಗೆ ಈ ಬಾರಿ ಅದ್ದೂರಿಯಾಗಿರಲಿದೆ. ಈ ಬಾರಿ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಬಂಗಾರದ ಕಿರೀಟ ಹಾಕಲಾಗುವುದು. 540 ಕೆ.ಜಿ ತೂಕದ ಅಂಬಾರಿಯನ್ನು ಹೊತ್ತು ಸಾಗುವ ಸಾಗರನಿಗೆ ವಿಶೇಷ ತಾಲೀಮು ನೀಡಲಾಗುತ್ತಿದೆ.

click me!