ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

By Suvarna News  |  First Published Jul 15, 2020, 6:45 PM IST

ಜೀವನದಲ್ಲಾಗುವ ಬದಲಾವಣೆಗಳಿಗೆ ಜಾತಕದ ಗ್ರಹಗಳೂ ಕಾರಣವಾಗಿರುತ್ತವೆ. ಗ್ರಹಗಳ ಶುಭ ಮತ್ತು ಅಶುಭ ಪ್ರಭಾವಗಳು ವ್ಯಕ್ತಿಯು ಜೀವನದಲ್ಲಿ ಅನುಭವಿಸುವ ಸುಖ-ದುಃಖಗಳಾಗಿರುತ್ತವೆ. ಕರ್ಮಫಲದ ಜೊತೆಗೆ ಗ್ರಹಗಳ ಸ್ಥಿತಿಯು ಮನುಷ್ಯನನ್ನು ಒಳ್ಳೆಯ ಮತ್ತು ಕೆಟ್ಟವರನ್ನಾಗಿ ಮಾಡುತ್ತದೆ. ಕ್ರೂರ ಗ್ರಹಗಳ ಸ್ಥಿತಿ ಬಲವಾಗಿದ್ದು, ಮನಸ್ಸು ಚಂಚಲವಾದಾಗ ವ್ಯಕ್ತಿಯ ಅಪರಾಧಗಳನ್ನು ಮಾಡುತ್ತಾನೆ. ಒಬ್ಬ ವ್ಯಕ್ತಿ ಅಪರಾಧಿಯಾಗಲು ಜಾತಕದ ಗ್ರಹಗಳೂ ಕಾರಣವಾಗುತ್ತವೆ. ಅಂತಹ ಗ್ರಹಗಳ ಬಗ್ಗೆ ತಿಳಿಯೋಣ.


ವ್ಯಕ್ತಿಯ ಜೀವನದಲ್ಲಾಗುವ ಆಗು-ಹೋಗುಗಳಿಗೆ ಜಾತಕದ ಗ್ರಹ, ದೆಶೆಗಳು ಕಾರಣವಾಗಿರುತ್ತವೆ. ಗ್ರಹಗಳು ಉತ್ತಮ ಸ್ಥಿತಿಯಲ್ಲಿ, ಶುಭ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಜೀವನದಲ್ಲಿ ಅಭಿವೃದ್ಧಿಯನ್ನು, ಸುಖ-ಸಂಪತ್ತನ್ನು ಹೊಂದುವಂತಾಗುತ್ತದೆ. ಅದೇ ಅಶುಭ ಗ್ರಹಗಳು ಅಥವಾ ಗ್ರಹಗಳು ಅಶುಭ ಸ್ಥಾನದಲ್ಲಿದ್ದಾಗ ಅಶುಭ ಪ್ರಭಾವವನ್ನು ಬೀರುತ್ತವೆ. ಇದರಿಂದ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುತ್ತದೆ. ಇದು ಒಮ್ಮೊಮ್ಮೆ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತದೆ. 

ಒಮ್ಮೊಮ್ಮೆ ಅಂದುಕೊಂಡ ಕಾರ್ಯಗಳು ಅರ್ಧದಲ್ಲೇ ನಿಂತುಹೋಗುತ್ತವೆ. ಸ್ವಾಸ್ಥ್ಯ ಸಮಸ್ಯೆಗಳು ಕಾಡುತ್ತವೆ, ಮನೆಯಲ್ಲಿ ಕಲಹಗಳು ಉಂಟಾಗುತ್ತವೆ. ಹಾಗೆಯೇ ಕೆಲವು ಗ್ರಹದ ಅಶುಭ ಪ್ರಭಾವ ಹೆಚ್ಚಿದ್ದಲ್ಲಿ ವ್ಯಕ್ತಿಯು ತಪ್ಪು ದಾರಿ ತುಳಿಯುವ ಸಾಧ್ಯತೆಯೂ ಇರುತ್ತದೆ, ದುರ್ಜನರ ಸಂಗ, ದುಶ್ಚಟಗಳ ದಾಸರಾಗುವ ಸಂಭವವೂ ಹೆಚ್ಚಿರುತ್ತದೆ.



ಪಾಪ ಗ್ರಹಗಳಾದ ಮಂಗಳ, ರಾಹು, ಶನಿಗ್ರಹಗಳ ಪ್ರಭಾವ ಹೆಚ್ಚಿದ್ದಲ್ಲಿ ಕ್ರೂರ ಕರ್ಮಗಳನ್ನು ಮಾಡುತ್ತಾರೆ, ಇತರರಿಗೆ ತೊಂದರೆಯನ್ನುಂಟು ಮಾಡುವ ಸ್ವಭಾವವನ್ನು ಹೊಂದುತ್ತಾರೆ. ಹೆಚ್ಚು ಸ್ವಾರ್ಥಿಗಳಾಗುವುದಲ್ಲದೇ, ತಮ್ಮ ಕೆಲಸವಾಗಲು ಇತರರಿಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಹಿಂಸೆಯನ್ನು ನೀಡುವಷ್ಟು ಕ್ರೂರಿಗಳಾಗುತ್ತಾರೆ. ಈ ರೀತಿಯ ಪಾಪಕೃತ್ಯವನ್ನೆಸಗಲು ಗ್ರಹದ ಪ್ರಭಾವ ಮತ್ತು ವ್ಯಕ್ತಿಯ ಜಾತಕದಲ್ಲಿರುವ ಕೆಲವು ಯೋಗಗಳು ಕಾರಣವಾಗಿರುತ್ತವೆ. ಇಲ್ಲಿ ಉಂಟಾಗುವ ಅಪರಾಧಗಳಲ್ಲೂ ವಿಧಗಳಿದ್ದು, ಅವುಗಳು ಯಾವುವೆಂದು ತಿಳಿಯೋಣ.

ಇದನ್ನು ಓದಿ: ಸಮುದ್ರದಲ್ಲಿ ನಡೆದು ನಿಷ್ಕಳಂಕ ಶಿವನ ದರ್ಶನ ಮಾಡಿ, ಪುನೀತರಾಗಿ..!

ಸ್ವಾಭಾವಿಕ ಅಪರಾಧಿ 
ಕೆಲವರಲ್ಲಿ ಅಪರಾಧಿ ಗುಣ ಸ್ವಾಭಾವಿಕವಾಗಿಯೇ ಬಂದಿರುತ್ತದೆ. ಇಂಥವರಿಗೆ ಬೇರೆಯವರನ್ನು ಹಿಂಸಿಸುವುದರಿಂದ ಆನಂದ ಸಿಗುತ್ತದೆ.

ಪರಿಸ್ಥಿತಿ ಜನ್ಯಅಪರಾಧಿ
ಕೆಟ್ಟ ಜನರ ಸಹವಾಸದಿಂದ ಕೆಲವರು ಕೆಟ್ಟದ್ದನ್ನು ಮಾಡಲು ಕಲಿಯುತ್ತಾರೆ. ಶತ್ರುಗಳ ಉಪಟಳವನ್ನು ತಡೆಯಲಾಗದೇ ಕೆಲವರು ಅವರಿಗೆ ಹಾನಿ ಉಂಟುಮಾಡಿ, ಅಪರಾಧಿಗಳಾಗುತ್ತಾರೆ. 

ಭಾವುಕ ಅಪರಾಧಿ
ಭಾವುಕರಾಗುವುದು ಸಹಜವೇ, ಆದರೆ ಅತೀ ಭಾವುಕರಾಗಿ ಸಂದರ್ಭವನ್ನು ಸರಿಯಾಗಿ ನಿಭಾಯಿಸಲಾಗದೇ ಅಪರಾಧವನ್ನು ಮಾಡುವವರು ಭಾವುಕ ಅಪರಾಧಿಗಳು.

ಇದನ್ನು ಓದಿ: ಶ್ರಾವಣಕ್ಕೆ ಉಜ್ಜಯಿನಿ ಮಹಾಕಾಳೇಶ್ವರನಿಂದ ಆನ್‌ಲೈನ್ ದರ್ಶನ..!

ಸಭ್ಯ ಅಪರಾಧಿ
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದವರು, ಪ್ರತಿಷ್ಠಿತ ವ್ಯಕ್ತಿಗಳು ಈ ಅಪರಾಧಿ ಸಾಲಿಗೆ ಸೇರುತ್ತಾರೆ. ಹಣದ ವ್ಯವಹಾರಗಳಲ್ಲಿ ಅಕ್ರಮವನ್ನು ಮಾಡುವ ಇಂಥಹ ವ್ಯಕ್ತಿಗಳು ಹೊರನೋಟಕ್ಕೆ ಸಭ್ಯರಂತೆಯೇ ಕಾಣುತ್ತಾರೆ.

ಅಪರಾಧಿಯನ್ನಾಗಿಸುವ ಗ್ರಹಗಳು
ವ್ಯಕ್ತಿಯ ಜಾತಕದಲ್ಲಿ ಲಗ್ನ-ಲಗ್ನಾಧಿಪತಿ, ಸೂರ್ಯ ಮತ್ತು ಚಂದ್ರ ಈ ಮೂರೂ ಅಶುಭ ಗ್ರಹಗಳ ಪ್ರಭಾವಕ್ಕೆ ಒಳಗಾಗಿದ್ದರೆ ಅಂಥಹ ಸಂದರ್ಭದಲ್ಲಿ ವ್ಯಕ್ತಿಯು ಅಪರಾಧವನ್ನು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಬಾರಿ ಪರಿಸ್ಥಿತಿಗಳು ಇವರ ವಿರುದ್ಧವಾಗಿರುತ್ತವೆ. ಆತ್ಮರಕ್ಷಣೆಗಾಗಿ ಅಪರಾಧಿಗಳಾಗುವ ಸಂಭವವೂ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಲಗ್ನದ ಸಂಬಂಧ ಎಂಟನೇ ಮನೆಯ ಜೊತೆ ಇದ್ದಾಗ ವ್ಯಕ್ತಿಯು ವಿದ್ವಂಸಕ ಕೃತ್ಯಗಳನ್ನು, ನಕಾರಾತ್ಮಕ ಯೋಚನೆಗಳನ್ನು ಮಾಡುವಂತಾಗುತ್ತದೆ. ಅಷ್ಟೇ ಅಲ್ಲದೆ, ಜಾತಕದ ಗ್ರಹಗಳ ಸ್ಥಿತಿಯ ಪರಿಣಾಮವಾಗಿ ಕಾರಣವಿಲ್ಲದೆ, ಇತರರಿಗೆ ಕೆಡುಕನ್ನು ಮಾಡುವ ಸ್ವಭಾವವನ್ನು ಹೊಂದುತ್ತಾರೆ.

Tap to resize

Latest Videos



ವ್ಯಕ್ತಿಯ ಜಾತಕದಲ್ಲಿ ಲಗ್ನ-ಲಗ್ನಾಧಿಪತಿ, ಚಂದ್ರ ಮತ್ತು ಚಂದ್ರನ ಲಗ್ನಾಧಿಪತಿ ಪುರುಷ ರಾಶಿಯಾಗಿದ್ದಲ್ಲಿ ಹಾಗೂ ಪುರುಷ ರಾಶಿಯ ಅಧಿಪತಿ ಸೂರ್ಯ, ಶನಿ ಅಥವಾ ಮಂಗಳ ಗ್ರಹವಾಗಿದ್ದಲ್ಲಿ ಇಂಥವರು ಕ್ರೂರ ಕೃತ್ಯಗಳನ್ನು ಮಾಡುವಲ್ಲಿ ನಿರತರಾಗಿರುತ್ತಾರೆ. ಹೀಗೆಯೋ ಕುಖ್ಯಾತಿಯನ್ನು ಪಡೆಯುತ್ತಾರೆ.

ಇಲ್ಲಿ ವ್ಯಕ್ತಿಯ ಜಾತಕದಲ್ಲಿ ಲಗ್ನ-ಲಗ್ನಾಧಿಪತಿ, ಚಂದ್ರ ಲಗ್ನ ಮತ್ತು ಚಂದ್ರನ ಲಗ್ನಾಧಿಪತಿ ಎಲ್ಲವೂ ಸ್ತ್ರೀ ರಾಶಿಯಾಗಿದ್ದು, ಇದರ ಅಧಿಪತಿ ಶುಭಗ್ರಹಗಳಾಗಿದ್ದರೆ ಇಂಥವರು ಭಾವುಕ ಅಪರಾಧಿ ಅಥವಾ ಸಭ್ಯ ಅಪರಾಧಿಗಳಾಗುತ್ತಾರೆ. ಶಾಂತ ರೀತಿಯಿಂದ ಇದ್ದು ಅಪರಾಧವನ್ನು ಮಾಡುತ್ತಾರೆ. ಇಂಥವರ ಸ್ವಭಾವ ಹೊರನೋಟಕ್ಕೆ ತಿಳಿಯಲು ಸಾಧ್ಯವಾಗುವುದಿಲ್ಲ. ಇವರು ತಮ್ಮ ಸ್ವಾರ್ಥಕ್ಕಾಗಿ ಹೇಯ ಕೃತ್ಯಗಳನ್ನೆಸಗಿದರೂ ಯಾರಿಗೂ ಅದು ಅರಿವಿಗೆ ಬರುವುದಿಲ್ಲ. ಇಂಥವರು ತಮ್ಮ ಕೆಲಸ ಆಗಬೇಕೆಂದಾಗ ಹಿಂಸೆ, ಬಲತ್ಕಾರದಂತಹ ದಾರಿಯನ್ನು ಹಿಡಿಯುವುದಿಲ್ಲ, ಕೂಟನೀತಿಯನ್ನು ಅನುಸರಿಸುತ್ತಾರೆ. ಸಂಚು ರೂಪಿಸಿ ಶತ್ರುವನ್ನು ನಿರ್ಣಾಮಗೊಳಿಸುತ್ತಾರೆ.

ರಾಹು-ಕೇತುವಿನ ಪಾತ್ರ ಮಹತ್ವದ್ದು
ಅಪರಾಧವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳವಲ್ಲಿ ರಾಹು ಮತ್ತು ಕೇತು ಗ್ರಹಗಳು ಮಹತ್ವದ ಪಾತ್ರವಹಿಸುತ್ತದೆ. ಹಾಗಾಗಿ ಜಾತಕದಲ್ಲಿ ರಾಹುಗ್ರಹದ ಸ್ಥಿತಿ ಮತ್ತು ಗ್ರಹ ಸ್ಥಿತವಾಗಿರುವ ಸ್ಥಾನ ಬಹಳ ಮುಖ್ಯವಾಗುತ್ತದೆ. ಜಾತಕದಲ್ಲಿ ರಾಹು ಗ್ರಹವು ಮೂರನೇ ಅಥವಾ ಹತ್ತನೇ ಮನೆಯಲ್ಲಿ ಇದ್ದರೆ ಅಂಥವರು ಒಂದರ ಮೇಲೊಂದು ಅಪರಾಧವನ್ನು ಮಾಡುತ್ತಲೇ ಇರುತ್ತಾರೆ. ಜಾತಕದಲ್ಲಿ ಎರಡನೇ ಅಥವಾ ಎಂಟನೇ ಮನೆಯಲ್ಲಿ ರಾಹುಗ್ರಹವಿದ್ದರೆ ಅಂಥಹ ವ್ಯಕ್ತಿಗಳು ಬೇರೆಯವರ ಹಣ ಮತ್ತು ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೆ.

ಇದನ್ನು ಓದಿ: ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!

ಅಪರಾಧಿಯಾಗಲು ಬಿಡದ ಗ್ರಹ 
ಜನ್ಮ ಜಾತಕದಲ್ಲಿ ಗುರುವಿನ ಸ್ಥಿತಿ ಶುಭವಾಗಿದ್ದು, ಬಲವಾಗಿದ್ದರೆ ವ್ಯಕ್ತಿಯ ಮನಸ್ಸು ಸ್ಥಿರವಾಗಿರುತ್ತದೆ. ಗುರುಗ್ರಹದ ಪ್ರಭಾವವು ವ್ಯಕ್ತಿಯು ಅಪರಾಧವೆಸಗಲು ಬಿಡುವುದಿಲ್ಲ. ಜಾತಕದಲ್ಲಿ ಗುರುಗ್ರಹವು ನೀಚವಾಗಿದ್ದು, ಪಾಪ ಗ್ರಹಗಳ ಸ್ಥಿತಿ ಬಲವಾಗಿದ್ದರೆ ಅಂಥವರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅಪರಾಧಿಗಳಾಗುತ್ತಾರೆ.

ಮಕ್ಕಳ ಜಾತಕದಲ್ಲಿ ಶುಭಗ್ರಹಗಳು ನೀಚ ಸ್ಥಿತಿಯಲ್ಲಿದ್ದು, ಅಶುಭ ಗ್ರಹಗಳ ಪ್ರಭಾವ ಹೆಚ್ಚಿದ್ದರೆ ಅಂಥವರ ಪಾಲನೆಯನ್ನು ಹೆಚ್ಚು ನಿಗಾವಹಿಸಿ ಮಾಡಬೇಕಾಗುತ್ತದೆ. ಉತ್ತಮ ವಿಷಯಗಳನ್ನು, ಪುರಾಣದ ಮಹಾಪುರುಷರ ಕಥೆಗಳನ್ನು ಹೆಚ್ಚೆಚ್ಚು ತಿಳಿಸಿಕೊಡಬೇಕು. ಹಿಂಸೆ, ಕ್ರೂರತನ ಇವುಗಳಿಂದ ದೂರವಿರುವಂತೆ ಎಚ್ಚರಿಸುವುದಲ್ಲದೇ, ಶುಭ ಗ್ರಹಗಳ ಸ್ಥಿತಿ ಬಲಪಡಿಸಿಕೊಳ್ಳಬೇಕು. ಪೂಜೆ, ಧ್ಯಾನ, ಅನುಷ್ಠಾನ, ಮಂತ್ರೋಚ್ಛಾರಣೆಗಳನ್ನು ಮಾಡುವುದರಿಂದ ಆಲೋಚನೆಗಳು ಸಕಾರಾತ್ಮಕವಾಗುತ್ತವೆ.

click me!