ರಾಹುವಿಗೆ ಪ್ರಿಯವಾದ ಉದ್ದಿನಕಾಳಿನ ಮಹಿಮೆ ಬಲ್ಲಿರೇನು?

By Suvarna NewsFirst Published Jul 15, 2020, 6:27 PM IST
Highlights

ರಾಹು, ಕೇತು, ಶನಿ ಗ್ರಹಗಳು ಎಂದರೆ ಏನೋ ಒಂದು ರೀತಿಯ ಭಯ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ. ರಾಹುವಿನ ಬಗ್ಗೆಯೂ ಭಯ ಹೆಚ್ಚೇ ಇರುತ್ತದೆ. ಆದರೆ, ಹಲವರಿಗೆ ರಾಹುವಿನ ಕಾಟದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಚಿಂತಿಸಬೇಕಿಲ್ಲ. ಎಲ್ಲ ಸಂಕಷ್ಟಗಳಿಗೂ ಒಂದೊಂದು ಪರಿಹಾರ ಇದ್ದೇ ಇರುವ ಹಾಗೆ ಇಲ್ಲೂ ಸಹ ದಾರಿ ಇದೆ. ಉದ್ದಿನ ಕಾಳೇ ಇದಕ್ಕೆ ಮದ್ದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದರಿಂದ ಅನೇಕ ಲಾಭವಿದ್ದು, ಈ ರೀತಿಯಾಗಿ ನಿಯಮವನ್ನು ಪಾಲಿಸಿದರೆ ನಿಮಗೆ ರಾಹುವಿನ ದೋಷವಿದ್ದರೂ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಹೇಗೆ ಎಂಬ ಬಗ್ಗೆ ನೋಡೋಣ…

ದೇವರ ಬಳಿ ನಾವು ಕೇಳಿಕೊಳ್ಳುವುದು ಏನನ್ನು..? ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿ ಕೊಡು, ವಿದ್ಯೆ, ಬುದ್ಧಿ, ಐಶ್ವರ್ಯ, ಆರೋಗ್ಯ ಕೊಡು… ಹೀಗೆ ಪಟ್ಟಿಗಳು ಬೆಳೆಯುತ್ತಾ ಹೋಗುತ್ತದೆ. ಹೌದು. ನಾವು ಕೇಳಿದ್ದನ್ನೆಲ್ಲ ಆತ ಕೊಡುವುದಾಗಿ ತಥಾಸ್ತು ಎಂದು ಹೇಳಬಹುದೇನೋ? ಆದರೆ, ಅದಕ್ಕೂ ನಿಮಗೆ ಗ್ರಹಗತಿಗಳು ಬಿಡಬೇಕು. ಅವು ಚೆನ್ನಾಗಿದ್ದರೆ ಮಾತ್ರ ನೀವು ಬಯಸಿದ್ದು ಸಿಗಲಿದೆ. ಇಲ್ಲದಿದ್ದರೆ ಕಷ್ಟ ಕಟ್ಟಿಟ್ಟಬುತ್ತಿ ಎಂದೇ ಹೇಳಬಹುದು. ಅದರಲ್ಲೂ ರಾಹುವಿನ ಕಣ್ಣು ನಿಮ್ಮ ಮೇಲೆ ಬಿದ್ದರೆ ಮುಗಿಯಿತು. ಸಂಕಷ್ಟವನ್ನು ನೀವು ಹಾಸಿ ಹೊದ್ದು ಮಲಗಿದಂತೆಯೇ? ಆದರೆ, ರಾಹುವಿನ ಕಾಟದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲವೇ..? ಏಕಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ರಾಹು ಪ್ರಭಾವ ಒಮ್ಮೆ ನಿಮ್ಮ ಮೇಲೆ ಬಿದ್ದರೂ ಅದನ್ನು ತಿಳಿದುಕೊಂಡಲ್ಲಿ ಪರಿಹಾರವನ್ನು ಬೇಗ ಕಂಡುಕೊಳ್ಳಬಹುದು. ಪ್ರತಿ ಸಮಸ್ಯೆಗೂ ಒಂದು ಪರಿಹಾರೋಪಾಯ ಇದ್ದೇ ಇರುತ್ತದೆ. ಹಾಗೇ ರಾಹುವಿನಿಂದ ಬಚಾವಾಗಲೂ ಕೆಲವು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅದನ್ನು ಮಾಡಿದರೆ ಬದುಕಿನಲ್ಲಿ ನೆಮ್ಮದಿ-ಸುಖ ಕಾಣಬಹುದು ಎನ್ನಲಾಗಿದೆ. ಇದಕ್ಕೆ ಮುಖ್ಯವಾಗಿ ಉದ್ದಿನಕಾಳು ಮುಖ್ಯವಾಗುತ್ತದೆ. ಇದರಿಂದ ಆರೋಗ್ಯವು ಪ್ರಾಪ್ತಿಯಾಗುವುದಲ್ಲದೆ, ಭಾಗ್ಯವೂ ನಿಮ್ಮದಾಗುತ್ತದೆ.

ಇದನ್ನು ಓದಿ: ಸಮುದ್ರದಲ್ಲಿ ನಡೆದು ನಿಷ್ಕಳಂಕ ಶಿವನ ದರ್ಶನ ಮಾಡಿ, ಪುನೀತರಾಗಿ..!

ಶನಿದೇವನಿಂದ ಮುಕ್ತಿ
ಜಾತಕದಲ್ಲಿ ಶನಿದೋಷವಿದ್ದರೆ ಮುಕ್ತಿ ಪಡೆಯಲು ಉದ್ದಿನಕಾಳು ಸಹಾಯ ಮಾಡುತ್ತದೆ. ಶನಿವಾರದಂದು ಉದ್ದಿನಕಾಳನ್ನು ಮೂರು ಬಾರಿ ತಲೆಗೆ ಸುಳಿದುಕೊಂಡು ಆ ಕಾಳನ್ನು ಕೊನೆಗೆ ದಾನ ಮಾಡಬೇಕಾಗುತ್ತದೆ. ಏಳು ಶನಿವಾರ ಇದರ ಆಚರಣೆ ಮಾಡಿದರೆ ಶೀಘ್ರ ಲಾಭವಾಗಲು ಶುರುವಾಗುತ್ತದೆ. 



ದೌರ್ಭಾಗ್ಯದಿಂದ ಪಾರು
ಉದ್ದಿನ ಕಾಳು ದೌರ್ಭಾಗ್ಯವನ್ನು ಹೋಗಲಾಡಿಸುತ್ತದೆ. ಇದಕ್ಕೋಸ್ಕರ ನೀವು ಮಾಡಬೇಕಾಗಿದ್ದು ಇಷ್ಟೇ, ಸಂಜೆ ಹೊತ್ತು ಉದ್ದಿನ 2 ಕಾಳುಗಳನ್ನು ಇಟ್ಟುಕೊಳ್ಳಬೇಕು. ಒಂದಕ್ಕೆ ಮೊಸರು ಹಾಗೂ ಇನ್ನೊಂದಕ್ಕೆ ಕುಂಕುಮ ಲೇಪಿಸಿ ಅದನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಕೆಳಗೆ ಇಟ್ಟು ತಿರುಗಿ ನೋಡದೇ ಮನೆಗೆ ಹಿಂದಿರುಗಬೇಕು. ಹೀಗೆ 21 ದಿನ ಮಾಡಿದರೆ ದೌರ್ಭಾಗ್ಯ ದೂರವಾಗಿ ಅದೃಷ್ಟದ ಬಾಗಿಲು ತೆರೆಯುತ್ತದೆ. 

ಇದನ್ನು ಓದಿ: ಶ್ರಾವಣಕ್ಕೆ ಉಜ್ಜಯಿನಿ ಮಹಾಕಾಳೇಶ್ವರನಿಂದ ಆನ್‌ಲೈನ್ ದರ್ಶನ..!

ರೋಗದಿಂದ ಗುಣಮುಖ
ತುಂಬಾ ಸಮಯದಿಂದ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ಈ ನಿಯಮವನ್ನು ಪಾಲಿಸಬೇಕು. ಅನಾರೋಗ್ಯಪೀಡಿತರು ಮಲಗುವ ಮಂಚದ ಕೆಳಗೆ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಅದರೊಳಗೆ ಉದ್ದನ್ನು ಹಾಕಿಡಬೇಕು. ಮರುದಿನ ಆ ಉದ್ದಿನಕಾಳು ಎಣ್ಣೆಯಲ್ಲಿ ಕರಿಯಬೇಕು. ಹೀಗೆ ಕರಿದ ಉದ್ದಿನಕಾಳನ್ನು ಶ್ವಾನಕ್ಕೆ ತಿನ್ನಿಸಬೇಕು. ಹೀಗೆ ಮಾಡುವುದರಿಂದ ರೋಗದಿಂದ ಮುಕ್ತಿ ಸಿಗಲಿದೆ.

ಧನಪ್ರಾಪ್ತಿಗೆ ಅನುಕೂಲ
ರಾಹುವಿನ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಇದಕ್ಕೂ ಇಲ್ಲಿ ಪರಿಹಾರವಿದೆ. ಶನಿ ಜಯಂತಿ, ಶನಿ ಅಮಾವಾಸ್ಯೆ ಅಥವಾ ಯಾವುದಾದರೂ ಶುಭ ಮುಹೂರ್ತದ ದಿನ ಉದ್ದಿನ ಕಾಳನ್ನು ದಾನ ಮಾಡಬೇಕು. ಇದರಿಂದ ಆರ್ಥಿಕ ಸ್ಥಿತಿಯನ್ನೂ ಉತ್ತಮವಾಗಿಸುವುದಲ್ಲದೆ, ಧನ ಲಾಭವೂ ಆಗುತ್ತದೆ.

ಇದನ್ನು ಓದಿ: ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!

ಅಶಾಂತಿ ತೊಲಗಿ, ಶಾಂತಿ ಸಿಗಲಿದೆ
ಯಾವಾಗಲೂ ಒತ್ತಡವನ್ನು ಅನುಭವಿಸುತ್ತಾ, ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದರೆ ಹೀಗೆ ಮಾಡುವುದು ಉತ್ತಮ. ಮಂಗಳವಾರದ ದಿನ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಹನುಮಾನ್ ಚಾಲೀಸ್ ಅನ್ನು ಪಠಿಸಬೇಕು. ಓದುತ್ತಾ ಇರುವಾಗಲೇ ಸಾಸಿವೆ ಎಣ್ಣೆ ದೀಪವನ್ನು ಬೆಳಗಿ, ಅದಕ್ಕೆ ಉದ್ದಿನಕಾಳನ್ನು ಹಾಕಬೇಕು. ಈ ರೀತಿಯ ಕ್ರಮವನ್ನು ನಾಲ್ಕು ಮಂಗಳವಾರ ಮಾಡಬೇಕು. ಹೀಗೆ ಮಾಡುವುದರಿಂದ ಹನುಮಂತನ ಆಶೀರ್ವಾದ ಪ್ರಾಪ್ತಿಯಾಗುವುದಲ್ಲದೆ, ಶಾಂತಿ ನೆಲೆಸುವುದಲ್ಲದೆ, ಭಯವೂ ದೂರವಾಗಲಿದೆ. ಹೀಗಾಗಿ ಈ ಎಲ್ಲ ಕ್ರಮಗಳನ್ನು ಏಕಾಗ್ರತೆ, ಶ್ರದ್ಧೆಯಿಂದ ಮಾಡಿದಲ್ಲಿ ನಿಮಗೆ ಖಂಡಿತವಾಗಿಯೂ ಉತ್ತಮ ಫಲ ಸಿಗಲಿದೆ ಎಂದು ಹೇಳಲಾಗುತ್ತದೆ.

click me!