ವರ್ಷದ ಮೊದಲ ಸೂರ್ಯಗ್ರಹಣವು ಗುರುವಾರ, ಏಪ್ರಿಲ್ 20, 2023 ರಂದು ಸಂಭವಿಸುತ್ತಿದೆ. ಈ ದಿನದಂದು ಗರ್ಭಿಣಿಯರು 5 ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಭೂಮಿಯ ಕೆಲವು ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮೇಷ ರಾಶಿಯಲ್ಲಿ ಇರುತ್ತಾನೆ. ಭಾರತ ಸೇರಿದಂತೆ ಹಲವೆಡೆ ಈ ಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದ, ಈ ಗ್ರಹಣದ ಸೂತಕ ಅವಧಿಯನ್ನು ಭಾರತದಲ್ಲಿ ಪರಿಗಣಿಸಲಾಗುವುದಿಲ್ಲ. ಕಾಂಬೋಡಿಯಾ, ಚೀನಾ, ಅಮೆರಿಕ, ಮಲೇಷ್ಯಾ, ಫಿಜಿ, ಜಪಾನ್, ಸಮೋವಾ, ಸೊಲೊಮನ್, ಸಿಂಗಾಪುರ್, ಥೈಲ್ಯಾಂಡ್, ದಕ್ಷಿಣ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಂತಹ ಸ್ಥಳಗಳಿಂದ ಸೂರ್ಯಗ್ರಹಣ ಗೋಚರಿಸುತ್ತದೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಈ ಪರಿಸ್ಥಿತಿಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವುದಿಲ್ಲ. ಸೂರ್ಯಗ್ರಹಣವು ನೈಸರ್ಗಿಕ ಮತ್ತು ಖಗೋಳ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಮತ್ತು ವಿಜ್ಞಾನ ಎರಡರ ಪ್ರಕಾರ, ಗರ್ಭಾವಸ್ಥೆಯಲ್ಲಿದ್ದಾಗ ಸೂರ್ಯಗ್ರಹಣ ಸಂಭವಿಸಿದರೆ ಕೆಲ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನ ಗರ್ಭಿಣಿಯರು ಕೆಲ ವಿಶೇಷ ಕೆಲಸವನ್ನು ಮಾಡಬಾರದು ಮತ್ತು ಕೆಲವು ಕೆಲಸಗಳನ್ನು ಮಾಡುವುದು ನಿಮಗೆ ಹಾಗೂ ಮಗುವಿಗೆ ಒಳ್ಳೆಯದು. ಅಂಥ ಕೆಲಸಗಳ ಬಗ್ಗೆ ತಿಳಿಯೋಣ.
Solar Eclipse 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು?
ಮನೆಯಿಂದ ಹೊರಗೆ ಕಾಲಿಡಬೇಡಿ
ಮೊದಲನೆಯದಾಗಿ, ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು. ಗ್ರಹಣದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮನೆಯೊಳಗಿರಲು ಸೂಚಿಸಲಾಗುತ್ತದೆ. ಅದರಲ್ಲೂ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು. ಗ್ರಹಣ ಸಮಯದಲ್ಲಿ ನೀವು ಮನೆಯಿಂದ ಹೊರಗೆ ಹೋದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವನ್ನು ಗ್ರಹಣದ ನೆರಳಿನಿಂದ ದೂರವಿಡಿ.
ಸೂರ್ಯನನ್ನು ನೋಡಬೇಡಿ
ಗರ್ಭಿಣಿಯರು ಈ ದಿನ ಸೂರ್ಯನನ್ನು ನೋಡಬಾರದು. ಈ ದಿನ, ಗರ್ಭಿಣಿಯರು ಸೂರ್ಯನ ಕಿರಣಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಡಿ.
ಆಹಾರ ಸೇವನೆ ಬೇಡ
ಗರ್ಭಿಣಿಯರಿಗೆ ಹಸಿವು ಜಾಸ್ತಿ. ಆದರೆ, ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು. ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಹೆಚ್ಚಿ ಆಹಾರ ಕಲುಷಿತಗೊಳ್ಳುತ್ತದೆ ಎಂದು ನಂಬಲಾಗಿದೆ. ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನದಿರಲು ಪ್ರಯತ್ನಿಸಿ.
Parashuram Janmotsav: ಶ್ರೀರಾಮನಿಗಿಂತ ಮೊದಲೇ ಈ ರಾಮ ಅವತಾರ ತಾಳಿದ್ದ!
ಮೊನಚು ವಸ್ತುಗಳ ಸಹವಾಸ ಬೇಡ
ಗರ್ಭಿಣಿಯರು ಗ್ರಹಣದ ಸಮಯದಲ್ಲಿ ತಮ್ಮ ಕೈಯಲ್ಲಿ ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ತೆಗೆದುಕೊಳ್ಳಬಾರದು. ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಹಣ್ಣು ತರಕಾರಿ ಹೆಚ್ಚುವ ಗೊಡವೆಗೂ ಹೋಗಬೇಡಿ. ಸೂರ್ಯಗ್ರಹಣದ ಸಮಯದಲ್ಲಿ ಪಿನ್‌ಗಳು, ಹೇರ್ ಪಿನ್‌ಗಳು ಇತ್ಯಾದಿ ಆಭರಣಗಳು ಅಥವಾ ಲೋಹದ ವಸ್ತುಗಳನ್ನು ಧರಿಸಬೇಡಿ.
ಮಲಗಬೇಡಿ
ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮಲಗಬಾರದು. ಎದ್ದು ನೇರವಾಗಿ ಕುಳಿತು ಮಂತ್ರವನ್ನು ಪಠಿಸಬೇಕು.
ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಿ
ನೀವು ಗರ್ಭಿಣಿಯಾಗಿದ್ದರೆ, ಸೂರ್ಯಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಿ ಮತ್ತು ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಸೇರಿಸಿ. ಗ್ರಹಣದ ನಂತರ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.