ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು, ಇವರಿಗಿದೆ ಶನಿ ಕೃಪೆ!

By Adarsha AFirst Published May 15, 2021, 2:35 PM IST
Highlights

ನಕ್ಷತ್ರಗಳಿಂದಲೂ ನಿಮಗೆ ಬರುತ್ತೆ ಅದೃಷ್ಟ. ನೀವು ಹುಟ್ಟುವ ನಕ್ಷತ್ರಗಳ ಮೇಲೆ ನಿಮ್ಮ ಅದೃಷ್ಟ-ದುರಾದೃಷ್ಟವು ಅಡಗಿರುತ್ತವೆ. ಕೆಲವು ನಕ್ಷತ್ರವು ಜೀವನದಲ್ಲಿ ಬಹಳ ನೋವು – ಸಂಕಟಗಳನ್ನು ಕೊಟ್ಟರೆ, ಮತ್ತೆ ಕೆಲವು ಸದಾ ಆನಂದವನ್ನು ತಂದುಕೊಡುತ್ತವೆ. ಇನ್ನೂ ಕೆಲವುಗಳು ಮಿಶ್ರ ಫಲವನ್ನು ಕೊಡುತ್ತವೆ. ಆದರೆ, ಈಗ ಹೇಳಲು ಹೊರಟಿರುವ ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಅದೃಷ್ಟವಂತರು. ಹಾಗಾದರೆ, ಆ ನಕ್ಷತ್ರ ಯಾವುದು ಎಂಬ ಬಗ್ಗೆ ನೋಡೋಣ ಬನ್ನಿ….

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳ ಪ್ರಭಾವ ವ್ಯಕ್ತಿಗಳ ಮೇಲೆ ಹೇಗೆ ಆಗುತ್ತದೋ ಹಾಗೆಯೇ ನಕ್ಷತ್ರಗಳೂ ಸಹ ಶುಭ-ಅಶುಭ ಪ್ರಭಾವವನ್ನು ಬೀರುತ್ತವೆ. ಜನ್ಮ ನಕ್ಷತ್ರಗಳಿಂದ ವ್ಯಕ್ತಿಯ ಅದೃಷ್ಟಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಕೆಲವು ನಕ್ಷತ್ರದವರು ಹುಟ್ಟಿನಿಂದಲೇ ಎಲ್ಲವನ್ನೂ ಪಡೆದುಕೊಂಡು ಬಂದಿರುತ್ತಾರೆ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಮತ್ತೆ ಕೆಲವರದ್ದು ಎಲ್ಲವೂ ನಿಧಾನ, ಕಷ್ಟ, ಸಂಕಷ್ಟ, ಮಧ್ಯಮ ಹೀಗೆ ನಾನಾ ರೀತಿಯಲ್ಲಿ ಅವರ ಅದೃಷ್ಟ, ದುರಾದೃಷ್ಟಗಳು ನಿರ್ಧರಿತವಾಗುತ್ತವೆ.

ಇಲ್ಲಿ ಕೆಲವು ವಿಶೇಷ ನಕ್ಷತ್ರಗಳಿದ್ದು, ಆ ನಕ್ಷತ್ರದಲ್ಲಿ ಜನಿಸಿದವರು ಬಹಳವೇ ಅದೃಷ್ಟ ಮಾಡಿರುತ್ತಾರಂತೆ. ಅಂತಹ ಒಂದು ನಕ್ಷತ್ರದ ಬಗ್ಗೆ ಈಗ ನಿಮಗೆ ಹೇಳಲೇಬೇಕು. ಈ ನಕ್ಷತ್ರ ಯಾವುದು, ಏನೇನು ಅದೃಷ್ಟವಿದೆ ಎಂಬ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಇದನ್ನು ಓದಿ: ಅಡುಗೆ ಮಾಡುವಾಗ ದಿಕ್ಕಿನ ಬಗ್ಗೆ ಇರಲಿ ಗಮನ..ಈ ದಿಕ್ಕು ಶುಭವೆನ್ನುತ್ತೆ ವಾಸ್ತು ಶಾಸ್ತ್ರ... 

ಅನುರಾಧಾ ನಕ್ಷತ್ರವೆಂಬ ಅದೃಷ್ಟ
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿದ್ದು, ಅವುಗಳಲ್ಲಿ 17ನೇ ನಕ್ಷತ್ರವಾಗಿರುವ ಅನುರಾಧಾ ನಕ್ಷತ್ರವು ಭಲೇ ಅದೃಷ್ಟವಂತೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳವೇ ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ. ಈ ನಕ್ಷತ್ರಕ್ಕೆ ಶನಿ ಗ್ರಹವು ಅಧಿಪತಿಯಾಗಿದೆ. ನ್ಯಾಯ ದೇವತೆ ಮತ್ತು ಜನರ ಕರ್ಮಕ್ಕನುಸಾರ ಫಲವನ್ನು ನೀಡುವವನು ಶನಿದೇವನಾಗಿದ್ದಾನೆ. ಹೀಗಾಗಿ ಶನಿ ದೇವನ ವಿಶೇಷ ಕೃಪೆಯು ಈ ನಕ್ಷತ್ರದಲ್ಲಿ ಜನಿಸಿದವರಿಗೆ ಇರುತ್ತದೆ. 



ನೇರ ಮಾತು
ಅನುರಾಧಾ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಿಗೆ ಮಂಗಳ ಗ್ರಹದ ಪ್ರಭಾವವೂ ಇರುತ್ತದೆ. ಹಾಗಾಗಿ ಈ ವ್ಯಕ್ತಿಗಳು ಸಾಹಸಿಗಳು, ಪರಾಕ್ರಮಿಗಳು ಮತ್ತು ಹೆಚ್ಚು ಶಕ್ತಿಯುಳ್ಳವರಾಗಿರುತ್ತಾರೆ. ಸ್ವಭಾವದಲ್ಲಿ ಉತ್ಸಾಹಿಗಳು ಮತ್ತು ಗುರಿ ಮುಟ್ಟುವ ಮನಸ್ಥಿತಿಯುಳ್ಳವರಾಗಿರುತ್ತಾರೆ. ತಮ್ಮ ವಿಚಾರವನ್ನು ಇತರರ ಎದುರಿಗೆ ಯಾವುದೇ ಮುಜುಗರವಿಲ್ಲದೇ ಹೇಳಿಕೊಳ್ಳುವ ಇವರು, ಯಾವುದೇ ಅಂಜಿಕೆ ಇಲ್ಲದೆ ಎಲ್ಲರೆದುರೇ ನೇರವಾಗಿಯೇ ಹೇಳಿಬಿಡುತ್ತಾರೆ. ಸುತ್ತಿ ಬಳಸಿ ಮಾತನಾಡುವ ಕಲೆ ಇವರಿಗೆ ಇರುವುದಿಲ್ಲ. 

ಇದನ್ನು ಓದಿ: ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ... 

ಸ್ನೇಹಿತರು ಕಡಿಮೆ
ಅನುರಾಧಾ ನಕ್ಷತ್ರದಲ್ಲಿ ಜನಿಸಿದವರಿಗೆ ಸ್ನೇಹಿತರ ಸಂಖ್ಯೆ ಬಹಳ ಕಡಿಮೇ ಇರುತ್ತದೆ. ಇವರಿಗೆ ಸೀಮಿತ ಸ್ನೇಹಿತರಿದ್ದರೂ ಸಹ ಅವರೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಸ್ನೇಹಿತರಿಗಾಗಿ ಇವರು ಏನು ಮಾಡಲೂ ಸಿದ್ಧರಿರುತ್ತಾರೆ. ಅಷ್ಟರ ಮಟ್ಟಿಗೆ ಗಟ್ಟಿ ಸ್ನೇಹ ಇವರದ್ದಾಗಿರುತ್ತದೆ. ಧಾರ್ಮಿಕ ಆಸಕ್ತಿ ಇರಲಿದ್ದು, ದೇವರ ಬಗ್ಗೆ ಹೆಚ್ಚಿನ ಭಯ ಭಕ್ತಿಯನ್ನು ಹೊಂದಿರುತ್ತಾರೆ. 

ನಿರಾಸೆ ಪಡಲ್ಲ, ಹೆಚ್ಚಿನ ದುಡಿತ
ಯಾವುದೇ ಸಮಸ್ಯೆಗಳು ಬಂದರೂ ನಿರಾಸೆ ಮಾಡಿಕೊಳ್ಳುವ ಸ್ವಭಾವ ಇವರದ್ದಲ್ಲ.  ದುಡಿಯುವ ಶಕ್ತಿ ಸಹ ಇವರಿಗೆ ಹೆಚ್ಚು ಇದ್ದು, ಕಡಿಮೆ ವಯಸ್ಸಿನಲ್ಲಿಯೆ ದುಡಿಮೆಗೆ ಇಳಿದುಬಿಟ್ಟಿರುತ್ತಾರೆ. ಆದರೆ, ಬಹಳ ಸಂಘರ್ಷದ ಹಾದಿ ಇರಲಿದೆ. ಇಷ್ಟಾದರೂ ಆ ಸಂಘರ್ಷದಲ್ಲಿ ಜಯಿಸುವ ಮುಖಾಂತರ ಯಶಸ್ಸನ್ನು ಸಹ ಪಡೆಯಲಿದ್ದಾರೆ. 

ಅವಕಾಶದ ಸದ್ಬಳಕೆ, ಶಿಸ್ತಿನ ಸಿಪಾಯಿ
ಯಾವುದೇ ಅವಕಾಶ ಸಿಕ್ಕರೂ ಸಹ ಬಿಡದ ಇವರು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಲೆಯನ್ನು ಹೊಂದಿದ್ದಾರೆ. ಮುಂದೆ ಬರುವ ಯಾವ ಸಂದರ್ಭ, ಸಮಯವನ್ನೂ ಸಹ ಬಿಟ್ಟುಕೊಡದ ಇವರು ಅದನ್ನು ಚೆನ್ನಾಗಿ ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಾರೆ. ಶಿಸ್ತಿನ ಸಿಪಾಯಿಯಾಗಿರುವ ಇವರು, ಪ್ರತಿ ಕೆಲಸವನ್ನೂ ಶ್ರದ್ಧೆಯಿಂದ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಇವರಿಗೆ ಬಹುಬೇಗ ಯಶಸ್ಸು ಸಿಗುತ್ತದೆ. ಜೊತೆಗೆ ಇತರರಿಗೂ ಸಹಾಯ ಮಾಡಲು ಇವರು ಸದಾ ಮುಂದಿರುತ್ತಾರೆ. ನಾಟಕ ಮಾಡುವುದು, ತೋರಿಕೆಗೆ ಮಾಡಿದ್ದೇನೆಂದು ತೋರಿಸಿಕೊಳ್ಳುವುದನ್ನು ಇವರು ಮಾಡುವುದೂ ಇಲ್ಲ, ಸಹಿಸುವುದೂ ಇಲ್ಲ. 

ಇದನ್ನು ಓದಿ: ಅಮಾವಾಸ್ಯೆಯಂದು ಹುಟ್ಟಿದರೆ ಹೀಗಂತೆ...! 

ನ್ಯಾಯ ಮತ್ತು ಸತ್ಯದ ಹಾದಿ
ವಿಷಯ ದೊಡ್ಡದಾಗಿರಬೇಕೆಂದೇನೂ ಬಯಸದ ಇವರು, ಚಿಕ್ಕ ಚಿಕ್ಕ ವಿಷಯಗಳಿಗೂ ಉತ್ಸಾಹವನ್ನು ತೋರ್ಪಡಿಸುತ್ತಾರೆ.  ಸಾಮಾನ್ಯವಾಗಿ ಕುಟುಂಬದಿಂದ ದೂರ ಇರುವ ಇವರು ತುಂಬಾ ವಿದೇಶಯಾತ್ರೆಯನ್ನು ಮಾಡುತ್ತಾರೆ. ಸಮಾಜದ ಕಲ್ಯಾಣಕ್ಕಾಗಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ. ಸರಳ ಜೀವನ ನಡೆಸುವುದರಲ್ಲಿ ಇವರಿಗೆ ಹೆಚ್ಚಿನ ಖುಷಿ ಲಭಿಸಲಿದೆ. ಹಣಕ್ಕಿಂತ ಹೆಚ್ಚಾಗಿ ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇವರು ಕೊಡುತ್ತಾರೆ. ನ್ಯಾಯ ಮತ್ತು ಸತ್ಯದ ಹಾದಿ ಇವರ ಆಯ್ಕೆಯಾಗಿರುತ್ತದೆ. 

click me!