ಓಂ ಶಾಂತಿ ಎಂಬ ಮಂತ್ರೋಚ್ಚಾರದಿಂದ ಒತ್ತಡ ದೂರ!

By Suvarna News  |  First Published May 14, 2021, 3:45 PM IST

ಕೊರೊನಾ ಕಾಲದ ಒತ್ತಡಗಳನ್ನು ನಿಮ್ಮ ದೇಹದಿಂದ ದೂರದಲ್ಲೇ ಇಡಲು 'ಓಮ್ ಶಾಂತಿ' ಎಂಬ ಮಂತ್ರೋಚ್ಚಾರ ಮ್ಯಾಜಿಕ್‌ನಂತೆ ಹೆಲ್ಪ್ ಮಾಡುತ್ತದೆ.


ಈ ಕಾಲ ಕಡು ಕಷ್ಟದ್ದು. ಸುತ್ತಮುತ್ತಲೂ ಕೊರೊನಾದ ಬಾಧೆ ಹಾಗೂ ಸಾವುಗಳ ಸುದ್ದಿ. ಇವುಗಳ ನಡುವೆ ಮಾನಸಿಕ ಸಮತೋಲನ, ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆ? ನಮ್ಮ ಪೂರ್ವಜರು ಸೃಷ್ಟಿಸಿರುವ ಹಾಗೂ ಕಂಡುಕೊಂಡಿರುವ ಒಂದು ಮಾಧ್ಯಮ ಎಂದರೆ 'ಓಂ ಶಾಂತಿ' ಎಂಬ ಸತತ ಮಂತ್ರೋಚ್ಚಾರಣೆ. ಇದರಿಂದ ನಿಮ್ಮ ಮೈಂಡ್ ಕೂಲ್ ಆಗುವುದನ್ನು ನೀವೇ ಅನುಭವಿಸುವಿರಿ.

'ಓಂ ಶಾಂತಿ' ಎಂಬುದು ಮನಸ್ಸಿಗೆ ಶಾಂತಿಗಾಗಿ ಹಾಗೂ ಜಗತ್ತಿನ ಶಾಂತಿಗಾಗಿ ನೀವು ಮಾಡುವ ಆಹ್ವಾನ. ಇದು ದೇವರಿಗೆ ಆಹ್ವಾನವೂ ಹೌದು. ಸಾಮಾನ್ಯವಾಗಿ 'ಓಂ ಶಾಂತಿ ಶಾಂತಿ ಶಾಂತಿ' ಎಂದು  ಮೂರು ಬಾರಿ ಜಪಿಸಲಾಗುತ್ತದೆ. ಈ ಮಂತ್ರದ ಅರ್ಥ 'ನೆಮ್ಮದಿಯಾಗಲಿ' 'ನಿರಾಳವಾಗಲಿ' ಶಾಂತಿಯಾಗಲಿ' ಎಂದು. ಈ ಪದಗುಚ್ಛವನ್ನು ನಮಸ್ಕಾರವಾಗಿಯೂ ಮಾಡಬಹುದು. ಇದು ಹೆಚ್ಚಾಗಿ ಹಿಂದೂ ಮತ್ತು ಬೌದ್ಧರ ಪ್ರಾರ್ಥನೆ, ಬರಹಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಕಂಡುಬರುತ್ತದೆ.

'ಓಂ' ಎಂಬ ಪದಕ್ಕೆ ದೈವಿಕ ಆವರಣವಿದೆ. ಅದು ದೈವಿಕತೆಯನ್ನು ಧ್ವನಿಯ ರೂಪದಲ್ಲಿ ರೂಪಿಸುತ್ತದೆ ಎಂದು ಭಾವಿಸಲಾಗಿದೆ. ಇದು ಸಾರ್ವತ್ರಿಕ ಧ್ವನಿಯಾಗಿದ್ದು, ಅದರ ಉಚ್ಚಾರಣೆಯಲ್ಲಿ ಮೂರು ಪದಗಳು ಕೂಡಿಕೊಂಡಿವೆ- ಅ, ಉ ಮತ್ತು ಮ. ಈ ಮೂರೂ ಕೂಡ ಸೃಷ್ಟಿಯ ತ್ರಿವಿಧ ಶಕ್ತಿಗಳನ್ನು, ತ್ರಿವಿಧ ಗುಣಗಳನ್ನು, ತ್ರಿಮೂರ್ತಿಗಳನ್ನು ಪ್ರತಿಪಾದಿಸುತ್ತದೆ. ಇದು ಸೃಷ್ಟಿಯ ಆದಿಮೂಲದಲ್ಲಿರುವ ಧ್ವನಿಯಾಗಿದೆ.

“ಶಾಂತಿ” ಎಂಬ ಪದದ ಅರ್ಥ ಆಳವಾದ ನೆಮ್ಮದಿ, ಆನಂದ. ಹೀಬ್ರೂ ಭಾಷೆಯಲ್ಲಿ ಇದನ್ನೇ 'ಶಾಲೋಮ್' ಎನ್ನಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ 'ಸಲಾಮ್' ಪದದ ಮೂಲವಾಗಿದೆ. ಮೂಲತಃ ಶಾಂತಿ ಪದದ ಸಂಸ್ಕೃತ ಧಾತು ಮೂಲ “ಶಂ'' . ಇದರರ್ಥ ಶಾಂತ, ಹಿತವಾದ ಮತ್ತು ಸಂತೋಷಕರ. ಈ ಪದವನ್ನು ಉಚ್ಚರಿಸುವಾಗಲೇ ಏನೋ ಆನಂದ ಆಗುವುದಲ್ಲವೇ? “ಶಂ” ಅಂತಿಮವಾಗಿ “ಶಾಂತಿ” ಆಗಿ ಬದಲಾಗುತ್ತದೆ.

Latest Videos

undefined



ಸಾಂಪ್ರದಾಯಿಕವಾಗಿ ಶಾಂತಿ ಎಂಬ ಪದವನ್ನು ಓಂ ನಂತರ ಮೂರು ಬಾರಿ ಪಠಿಸಲಾಗುತ್ತದೆ. ಏಕೆಂದರೆ ಇದು ಮೂರು ಹಂತದ ಪ್ರಜ್ಞೆಯಲ್ಲಿ ಶಾಂತಿಯನ್ನು ಉಂಟುಮಾಡುತ್ತದೆ: ಜಾಗರತ್, ಸ್ವಪ್ನ ಮತ್ತು ಸುಷುಪ್ತಿ. ಅಂದರೆ ಎಚ್ಚರದಲ್ಲಿರುವುದು, ಕನಸು ಕಾಣುವುದು ಮತ್ತು ಮಲಗುವುದು. ಭೂಮಿ, ಸ್ವರ್ಗ ಮತ್ತು ನರಕ ಎಂಬ ಮೂರು ಲೋಕಗಳನ್ನು ಅಥವಾ ಪ್ರಪಂಚಗಳನ್ನು ಸಮನ್ವಯಗೊಳಿಸಲು ಇದನ್ನು ಮೂರು ಬಾರಿ ಜಪಿಸಲಾಗಿದೆ ಎಂದು ಸಹ ಭಾವಿಸಲಾಗಿದೆ. ದೇಹ, ಮನಸ್ಸು ಮತ್ತು ಚೈತನ್ಯವನ್ನು ಶಮನಗೊಳಿಸಲು ಮೂರು ಬಾರಿ ಜಪಿಸಲಾಗುತ್ತದೆ ಎಂದು ಸಹ ಹೇಳಬಹುದು.



'ಓಂ ಶಾಂತಿ' ಅಥವಾ 'ಓಮ್ ಶಾಂತಿ ಶಾಂತಿ ಶಾಂತಿ' ಒಂದು ಅದ್ಭುತವಾದ ಪ್ರಾರ್ಥನೆ. ಇದು ದೇವರಲ್ಲಿ ಬೇರೇನನ್ನೂ ಬೇಡವುದಿಲ್ಲ. ಇದನ್ನು ಉಚ್ಚರಿಸುವಾಗ ನಿಮ್ಮ ಮನದಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಬದಲಾಗಿ ಲೋಕಕ್ಕೆ ಒಳಿತಾಗಲಿ, ಎಲ್ಲರೂ ಆನಂದದಲ್ಲಿ ಇರಲಿ ಎಂಬ ಭಾವನೆಯಷ್ಟೇ ಇರುತ್ತದೆ. ಸೃಷ್ಟಿಕರ್ತನಿಂದ, ಸುತ್ತಮುತ್ತಲಿರುವ ಸುಂದರವಾದ ಪ್ರಕೃತಿಯಿಂದ ಶಾಂತಿಯನ್ನು ಪಡೆಯುವುದು ಈ ಮಂತ್ರೋಚ್ಚಾರದಿಂದ ಸಾಧ್ಯವಾಗಲಿದೆ. 
'ಓಂ ಶಾಂತಿ'ಯನ್ನು ಉಚ್ಚರಿಸುವಾಗ, ತಲೆಯಲ್ಲಿರುವ ಮೆದುಳು ಸೇರಿದಂತೆ ದೇಹದಾದ್ಯಂತ ಪ್ರತಿಧ್ವನಿಸಲು ಓಮ್ ಅನ್ನು ಅನುಮತಿಸಬೇಕು. 'ಓಂ' ಅನ್ನು ಉಚ್ಚರಿಸಿದಂತೆಯೇ ವಿರಳವಾಗಿ, ಆನಂದಕರವಾಗಿ, ಯಾವುದೇ ಗಡಿಬಿಡಿಯಿಲ್ಲದೆ “ಶಾಂತಿ” ಪದವನ್ನು ಉಚ್ಚರಿಸಬೇಕು. ಶಾಂತಿಯಲ್ಲಿ 'ತಿ'ಯನ್ನು ಅರ್ಧಕ್ಕೇ ತುಂಡರಿಸಬಾರದು. ತಿಕಾರ ಸ್ಪಷ್ಟವಾಗಿರಬೇಕು. "ಶಾಂ' ಎಂದು ಹೇಳುವಾಗ "ಓಂ' ಎಂದು ಹೇಳಿದಂತೆಯೇ ನಾಭಿಯಿಂದ ಶಾಂತಿಯ ಅಲೆಯೊಂದು ನಿಧಾನವಾಗಿ ಹೊರಹೊಮ್ಮಿ ನಾಲಿಗೆಯ ಮೂಲಕ ಅನುವರ್ತನವಾಗಬೇಕು.



ಪ್ರತಿದಿನ ಕನಿಷ್ಟ ನೂರು ಬಾರಿ ಈ ಮಂತ್ರವನ್ನು ಉಚ್ಚರಿಸುವುದರಿಂದ ಏನಾಗುತ್ತದೆ ಎಂದರೆ...
- ಮನಸ್ಸಿನ ಮೇಲಿರುವ ಒತ್ತಡದ ಕಡಿಮೆಯಾಗುತ್ತದೆ.
- ಇಡೀ ದಿನದ ಕೆಲಸದಿಂದ ಬಳಲಿದ್ದರೆ, ಅರ್ಧ ಗಂಟೆಯ ಶಾಂತಿ ಧ್ಯಾನ ನಿಮ್ಮನ್ನು ಸಂಪೂರ್ಣ ಪುನಶ್ಚೇತನಗೊಳಿಸುತ್ತದೆ.
- ದಿನದ ಆರಂಭದಲ್ಲಿ ಅರ್ಧ ಗಂಟೆ ಈ ಧ್ಯಾನವನ್ನು ಮಾಡಿದರೆ, ನಿಮ್ಮ ಇಡೀ ದಿನದ ಕೆಲಸ ಆನಂದದಾಯಕವಾಗಿ, ಯಾವುದೇ ಒತ್ತಡವಿಲ್ಲದೆ ನೆರವೇರುತ್ತದೆ.
- ಯಾವುದೇ ಒತ್ತಡದ ಸನ್ನಿವೇಶವನ್ನು ಲೀಲಾಜಾಲವಾಗಿ ನಿರ್ವಹಿಸುವ ಬೌದ್ಧಿಕತೆ ನಿಮ್ಮದಾಗುತ್ತದೆ.
- ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಈ ಶಾಂತಿ ಧ್ಯಾನದಿಂದಲೇ ಇಲ್ಲವಾಗುತ್ತವೆ.
- ವಾತಾವರಣದಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಓಂ ಶಾಂತಿ ಧ್ಯಾನದಿಂದ ನಿಮ್ಮ ದೇಹ ಹೀರಿಕೊಳ್ಳುತ್ತದೆ.

ಈ ರಾಶಿಯವರು ಸಂಭಾವಿತರ ಹಾಗೆ ಕಾಣ್ತಾರೆ, ಆದ್ರೆ... ...
 

click me!