ಆಪಲ್ ಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೀನ್ ಪೊವೆಲ್ ಪ್ರಯಾಗರಾಜ್‌ನ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ, ಕಲ್ಪವಾಸ ವ್ರತ ಆಚರಿಸುತ್ತಿದ್ದಾರೆ. ಅವರು ಹಿಂದೂ ಸಂಪ್ರದಾಯದಂತೆ ಒಂದು ಹೆಸರನ್ನು ಇಟ್ಟುಕೊಂಡು ಬಹುತೇಕ ಹಿಂದೂವೇ ಆಗಿದ್ದಾರೆ. ಏನದು ಹೆಸರು?
ಐಪೋನ್ ಪ್ರವರ್ತಕ, ಆಪಲ್ ಕಂಪನಿಯ ಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೀನ್ ಪೊವೆಲ್ ಇದೀಗ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಅವರು ವಿಶೇಷ ಕಲ್ಪವಾಸ ವ್ರತವನ್ನೂ ಅಚರಿಸುತ್ತಿದ್ದಾರೆ ಎಂಬ ಸುದ್ದಿಯನ್ನೂ ನೀವು ಓದಿರುತ್ತೀರಿ. ಇದೀಗ ಅವರು ತಮ್ಮ ಹೆಸರನ್ನೂ ಹಿಂದೂ ಸಂಪ್ರದಾಯದಂತೆ ಬದಲಿಸಿಕೊಂಡಿದ್ದಾರೆ.
ಮಹಾ ಕುಂಭ ಮೇಳದಲ್ಲಿ ಹಿಂದೂ ಸಾಂಪ್ರದಾಯಿಕ ಹಾಗೂ ಕೇಸರಿ ವೇಷಭೂಷಣ ಧರಿಸಿದ ಲಾರೀನ್, ಇಂದಿನಿಂದ ಆರಂಭವಾದ ಮಹಾ ಕುಂಭದಲ್ಲಿ ʼಹಿಂದೂʼ ಆಗಿಯೇ ಭಾಗವಹಿಸಲಿದ್ದಾರೆ. ಅದಕ್ಕೆ ಅನುಗುಣವಾಗಿ ಅವರಿಗೆ ʼಕಮಲಾʼ ಎಂಬ ಹಿಂದೂ ಹೆಸರನ್ನು ನೀಡಲಾಗಿದೆ.
ಕೋಟ್ಯಾಧಿಪತಿಯಾಗಿರುವ ಲಾರೀನ್ ನಿನ್ನೆಯವರೆಗೂ ವಾರಣಾಸಿಯಲ್ಲಿದ್ದರು. ಈಗ ಕಲ್ಪವಾಸ ವ್ರತ ಹಾಗೂ ಆಚರಣೆಗಳಲ್ಲಿ ಭಾಗಿಯಾಗಲು ಪ್ರಯಾಗ್‌ರಾಜ್‌ಗೆ ಆಗಮಿಸಿ ಅವರ ಗುರು, ನಿರಂಜನಿ ಅಖಾಡದ 'ಮಹಾಮ್ನಾದ್ಲೇಶ್ವರ' ಸ್ವಾಮಿ ಕೈಲಾಸಾನಂದ ಅವರ ಶಿಬಿರದಲ್ಲಿ ತಂಗಲಿದ್ದಾರೆ. ಜನವರಿ 29ರವರೆಗೆ ಮಹಾಕುಂಭದ ಹಲವಾರು ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ.
ಸ್ವಾಮಿ ಕೈಲಾಸಾನಂದ ಅವರೇ ಸ್ವತಃ ತಮ್ಮ ಗುರುಗಳ ಗೋತ್ರಕ್ಕೆ ಆಕೆಯನ್ನು ಸ್ವೀಕರಿಸಿ ಹೊಸ ಹೆಸರನ್ನು ಇಟ್ಟಿದ್ದಾರೆ. ಲಾರೆನ್ ಸನಾತನ ಧರ್ಮದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದವರು. ಲಾರೀನ್‌ಳನ್ನು ಕೈಲಾಸಾನಂದ ಅವರು ತಂದೆಯಂತೆಯೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. "ಅವಳು ಇಲ್ಲಿಗೆ ತನ್ನ ಪರಮಗುರುಗಳನ್ನು ಭೇಟಿ ಮಾಡಲು ಬರುತ್ತಿದ್ದಾಳೆ. ಕಮಲಾ ಎಂದು ಹೆಸರಿಟ್ಟಿದ್ದೇನೆ. ಆಕೆ ನಮಗೆ ಮಗಳಿದ್ದಂತೆ. ಅವರು ಭಾರತಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ” ಎಂದು ಕೈಲಾಸಾನಂದ ಹೇಳಿದ್ದಾರೆ.
ನಿರಂಜನಿ ಅಖಾಡದ ಪೇಶ್ವಾಯಿ ಆಚರಣೆಗಳಲ್ಲಿ ಆಕೆಯನ್ನು ಸೇರಿಸಲಾಗುತ್ತಿದೆ. ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬಳಾದ ಲಾರೆನ್, ಮಹಾಕುಂಭದ ಸಮಯದಲ್ಲಿ ಸನ್ಯಾಸಿನಿಯ ಕೇಸರಿ ಉಡುಪನ್ನು ಧರಿಸುತ್ತಾರೆ ಮತ್ತು ಶಾಹಿ ಸ್ನಾನ (ಜನವರಿ 14) ಮತ್ತು ಮೌನಿ ಅಮಾವಾಸ್ಯೆ (ಜನವರಿ 29) ಸಮಯದಲ್ಲಿ ರಾಜಸ್ನಾನ ಮಾಡಲಿದ್ದಾರೆ.
ಮಹಾ ಕುಂಭದಲ್ಲಿ ಭಾಗವಹಿಸಲು ಹಲವಾರು ವಿಐಪಿಗಳು, ವಿವಿಐಪಿಗಳು, ಮಿಲಿಯನೇರ್‌ಗಳು, ದಾರ್ಶನಿಕರು ಮತ್ತು ಸಂತರು ಆಗಮಿಸಿದ್ದಾರೆ. ಇವರಲ್ಲಿ ಕೆಲವರು ಕಲ್ಪವಾಸ ವ್ರತ ಹಿಡಿದಿದ್ದಾರೆ. ಕಲ್ಪವಾಸ ಎಂಬುದು ಹಿಂದೂ ಸಂಪ್ರದಾಯದಲ್ಲಿ ಪುರಾತನವಾದ ಆಚರಣೆ. ಇವರನ್ನು ಕಲ್ಪವಾಸಿಗಳು ಎನ್ನಲಾಗುತ್ತದೆ. ಇದು ಪುಷ್ಯ ಪೂರ್ಣಿಮಾದಿಂದ ಮಾಘ ಪೂರ್ಣಿಮಾದವರೆಗೆ ಒಂದು ತಿಂಗಳ ಕಾಲ ಆಚರಿಸುವ ವ್ರತ. ಇದು ಮನುಷ್ಯನನ್ನು ಸರ್ವಪಾಪಗಳಿಂದ ವಿಮೋಚನೆಗೊಳಿಸಿ ಶುದ್ಧೀಕರಿಸುತ್ತದೆ.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶನಿವಾರ ಲಾರೆನ್ ತನ್ನ ಗುರುಗಳ ಜೊತೆ ಪ್ರಾರ್ಥನೆ ಸಲ್ಲಿಸಿದಳು. ಅರ್ಚಕರು ಹಾಗೂ ಹಿಂದೂ ಪೀಠಾಧಿಪತಿಗಳು ಹೊರತುಪಡಿಸಿ ಇತರ ಯಾರನ್ನೂ ಇಲ್ಲಿ ಲಿಂಗವನ್ನು ಸ್ಪರ್ಶಿಸಲು ಬಿಡಲಾಗುವುದಿಲ್ಲ. ಹೀಗಾಗಿ ಆಕೆ ಗರ್ಭಗುಡಿಯ ಹೊರಗಿನಿಂದ ಶಿವಲಿಂಗದ ದರ್ಶನ ಪಡೆದಳು.
ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ ದಿ. ಸ್ಟೀವ್ ಜಾಬ್ ಪತ್ನಿ
ಲಾರೀನ್ ಪೊವೆಲ್ ಅವರಿಗೆ ಈಗ 61 ವರ್ಷ. ಬ್ಯುಸಿನೆಸ್ ಡಿಗ್ರಿ ಮಾಡಿದ ಲಾರೀನ್ ಬೌದ್ಧ ಪದ್ದತಿಯಲ್ಲಿ ಸ್ಟೀವ್ ಅವರನ್ನು ಮದುವೆಯಾದಳು. ಗಂಡ ಹೆಂಡತಿ ಇಬ್ಬರೂ ಸಮಾಜಸೇವೆಗೆ ಹೆಸರಾದವರು. ಹಿಂದೂ ಧರ್ಮದತ್ತ ಇಬ್ಬರಿಗೂ ಒಲವಿತ್ತು. ಸ್ಟೀವ್ ಕೂಡ ಭಾರತಕ್ಕೆ ಭೇಟಿ ನೀಡಿ ಇಲ್ಲಿಂದ ಆಧ್ಯಾತ್ಮಿಕ ಪ್ರೇರಣೆ ಪಡೆಯುತ್ತಿದ್ದರು.
ಕಲ್ಪವಾಸವ್ರತದ ಅವಧಿಯಲ್ಲಿ ಲಾರೀನ್ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಾರೆ. ಪ್ರಾಪಂಚಿಕ ವಿಶೇಷ ಸೌಕರ್ಯಗಳನ್ನು ತ್ಯಜಿಸುತ್ತಾರೆ. ಜಪ, ಧ್ಯಾನಗಳಲ್ಲಿ ನಿರತರಾಗುತ್ತಾರೆ. ವಿಶೇಷ ತಾಂತ್ರಿಕ ಪೂಜೆಗಳೂ ನಡೆಯಬಹುದು. ಇವರು ಪ್ರತಿದಿನ ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು. ಇದು ಶುದ್ಧೀಕರಣ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ. ಇದು ಭಕ್ತರ ಸಂಯಮ ಮತ್ತು ಆತ್ಮಾವಲೋಕನದ ಅವಧಿ. ಇದು ಭಕ್ತರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಹೊಸತನವನ್ನು ತರುತ್ತದೆ.
ಮಹಾಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿಯ ಕಲ್ಪವಾಸ ವ್ರತ! ಏನಿದರ ಮಹತ್ವ?