ದೀಪಾವಳಿಗೆ ಎಣ್ಣೆ ಸ್ನಾನ ಮಾಡಿದ್ರಾ? ಅಷ್ಟಕ್ಕೂ ಇದರ ಮಹತ್ವವೇನು?

By Web Desk  |  First Published Oct 28, 2019, 11:47 AM IST

ದೀಪಾವಳಿ ದಿನ ಬೆಳಗ್ಗೆ ಮೈಗೆ ಎಣ್ಣೆ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಿದರೆ ಇದು ಚರ್ಮವನ್ನು ರಕ್ಷಿಸಿ ಇಡೀ ದಿನ ಹೊಳೆವ ಮೈಕಾಂತಿ ನೀಡುತ್ತದೆ. ಇದನ್ನೇ ಅಭ್ಯಂಗ ಸ್ನಾನ ಎನ್ನುವುದು. 


ಪ್ರತಿ ದೀಪಾವಳಿಯ ಬೆಳ್ಳಂಬೆಳಗ್ಗೆ ಅಮ್ಮ ಬಂದು ಹೊದಿಕೆ ಸರಿಸಿ, ಎಣ್ಣೆ ಹಚ್ತೀನಿ ಎದ್ದೇಳು ಎಂದು ಹೇಳುವುದು ಕೇಳಿ ನೀವು ಸಿಟ್ಟು ಮಾಡಿರಬಹುದು. ಎಂಥದಮ್ಮ, ನಿದ್ದೆ ಮಾಡೋಕೆ ಬಿಡ್ದೆ ಇರೋದು ಹಬ್ಬನಾ, ಎಣ್ಣೆ ಹಚ್ಚಿಕೊಳ್ದೆ ಸ್ನಾನ ಮಾಡಿದ್ರೆ ಹಬ್ಬ ಆಗಲ್ವಾ ಅಂತ. ಆದರೆ, ದೀಪಾವಳಿ ಆರಂಭವಾಗೋದು ಎರಕೊಳ್ಳೋ ಹಬ್ಬದೊಂದಿಗೆ ಅಭ್ಯಂಗ ಸ್ನಾನ ಮಾಡಿದ್ರೆನೇ ಈ ಹಬ್ಬ ಕಳೆ ಕಟ್ಟೋಕೆ ಶುರು ಮಾಡುವುದು. 
ಹಬ್ಬದ ಹಿಂದಿನ ದಿನ ಮನೆಯಲ್ಲಿರುವ ಹಂಡೆ ಹಾಗೂ ದೊಡ್ಡ ದೊಡ್ಡ ಪಾತ್ರೆಗಳನ್ನು ಪೂಜಿಸಿ, ಕೈ ಹಂಡ್ಲೆ ಬಳ್ಳಿ  ಕಟ್ಟಿ, ಅರಿಶಿನ ಕುಂಕುಮ ಹೂವು ಏರಿಸಿ, ಆರತಿ ಮಾಡಿ ನಂತರ ನೀರನ್ನು ತುಂಬಿಡಲಾಗುತ್ತದೆ. ತ್ರಯೋದಶಿ ದಿನ ಸಂಜೆ ನೀರನ್ನು ತುಂಬುವ ಈ ಕಾರ್ಯಕ್ಕೆ ನೀರು ತುಂಬುವ ಹಬ್ಬ ಎನ್ನಲಾಗುತ್ತದೆ. ಮನೆಯಲ್ಲಿ ಪ್ರತಿಯೊಂದು ಪಾತ್ರೆಗಳಲ್ಲಿ ನೀರನ್ನು ತುಂಬಿಡುವುದರಿಂದ ಗಂಗಾದೇವಿಯನ್ನು ಮನೆಗೆ ಆಹ್ವಾನಿಸಿದಂತಾಗುತ್ತದೆ. ಆ ಬಳಿಕ ಮರುದಿನ ಬೆಳಗ್ಗೆ ಈ ಗಂಗೆಯಿಂದ ಅಭ್ಯಂಗ ಸ್ನಾನ ಮಾಡಬೇಕು. 

 

Latest Videos

undefined

ನರಕ ಚತುರ್ದಶಿ ಎಂಬುದು ಕೆಟ್ಟದರ ವಿರುದ್ಧ ಒಳ್ಳೆಯದರ ಗೆಲುವನ್ನು ಸಂಭ್ರಮಿಸುವ ಗಳಿಗೆ. ಹೀಗೆ ಯಾವುದೇ ಒಳ್ಳೆಯದನ್ನು ಸಂಭ್ರಮಿಸಲು ಸ್ನಾನ ಮಾಡಿ ಶುದ್ಧವಾಗಬೇಕು. ಅದರಲ್ಲೂ ಈ ದಿನ ಸೂರ್ಯ ಹುಟ್ಟುವ ಮುಂಚೆ ಮಾಡುವ ಅಭ್ಯಂಗ ಸ್ನಾನ ಪವಿತ್ರ ಗಂಗೆಯಲ್ಲಿ ಮುಳುಗೆದ್ದಷ್ಟೇ ಪುಣ್ಯ ಎಂದು ನಂಬಲಾಗುತ್ತದೆ. ನರಕ ಚತುರ್ದಶಿಯಿಂದ ಹಿಡಿದು ಬಲಿಪಾಡ್ಯಮಿವರೆಗೂ ಪ್ರತಿದಿನ ಎಣ್ಣೆ ಸ್ನಾನ ಮಾಡುವುದರಿಂದ ಹಬ್ಬದ ಆಧ್ಯಾತ್ಮಿಕ ಲಾಭಗಳನ್ನು ಪಡೆಯಬಹುದು. 
ಅದೂ ಅಲ್ಲದೆ, ಚಳಿಗಾಲದ ಆರಂಭ ಬೇರೆ. ಮೈ ಒಡೆಯಲು ಶುರುವಾಗುವ ಸಮಯ. ಇಂಥ ಸಂದರ್ಭದಲ್ಲಿ ಎಣ್ಣೆ ಸ್ನಾನ ಮಾಡಿದರೆ ಬಹು ದಿನಗಳ ಕಾಲ ತ್ವಚೆ ಮಾಯಿಶ್ಚರೈಸರ್ ಉಳಿಸಿಕೊಳ್ಳುವ ಜೊತೆಗೆ ಕಡಲೆಹಿಟ್ಟು ಸೀಗೇಕಾಯಿ ಪುಡಿ ಬಳಸಿ ಸ್ನಾನ ಮಾಡಿದರೆ ಸ್ಕ್ರಬ್‌ನಂತೆ ಕೆಲಸ ಮಾಡಿ ಡೆಡ್ ಸೆಲ್‌ಗಳನ್ನು ಮೈಯಿಂದ ತೆಗೆದು ಹಾಕುತ್ತದೆ. ಸಾಸಿವೆ ಎಣ್ಣೆ ಬಳಕೆ ಒಳ್ಳೆಯದು. ಇದು ದೇಹದಲ್ಲಿ ಉಷ್ಣತೆ ಹೆಚ್ಚಿಸಿ ಚಳಿ ಸಂದರ್ಭದಲ್ಲಿ ದೇಹವನ್ನು ಒಳಗಿನಿಂದ ಬಿಸಿಯಾಗಿಸುತ್ತದೆ. ಇದರಿಂದ ತ್ವಚೆಯ ಪುನರುಜ್ಜೀವನ ಆಗುತ್ತದೆ. 

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಒಳಿತು?

ಈ ಅಭ್ಯಂಗ ಸ್ನಾನ ಎಣ್ಣೆಯಿಂದ ಫುಲ್ ಬಾಡಿ ಮಸಾಜ್ ಒಳಗೊಂಡಿದೆ. ನಂತರ ಕಡಲೆಹಿಟ್ಟು, ಗಂಧದ ಪುಡಿ ಸೇರಿಸಿ ಮೈ ತೊಳೆಯಲಾಗುತ್ತದೆ.
ಬಹುತೇಕರು ಅಷ್ಟೆಲ್ಲ ರಗಳೆ ಮಾಡಿಕೊಂಡು ಮಾಡಬೇಕಲ್ಲಪಾ ಎಂದುಕೊಂಡು ಮಾಡುವ ಅಭ್ಯಂಗ ಸ್ನಾನವು ಎಷ್ಟೊಂದು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ ಗೊತ್ತಾ?
- ಮೊದಲೇ ಹೇಳಿದಂತೆ ಸಾಸಿವೆ ಎಣ್ಣೆಯು ದೇಹದ ಉಷ್ಣತೆ ಹೆಚ್ಚಿಸಿ ಚಳಿಯನ್ನು ಎದುರಿಸಲು ದೇಹ ಸಜ್ಜಾಗುವಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಪಿತ್ತ ಕಡಿಮೆ ಮಾಡುತ್ತದೆ. 
- ಚರ್ಮಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ಉತ್ತಮ ಮಾಯಿಶ್ಚರೈಸರ್ ದೊರೆಯುತ್ತದೆ. ಉಳಿದ ಮಾಯಿಶ್ಚರೈಸರ್‌ಗಳಂತಲ್ಲದೆ, ಸಾಸಿವೆ ಎಣ್ಣೆಯು ಚರ್ಮದಲ್ಲಿ ಬಹಳ ಆಳಕ್ಕೆ ಇಳಿಯಬಲ್ಲದು. ಇದರಿಂದ ಚರ್ಮ ಮೃದುವಾಗುತ್ತದೆ. ಅಷ್ಟೇ ಅಲ್ಲ, ಡೆಡ್ ಸ್ಕಿನ್‌ಗಳನ್ನು ತೆಗೆದು, ಪರಿಸರದಿಂದ ಅಂಟಿದ ಕೊಳೆಯನ್ನೆಲ್ಲ ಲೂಸಾಗಿಸುತ್ತದೆ. ಸ್ನಾನ ಮಾಡಿದಾಗ ಅವೆಲ್ಲ ತೊಳೆದು ಹೋಗುತ್ತವೆ. 
- ಮಸಾಜ್‌ನಿಂದಾಗಿ ದೇಹದಲ್ಲಿ ರಕ್ತ ಸಂಚಲನ ಉತ್ತಮಗೊಳ್ಳುತ್ತದೆ. ತಲೆಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ. ಅಭ್ಯಂಗ ಸ್ನಾನವು ನರಗಳನ್ನು ಪ್ರಚೇದಿಸಿ, ಸೆನ್ಸರಿ ಮೋಟಾರ್ ಇಂಟಿಗ್ರೇಶನ್ ಸರಿಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ನರಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು. ಜೊತೆಗೆ, ಎಣ್ಣೆ ಮಸಾಜ್‌ನಿಂದಾಗಿ ಸ್ನಾಯುಗಳು ರಿಲ್ಯಾಕ್ಸ್ ಆಗಿ ಬಲಗೊಳ್ಳುತ್ತವೆ. ಇದರಿಂದ ಸುಖನಿದ್ರೆ ನಿಮ್ಮದಾಗುತ್ತದೆ. 
- ಪ್ರತಿ ದಿನ ಅಭ್ಯಂಗ ಸ್ನಾನ ಮಾಡುವುದರಿಂದ ಆಯಸ್ಸು ಹಾಗೂ ಸೌಂದರ್ಯ ಎರಡೂ ವೃದ್ಧಿಸುತ್ತದೆ. ಸುಕ್ಕು ಕಡಿಮೆಯಾಗಿ ದೇಹ ರಿಲ್ಯಾಕ್ಸ್ ಆಗಿರುತ್ತದೆ. ಹಾಗಾಗಿ ನಿದ್ರೆಯ ಸಮಸ್ಯೆ ಎದುರಾಗುವುದಿಲ್ಲ. 
- ಅಂಗಾಲು, ಅಂಗೈ ಚೆನ್ನಾಗಿ ಮಸಾಜ್ ಮಾಡುವುದರಿಂದ ನರತಂತುಗಳು ಚುರುಕಾಗುತ್ತವೆ. ಇದರಿಂದ ಹಾರ್ಮೋನ್ ಸಮಸ್ಯೆಗಳು ನೀಗುತ್ತವೆ, ದೃಷ್ಟಿ ಚುರುಕಾಗುತ್ತದೆ.  
- ಹೆಡ್ ಮಸಾಜ್ ದಿನ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. 

ಅಭ್ಯಂಗ ಸ್ನಾನ: ಮಗುವಾದ ತೀರ್ಥರ ನೋಡಿ ಪಾವನರಾಗಿ

ಹೇಗೆ ಮಾಡೋದು?
- ಸೂರ್ಯ ಹುಟ್ಟುವ ಮುಂಚೆ ಎದ್ದು ಸಾಸಿವೆ ಎಣ್ಣೆಯಿಂದ ಮೈ ತುಂಬಾ ಮಸಾಜ್ ಮಾಡಿಕೊಳ್ಳಿ. ತಲೆಗೆ ಕೂಡಾ ಐದರಿಂದ 10 ನಿಮಿಷ ಮಸಾಜ್ ಮಾಡಿಸಿಕೊಳ್ಳಿ. ಅಭ್ಯಂಗ ಸ್ನಾನದಲ್ಲಿ ಎಣ್ಣೆಯನ್ನು ವಿಶೇಷವಾಗಿ ತಲೆ, ಕಿವಿ ಮತ್ತು ಪಾದಗಳಿಗೆ ಹೆಚ್ಚು ಹಚ್ಚಿ ಉಜ್ಜಿ.
- ಅರ್ಧ ಗಂಟೆಗಳ ಕಾಲ ದೇಹ ಎಣ್ಣೆಯನ್ನು ಹೀರಿಕೊಳ್ಳಲು ಬಿಡಿ. 
- ಆ ಬಳಿಕ ಬಿಸಿ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಿ. ಈ ಸಂದರ್ಭದಲ್ಲಿ ಎಣ್ಣೆ ತೆಗೆಯಲು ಕಡಲೆಹಿಟ್ಟು, ಸೀಗೇಕಾಯಿ, ಅಂಟ್ವಾಳ ಮುಂತಾದವನ್ನು ಬಳಸಬಹುದು. 

click me!