Vijayapura: ಕೋವಿಡ್ ನಂತರ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆಗೆ ಅದ್ಧೂರಿ ಸಿದ್ಧತೆ!

By Govindaraj S  |  First Published Jul 8, 2022, 4:38 PM IST

ಉತ್ತರ ಕರ್ನಾಟಕ ಭಾಗದಲ್ಲಿ ಊಟಕ್ಕೆಂದು ಕುಳಿತರೆ ಮೊದಲು ಕೇಳುವುದೇ ಜೋಳದ ರೊಟ್ಟಿ, ಅಂತಹ ರೊಟ್ಟಿಯ ರುಚಿಯ ಸೊಬಗು ಸವಿಯಲ್ಲಿ ಸುಪ್ರಸಿದ್ಧತೆ ಪಡೆದ ರಾಜ್ಯದ ವಿವಿಧ ಮಠಗಳಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠ ಮೊದಲನೆಯ ಸಾಲಿನಲ್ಲಿ ಕಾಣುತ್ತದೆ.


ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.08): ಉತ್ತರ ಕರ್ನಾಟಕ ಭಾಗದಲ್ಲಿ ಊಟಕ್ಕೆಂದು ಕುಳಿತರೆ ಮೊದಲು ಕೇಳುವುದೇ ಜೋಳದ ರೊಟ್ಟಿ, ಅಂತಹ ರೊಟ್ಟಿಯ ರುಚಿಯ ಸೊಬಗು ಸವಿಯಲ್ಲಿ ಸುಪ್ರಸಿದ್ಧತೆ ಪಡೆದ ರಾಜ್ಯದ ವಿವಿಧ ಮಠಗಳಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠ ಮೊದಲನೆಯ ಸಾಲಿನಲ್ಲಿ ಕಾಣುತ್ತದೆ. ಇಂತಹ ಮಠದಲ್ಲಿ ಕೋವಿಡ್ ನಂತರ ಇದೀಗ ಅಜ್ಜನ ಜಾತ್ರೆಯ ಸಂಭ್ರಮ ಇಡೀ ತಾಲೂಕಿನಲ್ಲಿ ಮನೆ ಮಾಡಿದ್ದು, ಇದಕ್ಕೆ ನಿತ್ಯ ದಾಸೋಹ ಸಾಕ್ಷಿಕರಿಸಿದೆ.

Latest Videos

undefined

10 ದಿನಗಳ ನಿರಂತರ ಜಾತ್ರಾಮಹೋತ್ಸವ: ಈ ಭಾಗದ ನೂರಾರು ಹಳ್ಳಿಗಳ ಜನರ ಆರಾಧ್ಯ, ಮಠಗಳಲ್ಲಿ ಒಂದಾಗಿರುವ ಖಾಸ್ಗತ ಮಠಕ್ಕೆ ಲಕ್ಷಾಂತರ ಭಕ್ತಾಧಿಗಳು ಬಂದು ಹೋಗುವುದು ಕಾಣುತ್ತೇವೆ. ಸುಮಾರು 10 ದಿನಗಳ ಕಾಲ ನಡೆಯುತ್ತಿರುವ ಈ ಜಾತೋತ್ಸವಕ್ಕೆ ಗ್ರಾಮೀಣ ಭಾಗದ ಲಕ್ಷಾಂತರ ಭಕ್ತರು ತಮ್ಮ ಮನೆಯಿಂದಲೇ ರೊಟ್ಟಿಯನ್ನು ಶ್ರೀಮಠಕ್ಕೆ ಅರ್ಪಿಸುತ್ತಾ ಸಾಗಿದ್ದಾರೆ. ನಿತ್ಯ ದಾಸೋಹದಲ್ಲಿ ಯಾವ ಭಕ್ತರಿಗೂ ಹಸಿವು ಎಂಬುದು ಕಾಣುವುದಿಲ್ಲ. ತಮ್ಮ ಹೊಟ್ಟೆ ತುಂಬಾ ಖಾಸ್ಗತನ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಾ ಸಾಗ್ತಿದ್ದಾರೆ.

ವಿಜಯಪುರದಲ್ಲಿ ಜಂಬೋ ರೆಡ್‌ ಡ್ರ್ಯಾಗನ್‌ ಫ್ರೂಟ್ ಹವಾ..!

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಜಾತ್ರಾ ಸ್ಪೆಶಲ್: ಜಾತ್ರೋತ್ಸವದ ದಾಸೋಹದಲ್ಲಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶಿರಾ, ಸಜ್ಜಕ, ಬದನಿಕಾಯಿ ಪಲ್ಲೆ, ಅನ್ನ, ಸಾಂಬರು ಒಳಗೊಂಡು ಇನ್ನಿತರ ಪ್ರಸಾದವನ್ನು ತಯಾರಿಸಿ ಪ್ರಸಾದ ರೂಪದಲ್ಲಿ ಶ್ರೀಮಠದ ವತಿಯಿಂದ ನೂರಾರು ವರ್ಷಗಳಿಂದ ನೀಡುತ್ತಾ ಬರಲಾಗಿದೆ. ಇದೇ ಪರಂಪರೆಯನ್ನು ಈಗಿನ ಶ್ರೀಮಠದ ಬಾಲ ಸಿದ್ದಲಿಂಗ ದೇವರು ಮುಂದುವರೆಸಿಕೊಂಡು ಹೋಗುತ್ತಿದ್ದು, ಹಸಿವು ನೀಗಿಸುವಂತಹ ಕಾರ್ಯ ಮಾಡಿರುವುದು ಭಕ್ತರ ಮನಸ್ಸಿನಲ್ಲಿ ಖಾಸ್ಗತ ಮಠದ ಮೇಲಿನ ಭಕ್ತಿ ಇಮ್ಮಡಿಗೊಳ್ಳುವಂತೆ ಮಾಡಿದೆ. ಪ್ರಸಕ್ತ ಸಾಲಿನ ಜಾತ್ರೋತ್ಸವದಲ್ಲಿ ದವಸ ಧಾನ್ಯಗಳು ಭಕ್ತರಿಂದ ಹರಿದು ಬರುತ್ತಿದ್ದು ರಾಶಿ ರಾಶಿ ರೊಟ್ಟಿಗಳು ಭಕ್ತರಿಗೆ ಉಣಬಡಿಸಲು ದಾಸೋಹಕ್ಕಾಗಿ ಕೈಬೀಸಿ ಕರೆಯುತ್ತಿವೆ ಎನ್ನಬಹುದು. 

ಭಕ್ತರಿಂದ ಪಡೆಯುವ ಜೊತೆಗೆ ಕೊಡುವ ಮಠ ಇದು: ಭಕ್ತರಿಂದ ಮಠ ಮಾನ್ಯಗಳು ಕೇವಲ ಪಡೆದುಕೊಳ್ಳುವದನ್ನು ಕಂಡಿದ್ದೇವೆ. ಆದರೆ ಜನರಿಗೆ ಸಂಕಷ್ಟ ಬಂದಾಗ ಕೊಡುವ ಮಠಗಳಿವೆ ಎಂಬುದಕ್ಕೆ ನಿದರ್ಶನವಾಗಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ‌ಮಠ ನಿಲ್ಲುತ್ತದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಶ್ರೀಮಠದಿಂದ ಸುಮಾರು 52 ಹಳ್ಳಿಗಳಲ್ಲಿ ಸಿದ್ದಲಿಂಗ ಶ್ರೀಗಳೇ ಸ್ವತಃ ಸಂಚರಿಸಿ 23 ಸಾವಿರ ಕುಟುಂಬಗಳಿಗೆ ಕಿಟ್ ರೂಪದಲ್ಲಿ ವಿವಿಧ ದವಸ ಧಾನ್ಯಗಳನ್ನ ಮಠದ ಭಕ್ತರ ಮನೆಮನೆಗೆ ತೆರಳಿ ವಿತರಿಸಿ ಹಸಿವು ನೀಗಿಸುವ ಕೆಲಸ ಮಾಡಿರುವುದು ಭಕ್ತರ ಮನದಲ್ಲಿ ಶ್ರೀ ಮಠದ ಮೇಲಿನ ಭಕ್ತಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ.

ಜಾತ್ರೆಗಾಗಿ ನಡೆಯುತ್ತಿದೆ ಅದ್ದೂರಿ ಸಿದ್ಧತೆ: ಇನ್ನು ಕೋವಿಡ್ ನಂತರ ಶ್ರೀ ಖಾಸ್ಗತೇಶ್ವರ ಜಾತ್ರೆಯನ್ನ ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಲಾಗಿದೆ. ಮಠವನ್ನ ಮತ್ತು ಮಠದ ಮುಖ್ಯ ರಸ್ತೆಗಳನ್ನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮಠದ ಹೊರ ಹಾಗೂ ಒಳ ಆವರಣವನ್ನ ತರಹೇವಾರಿ ಹೂಗಳಿಂದ ಅಲಂಕರಿಸಲಾಗುತ್ತಿದೆ. ಪ್ರಸಿದ್ಧ ಮೊಸರು ಗಡಿಗೆ ಒಡೆಯುವ ಗೋಪಾಳ ಕಾವಲಿ, ರಥೋತ್ಸವ, ಶ್ರೀಗಳ ಆನೆ ಅಂಬಾರಿ ಮೆರವಣಿಗೆಗೆ ತಾಳಿಕೋಟಿ ಪಟ್ಟಣ ಸಜ್ಜುಗೊಳ್ಳುತ್ತಿದೆ. 

ಅಮೆರಿಕಾ ವಧು, ವಿಜಯಪುರದ ವರ: ವಿಜಯಪುರದಲ್ಲಿ ಅಪರೂಪದ ಮದುವೆ!

ಸಾಮಾಜಿಕ ಜಾಲತಾಣಗಳಲ್ಲಿ‌ ಭಕ್ತರಿಂದ ಅಬ್ಬರದ ಪ್ರಚಾರ: ಜಾತ್ರೆಗಾಗಿ ಆಹ್ವಾನಿಸಿ ಮಾಹಿತಿ ನೀಡುವ ಪ್ರಚಾರ ಕಾರ್ಯದಲ್ಲಿ ಮಠದ ಭಕ್ತರು ನಿರತರಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಜಾತ್ರಾ ಸಿದ್ಧತೆಯ ವಿಡಿಯೋಗಳು ಈ ಭಾಗದಲ್ಲಿ ಈಗಾಗಲೇ ವೈರಲ್ ಆಗಿವೆ.

click me!