ಪವಿತ್ರವಾದ ಶ್ರಾವಣ ಮಾಸದಲ್ಲಿ ಆರಾಧನೆಯ ಜೊತೆಗೆ ಸ್ವಾಸ್ಥ್ಯ ಮತ್ತು ಸಮೃದ್ಧಿಯನ್ನು ತರುವ ಕೆಲವು ಸಸ್ಯಗಳನ್ನು ನೆಡುವುದು ಉತ್ತಮವೆಂದು ಹೇಳಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಸ್ಯಗಳನ್ನು ದೇವರೆಂದು ಆರಾಧಿಸಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಈ ಐದು ಸಸ್ಯಗಳನ್ನು ನೆಡುವುದರಿಂದ ಅದೃಷ್ಟ ಒದಗಿ ಬರುತ್ತದೆ. ಹಾಗಾದರೆ ಆ ಸಸ್ಯಗಳ ಬಗ್ಗೆ ತಿಳಿಯೋಣ...
ಶ್ರಾವಣ ಮಾಸವು ಹಿಂದೂ ಪಂಚಾಂಗದ ಐದನೇ ಮಾಸವಾಗಿದೆ. ಇದು ತಿಂಗಳುಗಳಲ್ಲೇ ಹೆಚ್ಚು ಪವಿತ್ರವಾಗಿದೆ. ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ. ಅಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸುವುದಲ್ಲದೆ, ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಸಸ್ಯಗಳ ಬಗ್ಗೆ ತಿಳಿಯೋಣ...
ಶ್ರಾವಣ ಮಾಸವು ಶಿವನನ್ನು ಆರಾಧಿಸುವ ಶುಭಮಾಸವಾಗಿದೆ. ಈ ಮಾಸದಲ್ಲಿ ಶಿವನ ಆರಾಧನೆಗೆ ಪ್ರಾಶಸ್ತ್ಯ ಹೆಚ್ಚು ಸಿಗಲು ಕಾರಣವಿದೆ. ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳ ಮತ್ತು ದಾನವರ ನಡುವೆ ಕಾದಾಟ ಆರಂಭವಾಗಿತ್ತು. ಆ ಸಮಯದಲ್ಲಿ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ಹಾಗೂ ದಾನವರು ಹಂಚಿಕೊಳ್ಳುತ್ತಾರೆ. ಉಳಿದ ಒಂದು ರತ್ನವೇ ಹಾಲಾಹಲ. ಆ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಇದೇ ಮಾಸದಲ್ಲಿ ಆಗಿದ್ದರಿಂದ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ ಇದೆ.
ಇದನ್ನು ಓದಿ: ಈ ಮೂರು ಪಾದಾಂಕದವರು ಬುದ್ಧಿವಂತರು, ಹಣವಂತರು..!
ತುಳಸಿ ಗಿಡ
ಮನೆಯ ಮುಂದೆ ತುಳಸಿ ನೆಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ತುಳಸಿಯು ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯವನ್ನು ವಿಶೇಷವಾಗಿ ಶ್ರಾವಣ ಮಾಸದಲ್ಲಿ ನೆಡುವುದರಿಂದ ಲಾಭಗಳು ಅನೇಕವೆಂದು ಹೇಳಲಾಗುತ್ತದೆ. ತುಳಸಿಯನ್ನು ಕಾರ್ತಿಕ ಮಾಸದಲ್ಲಿ ಸಹ ನೆಡುತ್ತಾರೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ನೆಲೆಸಿರಲು ತುಳಸಿ ಮಾತೆಯ ಕೃಪೆ ಅತ್ಯಗತ್ಯವಾಗಿರುತ್ತದೆ. ಸುಖ-ಸಮೃದ್ಧಿ, ಉತ್ತಮ ಸ್ವಾಸ್ಥ್ಯ, ಯಶಸ್ಸು ಮತ್ತು ಆರೋಗ್ಯಕ್ಕಾಗಿ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ಪ್ರದಕ್ಷಿಣೆ ಮಾಡಬೇಕು. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ಬುದ್ಧಿ ಶಕ್ತಿ ಹೆಚ್ಚುವುದಲ್ಲದೆ ಇನ್ನೂ ಅನೇಕ ಪ್ರಯೋಜನಗಳಿವೆ. ಹಾಗಾಗಿ ಶ್ರಾವಣ ಮಾಸದಲ್ಲಿ ತುಳಸಿಯನ್ನು ನೆಡುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ.
ಬಾಳೆ ಮರ
ಶ್ರಾವಣ ಮಾಸದ ಏಕಾದಶಿ ಅಥವಾ ಗುರುವಾರದಂದು ಮನೆಯ ಹಿಂದೆ ಬಾಳೆ ಸಸಿಯನ್ನು ನೆಡವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಬಾಳೆಯನ್ನು ಮನೆಯ ಮುಂದೆ ನೆಡುವುದು ಉತ್ತಮವಲ್ಲವೆಂದು ಹೇಳಲಾಗುತ್ತದೆ. ಮನೆಯ ಹಿಂದೆ ನೆಡುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಬಾಳೆ ಮರಕ್ಕೆ ಹಳದಿ ದಾರವನ್ನು ಕಟ್ಟಿ, ಪ್ರದಕ್ಷಿಣೆ ಹಾಕುವುದರಿಂದ ವಿವಾಹ ಯೋಗ ಬೇಗ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ವಿಶೇಷವಾಗಿ ಗುರು ಗ್ರಹವು ಬಲವಾಗುತ್ತದೆ.
ಇದನ್ನು ಓದಿ: ಭಯಾನಕ ಸ್ವಪ್ನಗಳು ಬಿದ್ದರೆ, ಬೀಳುತ್ತಿದ್ದರೆ ಹೀಗೆ ಮಾಡಿ!!
ಶಮಿ ವೃಕ್ಷ
ಶ್ರಾವಣ ಶನಿವಾರದಂದು ಶಮೀ ಪತ್ರೆಯ ಸಸಿಯನ್ನು ನೆಡುವುದು ಶುಭವೆಂದು ಹೇಳಲಾಗುತ್ತದೆ. ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಇದನ್ನು ನೆಡುವುದು ಉತ್ತಮವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ವೃಕ್ಷದ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಶನಿ ದೋಷ ನಿವಾರಣೆಯಾಗುವುದಲ್ಲದೆ, ಸ್ವಾಸ್ಥ್ಯಸಮಸ್ಯೆ ಇದ್ದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಶಮೀ ವೃಕ್ಷವನ್ನು ವಿಜಯದಶಮಿಯಂದು ನೆಡುವುದರಿಂದ ಸಹ ಧನವೃದ್ಧಿಯಾಗುವುದಲ್ಲದೆ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಅಶ್ವತ್ಥ ವೃಕ್ಷ
ಶ್ರಾವಣ ಮಾಸದಲ್ಲಿ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅಶ್ವತ್ಥ ಸಸಿಯನ್ನು ಶ್ರಾವಣ ಮಾಸದ ಗುರುವಾರದಂದು ಈ ಸಸಿಯನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಅಶ್ವತ್ಥವನ್ನು ಮನೆಯ ಹತ್ತಿರದಲ್ಲಿ ನೆಡುವುದು ಉತ್ತಮವಲ್ಲ. ಈ ಸಸಿಯನ್ನು ಮನೆಯಿಂದ ದೂರದಲ್ಲಿ ನೆಡಬೇಕು. ಅಷ್ಟೇ ಅಲ್ಲದೆ ಈ ಸಸಿಗೆ ನೀರು ಹಾಕುವುದು ಮತ್ತು ಪ್ರದಕ್ಷಿಣೆ ಮಾಡುವುದರಿಂದ ಸಂತಾನ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಶನಿವಾರದಂದು ಅಶ್ವತ್ಥ ವೃಕ್ಷದ ಬಳಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಶನಿ ದೇವನ ಕೃಪೆ: ಈ ರಾಶಿ ಹುಡುಗಿಯರು ಸ್ವಾಭಿಮಾನಿಗಳು... ನಿಮ್ಮ ಹುಡುಗಿ ಹೇಗೆ?
ದಾಳಿಂಬೆ ಸಸಿ
ಶ್ರಾವಣ ಮಾಸದಲ್ಲಿ ಮನೆಯ ಬಳಿ ದಾಳಿಂಬೆ ಸಸಿಯನ್ನು ನೆಡುವುದರಿಂದ ಮನೆಗೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ಗಿಡವು ಉತ್ತಮ ಗಾಳಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮನೆಯ ಬಳಿ ನೆಡುವುದರಿಂದ ದುಷ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ. ದಾಳಿಂಬೆ ಸಸಿ ಮನೆಯ ಬಳಿ ಇದ್ದರೆ ಸಮಸ್ಯೆಗಳು ಬೇಗ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.