Vijayapura; ಗುಮ್ಮಟನಗರಿಯಲ್ಲಿ ಸಂಭ್ರಮದ ನವರಾತ್ರಿ ಹಬ್ಬ

By Suvarna NewsFirst Published Sep 26, 2022, 7:41 PM IST
Highlights

ಗುಮ್ಮಟನಗರಿಯಲ್ಲಿ ಸಂಭ್ರಮದ ನವರಾತ್ರಿ ಹಬ್ಬ. ಮನೆ-ಮನಗಳಲ್ಲು ನವದುರ್ಗೆಯರ ಆರಾಧನೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಗಗನಮುಖಿ. 

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಸೆ.26) : ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಜಿಲ್ಲೆಯಲ್ಲಿಯೂ ಕೂಡಾ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ನವರಾತ್ರಿ ಪೂಜೆಗೆ ಖರೀದಿ ಜೋರಾಗಿದೆ. ದಸರಾ ನವರಾತ್ರಿ ಪೂಜೆ ಹಿನ್ನೆಲೆಯಲ್ಲಿ ನಗರದ ಹೃದಯಭಾಗದಲ್ಲಿರುವ ಗಾಂಧಿ ವೃತ್ತ ಹಾಗೂ ನೆಹರೂ ಮಾರುಕಟ್ಟೆ  ಹೂಗಳ ಖರೀದಿಗೆ ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡು ಬಂದಿತು. ಕಳೆದ ಎರಡು ಮೂರು ವರ್ಷಗಳಿಂದ ಕೋವಿದ್ ಹಿನ್ನೆಲೆಯಲ್ಲಿ  ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿತ್ತು. ಈಗ ಅದ್ದೂರಿ ಆಚರಣೆಗೆ ಜಿಲ್ಲೆ ಸಜ್ಜಾಗಿದ್ದು, ಮಹಿಳೆಯರು ಹೂ ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಗುಮ್ಮಟನಗರಿಯ ಗಗನಕ್ಕೇರಿದ ಹೂಗಳ ಬೆಲೆ!
ಇನ್ನು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಲಗ್ಗೆ ಇಡುತ್ತಿದ್ದಂತೆ ಗ್ರಾಹಕರನ್ನು ಕಂಡು ವ್ಯಾಪಾರಿಗಳು ಕೂಡಲೇ ಹೂ ಬೆಲೆ ಹೆಚ್ಚಿಸಿದರು. ಮಲ್ಲಿಗೆ ಹೂವು 1200 ರಿಂದ 1500 ರೂಗೆ, ಕಾಕಡ ಹೂವು 800 ರಿಂದ 1000 ರೂಗೆ. ಸೇವಂತಿಗೆ ಒಂದು ಕೈ (20 ಮಾರು) 1200 ರಿಂದ 1500 ರೂ. ಗುಲಾಬಿ ಕೆಜಿ 250 ರಿಂದ 300 ರೂ. ಕನಕಾಂಬರ 800 ರಿಂದ 1000 ರೂ. ಗೆ ಏರಿಕೆ ಮಾಡಿದರು.

ನಿನ್ನೆಯಿಂದಲೇ ಹೂವು ಖರೀದಿ ಬಲು ಜೋರು!
ನಿನ್ನೆಯಿಂದಲೇ ಹೂವಿನ ಖರೀದಿ ಜೋರಾಗಿದೆ. ಮಾರುಕಟ್ಟೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಂದು ವಾರದ ಆಚರಣೆ ಇರುವುದರಿಂದ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ದರಗಳೂ ಏರಿವೆ. 

ಮನೆ-ದೇಗುಲಗಳಲ್ಲು ನವರಾತ್ರಿ ಹಬ್ಬದ ಸಂಭ್ರಮ!
ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ನವರಾತ್ರಿಯ ಆಚರಣೆ ವೇಳೆ ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಹೂವು ಹೆಚ್ಚಾಗಿ ಬಳಕೆಯಾಗುತ್ತದೆ. ಆಯುಧ ಪೂಜೆ ವಾಹನಗಳ ಅಲಂಕಾರಕ್ಕೆ ಭಾರಿ ಪ್ರಮಾಣದ ಹೂ ಬಳಸುತ್ತಾರೆ. ಈ ವಾರದಲ್ಲಿ ಹೂವಿನ ದರಗಳು ದುಬಾರಿಯಾಗಿವೆ. ನೆಲಕಚ್ಚಿದ್ದ ಹೂವಿನ ವ್ಯಾಪಾರಕ್ಕೆ ಜೀವ ಬಂದಂತಾಗಿದೆ.

ಹಬ್ಬದಲ್ಲಿ ತರಕಾರಿ ದರಗಳೂ ಗಗನಕ್ಕೆ!
ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್, ಮೆಣಸಿನಕಾಯಿ, ಬೆಂಡೆಕಾಯಿ, ಈರುಳ್ಳಿ ದರಗಳು ಏರಿಕೆ ಕಂಡಿವೆ. ಟೊಮೆಟೊ, ಮೂಲಂಗಿ ಅಗ್ಗವಾಗಿದೆ. 'ಮಳೆಯಿಂದ ಕೆಲ ತರಕಾರಿಗಳ ಕೊರತೆ ಉಂಟಾಗಿದೆ. ಪ್ರಮಾಣವೂ ಕುಸಿದಿರುವುದರಿಂದ ಬೆಲೆಗಳು ಏರಿವೆ. ಹಬ್ಬ ಇರುವುದರಿಂದ ದರಗಳು ತುಸು ಏರುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾತ್ರಿ ಗುಡಿಸಬಾರದು ಅಂತಾರೆ, ಇನ್ನು ದೇವರ ಮನೆ ಕ್ಲೀನ್ ಮಾಡಿದ್ರೆ ಓಕೇನಾ?

ಸಂಪ್ರದಾಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ!
ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ asianetsuvarnanews.com ಜೊತೆಗೆ ಮಹಿಳೆಯರು ಮಾತನಾಡಿದ್ದಾರೆ. ಸಂಭ್ರಮವನ್ನ ಹಂಚಿಕೊಂಡಿದ್ದಾರೆ. ಮುತ್ತೈದೆಯರು, ಕನ್ಯೆಯರು, ಪುಟ್ಟ ಮಕ್ಕಳು ಒಬ್ಬರು ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಮಕ್ಕಳಲ್ಲಿ ಪ್ರಜ್ಞೆ ಮೂಡಿದಂತಾಗುತ್ತದೆ ಎನ್ನುತ್ತಾರೆ ನಗರದ ಜಾಡರ ಓಣಿಯ ಅಶ್ವೀನಿ ಗೊಳಸಂಗಿ.

NAVARATRI TIPS: ನವರಾತ್ರಿ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ

9 ದಿನಗಳ ಕಾಲ ಮನೆ-ಮನಗಳಲ್ಲಿ ನಿತ್ಯ ನವದೇವಿಯರ ಆರಾಧನೆ..!
ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಲಾಗುತ್ತದೆ. ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ, ಚಕ್ಕುಲಿ, ಉಂಡೆ ಕೊಟ್ಟು ಆರತಿ ಮಾಡುವ ಪದ್ಧತಿ ಇದೆ.

click me!