ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನಿರ್ಮಾಣಕ್ಕೆ ದೇಣಿಗೆಯಾಗಿ ಮೊದಲು ಹಣ ನೀಡಿದ್ದೇ ಸಾಕ್ಷಾತ್ ಶಿವ.. ಅದೂ ಆತ ಕೊಟ್ಟಿದ್ದು 5 ಪೈಸೆ.. ಈ ದೇವಾಲಯ ನಿರ್ಮಾಣದ ಹಿಂದಿನ ಆಸಕ್ತಿಕರ ಕತೆ ಇಲ್ಲಿದೆ..
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಫೋಟೋಗಳು: ಅಪುಲ್ ಆಳ್ವಾ ಇರಾ ಮತ್ತು ಸಂದೀಪ್ ಬಳ್ಳಾಲ್.ಕೆ.
ನವರಾತ್ರಿ ಸಂಭ್ರಮದಲ್ಲಿ ಕಡಲನಗರಿ ಮಂಗಳೂರು ನವವಧುವಿನಂತೆ ಕಂಗೊಳಿಸ್ತಿದೆ. ಕುದ್ರೋಳಿ ಗೋಕರ್ಣನಾಥನ ಕ್ಷೇತ್ರದಲ್ಲಿ ಅಕ್ಷರಶಃ ದೇವಲೋಕವೇ ಧರೆಗಿಳಿದ ಅನುಭವ. ಮೈಸೂರು ದಸರಾವನ್ನೂ ನಾಚಿಸುವಂತೆ ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ಪ್ರಖ್ಯಾತಿ ಪಡೆಯುತ್ತಲೇ ಇದೆ. ಕೇವಲ ಕರಾವಳಿಗರಷ್ಟೇ ಅಲ್ಲದೇ ದೇಶ-ವಿದೇಶಗಳಿಂದಲೂ ಮಂಗಳೂರು ದಸರಾದ ಚೆಂದವನ್ನ ಕಣ್ತುಂಬಿಕೊಳ್ಳೋದಕ್ಕೆ ಜನಸಾಗರವೇ ಹರಿದು ಬರ್ತಿದೆ. ಇದಕ್ಕೆಲ್ಲಾ ಕಾರಣವಾಗಿರೋದು ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ. ಆದ್ರೆ ಇಂಥದ್ದೊಂದು ಭವ್ಯ ದೇವಸ್ಥಾನ ನಿರ್ಮಾಣದ ಹಿಂದಿರೋ ರೋಚಕ ಸ್ಟೋರಿ ಕೇಳಿದ್ರೆ ನಿಜಕ್ಕೂ ನೀವು ದಂಗಾಗ್ತೀರ. ಸುಮಾರು 27 ವರ್ಷಗಳ ಹಿಂದೆ ಈಗಿರೋ ಭವ್ಯ ಕುದ್ರೋಳಿ ಕಟ್ಟಲು ಕ್ಷೇತ್ರದ ರೂವಾರಿ ಜನಾರ್ದನ ಪೂಜಾರಿ ಮತ್ತು ಅವರ ತಂಡ ಪಟ್ಟ ಶ್ರಮದ ರೋಚಕ ಕಥೆಯಿದು..
ನಾರಾಯಣ ಗುರುಗಳಿಂದ ಶಂಕುಸ್ಥಾಪನೆಯಾದ ಕ್ಷೇತ್ರ..!
ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರವನ್ನು ನಿರ್ಮಾಣ ಮಾಡಲು ಸ್ವತಃ ನಾರಾಯಣ ಗುರುಗಳೇ ಪ್ರೇರಣಿಯಾಗಿದ್ದವರು. 1908ರಲ್ಲಿ ನಾರಾಯಣ ಗುರುಗಳೇ ಕುದ್ರೋಳಿಗೆ ಬಂದು ಅವರ ಕೈಯ್ಯಾರೇ ಕ್ಷೇತ್ರದ ಶಂಕುಸ್ಥಾಪನೆ ಮಾಡಿದ್ದರು. ಹೀಗೆ ಸುಮಾರು 4 ವರ್ಷಗಳ ಬಳಿಕ ಈ ಜಾಗದಲ್ಲಿ ಸಣ್ಣದೊಂದು ಹಂಚಿನ ದೇವಸ್ಥಾನವೂ ನಿರ್ಮಾಣವಾಗಿತ್ತು. ಬಳಿಕ ಗುರುಗಳನ್ನೇ ಕರೆಸಿ ಅವರಿಂದಲೇ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ನಾರಾಯಣ ಗುರುಗಳ ಕೈಯ್ಯಿಂದಲೇ ಉದ್ಘಾಟನೆಯಾದ ಕರ್ನಾಟಕದ ಮೊದಲ ದೇಗುಲವೂ ಈ ಕುದ್ರೋಳಿ ಕ್ಷೇತ್ರ ಎನ್ನುವುದು ಗಮನಾರ್ಹ.
ಭವ್ಯ ದೇವಸ್ಥಾನ ಕಟ್ಟಲು ಎದುರಾಗಿತ್ತು ಆರ್ಥಿಕ ಸಮಸ್ಯೆ..!
ಗುರುಗಳಿಂದ ಸ್ಥಾಪನೆಯಾದ ಕ್ಷೇತ್ರ ಹಂಚಿನದ್ದಾಗಿದ್ದ ಕಾರಣ ಅದಕ್ಕೊಂದು ಭವ್ಯ ಕಟ್ಟಡ ನಿರ್ಮಿಸೋ ಉದ್ದೇಶ ಕ್ಷೇತ್ರದ ಆಡಳಿತ ಮಂಡಳಿಯದ್ದಾಗಿತ್ತು. ಈ ವೇಳೆ ಬಿಲ್ಲವ ಸಮಾಜದ ಮೇರು ನಾಯಕ, 1989ರ ಕಾಲಕ್ಕೆ ರಾಜಕೀಯದಲ್ಲಿ ಉತ್ತುಂಗದಲ್ಲಿದ್ದ ಜನಾರ್ದನ ಪೂಜಾರಿಯವರ ನೆರವು ಕ್ಷೇತ್ರದ ಅಭಿವೃದ್ದಿಯ ಹಿಂದೆ ದೊಡ್ಡ ಪ್ರಭಾವ ಬೀರಿತ್ತು. 1989ರಲ್ಲಿ ಆಗಿನ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿದ್ದ ವಿಶ್ವನಾಥ ಅವರು ಜನಾರ್ದನ ಪೂಜಾರಿ ಅವರ ಬಳಿ ಕ್ಷೇತ್ರವನ್ನ ಜೀರ್ಣೋದ್ದಾರ ಮಾಡಲು ಉದ್ದೇಶಿಸಿದ್ದು, ನಿಮ್ಮ ಕೈಯ್ಯಿಂದಲೇ ಶಂಕುಸ್ಥಾಪನೆ ಆಗಬೇಕು ಅಂದರಂತೆ. ಈ ವೇಳೆ ಪೂಜಾರಿ ಎಷ್ಟು ಖರ್ಚಾಗಬಹುದು ಅಂದಾಗ ಬರೋಬ್ಬರಿ 60 ಲಕ್ಷ ಅನ್ನೋ ಉತ್ತರ ಬಂದಿದೆ. ಆದ್ರೆ ಕ್ಷೇತ್ರದಲ್ಲಿ ಒಂದು ನಯಾಪೈಸೆಯೂ ಇರಲಿಲ್ಲ. ಆ ಕಾಲಕ್ಕೆ ಬೆಂಗಳೂರು ಈಡಿಗ ಸಮಾಜದ ಅಧ್ಯಕ್ಷರೂ ಮಾಜಿ ಸಂಸದರೂ ಆಗಿದ್ದ ಎಚ್.ಆರ್.ಬಸವರಾಜು 25 ಲಕ್ಷ ಕೊಡೋದು ಖಾತ್ರಿಯಾಗಿದ್ದನ್ನ ಬಿಟ್ರೆ ಹಣವೇ ಇರಲಿಲ್ಲ. ಬಳಿಕ ಪೂಜಾರಿಯವರು ಕೂಡ ಶಂಕುಸ್ಥಾಪನೆ ನೆರವೇರಿಸಿದ್ರು. ದೇವಾಲಯ ಕಟ್ಟಲು ನೆಲ ಅಗೆದು ಹೊಂಡ ತೆಗೆದು ಕೆಲಸವೂ ಶುರುವಾಯಿತು. ಆದ್ರೆ ಹಣ ಮಾತ್ರ ಇರಲಿಲ್ಲ. ಆಗ ಎಲ್ಲಾ ಕೆಲಸಕ್ಕೂ ಎದುರಾದ ಆತಂಕವೇ ಆರ್ಥಿಕ ಅಡಚಣೆ.
ಜನರಿಂದ ಧನ ಸಂಗ್ರಹ-ಶುರುವಾಯ್ತು ಸಭೆ, ಸಮಾರಂಭ..!
ದೇವಾಲಯ ಕಟ್ಟೋಕೆ ನಿರ್ಧರಿಸಿದ ಮೇಲೆ ಎದುರಾದ ಆರ್ಥಿಕ ಸಮಸ್ಯೆ ಎಲ್ಲರನ್ನೂ ಅಕ್ಷರಶಃ ಆತಂಕಕ್ಕೆ ತಳ್ಳಿತ್ತು. ಕೆಲಸ ಅರ್ಧದಲ್ಲೇ ನಿಂತ್ರೆ ಏನು ಮಾಡೋದು ಅಂತ ಎಲ್ಲರೂ ಒಂದು ಕ್ಷಣ ಕುಸಿದು ಹೋಗಿದ್ದ ಸಮಯ. ಈ ವೇಳೆ ಜನಾರ್ದನ ಪೂಜಾರಿಯವರು ಜನರ ಬಳಿಯೇ ಹೋಗೋಣ, ಜನರಿಂದಲೇ ಧನ ಸಂಗ್ರಹಿಸೋಣ ಅಂತ ಕ್ಷೇತ್ರದ ಆಡಳಿತ ಮಂಡಳಿಗೆ ಸಲಹೆ ನೀಡಿದ್ರು. ಬಳಿಕ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಸಭೆಗಳು ಶುರುವಾಯ್ತು. ದ.ಕ, ಉಡುಪಿ ಮತ್ತು ಮುಂಬೈ ಸೇರಿದಂತೆ ಹಲವೆಡೆ ಸಭೆಗಳನ್ನ ನಡೆಸಿ ಜನರಿಂದಲೇ ಧನ ಸಹಾಯ ಕೇಳಲಾಯ್ತು. ಜಯ.ಸಿ. ಸುವರ್ಣರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವತಃ ಜನಾರ್ದನ ಪೂಜಾರಿಯವ್ರೇ ಭಾಷಣ ಮಾಡಿದರು. ಪರಿಣಾಮ ಸಭೆ ನಡೆಯೋ ಜಾಗಗಳಲ್ಲೇ ಬರೋಬ್ಬರಿ 35ರಿಂದ 40 ಲಕ್ಷ ಹಣ ಸಂಗ್ರಹವಾಗಿದ್ದು ಅಚ್ಚರಿ. ಆದ್ರೆ ಹೀಗೆ ಸಂಗ್ರಹವಾದ ಹಣವೂ ಜೀರ್ಣೋದ್ದಾರ ಕೆಲಸಕ್ಕೆ ಸಾಕಾಗಲೇ ಇಲ್ಲ.
ಹರಕಲು ಚಡ್ಡಿಯ ವ್ಯಕ್ತಿಯ 5 ಪೈಸೆ ಭಿಕ್ಷೆ ದಿಕ್ಕು ಬದಲಿಸಿತು..!
ಎಷ್ಟೇ ಸಭೆಗಳನ್ನ ನಡೆಸಿದ್ರೂ ಜೀರ್ಣೋದ್ದಾರಕ್ಕೆ ಬೇಕಾದಷ್ಟು ಹಣ ಸಂಗ್ರಹವಾಗಲೇ ಇಲ್ಲ. ಈ ವೇಳೆ ದ.ಕ ಜಿಲ್ಲೆಯ ಪ್ರದೇಶವೊಂದರಲ್ಲಿ ಸಭೆ ನಡೆಯುತ್ತಿದ್ದಾಗ ಜನಾರ್ದನ ಪೂಜಾರಿ ಪ್ರಮುಖ ಭಾಷಣ ಮಾಡುತ್ತಿದ್ದರು. ಈ ವೇಳೆ ಹರಕಲು ಚಡ್ಡಿ ಹಾಕಿದ ವ್ಯಕ್ತಿಯೊಬ್ಬ ವೇದಿಕೆಗೆ ಬಂದು ಪೂಜಾರಿಯವರ ಕೈಗೆ 5 ಪೈಸೆ ಕೊಟ್ಟು ತೆಗೆದುಕೊಳ್ತೀರಾ ಅಂತ ಕೇಳಿದ್ರು. ಈ ವೇಳೆ ಪೂಜಾರಿ ಕೂಡ ಕೊಡಿ ತೆಗೋತೀನಿ ಅಂತ ಐದು ಪೈಸೆ ಪಡೆದು ಭಾಷಣ ಮುಂದುವರೆಸಿದರು. ಈ ವ್ಯಕ್ತಿ ನೀಡಿದ ಐದು ಪೈಸೆ ಟಾಟಾ-ಬಿರ್ಲಾರ ಐದು ಕೋಟಿಗೂ ಹೆಚ್ಚು ಅಂತ ಭಾಷಣದಲ್ಲಿ ಉಲ್ಲೇಖ ಮಾಡಿದ್ರು.ಭಾಷಣ ಮುಗಿದ ಬಳಿಕ ಆ ಐದು ಪೈಸೆ ಕೊಟ್ಟ ವ್ಯಕ್ತಿಯ ಪರಿಚಯ ಮಾಡಲು ಹುಡುಕಿದಾಗ ಆ ವ್ಯಕ್ತಿ ಕಾಣಲೇ ಇಲ್ಲ. ಮೈಕ್ನಲ್ಲಿ ಘೋಷಣೆ ಮಾಡಿ ಆ ವ್ಯಕ್ತಿಯನ್ನ ಕರೆದೂ ಆ ವ್ಯಕ್ತಿ ಮಾತ್ರ ಸಿಗಲೇ ಇಲ್ಲ.
ಸಾಕ್ಷಾತ್ ಶಿವನೇ ಬಂದು 5 ಪೈಸೆ ಕೊಟ್ಟಿದ್ದನಂತೆ..!
ಪೂಜಾರಿಯವರ ಕೈಗೆ ಐದು ಪೈಸೆ ಕೊಟ್ಟು ಹೋಗಿದ್ದ ವ್ಯಕ್ತಿ ಎಷ್ಟೇ ಹುಡುಕಿದರೂ ಮತ್ತೆ ಸಿಗಲೇ ಇಲ್ಲ. ಮೈಕಿನಲ್ಲಿ ಘೋಷಿಸಿದರೂ ಆ ವ್ಯಕ್ತಿ ಮಾತ್ರ ಯಾರಿಗೂ ಕಾಣಲೇ ಇಲ್ಲ. ಆದ್ರೆ ಈ ವೇಳೆ ಸಭೆಯ ಮಧ್ಯದಿಂದ ಬಂದ ವ್ಯಕ್ತಿಯೊಬ್ಬರು ಪೂಜಾರಿಯವ್ರ ಬಳಿ ಆ ವ್ಯಕ್ತಿ ಮತ್ತೆ ನಿಮಗೆ ಸಿಗಲ್ಲ ಅಂದು ಬಿಟ್ರು. ಯಾಕೆಂದ್ರೆ ಹೀಗೆ ಬಂದು ಐದು ಪೈಸೆ ಕೊಟ್ಟು ಹೋದವರು ಸಾಕ್ಷಾತ್ ಶಿವನಂತೆ...! ಆದ್ರೆ ಪೂಜಾರಿ ಮಾತ್ರ ಅವರ ಮಾತನ್ನು ನಂಬಲಿಲ್ಲ. ಈಗಲೂ ಅದನ್ನ ನಂಬಲಾಗುತ್ತಿಲ್ಲ. ಆದ್ರೆ ಆ ವ್ಯಕ್ತಿ ಐದು ಪೈಸೆ ಕೊಟ್ಟ ಬಳಿ ಅಚ್ಚರಿಯೋ ಎಂಬಂತೆ ಕ್ಷೇತ್ರ ಅಭಿವೃದ್ದಿಗೆ ಕೋಟಿ ಕೋಟಿ ಹಣ ಬಂದು ಬಿದ್ದಿದೆ. ಅಷ್ಟು ದಿನ ಕುಂಟುತ್ತಾ ಸಾಗಿದ್ದ ದೇವಸ್ಥಾನದ ಕೆಲಸ ಚುರುಕು ಪಡೆದಿದೆ. ಅಚ್ಚರಿ ಅಂದ್ರೆ ಕೇವಲ 13 ತಿಂಗಳಲ್ಲೇ ನೀವೀಗ ನೋಡ್ತಿರೋ ಭವ್ಯವಾದ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ಎದ್ದು ನಿಲ್ಲೋ ಮೂಲಕ ಪವಾಡದೊಂದು ನಡೆದು ಬಿಟ್ಟಿದೆ. ಅಂದು ಸಾಕ್ಷಾತ್ ಶಿವನೇ ಯಾರದ್ದೋ ರೂಪದಲ್ಲಿ ಬಂದು ಐದು ಪೈಸೆ ನೀಡಿದನೋ ಅನ್ನೋದನ್ನ ಇಂದಿಗೂ ನಂಬೋದಕ್ಕೆ ಸಾಧ್ಯವಾಗ್ತಿಲ್ಲ. ಆದ್ರೆ ಆ ಭಿಕ್ಷುಕನ ಐದು ಪೈಸೆ ದೇವಸ್ಥಾನ ಅಭಿವೃದ್ದಿಯ ದಿಕ್ಕನ್ನೇ ಬದಲಿಸಿದ್ದು ಮಾತ್ರ ಸದ್ಯ ಇತಿಹಾಸ.
( ಇಲ್ಲಿರುವ ಪ್ರತೀ ಬರಹಗಳಿಗೆ ಆಧಾರ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರು ಸಾಲಮೇಳದ ಸಂಗ್ರಾಮ ಎಂಬ ಆತ್ಮಕಥೆಯಾಗಿರುತ್ತದೆ. ಹೀಗಾಗಿ ಇಲ್ಲಿನ ಎಲ್ಲಾ ಬರಹಗಳು ಜನಾರ್ದನ ಪೂಜಾರಿಯವರ ಆತ್ಮಕಥೆಯ ಆಯ್ದ ಭಾಗಗಳು)