ಮಹಾಲಯ ಅಮವಾಸ್ಯೆ ವಿಶೇಷ, ಗೋಕರ್ಣದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ಸಮರ್ಪಣೆ

By Suvarna News  |  First Published Sep 25, 2022, 7:40 PM IST

ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕೋಟಿ ತೀರ್ಥದಲ್ಲಿ ನೂರಾರು ಭಕ್ತಾಧಿಗಳು ಇಂದು ಪಿಂಡ ಪ್ರದಾನ ಮಾಡಿದ್ದು, ಪಿತೃಗಳಿಗೆ ಸಂತೃಪ್ತಿಯಾಗಿ ಮೋಕ್ಷ ಪ್ರದಾನವಾಗಲಿ ಎಂದು ಬೇಡಿಕೊಂಡಿದ್ದಾರೆ.


ಗೋಕರ್ಣ (ಸೆ.25): ಪಿತೃಪಕ್ಷದ ಕೊನೇ ದಿನವಾದ ಇಂದು ಮಹಾಲಯ ಅಮವಾಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪಿತೃಗಳಿಗೆ ಪಿಂಡ ಪ್ರದಾನ, ಕಾಗೆಗಳ ಮೂಲಕ ಆಹಾರ ಸಮರ್ಪಣೆಗಳು ನಡೆಯುತ್ತವೆ. ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕೋಟಿ ತೀರ್ಥದಲ್ಲಂತೂ ನೂರಾರು ಭಕ್ತಾಧಿಗಳು ಇಂದು ಪಿಂಡ ಪ್ರದಾನ ಮಾಡಿದ್ದು, ಪಿತೃಗಳಿಗೆ ಸಂತೃಪ್ತಿಯಾಗಿ ಮೋಕ್ಷ ಪ್ರದಾನವಾಗಲಿ ಎಂದು ಬೇಡಿಕೊಂಡಿದ್ದಾರೆ. ಅಲ್ಲದೇ, ಕೋಟಿ ತೀರ್ಥದಲ್ಲಿ ಸ್ನಾನ‌ ಮಾಡಿ ಪುಣ್ಯ ಅರ್ಜಿಸಿಕೊಂಡಿದ್ದಾರೆ. ಹಿಂದೂ‌ ಧಾರ್ಮಿಕ ಆಚರಣೆಗಳ ಪ್ರಕಾರ ನವರಾತ್ರಿ ಹಬ್ಬ ಕಾಲಿಡುವ ಮುನ್ನ 15 ದಿನಗಳ ಕಾಲ ಪಿತೃ ಪಕ್ಷವಿರುತ್ತದೆ. ಈ ಪಿತೃಪಕ್ಷದ ಕೊನೇ ದಿನವನ್ನು ಮಹಾಲಯ ಅಮವಾಸ್ಯೆ ಎಂದು ಆಚರಿಸಲಾಗುತ್ತದೆ. ಬಾದ್ರಪದ ಕೃಷ್ಣ ಪಕ್ಷ ಪಾಡ್ಯದಿಂದ ಅಮವಾಸ್ಯೆಯವರೆಗೆ ಪಿತೃಗಳಿಗಾಗಿ ಸೀಮಿತವಾಗಿರುವ ದಿನಗಳು. ಈ ಪಕ್ಷದ ವಿಶೇಷತೆಯಂದರೆ, ಜನರು ತಮ್ಮ ಕುಟುಂಬದಲ್ಲಿ ಇಹಲೋಕ ತ್ಯಜಿಸಿದ ಹಿರಿಯರು ಹಾಗೂ ಕಿರಿಯರಿಗೆ ಈ ಪಕ್ಷದಲ್ಲಿ ಅವರು ತೀರಿಕೊಂಡ ತಿಥಿಯಲ್ಲಿ ಪಿಂಡ ಪ್ರಧಾನ ಮಾಡಿದಲ್ಲಿ ಅವರ ಪಿತೃಗಳು ಸಂತೃಪ್ತರಾಗಿ ಕುಟುಂಬ ನೆಮ್ಮದಿಯಲ್ಲಿರಲು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.

ಕೆಲವರಂತೂ ತಮ್ಮ ಪಿತೃಗಳ ಶ್ರೇಯಸ್ಸಿಗಾಗಿ ಪಿಂಡ ಪ್ರದಾನದೊಂದಿಗೆ ತೀರ್ಥಶ್ರಾದ್ಧ, ತ್ರಿಪಿಂಡಿ, ನಾರಾಯಣ ಬಲಿಗಳನ್ನು ಕೂಡಾ ನಡೆಸುತ್ತಾರೆ. ಇದರಿಂದ ಪಿತೃಗಳು ಶಾಶ್ವತವಾಗಿ ವಿಷ್ಣು ಪಾದ, ಸ್ವರ್ಗವನ್ನು ಸೇರುತ್ತಾರೆ ಎಂದು ವೇದಗಳು ಹೇಳುತ್ತವೆ. ಅಲ್ಲದೇ, ಸ್ವರ್ಗಲೋಕದಲ್ಲಿ ತಮ್ಮ ಪಿತೃಗಳಿಗೆ ಆಹಾರವನ್ನು ನೀಡುತ್ತಾರೆ ಎಂಬುದು ನಂಬಿಕೆ. ತೀರ್ಥಶ್ರಾದ್ಧ, ತ್ರಿಪಿಂಡಿ, ನಾರಾಯಣ ಬಲಿಗಳನ್ನು ಉಳಿದ ಯಾವುದೇ ಉತ್ತಮ ದಿನಗಳಲ್ಲಿ ನಡೆಸಬಹುದಾಗಿದ್ರೂ, ಈ 15 ದಿನಗಳ ಕಾಲದ ಪಿತೃಪಕ್ಷದಲ್ಲಿ ನಡೆಸಿದರೆ ಪಿತೃಗಳಿಗೂ ನೆಮ್ಮದಿ ಮಾತ್ರವಲ್ಲದೇ, ಕುಟುಂಬಕ್ಕೂ ಶ್ರೇಯಸ್ಕರ ಎಂದು ಹೇಳಲಾಗುತ್ತದೆ.

Latest Videos

undefined

 

Mahalaya Amavasya: ಸಾಯುವಾಗ ಈ ವಸ್ತುಗಳು ಜೊತೆಗಿದ್ದರೆ ಸೀದಾ ಸ್ವರ್ಗಕ್ಕೇ ಪ್ರಯಾಣ!

ಇನ್ನು‌ ಇತಿಹಾಸ ಪ್ರಸಿದ್ಧ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಕೋಟಿತೀರ್ಥದಲ್ಲಿ ಪಿಂಡ ಪ್ರಧಾನ ನಡೆಸಿದಲ್ಲಿ ಅಗಲಿದವರಿಗೆ ಹಾಗೂ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಕಾರಣದಿಂದ ನೂರಾರು ಭಕ್ತರು ಅರ್ಚಕರ ಮುಖೇನ ಪಿಂಡ‌ಪ್ರದಾನ ಆಹಾರ ಸಮರ್ಪಣೆ ಮಾಡಿದ್ದು, ಪಿತೃಗಳು ಸಂತೃಪ್ತಿಯಿಂದಿರಲಿ ಎಂದು ಬೇಡಿದ್ದಾರೆ. ಕರಾವಳಿ ಭಾಗದಲ್ಲಂತೂ ಈ ಪಕ್ಷದ ಕೊನೇಯ ದಿನವಾದ ಮಹಾಲಯ ಅಮವಾಸ್ಯೆಯಂದು ಪಿತೃಗಳಿಗೆ ಇಷ್ಟವಾದ ಆಹಾರ, ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಾಳೆ ಎಲೆಯಲ್ಲಿ ಬಡಿಸಿಟ್ಟು, ಕೂರಲು ಮಣೆ ಹಾಗೂ ನೀರನ್ನಿಟ್ಟು ಎಳ್ಳು ಹಾಗೂ ತುಳಸಿಯನ್ನು ಅರ್ಪಿಸಿ ಆಹ್ವಾನಿಸಲಾಗುತ್ತದೆ.

ಇಂದು ಮಹಾಲಯ ಅಮವಾಸ್ಯೆ; ಪಿತೃತರ್ಪಣ ಕೈಗೊಳ್ಳಲು‌ ಮಲ್ಪೆಗೆ ಬಂದ ಸಾವಿರಾರು ಜನ

ಪಿತೃಗಳಿಗೆ ಊಟವಿಟ್ಟ ಸ್ಥಳದಿಂದ ಒಂದೈದು ನಿಮಿಷ ದೂರವಿದ್ದು  ಬಳಿಕ ಹಿಂತಿರುಗಿ ಎಲೆಯಲ್ಲಿ ಬಡಿಸಿದ ಆಹಾರವನ್ನು ಮನೆಯ ಹೊರಗೆ ಕಾಗೆಗಳಿಗೆ ತಿನ್ನಲು ಇಡಲಾಗುತ್ತದೆ. ಹಾರಿಕೊಂಡು ಬರುವ ಕಾಗೆಗಳ ಪೈಕಿ ಯಾವುದಾದರೊಂದು ಕಾಗೆ ವಿಶೇಷವಾಗಿ ಈ ಆಹಾರವನ್ನು ಮೊದಲು ತಿಂದರೆ ಪಿತೃಗಳಿಗೆ ಆಹಾರ ಸಲ್ಲಿಕೆಯಾಯ್ತು ಎಂದು ನಂಬಲಾಗುತ್ತದೆ. ಬಳಿಕ ಮನೆಯ ಸದಸ್ಯರು ಊಟ ಮಾಡುತ್ತಾರೆ. 

click me!