ಕರಾಳ ಅಮಾವಾಸ್ಯೆಯಲ್ಲಿ ಹುಟ್ಟೋ ಮಕ್ಕಳಿಗೆ ಮನೋ ದೌರ್ಬಲ್ಯವೇಕೆ?

By Suvarna News  |  First Published Jun 16, 2023, 1:14 PM IST

ಶುಭ ಕಾರ್ಯಗಳಿಗೆ ಅಮಾವಾಸ್ಯ ಪ್ರಶಸ್ತವಲ್ಲ. ಆ ದಿನ ಹುಟ್ಟುವ ಮಕ್ಕಳ ಮನಸ್ಸು ದುರ್ಬಲಾಗಿರುತ್ತದೆ, ಎನ್ನಲಾಗುತ್ತದೆ. ಅಷ್ಟಕ್ಕೂ ಹುಣ್ಣಿಮೆ ನಂತರ ಚಂದ್ರನೇಕೆ ಅದೃಶ್ಯನಾಗುತ್ತಾನೆ? ಪೌರಾಣಿಕ ಹಿನ್ನೆಲೆ ಏನು? 


- ಶ್ರೀಕಂಠ ಶಾಸ್ತ್ರಿಗಳು, ಏಷ್ಯಾನೆಟ್ ಸುವರ್ಣ ನ್ಯೂಸ್

ಸಾಮಾನ್ಯವಾಗಿ ಅಮಾವಾಸ್ಯೆ ಅಂದ್ರೆ ನಮಗೆ ಭಯ. ಅಮಾವಾಸ್ಯೆ ಅಶುಭ ದಿನ ಎಂಬ ಕಲ್ಪನೆ ನಮ್ಮಲ್ಲಿದೆ. ಅಂದು ಯಾವ ಶುಭ ಕಾರ್ಯವನ್ನೂ ಮಾಡುವುದಿಲ್ಲ. ಅಂದು ಹೆಚ್ಚಿನವರು ಪ್ರಯಾಣಿಸಲೂ ಹಿಂಜರಿಯುತ್ತಾರೆ. ಅಮಾವಾಸ್ಯೆ ಪ್ರೇತ ಬಾಧೆಯ ಸೂಚಿಸುವ ದಿನ ಎಂಬ ನಂಬಿಕೆಯೂ ಇದೆ. ಹೀಗಾಗಿ ಅಮಾವಾಸ್ಯೆ ನಮ್ಮೆಲ್ಲರ ಪಾಲಿಗೆ ಭಯದ ದಿನ. ಯಾಕೆ ಇಷ್ಟು ಭಯ? ನಿಜಕ್ಕೂ ಅಮಾವಾಸ್ಯೆ ಕೆಟ್ಟ ದಿನವಾ? ಈ ದಿನ ಯಾವ ಕೆಲಸವನ್ನೂ ಮಾಡಬಾರದು ಯಾಕೆ? ಅಮಾವಾಸ್ಯೆಯ ಹಿನ್ನೆಲೆ ಏನು? ಇವುಗಳ ಬಗ್ಗೆ ಸ್ವಲ್ಪ ತಿಳಿಯುವ, ತಿಳಿದು ತಿಳಿಸುವ ಅಗತ್ಯವಿದೆ.

ಪುರಾಣ ಹಿನ್ನೆಲೆ :
ಚಂದ್ರನ ಸಂಪೂರ್ಣ ದರ್ಶನವಾದೆ ಅದು ಪೌರ್ಣಮಿ. ಚಂದ್ರನ ದರ್ಶನವೇ ಇಲ್ಲದಿದ್ದರೆ ಅದು ಅಮಾವಾಸ್ಯೆ. ಯಾಕೆ ಅಮಾವಾಸ್ಯೆಯಲ್ಲಿ ಚಂದ್ರ ದರ್ಶನವಾಗುವುದಿಲ್ಲ? ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅದರ ಹಿಂದೆ ಒಂದು ಪುರಾಣದ ಕಥೆ ತೆರೆದುಕೊಳ್ಳತ್ತೆ.

Latest Videos

undefined

ದೇವತೆಗಳ ಸೃಷ್ಟಿಕರ್ತ ದಕ್ಷಬ್ರಹ್ಮನಿಗೆ ಹಲವಾರು ಮಕ್ಕಳು. ಅವರಲ್ಲಿ ನಾವು ಇಂದು ನಮ್ಮ ಜನ್ಮ ನಕ್ಷತ್ರಗಳು ಅಂತ ಗುರ್ತಿಸಿಕೊಳ್ಳುವ ಅಶ್ವಿನಿ, ಭರಣಿ ಇತ್ಯಾದಿ 27 ನಕ್ಷತ್ರಗಳಿದ್ದಾವಲ್ಲ ಆ ಎಲ್ಲ ನಕ್ಷತ್ರಗಳೂ ದಕ್ಷಬ್ರಹ್ಮನ ಮಕ್ಕಳೇ. ಈ ನಕ್ಷತ್ರಗಳೆಲ್ಲಾ ತುಂಬ ಸ್ನೇಹಿತರಂತಿದ್ದ ಸಹೋದರಿಯರು. ಒಬ್ಬರನ್ನ ಬಿಟ್ಟು ಒಬ್ಬರಿರುತ್ತಿರಲಿಲ್ಲ. ಹೀಗಿರುವಾಗ ವಿವಾಹಾ ನಂತರ ನಮ್ಮ ಕಥೆ ಏನು? ನಾವೆಲ್ಲಾ ಬೇರೆಯಾದರೆ ಹೇಗೆ ಎಂಬ ಆತಂಕದಿಂದ ಅಷ್ಟೂ ಜನ ಒಂದು ತೀರ್ಮಾನಕ್ಕೆ ಬಂದು ದೇವತೆಗಳಲ್ಲಿ ಸುಂದರೆನೆನಿಸಿದ ಚಂದ್ರನನ್ನು ಮದುವೆಯಾದರು. ಚಂದ್ರನಿಗೆ ಮಾವನಾದ ದಕ್ಷಬ್ರಹ್ಮ ನೋಡಪ್ಪಾ ಯಾರಿಗೂ ನೋಯಿಸದೆ ಎಲ್ಲರನ್ನೂ ಸಮಾನವಾಗಿ ನೋಡಿಕೊ ಎಂದು ಹೇಳಿ ವಿವಾಹ ಮಾಡಿಕೊಟ್ಟಿದ್ದ. ಸ್ವಲ್ಪ ದಿನಗಳ ನಂತೆ ಸಹಜವಾಗಿ ಒಂದು ತಕರಾರು ಶುರುವಾಯ್ತು. ಚಂದ್ರ ಅಷ್ಟೂ ನಕ್ಷತ್ರಗಳ ಪೈಕಿ ರೋಹಿಣಿ ಜೊತೆ ಅತಿಯಾಗಿ ಕಾಲ ಕಳೆಯುತ್ತಿದ್ದ. ಎಲ್ಲರಿಗೂ ಈ ವಿಚಾರ ಬೇಸರವನ್ನುಂಟುಮಾಡಿತು. ಎಲ್ಲರೂ ತಂದೆ ಬಳಿ ದೂರು ಕೊಟ್ಟರು. ದಕ್ಷ ಚಂದ್ರನನ್ನು ಕರೆಸಿ ಬೈದು ಕಳಿಸಿದ. ಸರಿ ಮತ್ತೆ ಸ್ವಲ್ಪ ದಿನಗಳಾದ ಮೇಲೆ ಯಥಾ ಪ್ರಕಾರ ರೋಹಿಣಿ ಮನೆಯಲ್ಲೇ ಟಿಕಾಣಿ ಹೂಡಿದ ಚಂದ್ರನ ಮೇಲೆ ಮತ್ತೆ ಉಳಿದವರಿಂದ ತಂದೆಗೆ ದೂರು ಬಂತು. ದಕ್ಷ ಮತ್ತೆ ಚಂದ್ರನನ್ನು ಕರೆಸಿ ಸರಿಪಡಿಸಿ ಕಳಿಸಿದ. ಸ್ವಲ್ಪ ದಿನಗಳು ಉರುಳಿದವು. ಮತ್ತದೇ ರಾಗ! ದಕ್ಷನಿಗೆ ಸಾಕಾಗಿತ್ತು. ಚಂದ್ರನನ್ನು ಕರೆದು ನಿನ್ನ ಅತಿಯಾದ ರೂಪವೇ ನಿನ್ನ ಸಮಸ್ಯೆ. ಅದು ನನಗೂ ಸಮಸ್ಯೆ ಆಗಿದೆ. ಹಾಗಾಗಿ ನೀನು ರೂಪವಿಲ್ಲದೆ ಕ್ಷೀಣನಾಗಿ ಬಿಡು. ಕ್ಷಯರೋಗ ಬರಲಿ, ನಿನಗೆ ಅಂತ ಶಾಪ ಕೊಟ್ಟ. ಚಂದ್ರ ಕುರೂಪಿಯಾಗಿ ಅಡಗಿ ಕುಳಿತು ಬಿಟ್ಟ. ಒಂದು ದಿನ ನಾರದರು ಬಂದು ಚಂದ್ರನನ್ನು ಕಂಡು ನೀನು ಈಶ್ವರನ ಕುರಿತು ತಪಸ್ಸು ಮಾಡು. ಅವನು ನಿನ್ನ ಸಮಸ್ಯೆ ಪರಿಹರಿಸುತ್ತಾನೆ ಎಂದು ಸಲಹೆ ಕೊಟ್ಟ. ಅದರಂತೆ ಚಂದ್ರ ಸುದೀರ್ಘವಾದ ತಪಸ್ಸು ಮಾಡಿದ. ಉಡುಗಳು ಎಂದರೆ ನಕ್ಷತ್ರಗಳು ಎಂದು. ಈ ಉಡುಗಳ ಅಧಿಪತಿಯಾದ ಚಂದ್ರ ಎಲ್ಲಿ ಶಿವನನ್ನು ಕುರಿತು ತಪಸ್ಸನ್ನು ಮಾಡಿದನೋ, ಅದೇ ಇಂದಿನ ನಮ್ಮ ಕರ್ನಾಟಕದ ಉಡುಪಿ ಕ್ಷೇತ್ರ. ಉಡುಗಳಧಿಪ ತಪಸ್ಸು ಮಾಡಿದ್ದರಿಂದ ಉಡುಪಿ ಎಂದು ಪ್ರಸಿದ್ಧವಾಗಿದೆ. ಅಂತೂ ಚಂದ್ರನ ತಪಸ್ಸಿಗೆ ಈಶ್ವರ ಪ್ರತ್ಯಕ್ಷನಾದ. ಈಶ್ವರನಿಗೆ ಎಲ್ಲ ವಿಚಾರವನ್ನೂ ವಿವರಿಸಿದ. ಆಗ ಈಶ್ವರ ನೋಡಪ್ಪಾ ಚಂದ್ರ, ನಿಮ್ಮ ಮಾವ ದಕ್ಷನಿಗೂ, ನನಗೂ ಅಷ್ಟಕ್ಕಷ್ಟೇ. ಕಾರಣ ಬೇರೆ ಇದೆ. ಮತ್ತೊಂದು ಬಾರಿ ವಿವರಿಸುವೆ. ಅಂತೂ ನಾನು ವರ ಕೊಟ್ಟರೆ, ಅವನು ಮತ್ತೆ ನಿನಗೆ ತೊಂದರೆ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಿನಗೆ ಒಂದು ಸಲಹೆ ನೀಡುತ್ತೇನೆ ಕೇಳು. ನನ್ನ ವರ ಹಾಗೂ ದಕ್ಷನ ಶಾಪ ಎರಡೂ ಇರುವಂತೆ ನೋಡಿಕೊಳ್ಳುವ ಉಪಾಯದ ವರ ಕೊಡುತ್ತೇನೆ ಆಗಬಹುದಾ? ಹೇಗೆಂದರೆ : ಈಗ ನಿನಗೆ ವರ ಕೊಡುತ್ತೇನೆ. ವರದ ಪ್ರಭಾವದಿಂದ ನಿನ್ನ ಕಾಂತಿ ವೃದ್ಧಿಯಾಗಲಿದೆ. 15 ದಿನಗಳಲ್ಲಿ ನೀನು ಸಂಪೂರ್ಣ ಚಂದ್ರನಾಗಿ ಪ್ರಕಾಶವನ್ನು ಹೊಂದುವೆ. ಮಾರನೇ ದಿನದಿಂದ ಮತ್ತೆ ದಕ್ಷನ ಶಾಪ ನಿನಗೆ ಬರಲಿದೆ. ಅದರ ಪ್ರಭಾವದಿಂದ ನೀನು ಮತ್ತೆ 15 ದಿನದಲ್ಲಿ ಕ್ಷೀಣನಾಗಿ ಅದೃಶ್ಯನಾಗುವೆ. ಹೀಗಿದ್ದರೆ ಒಳಿತು ಎಂದು ಸಲಹೆ ಕೊಟ್ಟ. ಚಂದ್ರನೂ ಒಪ್ಪಿದ. ಆ ಒಪ್ಪಿಗೆಯ ಕ್ರಮದಂತೆಯೇ ಇಂದಿಗೂ ಚಂದ್ರನಿಗೆ ಪೂರ್ಣ ದರ್ಶನ. ಅದೃಶ್ಯತೆ ಎರಡೂ ಫಲಗಳನ್ನು ಅನುಭವಿಸುತ್ತಿದ್ದಾನೆ. ಯಾವಾಗ ದಕ್ಷನ ಶಾಪ ಪೂರ್ಣವಾಗುವುದೋ ಅಂದೇ ಅಮಾವಾಸ್ಯಯಾಗಿರುತ್ತದೆ. ಇಂಥ ಅಮಾವಾಸ್ಯೆಯಲ್ಲಿ ಚಂದ್ರನ ಬಲ ಇರುವುದಿಲ್ಲ.

ಯಾವಾಗ ಹುಟ್ಟಿದರೆ ಯಾವ ರಾಶಿಯಾಗುತ್ತೆ? ಗುಣ ಸ್ವಭಾವವೇನು?

ಅಮಾವಾಸ್ಯೆ ದುರ್ಬಲತೆ:
ಇಂಥ ಅಮಾವಾಸ್ಯೆ ದಿನ ಯಾರಾದರೂ ಹುಟ್ಟಿದರೆ ಅವರಿಗೆ ಮನೋಬಲ (Will Power) ಕಡಿಮೆ ಇರುತ್ತದೆ. ಕಾರಣ ಚಂದ್ರನ ಕ್ಷೀಣತೆ. ಚಂದ್ರನನ್ನು ಮನ:ಕಾರಕ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಾಂದ್ರಬಲಂತು ನಿಖಿಲಗ್ರಹವೀರ್ಯಬೀಜಂ ಎಂಬ ಮಾತಿದೆ. ಚಂದ್ರನ ಬಲ ಎಂಬುದು ಬೇರೆಲ್ಲ ಗ್ರಹಗಳಿಗಿಂತ ಮುಖ್ಯವಾದದ್ದು. ಯಾವ ಶುಭ ಕಾರ್ಯಗಳಿಗೂ ಚಂದ್ರನ ಬಲ ಬೇಕು. ಚಂದ್ರನ ಬಲವಿದ್ದರೆ ಮಾತ್ರವೇ ಮನಸ್ಸು ಪ್ರಸನ್ನವಾಗಿರುತ್ತದೆ. ಇಲ್ಲದಿದ್ದರೆ ಮನೋವ್ಯಾಧಿಯಿಂದ (Psychological Issues) ಬಳಲುತ್ತಾರೆ. ಮಾನಸಿಕ ಖಾಯಿಲೆಗಳಿಗೆ ಚಂದ್ರನ ಬಲಹೀನತೆಯೇ ಮುಖ್ಯ ಕಾರಣ. ಹೀಗಾಗಿ ಅಮಾವಾಸ್ಯೆಯ ದಿನ ಯಾರಾದರೂ ಹುಟ್ಟಿದರೆ ಅವರಿಗೆ ಆ ದೋಷ ಶಾಂತಿಯನ್ನು ಮಾಡಿಸಬೇಕು ಎನ್ನುತ್ತದೆ ಶಾಸ್ತ್ರ.

ಹುಟ್ಟಿದ ಮಕ್ಕಳಿಗೆ ಮಾಡಿಸಬೇಕಾದ ಶಾಂತಿ:
ಸಾ ದೃಷ್ಟೇಂದು: ಸಿನೀವಾಲೀ ಸಾ ನಷ್ಟೇಂದು ಕಲಾಕುಹೂ ಎಂಬ ಶಾಸ್ತ್ರ ವಾಣಿಯಂತೆ ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಕಿಂಚಿತ್ ಚಂದ್ರ ದರ್ಶನ ಇದ್ದರೆ ಅದನ್ನು ಸಿನೀವಾಲೀ ಎಂದೂ, ಚಂದ್ರನೇ ತೋರದ ಅಮಾವಾಸ್ಯೆಯಲ್ಲಿ ಕುಹೂ ಎಂದೂ ಕರೆಯುತ್ತಾರೆ. ಇದು ಸ್ವಲ್ಪ ಮನೋ ದುರ್ಬಲತೆಯನ್ನು ತರುವ ಲಕ್ಷಣ. ಈ ಕಾರಣದಿಂದ ಕೃಷ್ಣ ಪಕ್ಷ ಚತುರ್ದಶಿ ಹಾಗೂ ಅಮಾವಾಸ್ಯೆಗಳಲ್ಲಿ ಮಕ್ಕಳು ಹುಟ್ಟಿದರೆ ಸಿನಿವಾಲಿ-ಕುಹೂ ಶಾಂತಿ ಮಾಡಿಸಬೇಕು ಎನ್ನುತ್ತದೆ ಶಾಸ್ತ್ರ. ಇದು ವಿಜ್ಞಾನವೂ ಒಪ್ಪಿಕೊಂಡ ಸತ್ಯ. ನೀವು ಪ್ರಸಿದ್ಧ ಮನೋವೈದ್ಯರನ್ನು ಕೇಳಿದರೆ ಚಂದ್ರನ ಶಕ್ತಿ ಅವನ ಪ್ರಭಾವಗಳು, ನಿಮ್ಮ ಗಮನಕ್ಕೆ ಬರುತ್ತವೆ. ಒಮ್ಮೆ ಮನೋ ಚಿಕಿತ್ಸಾ ಸ್ಥಳಗಳಿಗೆ ಅಮಾವಾಸ್ಯೆಯಲ್ಲೋ, ಪೌರ್ಣಮಿಯಲ್ಲೋ ಹೋಗಿ ಬಂದರೆ ಅಲ್ಲಿ ಚಿಕಿತ್ಸೆ ಪಡೆಯುವವರು ವರ್ತಿಸುವ ರೀತಿ ನಿಮಗೂ ಅರ್ಥವಾಗುತ್ತದೆ. ಇದು ಕೇವಲ ಶಾಸ್ತ್ರವಿಚಾರವಷ್ಟೇ ಅಲ್ಲ. ಸತ್ಯಾನುಭವ ಸಂಗತಿ.

Moon King Saturn: ಸೌರಮಂಡಲದಲ್ಲಿ ಗರಿಷ್ಠ ಚಂದ್ರ ಹೊಂದಿರುವ ಗ್ರಹ.. ಗುರುವಿನ ಸ್ಥಾನ ಕಸಿದುಕೊಂಡ ಶನಿ!

click me!