ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಇಂದು ಸಚಿವ ವಿ.ಸುನೀಲ್ ಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.05): ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ (Sringeri Sharada Peetham) ಇಂದು ಸಚಿವ ವಿ.ಸುನೀಲ್ ಕುಮಾರ್ (V Sunil Kumar) ಭೇಟಿ ನೀಡಿ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು. ತದನಂತರ ಮಳೆ ದೇವರು ಎಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಕುಟುಂಬ ಸಮೇತರಾಗಿ ಶೃಂಗೇರಿಗೆ ಭೇಟಿ ನೀಡಿದ ಸಚಿವ ಸುನೀಲ್ ಕುಮಾರ್: ಖಾಸಗಿ ಕಾರ್ಯಕ್ರಮ ನಿಮಿತ್ತ ಇಂಧನ ಸಚಿವ ವಿ ಸುನೀಲ್ ಕುಮಾರ್ ಇಂದು ಕುಟುಂಬ ಸಮೇತರಾಗಿ ಶೃಂಗೇರಿಗೆ ಆಗಮಿಸಿ ಶಾರದಾಂಬೆ ದರ್ಶನ ಪಡೆದರು. ದೇವಸ್ಥಾನದಿಂದ ಗುರುಗಳ ನಿವಾಸಕ್ಕೆ ತೆರಳಿದ ಸಚಿವರು ಶೃಂಗೇರಿ ಉಭಯ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು. ತದನಂತರ ಮಳೆ ದೇವರು ಎಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕಾಫಿನಾಡಿನಲ್ಲಿ ಪರ್ವ: ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದ ನಾಟಕ ಪ್ರದರ್ಶನ
ನಂತರ ಸುದ್ದಿಗಾರೊಂದಿಗೆ ಮಾತಾಡಿದ ಸಚಿವರು ಮಲೆನಾಡು ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾಗಿ ವಿದ್ಯುತ್ ಕೊರತೆಯು ಕಾಡುತ್ತಿದೆ. ಕೃಷಿ ಸಂಬಂಧಿತ ಮೋಟಾರ್ ಹಾಗೂ ಪಂಪ್ಸೆಟ್ ಗಳ ಚಾಲನೆಗೆ ಅತ್ಯಾವಶ್ಯಕವಾಗಿರುವುದು ವಿದ್ಯುತ್. ಈ ನಿಟ್ಟಿನಲ್ಲಿ ಅಗತ್ಯವಾಗಿ ದೊರೆಯಬೇಕಿರುವ 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಮೂರು ತಿಂಗಳ ಒಳಗಾಗಿ ತಲೆದೋರಿರುವ ಜಾಗದ ಸಮಸ್ಯೆಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಈ ಕಾರ್ಯ ನಡೆಸಲಾಗುವುದು ಎಂದರು.
ದತ್ತಪೀಠದ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ: ದತ್ತಪೀಠ ಹೋರಾಟದ ವಿಚಾರದಲ್ಲಿ ಅಂದಿನಿಂದ ಇಂದಿನವರೆಗೂ ನಾನೊಬ್ಬ ಹೋರಾಟಗಾರ, ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಈ ಕುರಿತಾಗಿ ಬೇಕಿರುವ ಅಗತ್ಯ ಕ್ರಮಗಳನ್ನು ಕಾನೂನು ತಜ್ಞರ ಸಲಹೆಯಂತೆ ಕೈಗೊಂಡು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ನಮ್ಮ ಪರಂಪರೆಯಂತೆ ಪೂಜೆ-ಪುನಸ್ಕಾರಗಳು ನಡೆಯುವ ರೀತಿಯಲ್ಲಿ ಮಾಡುತ್ತೇವೆ ಸಚಿವರು ಭರವಸೆ ನೀಡಿದರು. ದತ್ತಪೀಠದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಕಾನೂನಿನ ಅನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆದುಕೊಂಡು ಬಂದಿದೆ. ಶೀಘ್ರವೇ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪೂಜೆ ನಡೆಯಲಿದೆ ಎಂದರು.
ಕೊಪ್ಪದಲ್ಲಿ ನೂತನ ಮೆಸ್ಕಾಂ ಕಛೇರಿ ಉದ್ಘಾಟನೆ: ಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ಹಾಗೂ ವಿಭಾಗೀಯ ಉಗ್ರಾಣ ಕಟ್ಟಡದ ಉದ್ಘಾಟನೆಯನ್ನು ಇಂದು ಇಂಧನ ವಿ ಸಚಿವ ಸುನೀಲ್ ಕುಮಾರ್ ನಡೆಸಿದರು. ಮಲೆನಾಡು ಭಾಗದ ಮನೆಗಳಿಗೆ ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸಂಪರ್ಕ ನೀಡಲು ತೊಡಕಾಗಿದ್ದಲ್ಲಿ ಅಂತಹ ಮನೆಗಳಿಗೆ ಸೋಲಾರ್ ಅಳವಡಿಕೆಯ ಮೂಲಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
Chikkamagaluru ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ!
ಮಲೆನಾಡಿನ ಅನೇಕ ಮನೆಗಳಿಗೆ ವಿದ್ಯುತ್ ನೀಡುವಲ್ಲಿ ಅಡೆತಡೆಗಳು ಎದುರಾಗಿವೆ. ಸೆಕ್ಷನ್ 4, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ಎದುರಾಗಿವೆ ಈ ಕಾರಣದಿಂದಾಗಿ ವಿದ್ಯುತ್ ಸೌಲಭ್ಯ ನೀಡಲು ಸಾಧ್ಯವಾಗದ ಮನೆಗಳಿಗೆ ಪರ್ಯಾಯವಾಗಿ ಸೋಲಾರ್ ದೀಪಗಳನ್ನು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.