ಯುಗಾದಿ ಹಬ್ಬವನ್ನು ಇನ್ನು ಮುಂದೆ ಪ್ರತಿವರ್ಷ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ ಅಂತ ಈ ಹಿಂದೆ ಸಚಿವೆ ಶಶಿಕಲಾ ಜೊಲ್ಲೆ ಘೋಷಣೆ ಮಾಡಿದ್ದರು.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಏ.02): ಯುಗಾದಿ ಹಬ್ಬವನ್ನು (Ugadi Festival) ಇನ್ನು ಮುಂದೆ ಪ್ರತಿವರ್ಷ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ ಅಂತ ಈ ಹಿಂದೆ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಘೋಷಣೆ ಮಾಡಿದ್ದರು. ಅದರಂತೆ ಇಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಸಮಾಧಿ ಮಠದಲ್ಲಿ ಸರ್ಕಾರದಿಂದಲೇ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಥಮ ಬಾರಿಗೆ ಧಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ (Anna Saheb Jolle) ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಭಾಗಿಯಾಗಿ ಗೋಪೂಜೆ, ಹಾಗೂ ಎತ್ತುಗಳ ಪೂಜೆ, ಹಾಗೂ ಭೂಮಿ ಪೂಜೆ ಮಾಡಿ ನೇಗಿಲು ಹೊಡೆದು ಬಿತ್ತನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹುಕ್ಕೇರಿಶನ ವಚನ ಗಾಯನ ಹಾಗೂ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹಾಡು ಹಾಡುವ ಮೂಲಕ ಎಲ್ಲರನ್ನ ರಂಜಿಸಿದರು. ಇನ್ನು ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಹಲಾಲ್ ಕಟ್ ವಿಚಾರವಾಗಿ ವಿಶ್ವಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆಯನ್ನ ಸಮರ್ಥಿಸಿಕೊಂಡರು. ಹಲಾಲ್ ಬದಲಾಗಿ ಜಟ್ಕಾ ಕಟ್ ಜಾರಿಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈ ವೇಳೆ ಜಿಲ್ಲಾಧಿಕಾರಿ ಎಂ,ಜಿ ಹಿರೇಮಠ,ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ ಭಾಗಿಯಾಗಿದ್ದರು.
Karnataka Bhavan: ಶ್ರೀಶೈಲದಲ್ಲಿ ಕರ್ನಾಟಕ ಭವನ, ಕುರಿ, ಮೇಕೆ ಸಾವಿಗೆ ಅಧಿಕ ಪರಿಹಾರ
ಧಾರ್ಮಿಕ ದಿನವಾಗಿ ಯುಗಾದಿ ಆಚರಣೆ: ಯುಗಾದಿ ಹಬ್ಬವನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆಯು ಧಾರ್ಮಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಕೊಳೆಗೇರಿ ಮತ್ತು ಹಿಂದುಳಿದ ಪ್ರದೇಶದ ಜನತೆಗೆ ಬೇವು-ಬೆಲ್ಲ ಮತ್ತು ಪ್ರಸಾದವನ್ನು ವಿತರಿಸಬೇಕು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ರಾಜ್ಯದ ಎ ಮತ್ತು ಬಿ ದರ್ಜೆಯ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷವಾಗಿ ಆಚರಿಸಬೇಕು.
ಧಾರ್ಮಿಕ ದಿನವನ್ನು ಆಯಾ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು. ಯುಗಾದಿ ಹಿಂದೂಗಳ ಹೊಸ ವರ್ಷ. ಈ ದಿನವನ್ನು ಧಾರ್ಮಿಕ ದಿನ ಎಂದು ವಿಶೇಷವಾಗಿ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ. ಈ ಮೂಲಕ ಜನಸಾಮಾನ್ಯರ ಸಹಭಾಗಿತ್ವವನ್ನು ಹೆಚ್ಚಿಸುವುದು ಮತ್ತು ಅವರಲ್ಲಿ ಹಿಂದೂ ಪರಂಪರೆಯ ಹಾಗೂ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದರು. ಪ್ರತಿ ಜಿಲ್ಲೆಯ ಮೂರು ಪ್ರಮುಖ ದೇವಾಲಯಗಳಲ್ಲಿ ಆ ದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
Vijayanagara: ಆನಂದ ಸಿಂಗ್ ಜಿಲ್ಲೆಯಲ್ಲಿ 228 ಕೋಟಿ ರೂ. ಕಾಮಗಾರಿ
ಅಲ್ಲದೇ, ಬೇರೆ ದೇವಸ್ಥಾನಗಳು ಸಹ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಪಂಚಾಂಗ ಶ್ರವಣ, ಹರಿಕಥೆ, ಹಿಂದೂಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ವಿಶೇಷ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಸಿದ್ಧತೆ ಕೈಗೊಳ್ಳಬೇಕು. ರಾಜ್ಯದ ಅಭ್ಯುದಯಕ್ಕೆ ವಿಶೇಷ ಪೂಜೆ, ಹೋಮಗಳನ್ನು ನಡೆಸಬೇಕು. ರಾಜ್ಯದ ಪ್ರಮುಖ ದೇವಾಲಯಗಳ ಸಮೀಪದಲ್ಲಿರುವ ಕೊಳಗೇರಿ ಪ್ರದೇಶಗಳು ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ದೇವಸ್ಥಾನ ವತಿಯಿಂದ ಬೇವು-ಬೆಲ್ಲ ಮತ್ತು ಪ್ರಸಾದವನ್ನು ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ಜನರ ಮುಖದಲ್ಲಿಯೂ ಹಬ್ಬದ ದಿನದಂದು ಮಂದಹಾಸ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯತತ್ಪರರಾಗಬೇಕು ಎಂದು ನಿರ್ದೇಶನ ನೀಡಿದರು.