Mahashivratri 2023 ಆಚರಣೆಗೆ ಹೆಸರಾಗಿರೋ ಬೆಂಗಳೂರಿನ ಪ್ರಮುಖ ಶಿವ ದೇವಾಲಯಗಳಿವು..

By Suvarna NewsFirst Published Feb 18, 2023, 8:54 AM IST
Highlights

ಭಗವಾನ್ ಶಿವನನ್ನು ಮೆಚ್ಚಿಸಲು ಸುಲಭ ಮತ್ತು ವರಗಳನ್ನು ನೀಡುವವನು ಎಂದು ಕರೆಯಲಾಗುತ್ತದೆ. ಶಿವನ ಜನಪ್ರಿಯತೆಯನ್ನು ಭಾರತದಾದ್ಯಂತ ತುಂಬಿರುವ ಮತ್ತು ನೇಪಾಳ ಮತ್ತು ಕಾಂಬೋಡಿಯಾದಂತಹ ದೇಶಗಳಲ್ಲಿ ಕಂಡುಬರುವ ಹಳೆಯ ಮತ್ತು ಹೊಸ ಶಿವ ದೇವಾಲಯಗಳ ಸಂಖ್ಯೆಯಿಂದ ಅಳೆಯಬಹುದು. ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಕೆಲವು ಪುರಾತನ ಶಿವ ದೇವಾಲಯಗಳು ಇಲ್ಲಿವೆ.

ಇಂದು ಮಹಾಶಿವರಾತ್ರಿ. ಜನರು ಶಿವ ದೇವಾಲಯಗಳ ಹುಡುಕಾಟದಲ್ಲಿ ತೊಡಗಿರುತ್ತಾರೆ. ತಮ್ಮ ಮನೆಗೆ ಹತ್ತಿರವಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ನಂಬಿದ ಭಕ್ತರ ಸಲಹುವ ದೇವರು, ಭಕ್ತರ ಪ್ರೀತಿಗೆ ಬೇಗ ಕರಗುವ ದೇವರೆಂದೇ ಖ್ಯಾತಿ ಪಡೆದ ಶಿವನ ಹಲವಾರು ದೇವಾಲಯಗಳು ಬೆಂಗಳೂರಿನಲ್ಲಿವೆ. ಬೆಳೆಯುತ್ತಿರುವ ಮಹಾನಗರಿಯ ಬೃಹತ್ ಕಟ್ಟಡಗಳ ನಡುವೆ ಕಾಲದ ಪರೀಕ್ಷೆಯಲ್ಲಿ ಗೆದ್ದು ನಿಂತು ಆಧ್ಯಾತ್ಮದ ಜ್ವಲಂತ ದೀಪಗಳಾಗಿ ನಿಂತಿರುವ ಅನೇಕ ಹಳೆಯ ಶಿವ ದೇವಾಲಯಗಳು ಬೆಂಗಳೂರಿನಲ್ಲಿವೆ. ಅವುಗಳಲ್ಲಿ ಪ್ರಮುಖವಾದವುಗಳ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ. 

ಗವಿ ಗಂಗಾಧರೇಶ್ವರ ದೇವಸ್ಥಾನ(Gavi Gangadhareshwara Temple)
ಬೆಂಗಳೂರಿನ ಬಸವನಗುಡಿ ಬಳಿ ಇರುವ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯವು ಪುರಾತನವಾದುದಷ್ಟೇ ಅಲ್ಲ, ಗುಹೆಯೊಳಗಿದೆ ಎಂಬುದು ಇದರ ವಿಶೇಷವಾಗಿದೆ. ಇಲ್ಲಿನ ವಿಶೇಷವೆಂದರೆ ಮಕರ ಸಂಕ್ರಾಂತಿ ಹಬ್ಬದ ಸಂಜೆ, ಸೂರ್ಯನ ಬೆಳಕು ನಂದಿ ಪ್ರತಿಮೆಯ ಕೊಂಬಿನ ಮೂಲಕ ಹಾದು ನೇರವಾಗಿ ಲಿಂಗದ ಮೇಲೆ ಬೀಳುತ್ತದೆ. ಈ ಚಮತ್ಕಾರವು ಪ್ರತಿ ವರ್ಷ ಹಬ್ಬದ ದಿನದಂದು ನಡೆಯುತ್ತದೆ. 
16ನೇ ಶತಮಾನದಲ್ಲಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರಿಂದ ಈ ದೇವಾಲಯವನ್ನು ಪುನಃಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ, ದೇವಾಲಯದ ಮೂಲವು ವೇದ ಕಾಲದಷ್ಟು ಹಿಂದಿನದಾಗಿದ್ದು ಇದನ್ನು ಗೌತಮ ಮತ್ತು ಭಾರದ್ವಾಜ ಋಷಿಗಳು ಸ್ಥಾಪಿಸಿದರು ಎನ್ನಲಾಗುತ್ತದೆ.

Latest Videos

ಸರ್ವರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಹಲಸೂರು ಸೋಮೇಶ್ವರ ದೇವಸ್ಥಾನ (Halasuru Someshwara Temple)
ಹಲಸೂರಿನ ಹಲಸೂರು ಸೋಮೇಶ್ವರ ದೇವಸ್ಥಾನವು ಚೋಳರ ಕಾಲಕ್ಕೆ ಸೇರಿದ್ದು, ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ದೇವಾಲಯದ ಸುತ್ತಲಿನ ಇತರ ಕೆಲವು ಮಾರ್ಪಾಡುಗಳು ನಂತರದ ವರ್ಷಗಳಲ್ಲಿ ಮಾಡಿದ ವಿಜಯನಗರ ವಾಸ್ತುಶೈಲಿಯ ಪ್ರಭಾವವನ್ನು ಸೂಚಿಸುತ್ತವೆ. ವಿವಿಧ ಹಿಂದೂ ದೇವತೆಗಳೊಂದಿಗೆ ಕೆತ್ತಲಾದ 48 ಅಲಂಕೃತ ಕಂಬಗಳನ್ನು ಹೊಂದಿರುವ ತೆರೆದ ಸಭಾಂಗಣವಿದೆ. ಈ ದೇವಾಲಯವು ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವುದನ್ನು, ಮಹಿಷಾಸುರಮರ್ದಿನಿ, ಪಾರ್ವತಿ ಮತ್ತು ಶಿವನ ವಿವಾಹವನ್ನು ಚಿತ್ರಿಸುವಂತಹ ಸುಂದರವಾದ ಶಿಲ್ಪಗಳಿಂದ ಕೂಡಿದೆ.

ಕಾಡು ಮಲ್ಲೇಶ್ವರ ದೇವಸ್ಥಾನ (Kadu Malleshwara temple)
ಮಲ್ಲೇಶ್ವರಂ ಪ್ರದೇಶವು ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಇದು ಶಿವನಿಗೆ ಅರ್ಪಿತವಾದ 17ನೇ ಶತಮಾನದ ದೇವಾಲಯವಾಗಿದೆ. ನಂದೀಶ್ವರ ತೀರ್ಥ ಈ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ನಂದಿ ಪ್ರತಿಮೆಯ ಬಾಯಿಯಿಂದ ನೀರು ನಿರಂತರವಾಗಿ ಹರಿದು ಲಿಂಗದ ಮೇಲೆ ಬೀಳುತ್ತದೆ. ಈ ನೀರೇ ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ. 

ಬೇಗೂರು ನಾಗೇಶ್ವರ ದೇವಸ್ಥಾನ (Begur Nageshwara temple)
ನಾಗೇಶ್ವರ ದೇವಸ್ಥಾನವನ್ನು ಗಂಗ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಕ್ರಿ.ಶ 890ರ ಕನ್ನಡ ಶಾಸನಗಳು ಬೆಂಗಳೂರು ಎಂಬ ನಗರದ ಬಗ್ಗೆ ಉಲ್ಲೇಖಿಸಿವೆ. ಇಂದು ಬೆಂಗಳೂರಿನಲ್ಲಿರುವ ಬೇಗೂರು, ಒಂದು ಕಾಲದಲ್ಲಿ ವೆಪ್ಪೂರ್ ಎಂದು ಕರೆಯಲ್ಪಡುವ ಪಟ್ಟಣವಾಗಿತ್ತು ಮತ್ತು ಪಶ್ಚಿಮ ಗಂಗಾ ರಾಜವಂಶದ ಪ್ರಮುಖ ಕೇಂದ್ರವಾಗಿತ್ತು. ದೇವಾಲಯದ ಸಂಕೀರ್ಣದಲ್ಲಿ 5 ಶಿವಲಿಂಗಗಳನ್ನು ಹೊಂದಿರುವ ಕಾರಣ ದೇವಾಲಯವನ್ನು ಪಂಚಲಿಂಗೇಶ್ವರ ಎಂದು ಕರೆಯಲಾಗುತ್ತದೆ.

ಮಹಾಶಿವರಾತ್ರಿ ಎಂದರೆ ಆಧ್ಯಾತ್ಮಿಕವಾಗಿ ಎಚ್ಚರವಾಗೋ ರಾತ್ರಿ!

ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯ (Dhar)magiri Manjunatha Swamy temple)
ಈ ದೇವಾಲಯವು ಬನಶಂಕರಿ 2ನೇ ಹಂತದಲ್ಲಿದೆ. ಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರಲ್ಲಿ ಪ್ರಸಿದ್ಧವಾಗಿರುವ ಈ ದೇವಾಲಯವು ಕನ್ನಡ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಗಳಿಸುತ್ತಿದೆ. ಶಿವರಾತ್ರಿಯ ಹಬ್ಬದಲ್ಲಿ ಇಲ್ಲಿ ವಿಶೇಷ ಕಾರ್ಯಕ್ರಮವಿರುತ್ತದೆ. ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ.
 

click me!