
ವರದಿ : ಮಧು ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಮೈಸೂರು (ಫೆ.17): ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿದೆ. ಅರಮನೆ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿವಲಿಂಗಕ್ಕೆ ಚಿನ್ನದ ಕೊಳಗವನ್ನು ಧಾರಣೆ ಮಾಡಲು 11 ಕೆಜಿ ಚಿನ್ನದ ಕೊಳಗ ಹೊರ ತೆಗೆಯಲಾಗಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಅರಮನೆಯ ತ್ರಿಣೇಶ್ವರ ದೇವರಿಗೆ ಧರಿಸಲು ಚಿನ್ನದ ಕೊಳಗ ತರಲಾಗಿದೆ. ಖಜಾನೆಯಿಂದ ಹೊರಬಂದ ಅಪರಂಜಿ ಚಿನ್ನದ ಕೊಳಗ ಬರೋಬ್ಬರಿ 11 ಕೆ.ಜಿ. ತೂಗುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಿಗಳಿಂದ ಅರ್ಚಕರಿಗೆ ಕೊಳಗ ಹಸ್ತಾಂತರ ಮಾಡಲಾಗಿದೆ. ಅರಮನೆಯ ಶ್ರೀ ತ್ರಿಣೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಇಡೀ ದಿನ ಶಿವಲಿಂಗಕ್ಕೆ ಕೊಳಗ ಧಾರಣೆ ಮಾಡಲಾಗುತ್ತದೆ. ಶಿವರಾತ್ರಿಯ ಪವಿತ್ರ ದಿನದಂದು ವರ್ಷಕ್ಕೊಮ್ಮೆ ಮಾತ್ರ ಈ ಕೊಳಗ ಧಾರಣೆ ಮಾಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ.
ಮುಜರಾಯಿ ತಹಸೀಲ್ದಾರ್ ಕೃಷ್ಣ, ಚಾಮುಂಡಿಬೆಟ್ಟ ಸಮೂಹ ದೇವಾಲಯಗಳ ಇಓ ಗೋವಿಂದರಾಜು ಕೊಳಗ ಹಸ್ತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ತಂದ ಅಧಿಕಾರಿ ಹಾಗೂ ಸಿಬ್ಬಂದಿ, ಎಲ್ಲರ ಸಮ್ಮುಖದಲ್ಲಿ ಅರ್ಚಕರಿಗೆ ಕೊಳಗ ಹಸ್ತಾಂತರ ಮಾಡಿದರು.
ಚಿನ್ನದ ಕೊಳದಲ್ಲಿ ಇದೆ ಸಾಕಷ್ಟು ವಿಶೇಷತೆ:
ಮೈಸೂರು ಮಹಾರಾಜರು ತ್ರಿಣೇಶ್ವರನಿಗೆ ಕಾಣಿಕೆ ನೀಡಿರುವ ಕೊಳಗದಲ್ಲಿ ಒಂದು ಚಿನ್ನದ ಜಟಾಮುಕುಟ, ಒಂದು ಚಿನ್ನದ ಕರ್ಣಕುಂಡಲ, ಒಂದು ಚಿನ್ನದ ತಾಟಂಕ, ಎರಡು ಲೋಲಕ, ಎರಡು ಕೆಂಪಿನ ಹರಳಿನ ಓಲೆಗಳು, ಹಣೆಯಲ್ಲಿ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ ನೀಡಿದ್ದಾರೆ. ಚಿನ್ನದ ಕೊಳಗವು ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧ ಚಂದ್ರ ಮತ್ತು ಬೆಳ್ಳಿಯ ಒಂದು ತಿರುಪು ಹೊಂದಿದೆ.
ಮಹಾಶಿವರಾತ್ರಿ ಎಂದರೆ ಆಧ್ಯಾತ್ಮಿಕವಾಗಿ ಎಚ್ಚರವಾಗೋ ರಾತ್ರಿ!
ಐತಿಹಾಸಿಕ ಹಿನ್ನೆಲೆ ಇರುವ ಕೊಳಗ:
ಐತಿಹಾಸಿಕ ಹಿನ್ನೆಲೆ ಹೊಂದಿರುವ 11 ಕೆಜಿಯ ಕೊಳಗವನ್ನು ಮೈಸೂರು ಅರಸು ಜಯಚಾಮರಾಜೇಂದ್ರ ಒಡೆಯರ್ 1954ರಲ್ಲಿ ಕೊಡುಗೆಯಾಗಿ ನೀಡಿದ್ದರು. ಪುತ್ರ ಸಂತಾನದ ಸಂತೋಷದ ಸಂದರ್ಭದಲ್ಲಿ ದೇವರಿಗೆ ಕಾಣಿಕೆಯಾಗಿ ಈ ಅಪರಂಜಿ ಚಿನ್ನದ ಕೊಳಗವನ್ನು ಕಾಣಿಕೆಯಾಗಿ ನೀಡಿದ್ದಾರೆ. ಅಂದಿನಿಂದ ಶಿವರಾತ್ರಿ ದಿನ ತ್ರಿಣೇಶ್ವರ ದೇವರ ಮೂಲ ವಿಗ್ರಹಕ್ಕೆ ಚಿನ್ನದ ಕೊಳಗ ಧರಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗಿದೆ. ನಂತರ ಚಿನ್ನದ ಕೊಳಗವನ್ನು ವರ್ಷವಿಡಿ ಬಿಗಿಭದ್ರತೆಯಲ್ಲಿ ಖಜಾನೆಯಲ್ಲಿ ಸರಕ್ಷಿತವಾಗಿಡಲಾಗುತ್ತದೆ.
Shivaratri 2023: ಮೈಸೂರಿನ ಲಲಿತ ಮಹಲ್ ಮೈದಾನದಲ್ಲಿ 21 ಅಡಿಗಳ ವಿಶೇಷ ಶಿವಲಿಂಗ
ವರ್ಷಕ್ಕೆ ಒಮ್ಮೆ ಶಿವನ ಮೇಲೆ ಧಾರಣೆಯಾಗುವ ಕೊಳಗದಲ್ಲಿ ಕಂಗೊಳಿಸುವ ತ್ರಿಣೇಶ್ವರನನ್ನು ನೋಡಲು ಸಾಂಸ್ಕೃತಿಕ ನಗರಿಯ ಜನ ಮುಂಜಾನೆಯಿಂದಲೇ ಅರಮನೆಗೆ ದಾವಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಮುಂದೆ ಶಾಮಿಯಾನ ಹಾಕಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ.