ಮೂಲ ನಕ್ಷತ್ರ ಕೆಟ್ಟದು ಎಂಬ ನಂಬಿಕೆಗೆ ಇತಿಶ್ರೀ ಹಾಡಿ ಸಮಾಜಕ್ಕೆ ಮಾದರಿಯಾಗಿದೆ ಜೀ ಕನ್ನಡದಲ್ಲಿ ಬರುವ 'ಲಕ್ಷ್ಮೀ ನಿವಾಸ' ಧಾರಾವಾಹಿ.
ಮೂಲನಕ್ಷತ್ರ ಇರುವ ಹುಡುಗಿಯನ್ನು ಸೊಸೆಯಾಗಿ ತಂದರೆ ಮಾವನ ಆರೋಗ್ಯಕ್ಕೆ ತೊಂದರೆ ಎಂಬ ನಂಬಿಕೆ ಇದೆ. ಆಡುಮಾತುಗಳಲ್ಲಿ ಇವು ಮಾವನಿಗೋ, ಅತ್ತೆಗೋ, ಗಂಡನಿಗೋ ಗೊತ್ತಾಗದೆ ಗೊಂದಲ ಹುಟ್ಟಿದೆ. ಇದೇ ಕಾರಣಕ್ಕೆ ಮೂಲನಕ್ಷತ್ರ ಹೆಸರು ಕೇಳುತ್ತಿದ್ದಂತೆಯೇ ಹುಡುಗಿಯ ಜಾತಕ ತಿರಸ್ಕರಿಸುವವರ ಸಂಖ್ಯೆ ದೊಡ್ಡದಿದೆ. ಆಕೆ ಏನೇ ಓದಿರಲಿ, ಎಷ್ಟೇ ಒಳ್ಳೆಯವಳಾಗಿರಲಿ, ಎಂಥ ಒಳ್ಳೆಯ ಹುದ್ದೆಯಲ್ಲಿರಲಿ, ತನ್ನ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿರಲಿ- ಅವೆಲ್ಲವೂ ಈ ಮೂಲ ನಕ್ಷತ್ರ ಎಂಬ ಹೆಸರು ಕೇಳುತ್ತಿದ್ದಂತೆಯೇ ನಗಣ್ಯವಾಗಿ ಬಿಡುತ್ತದೆ.
ಹುಡುಗಿಯ ವ್ಯಕ್ತಿತ್ವಕ್ಕಿಂತ, ಆಕೆಯ ಮನೆತನಕ್ಕಿಂತ ಆಕೆ ಕೇಳದೆ ಜನಿಸಿದ ಸಮಯದ ನಕ್ಷತ್ರವನ್ನು ದೊಡ್ಡದು ಮಾಡುತ್ತದೆ ಸಮಾಜ. ಆದರೆ, ಹೀಗೆ ಮೂಲ ನಕ್ಷತ್ರ ಕೆಟ್ಟದು ಎಂಬ ನಂಬಿಕೆಗೆ ಇತಿಶ್ರೀ ಹಾಡಿ ಸಮಾಜಕ್ಕೆ ಮಾದರಿಯಾಗಿದೆ ಜೀ ಕನ್ನಡದಲ್ಲಿ ಬರುವ 'ಲಕ್ಷ್ಮೀ ನಿವಾಸ' ಧಾರಾವಾಹಿ.
ಲಕ್ಷ್ಮೀ ನಿವಾಸದ ನಾಯಕಿಯದು ಮೂಲ ನಕ್ಷತ್ರ. ಇದೇ ಕಾರಣಕ್ಕೆ ಆಕೆಯ ಮದುವೆ ಕೈಗೂಡುತ್ತಿರುವುದಿಲ್ಲ. ಆದರೆ, ಈ ಬಾರಿ ವರನಾಗಿ ಅವಳನ್ನು ನೋಡಲು ಬಂದಿರುವುದು ರಘು ದೀಕ್ಷಿತ್, ಆತನ ತಾಯಿ ಪಾತ್ರಧಾರಿ ಪವಿತ್ರಾ ಲೋಕೇಶ್. ಹುಡುಗಿಯ ತಾಯಿ ಪ್ರಾಮಾಣಿಕತೆಯಿಂದ ನನ್ನ ಮಗಳದ್ದು ಮೂಲ ನಕ್ಷತ್ರ. ಅದಕ್ಕಾಗೇ ಮದುವೆಯಾಗುತ್ತಿಲ್ಲ ಎನ್ನುತ್ತಿದ್ದಂತೆಯೇ ಕೊಂಚವೂ ಬೇಸರಿಸದೆ ಹುಡುಗನ ತಾಯಿ ನಮಗೆ ನಿಮ್ಮ ಕುಟುಂಬ ತುಂಬಾ ಇಷ್ಟವಾಗಿದೆ. ತಾಂಬೂಲ ಬದಲಾಯಿಸಿಕೊಳ್ಳೋಣ ಎನ್ನುತ್ತಾಳೆ.
ಈ ನಡೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಧಾರಾವಾಹಿಗಳು ಜನಸಾಮಾನ್ಯರ ಬದುಕನ್ನೇ ಬಿಂಬಿಸುತ್ತವೆ. ಅವುಗಳಲ್ಲಿ ಉತ್ತಮ ಸಂದೇಶ ದೊರೆತಾಗ ಸಮಾಜಕ್ಕೂ ಉತ್ತಮ ಸಂದೇಶ ತಲುಪುತ್ತದೆ. ಮೂಲ ನಕ್ಷತ್ರದ ಕುರಿತ ಮೂಢನಂಬಿಕೆಯಿಂದಾಗಿ ಹಲವು ಹೆಣ್ಣುಮಕ್ಕಳು ಹಾಗೂ ಆಕೆಯ ಕುಟುಂಬ ಸಮಸ್ಯೆ ಎದುರಿಸುತ್ತಾರೆ. ಇನ್ನೂ ಕೆಲವರು ಜಾತಕವನ್ನೇ ಬದಲಿಸಿ ಹುಡುಗಿಯ ನಕ್ಷತ್ರದ ಬಗ್ಗೆ ಸುಳ್ಳು ಮಾಹಿತಿ ನೀಡಿ ಮುಂದುವರಿಯುತ್ತಾರೆ.
ಆದರೆ, ವಿದ್ಯಾಧಿದೇವತೆ ತಾಯಿ ಸರಸ್ವತಿಯದೂ ಮೂಲ ನಕ್ಷತ್ರ. ಜೈನರ ದೇವತೆ ಪದ್ಮಾವತಿ ಅಮ್ಮ ಹುಟ್ಟಿದ್ದು ಕೂಡಾ ಮೂಲ ನಕ್ಷತ್ರದಲ್ಲಿ, ಇನ್ನು ರಾಮ ಭಂಟ ಹನುಮಂತ ಜನಿಸಿದ್ದು ಕೂಡಾ ಮೂಲ ನಕ್ಷತ್ರದಲ್ಲೇ ಆಗಿದೆ. ಇಂಥ ಮಹಾನುಭಾವರು ಹುಟ್ಟಿದ ನಕ್ಷತ್ರದಲ್ಲಿ ಜನಿಸಿದವರು ನಿಜಕ್ಕೂ ಅದೃಷ್ಟವಂತರೇ ಆಗಿರುತ್ತಾರೆ ಎಂದು ಜನರು ತಿಳಿಯಬೇಕು.
ದೋಷ ಪರಿಹಾರ
ಒಂದು ವೇಳೆ ಮೂಲ ನಕ್ಷತ್ರ ದೋಷ ಎಂದೇ ನೀವು ಪರಿಗಣಿಸುತ್ತಿದ್ದಲ್ಲಿ ಜ್ಯೋತಿಷ್ಯದಲ್ಲಿ ಎಲ್ಲದಕ್ಕೂ ಪರಿಹಾರವಿದೆ ಎಂಬುದನ್ನು ಮರೆಯಬಾರದು. ಮೂಲಾ ನಕ್ಷತ್ರದಲ್ಲಿ ಜನಿಸಿದವರು ಗಂಧಮೂಲ ಶಾಂತಿ ಪೂಜೆಯನ್ನು ಮಾಡಿಸುವುದರಿಂದ ನಕ್ಷತ್ರ ಮುಖೇನ ಇರಬಹುದಾದ ದೋಷಗಳೆಲ್ಲ ಪರಿಹಾರವಾಗುತ್ತವೆ ಎನ್ನುತ್ತಾರೆ ಜ್ಯೋತಿಷಿಗಳು. ಮೂಲ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು ಮಾತ್ರವಲ್ಲ, ನೈತಿಕತೆಯುಳ್ಳವರು. ಹಣಕ್ಕಿಂತ ಗೌರವಕ್ಕೆ ಮನ್ನಣೆ ನೀಡುವವರು ಎಂಬುದನ್ನು ಕೂಡಾ ಗಮನಿಸಬೇಕು.