ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ

By Suvarna NewsFirst Published Oct 4, 2021, 3:59 PM IST
Highlights

ನವರಾತ್ರಿಯ ಮೊದಲ ದಿನ ಪೂಜೆಗೊಳ್ಳುವ ದುರ್ಗಾದೇವಿಯ ಅವತಾರ ಎಂದರೆ ಶೈಲಪುತ್ರಿ. ಈಕೆಯ ಬಗ್ಗೆ ಇರುವ ಮನೋಹರವಾದ ಕತೆ ಹಾಗೂ ಈಕೆಯನ್ನು ಪೂಜಿಸುವ ಕ್ರಮವನ್ನು ಈಗ ತಿಳಿಯೋಣ.

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ (Navratri). ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ (Tradition). ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ. ಶ್ವೇತ (White) ವಸ್ತ್ರದಲ್ಲಿರುವ ಶೈಲಪುತ್ರಿಯು ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಶೈಲ ಎಂದರೆ ಪರ್ವತ (Mountain). ಈಕೆ ಪರ್ವತರಾಜನ ಮಗಳು. ಪರ್ವತ ಎಂದರೆ ಪ್ರಕೃತಿ (Nature). ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.

ಶೈಲ ಪುತ್ರಿಯ ಕತೆ
ಪರ್ವತರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ಪ್ರೀತಿಸಿ ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

ಪ್ರಜಾಪತಿ ಬ್ರಹ್ಮನು ಆಯೋಜಿಸಿದ್ದ ಒಂದು ಯಜ್ಞವೇದಿಕೆಯಲ್ಲಿ ಶಿವನು ಅಧ್ಯಕ್ಷನಾಗಿದ್ದ. ಅಲ್ಲಿಗೆ ದಕ್ಷ ಆಗಮಿಸಿದ. ಆಗ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಇದರಿಂದ ದಕ್ಷ ಕೆರಳಿದ. ಶಿವ ಬೇಕೆಂದೇ ತನಗೆ ಗೌರವ ನೀಡದೆ ಅವಮಾನಿಸಿದ ಎಂದು ಕನಲಿ ಕೆಂಡವಾದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷನು ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.

ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ 'ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ' ಎಂದು ಒತ್ತಾಯಿಸಿದಳು. ಆದರೆ ಶಿವ, ಆಹ್ವಾನವಿಲ್ಲದೆ ಹೋಗುವುದ ಸರಿಯಲ್ಲ ಎನ್ನುತ್ತಾನೆ. ತಂದೆಯ ಮನೆಗೆ ಹೋಗು ನನಗೆ ಆಹ್ವಾನ ಬೇಕಾಗಿಲ್ಲ ಎಂದು ವಾದಿಸಿದ ದಾಕ್ಷಾಯಿಣಿ, ಶಿವನು ಜೊತೆಗಿಲ್ಲದೆ ದಕ್ಷಯಜ್ಞಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿಯೂ ನೋಡದಂತೆ ಮಾಡಿ, ಉಳಿದವರೂ ಆಕೆಯನ್ನು ನಿರ್ಲಕ್ಷಿಸುವಂತೆ ಮಾಡಿ ಅವಮಾನಿಸುತ್ತಾನೆ. ಶಿವನನ್ನೂ ಅವಮಾನಿಸುವ ಕ್ರಿಯೆಗಳನ್ನು ಯಜ್ಞದಲ್ಲಿ ಮಾಡುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿಯು ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿದ ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸುತ್ತಾಳೆ. ಇವಳೇ ಶೈಲ ಪುತ್ರಿ. ಮತ್ತೆ ಶಿವನ ಮಡದಿ 'ಸತಿ'ಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

ಶೈಲಪುತ್ರಿಯ ಸ್ವರೂಪಚಿಂತನೆ
ಶೈಲಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಪ್ರಿಯಳು.

ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವನ್ನು ಹಿಂಸಿಸಬಾರದೆಂಬುದರ ಸಂಕೇತ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು. ವಿನಯ ಮತ್ತು ತಾಳ್ಮೆಯ ಸಂಕೇತ (Symbol of Patience). ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ. ದೇವೀ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಉಪನಿಷತ್ತಿನ ಪ್ರಕಾರ ಶೈಲಪುತ್ರಿಯು ದೇವತೆಗಳ ಮನೋಭಾವನೆಯನ್ನು ನಿಯಂತ್ರಿಸುತ್ತಾಳೆ. ಇದರಿಂದ ಇಂದ್ರಾದಿ ದೇವತೆಗಳು ಆಕೆಯ ಮುಂದೆ ಶರಣಾಗುತ್ತಾರೆ. ದೇವಿ ಶೈಲಪುತ್ರಿ ಸಹನೆಯ ಪ್ರತೀಕಳಾಗಿದ್ದಾಳೆ. ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.

ನವರಾತ್ರಿ ಯಾರ ಉಪಾಸನೆ ಮತ್ತು ಯಾಕಾಗಿ?

ಶೈಲಪುತ್ರಿಯ ಪೂಜೆ ಹೇಗೆ?
ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಅಧ್ಯಾತ್ಮ ಸಾಧನಾ ಕ್ರಮದಲ್ಲಿ ಅದುವೇ ಮೊದಲ ಹೆಜ್ಜೆ. ಯಾರ ಮನಸು ಚಂಚಲ ಸ್ವಭಾವದ್ದಾಗಿರುತ್ತದೋ ಯಾರು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾರೋ ಅಂತಹವರು ಶೈಲಪುತ್ರಿಯ ಆರಾಧನೆ ಮಾಡಬೇಕು. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.

ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಮಲ್ಲಿಗೆಯಿಂದ ಅರ್ಚಿಸಿ. ಗಣೇಶ ವಂದನೆಯ ನಂತರ ಷೋಡಶೋಪಚಾರ ಪೂಜೆಯನ್ನು ಈ ದಿನ ಮಾಡಿ. ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ. ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿಯಲ್ಲಿ ಬೇಡಿಕೊಳ್ಳಿ. ನವರಾತ್ರಿಯ ಮೊದಲ ದಿನ ಹಳದಿ ಬಣ್ಣಕ್ಕೆ ಪ್ರೇರಣೆಯಾಗಿರುವುದರಿಂದ ಈ ದಿನ ಸರಳವಾಗಿರುವ ಹಳದಿ ಬಟ್ಟೆ ಧರಿಸಿ.

ನವರಾತ್ರಿಯಲ್ಲಿ ಪವಿತ್ರವೆನಿಸಿದ ಒಂಬತ್ತು ಬಣ್ಣಗಳ ಮಹತ್ವ ನಿಮಗೆ ಗೊತ್ತೆ?

ಶೈಲಪುತ್ರಿಯ ಆಶೀರ್ವಾದಕ್ಕಾಗಿ ಈ ಶ್ಲೋಕವನ್ನು ಪಠಿಸಿ.

ಓಂಕಾರಹಃ ಮೇ ಶಿರಾಹ್‌ ಪಟು ಮೂಲಾಧರ ನಿವಾಸಿನಿ|

ಹಿಮಾಕರಹಃ ಪಟು ಲಾಲೇಟ್‌ ಬಿಜರೂಪ ಮಹೇಶ್ವರಿ ||

ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರೀ|

ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ

ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ||

 

click me!