ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?

By Suvarna News  |  First Published May 12, 2020, 10:49 AM IST

ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಯ ಭವಿಷ್ಯ, ಗುಣ, ನಡತೆ, ಯಶಸ್ಸು ಎಲ್ಲದರ ಬಗ್ಗೆಯೂ ಮಾಹಿತಿ ನೀಡುವ ಅಸ್ತ್ರ. ಹಾಗೆಯೇ ರಾಶಿ ನೋಡಿ ಭವಿಷ್ಯವನ್ನು ತಿಳಿದುಕೊಳ್ಳುವಂತೆಯೆ ಲಗ್ನವನ್ನು ನೋಡಿ ಭವಿಷ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬಹುದು. ರಾಶಿಯೇ ಬೇರೆ, ಲಗ್ನವೇ ಬೇರೆ. ಜಾತಕದಲ್ಲಿ ಯಾವ ಲಗ್ನದಲ್ಲಿ ಜನಿಸಿದ್ದಾರೆಂಬುದನ್ನು ನೋಡಿ ಆ ಲಗ್ನದವರ ವ್ಯಕ್ತಿತ್ವ, ಕಾರ್ಯಕ್ಷೇತ್ರ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ಯಾವ ಲಗ್ನದವರು ಹೇಗಿರುತ್ತಾರೆಂಬುದನ್ನು ಇಲ್ಲಿ ನೋಡೋಣ.


ಜಾತಕ ಅಂದ ಮೇಲೆ ಗ್ರಹ, ರಾಶಿ, ನಕ್ಷತ್ರ, ಪಾದ ಹೀಗೆ ಅನೇಕ ಸಂಗತಿಗಳು ಇರುತ್ತವೆ, ಇಲ್ಲಿ ಬಹುಮುಖ್ಯವಾಗಿ ಲಗ್ನವೂ ಇರುತ್ತದೆ. ನಿಮ್ಮದು ಯಾವ ಲಗ್ನ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ, ಅದೃಷ್ಟ, ಪಾಸಿಟಿವ್-ನೆಗೆಟಿವ್ ಸೇರಿದಂತೆ ಅನೇಕ ವಿಷಯಗಳು ನಿರ್ಧರಿತವಾಗಿಬಿಟ್ಟಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಲಗ್ನ ಲೆಕ್ಕಾಚಾರ ಹೇಗೆ

ಒಂದು ಮಗು ಜನಿಸಿದ ಸಮಯದಲ್ಲಿ ಸೂರ್ಯನ ಕಿರಣಗಳು ಯಾವ ರಾಶಿಯ ಮೇಲೆ ಬೀಳುತ್ತಿರುತ್ತದೆಯೋ ಅದೇ ಲಗ್ನ. ಸೂರ್ಯ ಪ್ರತಿಯೊಂದು ಮಾಸದಲ್ಲೂ ಒಂದು ರಾಶಿಯಲ್ಲಿ ಇರುತ್ತಾನೆ. ಅದೇ ರಾಶಿಯಿಂದ ಬೆಳಗ್ಗೆ 6 ಗಂಟೆಯಿಂದ ತನ್ನ ಪರಿಕ್ರಮವನ್ನು ಪ್ರಾರಂಭಿಸಿ ಮರುದಿನ ಬೆಳಗ್ಗೆ 6 ಗಂಟೆಗೆ ಅದೇ ರಾಶಿಗೆ ಬಂದು ಸೇರುತ್ತಾನೆ. ಹನ್ನೆರಡು ರಾಶಿಗಳನ್ನು ಸುತ್ತಿ ಬರಲು 2 ತಾಸು ತೆಗೆದುಕೊಳ್ಳುತ್ತಾನೆ. ಈ ಅವಧಿಯಲ್ಲಿ ಎರಡು ತಾಸು ಇಲ್ಲವೇ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸೂರ್ಯ ರಾಶಿಯಿಂದ ರಾಶಿಗೆ ಮನೆ ಬದಲಾಯಿಸುವ ಕಾರಣ, ಘಳಿಗೆ ಲೆಕ್ಕಾಚಾರ ಹಾಕಿ ಲಗ್ನವನ್ನು ನಿರ್ಧರಿಸಲಾಗುತ್ತದೆ. ಇದೇ ಆಧಾರದ ಮೇಲೆ ಜನಿಸಿದ ಮಗುವಿನ ಲಗ್ನ ಯಾವುದೆಂದು ತಿಳಿಯುತ್ತದೆ. ಪ್ರತಿಯೊಬ್ಬರ ಜಾತಕದಲ್ಲೂ ಲಗ್ನ ಯಾವುದೋ ಅದೇ ಒಂದನೇ ಮನೆ. ಲಗ್ನದ ರಾಶಿಯ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಮತ್ತು ಯಾವ ವ್ಯಾಪಾರ ಅವರಿಗೆ ಲಾಭದಾಯಕ, ಎಂಬಿತ್ಯಾದಿ ಅಂಶಗಳನ್ನು ತಿಳಿಯಬಹುದು.

ಇದನ್ನು ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಮೇಷ

Tap to resize

Latest Videos

ಮೇಷ ಲಗ್ನದಲ್ಲಿ ಜನಿಸಿದವರು  ಕೋಪಿಷ್ಟರು, ಸ್ವಾಭಿಮಾನಿಗಳು, ಹಣವಂತರು, ಆಚಾರ-ವಿಚಾರಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುವವರಾಗಿರುತ್ತಾರೆ. ವೈಭವಶಾಲಿ ಮತ್ತು ಪರಾಕ್ರಮಿಗಳಾಗಿರುತ್ತಾರೆ. ಜಮೀನಿನ ಕಾರ್ಯಗಳಲ್ಲಿ ಯಶಸ್ಸುಲಭಿಸುತ್ತದೆ. ವಿದೇಶ ಸುತ್ತುತ್ತಾರೆ. ಇವರಿಗೆ ಖನಿಜ, ಗ್ಯಾಸ್, ಭೂಮಿಯ ವ್ಯಾಪಾರ ಆಗಿಬರುತ್ತದೆ. ಮನೆ ನಿರ್ಮಾಣ, ರಸ್ತೆ ಮತ್ತು ಆಕಾಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಾಗುತ್ತದೆ.

ವೃಷಭ

ವೃಷಭ ಲಗ್ನದಲ್ಲಿ ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಹಿತವಾಗಿ ಮಾತನಾಡುವವರು ಮತ್ತು ಶಾಂತ ಪ್ರಕೃತಿಯವರಾಗಿರುತ್ತಾರೆ. ಎಲ್ಲರನ್ನು ಸಮಾನವಾಗಿ ನೋಡುವ ಮನಃಸ್ಥಿತಿ ಇವರದ್ದಾಗಿರುತ್ತದೆ. ಸಂಗೀತವನ್ನು ಇಷ್ಟಪಡುವ ಇವರು ಹೆಚ್ಚು ಗಂಭೀರರಾಗಿರುತ್ತಾರೆ. ಜನರನ್ನು ಹೆಚ್ಚು ಪ್ರಭಾವಕ್ಕೆ ಒಳಪಡಿಸುವವರು ಮತ್ತು ಐಷಾರಾಮಿ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ಭೋಗದ ವಸ್ತುಗಳು ಮತ್ತು ಶ್ವೇತ ವರ್ಣದ ವಸ್ತುಗಳ (ಹಾಲು, ಮಜ್ಜಿಗೆ, ಸಕ್ಕರೆ, ಅಕ್ಕಿ) ವ್ಯಾಪಾರದಿಂದ ಇವರಿಗೆ ಲಾಭವಾಗುತ್ತದೆ. ನೀರಿನ ವ್ಯಾಪಾರದಿಂದ ಸಹ ಲಾಭವಾಗುತ್ತದೆ.

ಮಿಥುನ

ಮಿಥುನ ಲಗ್ನದಲ್ಲಿ ಜನಿಸಿದವರು ಕೂಟ ನೀತಿಯಲ್ಲಿ ಹೆಚ್ಚು ಲಾಭಗಳಿಸುವವರು. ಚತುರರು, ಬುದ್ಧಿವಂತರು ಮತ್ತು ರಾಜನೀತಿಯ ಕಾರ್ಯದಲ್ಲಿ ಹೆಚ್ಚು ಸಫಲತೆಯನ್ನು ಪಡೆಯುವವರು. ವಿವಾದಗಳಲ್ಲಿ ಹೆಚ್ಚು ತೊಡಗುತ್ತಾರೆ. ಎಲ್ಲರನ್ನೂ ಒಳ್ಳೆಯವರೆಂದು ಭಾವಿಸುತ್ತಾರೆ. ಸಂಘಟನಾ ಶಕ್ತಿಯುಳ್ಳವರು ಮತ್ತು ಜನರನ್ನು ಆಧರಿಸುವವರು. ಲೋಹ ಮತ್ತು ಖನಿಜದ ವ್ಯಾಪಾರ ಕೈಗೊಂಡರೆ ಉತ್ತಮ. ರಾಜಕೀಯಪಟುವಾಗುವ ಸಾಧ್ಯತೆಯೂ ಹೆಚ್ಚಿದ್ದು, ಸೌಂದರ್ಯ ಮತ್ತು ಐಷಾರಾಮಿ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರಿಗೆ ಹಣ ಕೂಡಿಡುವ ಆಸಕ್ತಿ ಹೊಂದಿರುತ್ತಾರೆ. ಸುಳ್ಳಿನ ಗೋಪುರವನ್ನೇ ಕಟ್ಟಿ ಅವಕಾಶದ ಲಾಭ ಪಡೆಯುವ ನಿಪುಣರು. 

ಕಟಕ

ಮನಸ್ಸಿನಲ್ಲೇ ವಿಚಾರ ಮಾಡುವ ಈ ಲಗ್ನದವರು, ಬೇಗ ಸಿಟ್ಟಿಗೇಳುತ್ತಾರೆ. ಅಲ್ಲದೆ, ಒಂದು ಸ್ಥಿರವಾದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಜೊತೆಗೆ ಚಂಚಲ ಮನೋಭಾವದವರಾಗಿದ್ದರೂ ಪರರ ಹಿತವನ್ನು ಬಯಸುವವರಾಗಿದ್ದಾರೆ. ಬುದ್ಧಿವಂತರಾಗಿರುವ ಇವರಿಗೆ ಸಂಪತ್ತು ಗಳಿಸಿದ್ದರೂ ಖುಷಿಯಿಂದ ಅನುಭವಿಸುವ ಮನಸ್ಥಿತಿ ಇಲ್ಲದೆ, ಸದಾ ಚಿಂತೆಯಲ್ಲೇ ಮುಳುಗಿರುವವರು. ಇನ್ನು ಇವರ ವ್ಯಾಪಾರದ ಬಗ್ಗೆ ನೋಡಬೇಕೆಂದರೆ ಲೋಹ, ಬಿಳಿ ಬಣ್ಣದ ವಸ್ತು (ವಸ್ತ್ರ, ಹಾಲು, ಮೊಸರು, ಸಕ್ಕರೆ ಇತ್ಯಾದಿ) ಗಳ ವ್ಯಾಪಾರ ಆಗಿಬರುತ್ತದೆ. 

ಇದನ್ನು ಓದಿ: ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

ಸಿಂಹ 

ವಿಚಾರವಂತರಾಗಿರುವ ಈ ಲಗ್ನದವರು, ಉತ್ತಮ ಶಿಕ್ಷಣವನ್ನು ಕೊಡಬಲ್ಲವರು. ಸ್ವಾಭಿಮಾನಿ, ನಾಯಕತ್ವವುಳ್ಳವರಾಗಿದ್ದಾರೆ. ಆಡಳಿತಾತ್ಮಕ ಕಾರ್ಯಗಳಲ್ಲಿ ದಕ್ಷತೆಯನ್ನು ಹೊಂದಿದವರು. ಪರಿವಾರದ ಎಲ್ಲ ಸದಸ್ಯರ ಬೇಕು-ಬೇಡಗಳ ಬಗ್ಗೆ ಗಮನಹರಿಸಿ, ಚೆನ್ನಾಗಿ ನೋಡಿಕೊಳ್ಳುವವರು. ವ್ಯಾಪಾರದಲ್ಲಿ ಲಾಭ ಪಡೆಯುತ್ತಾರೆ. ಜಮೀನು, ಖನಿಜ, ಸ್ಟೇಷನರಿ, ಕಂಪ್ಯೂಟರ್‌ಗೆ ಸಂಬಂಧಿಸಿದ ಕೆಲಸಗಳು ಈ ಲಗ್ನದವರಿಗೆ ಆಗಿಬರುತ್ತದೆ.

ಕನ್ಯಾ

ಕನ್ಯಾ ಲಗ್ನದಲ್ಲಿ ಜನಿಸಿದವರು ಶಾಸ್ತ್ರದಲ್ಲಿ ನಿಪುಣರು, ಐಷಾರಾಮಿ ಜೀವನ ನಡೆಸಲು ಬಯಸುವವರು. ಭಾಗ್ಯಶಾಲಿಯಾದ ಇವರು ಸುಂದರವಾಗಿರುತ್ತಾರೆ ಮತ್ತು ಪ್ರಿಯವಾಗಿ ಮಾತನಾಡುತ್ತಾರೆ. ಸತ್ಯವೆಂಬಂತೆಯೇ ಸುಳ್ಳನ್ನು ಹೇಳುವುದರಲ್ಲಿ ಚತುರರು ಇವರಾಗಿರುತ್ತಾರೆ. ಮೆಡಿಕಲ್‌ಗೆ ಸಂಬಂಧಿಸಿದ ಕೆಲಸ, ಟೆಕ್ನಿಕಲ್ ಶಿಕ್ಷಣ ಪಡೆದು ವ್ಯಾಪಾರ ಮಾಡಿದಲ್ಲಿ ಲಾಭಗಳಿಸುತ್ತಾರೆ. ಪತ್ರಿಕೋದ್ಯಮದಲ್ಲಿ ಹೆಚ್ಚು ಸಫಲತೆಯನ್ನು ಕಾಣುತ್ತಾರೆ.

ತುಲಾ

ಈ ಲಗ್ನದವರು ಬುದ್ಧಿವಂತರಾಗಿರುತ್ತಾರೆ. ಉತ್ತಮ ಕೆಲಸಗಳಿಂದ ಜೀವನವನ್ನು ಚೆನ್ನಾಗಿ ನಡೆಸುವವರು. ಎಲ್ಲ ಕಲೆಗಳನ್ನು ಬಲ್ಲವರಾಗಿರುತ್ತಾರೆ. ವಿದ್ಯುತ್ ಮತ್ತು ಲೋಹಕ್ಕೆ ಸಂಬಂಧಿಸಿದ ಕೆಲಸಗಳು ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ. ವಿದೇಶದಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ.

ವೃಶ್ಚಿಕ

ಈ ಲಗ್ನದಲ್ಲಿ ಹುಟ್ಟಿದವರು ಪರಾಕ್ರಮಿ ಮತ್ತು ಶತ್ರುಗಳ ವಿರುದ್ಧ ಜಯಗಳಿಸುತ್ತಾರೆ. ಎಲ್ಲದರಲ್ಲೂ ಮುಂದೆ ಇರುವ ಇವರು ಯಾವ ಕ್ಷೇತ್ರದಲ್ಲಿದ್ದರೂ ಮನೆಯವರ ಗೌರವಕ್ಕೆ ಪಾತ್ರರಾಗುತ್ತಾರೆ. ಪತಿ-ಪತ್ನಿಯ ಸುಖವನ್ನು ಹೊಂದುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ, ಲೋಹಗಳ ಕೆಲಸದಲ್ಲಿ, ನೀರಿನ ವ್ಯಾಪಾರದಲ್ಲಿ ಲಾಭ ಮಾಡುತ್ತಾರೆ. ಕಾಗದದಿಂದ ಹೆಚ್ಚು ಲಾಭವನ್ನು ಇವರು ಪಡೆಯಬಹುದಾಗಿದೆ.

ಧನು

ಧನು ಲಗ್ನದಲ್ಲಿ ಜನಿಸಿದವರು ಬುದ್ಧಿವಂತರು, ಸಲಹೆ ಕೊಡುವಂಥ ಕೆಲಸಗಳಲ್ಲಿ ನಿಸ್ಸೀಮರು. ಸಂಸಾರದಲ್ಲಿ ಪೂಜನೀಯ ಸ್ಥಾನವನ್ನು ಮತ್ತು ಗೌರವವನ್ನು ಹೊಂದಿರುತ್ತಾರೆ. ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಶಿಕ್ಷಣ ಕ್ಷೇತ್ರ, ಸಲಹೆಗಾರ, ಧಾರ್ಮಿಕ ಕೆಲಸ, ಖನಿಜ ಉತ್ಪಾದನೆಯಂಥ ಕೆಲಸಗಳು ಇವರಿಗೆ ಆಗಿಬರುತ್ತದೆ.

ಮಕರ

ಈ ಲಗ್ನದಲ್ಲಿ ಜನಿಸಿದವರು ಸುಖದಿಂದ ದೂರ ಇರುವ ಇವರು ಸದಾ ಸಿಟ್ಟಿನಿಂದ ಇರುತ್ತಾರೆ. ಸ್ವಾಭಿಮಾನದ ಕಾರಣದಿಂದ ವೈವಾಹಿಕ ಸುಖವನ್ನು ಪಡೆಯುವುದಿಲ್ಲ. ತಮಗೆ ಬೇಕಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಂತಾನದಿಂದಲೂ ಸುಖ ಸಿಗುವುದಿಲ್ಲ, ಬೇರೆಯವರ ಒಳಿತನ್ನು ಯೋಚಿಸಲ್ಲ. ತಮ್ಮ ಕೆಲಸವನ್ನು ಸಂಪೂರ್ಣ ದಕ್ಷತೆಯಿಂದ ಮಾಡುತ್ತಾರೆ. ವಿದ್ಯುತ್ ವ್ಯಾಪಾರ, ಲೋಹದ ಉತ್ಪಾದನೆಗೆ ಸಂಬಂಧಪಟ್ಟ ಕೆಲಸಗಳು ಕೈ ಹಿಡಿಯುತ್ತವೆ.

ಇದನ್ನು ಓದಿ: ನಿಮ್ಮ ರಾಶಿಯ ಅಧಿಪತಿ ಗ್ರಹ ಪೂಜಿಸಿ ಸುಖ-ಸಮೃದ್ಧಿ ಪಡೆಯಿರಿ!

ಕುಂಭ

ಕುಂಭ ಲಗ್ನದಲ್ಲಿ ಜನಿಸಿದವರು ಜ್ಞಾನಿಗಳು, ಬುದ್ಧಿವಂತರು ಮತ್ತು ದಯಾವಂತರು ಆಗಿರುತ್ತಾರೆ. ಖುಷಿಯಿಂದ ಇರುವ ಕಾರಣ ಯಾವಾಗಲೂ ಸುಖವಾಗಿರುತ್ತಾರೆ. ಅಂದುಕೊಂಡಂತೆ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ಹೋಟೆಲ್ ಉದ್ಯಮ ಇವರಿಗೆ ಹೇಳಿ ಮಾಡಿಸಿದ್ದಾಗಿರುತ್ತದೆ. ಇತರ ವ್ಯಾಪಾರಗಳೂ ಆಗಿ ಬರುತ್ತದೆ.

ಮೀನ

ಈ ಲಗ್ನದಲ್ಲಿ ಹುಟ್ಟಿದವರಿಗೆ ಬಂಗಾರದ ಮೇಲೆ ಹೆಚ್ಚು ಮೋಹ. ಹೆಚ್ಚು ಯೋಚಿಸಿ ಚಿಂತಿಸುವವರು, ಪತಿ, ಪತ್ನಿ ಮತ್ತು ಸಂತಾನ ಸುಖವನ್ನು ಹೊಂದುತ್ತಾರೆ. ಪರೋಪಕಾರದಲ್ಲಿ ಹೆಚ್ಚು ಆಸಕ್ತಿ ಉಳ್ಳ ಇವರು ಅಲ್ಪಾಯುಷ್ಯವನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಎಲ್ಲ ಕೆಲಸಗಳಲ್ಲೂ ದಕ್ಷತೆ ಹೊಂದಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಲಾಭ ಪಡೆಯುತ್ತಾರೆ.

click me!