ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣ ಯಾವುದೆಂದು ತಿಳಿಯಿರಿ!

By Suvarna News  |  First Published Jun 12, 2020, 4:27 PM IST

ರಾಶಿಗೆ ಅನುಗುಣವಾಗಿ ಸ್ವಭಾವಗಳು ಭಿನ್ನವಾಗಿರುತ್ತವೆ. ಒಳ್ಳೆಯ ಮತ್ತು ಕೆಟ್ಟ ಗುಣ ಎಲ್ಲರಲ್ಲಿಯೂ ಇರುತ್ತದೆ. ಕೆಲವರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ನಮ್ಮಲ್ಲಿರುವ ಕೆಟ್ಟ ಗುಣವನ್ನು ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದಲ್ಲಿ ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ಪಡೆಯಬಹುದು. ಹಾಗಾಗಿ ರಾಶಿಗೆ ಅನುಸಾರವಾಗಿ ಇರುವ ದೋಷಗುಣಗಳ ಬಗ್ಗೆ ತಿಳಿಯೋಣ.


ಪ್ರತಿಯೊಬ್ಬರೂ ಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಮನುಷ್ಯನಲ್ಲಿ ಸಹಜವಾಗಿ ಒಳ್ಳೆಯ ಗುಣ, ಕೆಟ್ಟ ಗುಣ ಎರಡೂ ಇರುತ್ತದೆ. ಕೆಲವು ಬಾರಿ ಯಾವುದು ಒಳ್ಳೆಯ ಸ್ವಭಾವ?, ಯಾವುದು ಕೆಟ್ಟ ಸ್ವಭಾವ? ಎನ್ನುವುದು ನಮಗೇ ತಿಳಿದಿರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರಿಗೂ ಒಂದೊಂದು ರಾಶಿ ಇರುತ್ತದೆ. ಅದಕ್ಕನುಸಾರವಾಗಿ ಒಂದೊಂದು ಸ್ವಭಾವವಿರುತ್ತದೆ. 

ಇನ್ನು ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಗುಣವಿದ್ದಂತೆ, ಕೆಲವು ಕೆಟ್ಟ ಗುಣವಿರುತ್ತದೆ. ಕೆಲವೊಮ್ಮೆ ಆ ಗುಣಗಳ ಬಗ್ಗೆ ನಮಗೇ ಅರಿವಿರುವುದಿಲ್ಲ.   



ರಾಶಿಯ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವಗಳ ತಿಳಿಯಬಹುದು. ಹಾಗೆಯೇ ಅವರಲ್ಲಿರುವ ಉತ್ತಮ ಗುಣ ಮತ್ತು ದೋಷಗಳನ್ನು ಹೇಳಬಹುದು. ನಮ್ಮಲ್ಲಿರುವ ದೋಷಗಳು ನಮಗರಿವಿಲ್ಲದೆಯೋ ಬೇರೆಯವರ ದುಃಖಕ್ಕೆ ಕಾರಣವಾಗಬಹುದು ಅಥವಾ ಸ್ವತಃ ನಮಗೇ ಅಂತಹ ಗುಣಗಳಿಂದ ಆಪತ್ತು ಬಂದೊದಗಬಹುದು. ಹಾಗಾಗಿ ರಾಶಿ ಅನುಸಾರವಾಗಿ ದೋಷಗುಣಗಳನ್ನು ತಿಳಿದುಕೊಂಡು, ಅದನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸೋಣ.  

ಮೇಷ ರಾಶಿ
ಈ ರಾಶಿಯವರು ತುಂಬಾ ಉತ್ಸಾಹದಿಂದ ಇರುತ್ತಾರೆ. ಯಾವಾಗಲೂ ಜೋಶ್‌ನಿಂದ ಇರುವ ಇವರಿಗೆ ಇರುವ ದೋಷಗುಣವೆಂದರೆ ಕೋಪ. ಮೇಷ ರಾಶಿಯವರಿಗೆ ಬೇಗ ಕೋಪ ಬರುತ್ತದೆ. ಕೆಲವೊಮ್ಮೆ ಕೋಪದ ಕಾರಣದಿಂದಾಗಿ ವಾದ-ವಿವಾದಗಳಲ್ಲಿ ಸಿಲುಕಿಕೊಂಡು ತಮಗೆ ತಾವೇ ಆಪತ್ತನ್ನು ತಂದುಕೊಳ್ಳುತ್ತಾರೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಇವರು ಅಂದುಕೊಂಡದ್ದನ್ನು ಸಾಧಿಸುವ ಛಲ ಹೊಂದಿರುತ್ತಾರೆ.
 
ವೃಷಭ ರಾಶಿ
ಈ ರಾಶಿಯವರು ಹೆಚ್ಚು ಪೊಸೆಸ್ಸಿವ್ ಆಗಿರುತ್ತಾರೆ. ಆದರೆ, ಆಲೋಚಿಸದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಿರಾಶೆಯ ಸ್ವಭಾವ ಇವರಲ್ಲಿ ಹೆಚ್ಚಿರುವುದರಿಂದ ಪ್ರಯತ್ನ ಪಟ್ಟು ಜಯ ಸಾಧಿಸುವಲ್ಲಿ ಹಿಂದೆ ಬೀಳುತ್ತಾರೆ. ತಮ್ಮ ಇಚ್ಛೆಯಂತೆಯೇ ಎಲ್ಲವೂ ನಡೆಯಬೇಕೆಂಬ ಹಟದ ಸ್ವಭಾವವೂ ಇವರಲ್ಲಿರುತ್ತದೆ. 
 
ಮಿಥುನ ರಾಶಿ
ಸಮಸ್ಯೆಗಳಿಗೆ ಪಟ್ಟನೆ ಪರಿಹಾರ ಕಂಡುಕೊಳ್ಳುವ ಗುಣ ಇವರಲ್ಲಿದೆ. ಬೇರೆಯವರ ಮಾತನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆಪತ್ತನ್ನು ತಾವಾಗಿಯೇ ಮೈಮೇಲೆ ಎಳೆದುಕೊಳ್ಳುತ್ತಾರೆ. ಇವರ ಮನಸ್ಥಿತಿ ಒಮ್ಮೆ ಇದ್ದಂತೆ ಇನ್ನೊಮ್ಮೆ ಇರುವುದಿಲ್ಲ. ಕ್ಷಣ ಕ್ಷಣಕ್ಕೂ ಬದಲಾಗುವ ಇವರ ಮನಸ್ಥಿತಿ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತದೆ.

ಇದನ್ನು ಓದಿ: ಜೂನ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಕಟಕ ರಾಶಿ
ಪ್ರೀತಿ ಮತ್ತು ಬೇರೆಯವರ ಬಗ್ಗೆ ಇರುವ ಸಂವೇದನಾಶೀಲ ಮನೋಭಾವವೇ ಈ ರಾಶಿಯವರ ತಾಕತ್ತು ಮತ್ತು ಇದೇ ಅವರನ್ನು ಎಲ್ಲರಿಂದ ಭಿನ್ನವಾಗಿಸುವುದು. ಇವರಲ್ಲಿರುವ ನಕಾರಾತ್ಮಕ ಮತ್ತು ನಿರಾಶೆಯ ಸ್ವಭಾವ ಆಗುವ ಕೆಲಸವನ್ನು ಹಾಳು ಮಾಡುವ ಸಂಭವವಿರುತ್ತದೆ. ಇವರು ಬುದ್ಧಿಯಿಂದ ಕಡಿಮೆ, ಮನಸ್ಸಿನಿಂದ ಹೆಚ್ಚು ಯೋಚಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಂಡು ಕೊರಗುತ್ತಿರುತ್ತಾರೆ.

ಸಿಂಹ ರಾಶಿ
ಈ ರಾಶಿಯವರಲ್ಲಿ ನಾಯಕತ್ವದ ಗುಣ ಚೆನ್ನಾಗಿ ಇರುತ್ತದೆ. ಆತ್ಮವಿಶ್ವಾಸವನ್ನು  ಹೆಚ್ಚಾಗಿ ಹೊಂದಿರುವ ಇವರು ಎಲ್ಲೆಡೆ ಮಿಂಚುತ್ತಾರೆ. ಆದರೆ ಹಣದ ಮೋಹ ಇವರನ್ನು ದುರಾಸೆಗೊಳಪಡಿಸಿ ಪಾತಾಳಕ್ಕಿಳಿಯುವಂತೆ ಮಾಡುತ್ತದೆ. ಇತರರನ್ನು ಕೀಳಾಗಿ ಕಾಣುವ ಇವರು, ಅಹಂಕಾರಿಗಳಾಗಿರುತ್ತಾರೆ. 
 
ಕನ್ಯಾ ರಾಶಿ
ಈ ರಾಶಿಯವರಿಗೆ ಗ್ರಹಿಸುವ ಶಕ್ತಿ ಚೆನ್ನಾಗಿರುತ್ತದೆ. ಯಾರಾದರೂ ಇವರ ಬಗ್ಗೆ ಮಾತನಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಇದರಿಂದ ಬೇಗ ಸಿಟ್ಟಿಗೇಳುತ್ತಾರೆ. ಈ ಆವೇಶವೇ ಇವರ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತದೆ. ಯಾರಾದರೂ ತಪ್ಪು ಮಾಡಿದರೆ ಅವರನ್ನು ಬೇಗ ಕ್ಷಮಿಸುವುದಿಲ್ಲ.
 
ತುಲಾ ರಾಶಿ
ಎಲ್ಲವನ್ನೂ ಅಳೆದು-ತೂಗಿ ವ್ಯವಹರಿಸುವ ಕಲೆ ಇವರಲ್ಲಿರುತ್ತದೆ. ಯಾವ ವಿವಾದಕ್ಕೂ ಸಿಲುಕಿಕೊಳ್ಳದ ಇವರು ಪರ-ವಿರೋಧದ ವಿಷಯ ಬಂದಾಗ ಸುಮ್ಮನಾಗಿ ಬಿಡುತ್ತಾರೆ. ಆದರೆ ಆಲಸ್ಯವನ್ನು ನೆಚ್ಚಿಕೊಂಡಿರುವ ಇವರು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
 
ವೃಶ್ಚಿಕ ರಾಶಿ
ಗೌಪ್ಯತೆ ಕಾಪಾಡಿಕೊಂಡು ಕೆಲಸ ಮಾಡುವ ಕಲೆ ಈ ರಾಶಿಯವರಿಗೆ ತಿಳಿದಿರುತ್ತದೆ. ಆದರೆ ಯಾರು ಏನೇ ಮಾತನಾಡಿದರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅದಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುವುದರ ಬಗ್ಗೆಯೇ ಆಲೋಚಿಸುತ್ತಿರುತ್ತಾರೆ. ಇದರಿಂದಾಗಿ ಸಫಲತೆಯ ಹಾದಿಯಲ್ಲಿ ಹಿಂದೆಯೇ ಉಳಿಯುತ್ತಾರೆ.

ಇದನ್ನು ಓದಿ: ನಿಮಗೂ ಸರ್ಕಾರಿ ಕೆಲಸ ಸಿಗುವ ಯೋಗವಿರಬಹುದು!

ಧನು ರಾಶಿ
ಕ್ರಿಯಾಶೀಲರಾಗಿರುವ ಈ ರಾಶಿಯವರು ಕೆಲಸಗಳನ್ನು ಖುಷಿಯಿಂದ ಮಾಡುತ್ತಾರೆ. ಇವರ ದೋಷಗುಣವೇನೆಂದರೆ, ಮಾತು ಮಾತಿಗೆ ಆಣೆ, ಭಾಷೆಗಳನ್ನು ಪಡೆಯುವುದು ಹಾಗೂ ಸವಾಲು ಹಾಕುವುದು. ಇದರಿಂದ ಆಪತ್ತನ್ನು ತಮ್ಮತ್ತ ತಾವೇ ಸೆಳೆದುಕೊಳ್ಳುತ್ತಾರೆ. ಮಾತನಾಡುವ ಮುಂಚೆ ಯೋಚಿಸದೆಯೇ ಥಟ್ ಅಂತ ಹೇಳಿಬಿಡುವ ಸ್ವಭಾವ ಇತರರ ನೋವಿಗೆ ಕಾರಣವಾಗುತ್ತದೆ.

ಮಕರ ರಾಶಿ
ಈ ರಾಶಿಯವರ ಯೋಚನೆ ಯಾವಾಗಲೂ ಸಕಾರಾತ್ಮವಾಗಿರುತ್ತದೆ. ಇವರಲ್ಲಿರುವ ಅಸೂಯೆಯ ಭಾವನೆಯಿಂದಾಗಿ ಇತರರು ಇವರ ಬಗ್ಗೆ ನಕಾರಾತ್ಮಕವಾಗಿ ಯೋಚಿಸುತ್ತಾರೆ. ಬೇರೆಯವರಿಗೆ ಅವಮಾನ ಮಾಡುವುದು ಇವರ ಇನ್ನೊಂದು ಸ್ವಭಾವ. ಬೇರೆಯವರ ಭಾವನೆಗಳಿಗೆ ಬೆಲೆ ನೀಡುವುದಿಲ್ಲ.
  
ಕುಂಭ ರಾಶಿ
ಎಲ್ಲೆಡೆ ಸಂತಸ ಹಂಚುವುದು ಈ ರಾಶಿಯವರ ವಿಶೇಷತೆ. ಜನರಿಂದ ದೂರವಿರಲು ಇವರು ಇಷ್ಟಪಡುತ್ತಾರೆ. ಸಣ್ಣ ವಿಷಯವನ್ನು ದೊಡ್ಡದು ಮಾಡಿ ಹೇಳುವುದು ಇವರ ದೋಷಗುಣ. ಇದರಿಂದ ಜನರಿಗೆ ಇವರ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ. 

ಇದನ್ನು ಓದಿ: ಪತಿಗೆ ಅಂಟಿ ಕೊಂಡಿರುವ ದಾರಿದ್ರ್ಯ ದೂರ ಮಾಡುವ ಶಕ್ತಿಯಿದೆ ಪತ್ನಿಗೆ, ಹೇಗೆ?
 
ಮೀನ ರಾಶಿ
ಈ ರಾಶಿಯವರು ಆದರ್ಶವಾದಿಗಳು. ಇವರಿಗೆ ಕೆಲಸದಲ್ಲಿ ಉತ್ಸಾಹ ಕಡಿಮೆ.  ಯಾವುದೇ ಕೆಲಸವಾಗಲಿ ತಾವೇ ಮೊದಲು ಮಾಡುವ ಅಭ್ಯಾಸ ಇವರಿಗಿರುವುದಿಲ್ಲ. ಇವರಿಗೆ ಎಲ್ಲ ವಿಷಯಗಳಲ್ಲೂ ಗೊಂದಲವೇ ಬಗೆಹರಿಯುವುದಿಲ್ಲ. ಇದರಿಂದ ಬೇರೆಯವರು ಅವಕಾಶದ ಲಾಭ ಪಡೆಯುತ್ತಾರೆ.

Tap to resize

Latest Videos

click me!