ಏಕಾಗ್ರತೆಯಿಂದ ಪ್ರಾರ್ಥನೆ ಹಾಕುತ್ತಾ ಪ್ರದಕ್ಷಿಣೆ ಹಾಕಿದರೆ ದೇವರ ಕೃಪೆ ಪ್ರಾಪ್ತಿಯಾಗಿ ಮಾನಸಿಕ ನೆಮ್ಮದಿ ನೆಲೆಸಲು ಸಹಾಯಕವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರದಕ್ಷಿಣೆ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಎಷ್ಟು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಇದರಿಂದ ಲಾಭ ಏನು? ಯಾವ ಕಾರಣಕ್ಕೆ ಪ್ರದಕ್ಷಿಣೆಯನ್ನು ಹಾಕಬೇಕು ಎಂಬಿತ್ಯಾದಿಗಳ ಬಗ್ಗೆ ಹೇಳಲಾಗಿದೆ. ಈಗ ಇದರ ಬಗ್ಗೆ ತಿಳಿಯೋಣ...
ದೇವರ ಮೇಲೆ ನಂಬಿಕೆ ಇದೆ ಎಂದ ಮೇಲೆ ದೇವಸ್ಥಾನಗಳಿಗೆ ನಾವು ಹೋಗಿಯೇ ಹೋಗುತ್ತೇವೆ. ಇನ್ನು ಮನೆಯಲ್ಲಂತೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರಿಗೆ ಪೂಜೆ ಮಾಡುವುದು, ಮಾಡಿಸುವುದು, ಸ್ತೋತ್ರಗಳನ್ನು ಪಠಿಸುವುದು, ಮಂತ್ರ ಹೇಳುವುದು, ಶ್ರದ್ಧಯಿಂದ ಭಜನೆಯನ್ನು ಹಾಡುವುದು, ಕೀರ್ತನೆಗಳನ್ನು ಹೇಳುವುದು ಹೀಗೆ ಒಂದು ಧಾರ್ಮಿಕ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತೇವೆ. ಇದರಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದು ಸಹ ಒಂದು.
ದೇವರಿಗೆ ಪ್ರದಕ್ಷಿಣೆ ಹಾಕುವುದು ಎಂದರೆ ದೇವರ ಕೋಣೆ ಸುತ್ತಲೋ, ದೇವಸ್ಥಾನ ಗರ್ಭಗುಡಿ ಸುತ್ತವೋ ಅಥವಾ ದೇಗುಲದ ಆವರಣದ ಸುತ್ತಲೋ ಸುತ್ತು ಹಾಕುವುದು ಮಾತ್ರವಲ್ಲ. ಈ ಸಮಯದಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯನ್ನು ಹೊಂದಿರಬೇಕಾಗುತ್ತದೆ. ಈ ಪ್ರದಕ್ಷಿಣೆ ಹಾಕುವ ವೇಳೆ ಮನಸ್ಸನ್ನು ಚಂಚಲವಾಗಿಟ್ಟುಕೊಳ್ಳಬಾರದು, ಮೊಬೈಲ್ ಸೇರಿದಂತೆ ಸುತ್ತಮುತ್ತಲು ಇರುವ ವಾತಾವರಣದ ಬಗ್ಗೆ ಗಮನ ಹೋಗಬಾರದು.
ಪುರಾಣದ ಪ್ರಕಾರ ದೇವರ ದರ್ಶನ ಮಾಡಲು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಪ್ರದಕ್ಷಿಣೆ ಹಾಕಬೇಕು. ಹೀಗೆ ಮಾಡಿದರೆ ಪಾಪವೆಲ್ಲ ಕಳೆದು, ಪುಣ್ಯ ಫಲವು ಪ್ರಾಪ್ತಿಯಾಗುತ್ತದೆ. ಇದರ ಜೊತೆಗೆ ವೈಜ್ಞಾನಿಕ ಕಾರಣವೂ ಇದ್ದು, ದೇವಸ್ಥಾನದಲ್ಲಿ ಬಲಭಾಗದಿಂದ ಪ್ರದಕ್ಷಿಣಾಕಾರವಾಗಿ ಶುರು ಸಂಚರಿಸಬೇಕು. ಯಾಕೆಂದರೆ ಗರ್ಭಗುಡಿಯಲ್ಲಿ ಇರುವ ದೇವರ ಮೂರ್ತಿಯ ಪಾಸಿಟಿವ್ ಎನರ್ಜಿಯು ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುತ್ತಿರುತ್ತದೆ. ಹೀಗಾಗಿ ಈ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದಲ್ಲಿ ಧನಾತ್ಮಕ ಅಂಶಗಳು ದೇಹದೊಳಗೆ ಪ್ರವಹಿಸುವುದಲ್ಲದೆ, ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹೀಗಾಗಿ ಈಗ ಪ್ರದಕ್ಷಿಣೆಯಿಂದ ಆಗುವ ಪ್ರಯೋಜನಗಳು ಹಾಗೂ ಲಾಭಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ....
ಸುಖ-ಶಾಂತಿ ನೆಲೆಸಲು
ಹಿಂದೂ ಧರ್ಮದ ಅನುಸಾರ ದೇವಸ್ಥಾನಗಳಿಗೆ ತೆರಳುವುದು, ದೇವರ ಪ್ರಾರ್ಥನೆ ಮಾಡುವುದು, ದೇವರ ದರ್ಶನವನ್ನು ಪಡೆದುಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಹೀಗೆ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕುವುದರಿಂದ ಅಲ್ಲಿ ಲಭ್ಯವಾಗುವ ಶಾಂತಿ, ಪಾಸಿಟಿವ್ ಅಂಶಗಳು ನಿಮ್ಮ ಮೇಲೆ ಪರಿಣಾಮವನ್ನು ಬೀರುವುದಲ್ಲದೆ, ನೀವು ಮನೆಗೆ ಬಂದಾಗ ಮನೆಯಲ್ಲಿರುವಂತಹ ನೆಗೆಟಿವ್ ಅಂಶಗಳು ದೂರಾಗುತ್ತವೆ. ಮನೆಯಲ್ಲಿ ಸುಖ, ನೆಮ್ಮದಿ ನೆಲೆಸುತ್ತದೆ.
ಇದನ್ನು ಓದಿ: ಹಾರ್ಟ್ ಪ್ರಾಬ್ಲಂನಿಂದ ಪಾರಾಗಲು ಜ್ಯೋತಿಷ್ಯ ಉಪಾಯ!
ಪ್ರದಕ್ಷಿಣೆ ಬಗ್ಗೆ ಸಣ್ಣ ಕಥೆ ನೋಡೋಣ
ಪುರಾಣದಲ್ಲಿ ಹೇಳಿರುವಂತೆ ಶಿವ - ಪಾರ್ವತಿಯರ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರ ನಡುವೆ ಒಂದು ಸ್ಪರ್ಧೆ ಏರ್ಪಡುತ್ತದೆ. ಏನೆಂದರೆ, ಜಗತ್ತನ್ನು ಯಾರು ಮೊದಲು ಒಂದು ಸುತ್ತು ಹಾಕಿ ಬರುತ್ತಾರೆ ಎಂಬ ಪ್ರಶ್ನೆಯಾಗಿತ್ತು. ಕಾರ್ತಿಕೇಯ ಜಗತ್ತು ಸುತ್ತಲು ಹೊರಟರೆ, ತಾಯಿ – ತಂದೆಯವರಾದ ಶಿವ ಹಾಗೂ ಪಾರ್ವತಿಯವರು ಸೃಷ್ಟಿಯ ಮೂಲವಾಗಿದ್ದು, ಅವರನ್ನೇ ಪ್ರದಕ್ಷಿಣೆ ಮಾಡುವುದಾಗಿ ಚಿಂತಿಸಿದ ಗಣೇಶ ಅದರಂತೆಯೇ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸ್ಪರ್ಧೆಯಲ್ಲಿ ವಿಜಯಶಾಲಿಯಾದ. ಹೀಗಾಗಿ ಪೂಜೆಯ ನಂತರ ದೇವರನ್ನು ಸಂಪೂರ್ಣ ಸೃಷ್ಟಿ ಎಂದು ಭಾವಿಸಿ ಪ್ರದಕ್ಷಿಣೆ ಮಾಡುವ ರೂಢಿ ಬೆಳೆದುಬಂದಿದೆ. ಹೀಗೆ ಮಾಡುವುದರಿಂದ ಧನ, ಸಮೃದ್ಧಿಯು ಪ್ರಾಪ್ತಿಯಾಗುವುದಲ್ಲದೆ, ಸಂತೋಷ, ನೆಮ್ಮದಿ ಸಹ ನೆಲೆಸುತ್ತದೆ.
ಪ್ರದಕ್ಷಿಣೆಗೆ ಇದೆ ಮಂತ್ರ
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ ಪದೇ…
ಎಂಬ ಈ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.
ಎಷ್ಟು ಪ್ರದಕ್ಷಿಣೆ ಮಾಡಬೇಕು? ಇದರಿಂದೇನು ಲಾಭ..?
ದೇವಸ್ಥಾನದಲ್ಲಿ ಮಾಡುವ ಪ್ರದಕ್ಷಿಣೆಗೆ ಅದರದ್ದೇ ಆದ ಫಲವಿದ್ದು, ಎಷ್ಟು ಬಾರಿ ಮಾಡುತ್ತೇವೆ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ. ಜಯಪ್ರಾಪ್ತಿಗೆ 5 ಪ್ರದಕ್ಷಿಣೆ, ಶತ್ರುಗಳಿಂದ ಗೆಲುವಿಗೆ 7 ಬಾರಿ, ಸಂತಾನ ಪಡೆಯಲು 9 ಬಾರಿ, ಆಯುಷ್ಯ ವೃದ್ಧಿಗೆ 11 ಬಾರಿ, ಮನೋಕಾಮನೆ ಈಡೇರಲು 13 ಬಾರಿ ಪ್ರದಕ್ಷಿಣೆಗಳನ್ನು ಹಾಕಬೇಕು. ಧನ ಪ್ರಾಪ್ತಿಯಾಗಬೇಕೆಂದರೆ 15 ಬಾರಿ, ಧನ ವೃದ್ಧಿಗೆ 17 ಬಾರಿ ಹಾಗೂ ರೋಗ ನಿವಾರಣೆಗೆ 19 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು.
ಇದನ್ನು ಓದಿ: ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ?
ಸೂರ್ಯನಿಗೆ 7, ಗಣೇಶನಿಗೆ 4, ವಿಷ್ಣು ಮತ್ತು ವಿಷ್ಣುವಿನ ಅವತಾರಗಳಿಗೆ 5, ದುರ್ಗಾದೇವಿಗೆ 1, ಹನುಮಂತನಿಗೆ 3 ಪ್ರದಕ್ಷಿಣೆಗಳನ್ನು ಹಾಕಬೇಕೆಂದು ಹೇಳಲಾಗಿದೆ. ಹೀಗೆ ಮಾಡಿ ಪುಣ್ಯವನ್ನು ಪಡೆಯಬಹುದಾಗಿದೆ.