ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡದಿರುವ ಮಲೆನಾಡಿನ ಪುರಾಣ ಪ್ರಸಿದ್ದ ಖಾಂಡ್ಯದ ಶ್ರೀ ತ್ರಯಂಬಕ ಮೃತ್ಯುಂಜಯ ಶ್ರೀ ಮಾರ್ಕಾಂಡೇಶ್ವರಸ್ವಾಮಿಯ ಮಹಾರಥೋತ್ಸವು ಇಂದು ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.02): ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡದಿರುವ ಮಲೆನಾಡಿನ ಪುರಾಣ ಪ್ರಸಿದ್ದ ಖಾಂಡ್ಯದ ಶ್ರೀ ತ್ರಯಂಬಕ ಮೃತ್ಯುಂಜಯ ಶ್ರೀ ಮಾರ್ಕಾಂಡೇಶ್ವರಸ್ವಾಮಿಯ ಮಹಾರಥೋತ್ಸವು ಇಂದು ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣ ಪ್ರಸಿದ್ದ ಖಾಂಡ್ಯ ಶ್ರೀ ತ್ರಯಂಬಕ ಮೃತ್ಯುಂಜಯ ಶ್ರೀ ಮಾರ್ಕಾಂಡೇಶ್ವರಸ್ವಾಮಿ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾದರು. ರಥೋತ್ಸವದ ಪ್ರಯುಕ್ತ ಶ್ರೀ ಮಾರ್ಕಾಂಡೇಶ್ವರ ಸ್ವಾಮಿಗೆ ಜಿಲ್ಲಾಡಳಿತದಿಂದ ಮತ್ತು ಭಕ್ತರ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಾರಥೋತ್ಸವದಲ್ಲಿ ಭಾಗಿಯಾದ ಭಕ್ತಗಣ: ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಛತ್ರಿ ಚಾಮರ ಹಾಗೂ ವಿವಿಧ ಮಂಗಳ ವಾಧ್ಯಗಳೊಂದಿಗೆ ದೇವಸ್ಥಾನದ ಸುತ್ತಲೂ ವಿವಿಧ ಧಾರ್ಮಿಕ ವಿಧಿವಿದಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಮೆರವಣಿಗೆ ನಡೆಸಿ ನಂತರ ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿದ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಬಾಳೆಗದ್ದೆ, ಬಾಳೆಹೊನ್ನೂರು, ಕಡಬಗೆರೆ, ಸಂಗಮೇಶ್ವರಪೇಟೆ, ಬಾಸಾಪುರ, ಉಜ್ಜಯಿನಿ, ಬಿದರೆ, ಚಂದ್ರವಳ್ಳಿ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿಂದ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡರು.
ಅಡಿಕೆ ಬೆಳೆಗಾರರನ್ನು ಬೀದಿಗೆ ತರುವ ಹುನ್ನಾರ: ಎಚ್‌ಡಿಕೆ ಆರೋಪ
ಬೆಳೆದ ಬೆಳೆಗಳನ್ನು ಸ್ವಾಮಿಗೆ ಸಮರ್ಪಣೆ ಮಾಡಿದ ರೈತರು: ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ರೈತರು ತಾವು ಬೆಳೆದ ಮೊದಲ ಬೆಳೆಗಳನ್ನು ದೇವರಿಗೆ ಸಮರ್ಪಣೆ ಮಾಡುವ ಸಂಪ್ರದಾಯ ದಶಕಗಳಿಂದ ವಾಡಿಕೆಯಲ್ಲಿದ್ದು, ಈ ವರ್ಷವೂ ಕೂಡ ಕಾಫಿ ಬೆಳೆಗಾರರು, ರೈತರು ತಾವು ಬೆಳೆದ ಬೆಳೆಗಳಾದ ಅಡಿಕೆ, ಕಾಳುಮೆಣಸು ಮತ್ತು ಇನ್ನಿತರ ದಾನ್ಯಗಳನ್ನು ಶ್ರೀ ಸ್ವಾಮಿಯ ರಥಕ್ಕೆ ಸಮರ್ಪಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು, ನಂತರ ಶ್ರೀ ಸ್ವಾಮಿಯವರ ಮಹಾಥೋತ್ಸವದ ತೇರನ್ನು ಭಕ್ತರು ಎಳೆಯುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.
2028ರ ವೇಳೆಗೆ ಜೆಡಿಎಸ್ ಯುವ ನಾಯಕತ್ವದ ತಂಡ ರಚನೆ: ಎಚ್.ಡಿ.ಕುಮಾರಸ್ವಾಮಿ
ಮಹಾರಥೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರದಾನ ತಂತ್ರಿಗಳಾದ ಲಕ್ಷ್ಮೀನಾರಾಯಣ ಸೋಮಯಾಜಿ ರವರ ನೇತೃತ್ವದಲ್ಲಿ ನಡೆದವು, ಆಗಮಿಸಿದ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು, ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಅಮ್ಮ ಪೌಂಡೇಷನ್ ನ ಸುಧಾಕರ್ ಶೆಟ್ಟಿ, ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ವಿ.ಮಂಜುನಾಥ್ ಸೇರಿದಂತೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಎಲ್ಲಾ ಸದಸ್ಯರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು .