ನಿಸ್ವಾರ್ಥ ಪ್ರೀತಿಯಿಂದ ತುಂಬಿದ ರಕ್ಷಾ ಬಂಧನದ ಹಬ್ಬವು ಸಹೋದರ ಸಹೋದರಿಯರನ್ನು ವಾತ್ಸಲ್ಯದ ಎಳೆಯಲ್ಲಿ ಬಂಧಿಸುತ್ತದೆ ಮತ್ತು ಅವರ ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ಈ ದಿನದಂದು ನೀವು ರಾಖಿ ತಟ್ಟೆಯನ್ನು ಹೇಗೆ ತಯಾರಿಸಬಹುದು ತಿಳಿಯೋಣ.
ಆಗಸ್ಟ್‌ನಲ್ಲಿ ಸಹೋದರ ಸಹೋದರಿಯರ ಪಾಲಿಗೆ ಅಕ್ಷರಶಃ ಹಬ್ಬವೋ ಹಬ್ಬ. ಮೊದಲಿಗೆ ನಾಗರ ಪಂಚಮಿಯಲ್ಲಿ ಸಹೋದರಿಯು ಸೋದರನಿಗೆ ಪ್ರೀತಿ ವಾತ್ಸಲ್ಯ ವ್ಯಕ್ತಪಡಿಸಿದರೆ, ನಂತರ ವಾರದ ಬಳಿಕ ಬರುವ ರಕ್ಷಾ ಬಂಧನ ಹಬ್ಬದಲ್ಲಿ ಸಹೋದರನಿಗೆ ರಕ್ಷಣೆ ಹಾಗೂ ತನ್ನ ರಕ್ಷೆಯನ್ನೂ ಕೋರಿ ರಾಖಿ ಕಟ್ಟುತ್ತಾಳೆ. ತದನಂತರ ಗೌರಿ ಹಬ್ಬದಲ್ಲಿ ಸಹೋದರನು ತಂಗಿಗೆ ಬಾಗೀನ ನೀಡಿ ಹರಸುತ್ತಾನೆ.. ಈ ಎಲ್ಲ ಹಬ್ಬಗಳು ಅಣ್ಣತಂಗಿಯರು, ಅಕ್ಕತಮ್ಮಂದಿರ ಪ್ರೇಮ ವಾತ್ಸಲ್ಯದ ಅಭಿವ್ಯಕ್ತಿಯ ಅವಕಾಶ ಮಾಡಿಕೊಡುತ್ತವೆ. ಅವರ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ.
ಅಂದ ಹಾಗೆ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ರಕ್ಷಾ ಬಂಧನ. ಈ ಬಾರಿ ಆಗಸ್ಟ್ 11, 2022ರ ಗುರುವಾರದಂದು ರಾಖಿ ಹಬ್ಬ. ಈ ದಿನದಂದು ಸಹೋದರಿಯರು ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ದಿನ ಸಹೋದರ ಯಾವಾಗಲೂ ತನ್ನ ಸಹೋದರಿ ರಕ್ಷಿಸಲು ಭರವಸೆ ನೀಡುತ್ತಾನೆ.
ಯಾವಾಗ ರಾಖಿ ಕಟ್ಟಬೇಕು?
ಈ ಬಾರಿ ಹುಣ್ಣಿಮೆಯ ದಿನಾಂಕ 11 ಮತ್ತು 12 ಎರಡು ದಿನಗಳಲ್ಲಿ ಬೀಳುತ್ತಿದೆ. ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಆಗಸ್ಟ್ 11ರಂದು ಬೆಳಿಗ್ಗೆ 10.38 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಆಗಸ್ಟ್ 12ರಂದು ಬೆಳಿಗ್ಗೆ 7.05 ಕ್ಕೆ ಕೊನೆಗೊಳ್ಳುತ್ತದೆ. ಅದರಂತೆ ಆಗಸ್ಟ್ 12ರಂದು ಉದಯ ತಿಥಿ ಇದ್ದರೂ ಆಗಸ್ಟ್ 11ರಂದು ರಕ್ಷಾ ಬಂಧನ(Raksha Bandhan 2022)ವನ್ನು ಆಚರಿಸಲಾಗುತ್ತದೆ. ಏಕೆಂದರೆ 11ರಂದು ಪೂರ್ಣಿಮಾ ತಿಥಿ ಪೂರ್ಣ ದಿನ.
ಒಂದೆಡೆ ಪ್ರವಾಹ ಮತ್ತೊಂದೆಡೆ ಬರ: ಮಳೆಗಾಗಿ ಕಪ್ಪೆಗಳಿಗೆ ಮದ್ವೆ
ಶಾಸ್ತ್ರಗಳ ಪ್ರಕಾರ, ರಾಖಿ ತಟ್ಟೆಯಲ್ಲಿ ಎಲ್ಲಾ ಪೂಜಾ ಸಾಮಗ್ರಿಗಳನ್ನು ಇಟ್ಟು, ಸಹೋದರಿ ತಟ್ಟೆಯನ್ನು ಅಲಂಕರಿಸಿ ನಂತರ ರಾಖಿ ಕಟ್ಟಿದರೆ, ಸಹೋದರನ ದೀರ್ಘಾಯುಷ್ಯದ ಜೊತೆಗೆ, ತಾಯಿ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ. ರಕ್ಷಾಬಂಧನದ ತಟ್ಟೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ರಕ್ಷಾಬಂಧನದಂದು ಆರತಿ ತಟ್ಟೆಯನ್ನು ಹೀಗೆ ಅಲಂಕರಿಸಿ..
ರಾಖಿ(Rakhi)
ರಾಖಿಯ ತಟ್ಟೆಯಲ್ಲಿ ರಕ್ಷಣಾ ದಾರವನ್ನು ಇರಿಸಿ. ನಂಬಿಕೆಗಳ ಪ್ರಕಾರ, ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವುದು ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ.
ಶ್ರೀಗಂಧದ ತುಂಡು(Sandalwood)
ಶ್ರೀಗಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ, ಆದ್ದರಿಂದ ರಕ್ಷಾಬಂಧನದ ತಟ್ಟೆಯಲ್ಲಿ ಶ್ರೀಗಂಧವನ್ನು ಇರಿಸಿ. ಶ್ರೀಗಂಧದ ತಿಲಕವನ್ನು ಮಾಡಿ ಇಡಿಸುವುದರಿಂದ ಸಹೋದರನ ಆಯುಷ್ಯ ಹೆಚ್ಚುವುದು ಮತ್ತು ಅನೇಕ ರೀತಿಯ ಗ್ರಹ ದೋಷಗಳಿಂದ ಮುಕ್ತಿ ಹೊಂದಬಹುದು.
ಅಕ್ಷತೆ
ಹಿಂದೂ ಧರ್ಮದಲ್ಲಿ, ಅಕ್ಷತವನ್ನುಪ್ರತಿ ಶುಭ ಸಂದರ್ಭದಲ್ಲಿ ಬಳಸಲಾಗುತ್ತದೆ. ಈ ದಿನ ಸಹೋದರನ ಹಣೆಯ ಮೇಲೆ ತಿಲಕವನ್ನು ಹಚ್ಚಿ ರಾಖಿ ಕಟ್ಟಿದ ಬಳಿಕ ಅಣ್ಣನಾದರೆ ಆತನ ಕೈಗೆ ಅಕ್ಷತೆ ನೀಡಿ ಕಾಲಿಗೆರಗಿ ನಮಸ್ಕರಿಸಿ. ಆತನ ಅಕ್ಷತೆಯನ್ನು ನಿಮ್ಮ ತಲೆಯ ಮೇಲಿರಿಸಬೇಕು. ತಮ್ಮನಾದರೆ ನೀವೇ ಆತನ ತಲೆಗೆ ಅಕ್ಷತೆ ಹಾಕಿ ಆಶೀರ್ವದಿಸಿ.
ತೆಂಗಿನ ಕಾಯಿ(Coconut)
ತೆಂಗಿನಕಾಯಿಯನ್ನು ಪ್ರತಿ ಶುಭ ಕಾರ್ಯಕ್ಕೂ ಬಳಸುತ್ತಾರೆ. ನಂಬಿಕೆಗಳ ಪ್ರಕಾರ, ರಾಖಿ ಕಟ್ಟುವಾಗ ತೆಂಗಿನಕಾಯಿಯನ್ನು ಬಳಸುವುದು ಸಹೋದರನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಸತ್ಯವಾಗುತ್ತಿದೆಯೇ 2022ಕ್ಕೆ ನಾಸ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯವಾಣಿ?
ಗಂಗಾಜಲ
ತಟ್ಟೆಯಲ್ಲಿ ಗಂಗಾಜಲ ತುಂಬಿದ ಕಲಶವನ್ನು ಇಟ್ಟುಕೊಳ್ಳಿ. ಇದನ್ನು ಇಟ್ಟುಕೊಳ್ಳುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ದೀಪ
ರಕ್ಷಾಬಂಧನದ ಶುಭ ಸಂದರ್ಭದಲ್ಲಿ, ಸಹೋದರಿಯರು ದೀಪವನ್ನು ಬೆಳಗಿಸಿ ಮತ್ತು ತಮ್ಮ ಸಹೋದರನಿಗೆ ಆರತಿಯನ್ನು ಮಾಡುತ್ತಾರೆ, ಆದ್ದರಿಂದ ದೀಪವನ್ನು ಇರಿಸಿ. ಈ ದಿನ, ತಟ್ಟೆಯಲ್ಲಿ ದೀಪವನ್ನು ಬೆಳಗಿಸುವುದರಿಂದ, ಸಹೋದರ ಮತ್ತು ಸಹೋದರಿಯರ ಪ್ರೀತಿ ಸಂಪೂರ್ಣವಾಗಿ ಶುದ್ಧವಾಗಿರುತ್ತದೆ.
ಸಿಹಿ
ಸಿಹಿ ಇಲ್ಲದೆ ರಾಖಿ ತಟ್ಟೆ ಅಪೂರ್ಣ. ನಂಬಿಕೆಗಳ ಪ್ರಕಾರ, ಈ ದಿನ ಸಹೋದರನ ಬಾಯಿಯನ್ನು ಸಿಹಿಗೊಳಿಸುವುದು ಸಂಬಂಧದಲ್ಲಿ ಮಾಧುರ್ಯವನ್ನು ಇಡುತ್ತದೆ. ಹಾಗಾಗಿ, ರಾಖಿ ಕಟ್ಟಿದ ಬಳಿಕ ಸೋದರನಿಗೆ ತಿನ್ನಿಸಲು ಸಿಹಿ ಇಟ್ಟುಕೊಳ್ಳಿ.