ಒಂದೆಡೆ ಪ್ರವಾಹ ಮತ್ತೊಂದೆಡೆ ಬರ: ಮಳೆಗಾಗಿ ಕಪ್ಪೆಗಳಿಗೆ ಮದ್ವೆ
ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಮಳೆಗಾಗಿ ಊರಿನವರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ಜುಲೈ 19 ರಂದು ಈ ಮದುವೆ ನಡೆದಿದೆ.
ದೇಶದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಳೆ ಸುರಿದು ಅವಾಂತರವೇ ಸೃಷ್ಟಿಯಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ವಾಡಿಕೆಯಾಗಿ ಬೀಳಬೇಕಾದ ಮಳೆ ಬಾರದೇ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮಳೆಗಾಗಿ ಕತ್ತೆಗಳಿಗೆ ಗಂಡು ಗಂಡಿಗೆ ಮದುವೆ ಮಾಡುವುದು ಹಳ್ಳಿಯ ಭಾಗಗಳಲ್ಲಿ ರೂಢಿಯಲ್ಲಿದೆ. ಹಾಗೆಯೇ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಮಳೆಗಾಗಿ ಊರಿನವರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ಜುಲೈ 19 ರಂದು ಈ ಮದುವೆ ನಡೆದಿದೆ.
ರಾಧಾಕಾಂತ್ ವರ್ಮಾ ಎಂಬುವವರು ಈ ಮದುವೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಮಳೆ ತೀವ್ರ ವಿಳಂಬವಾದ ಹಿನ್ನೆಲೆ ರೈತರು ಭತ್ತ ಬಿತ್ತನೆ ಮಾಡಲು, ಕೃಷಿ ಕಾರ್ಯಗಳಲ್ಲಿ ತೊಡಗಲು ವಿಳಂಬವಾಗುತ್ತಿದೆ. ಕಪ್ಪೆಗಳಿಗೆ ಮದ್ವೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ ಈ ಕಾರಣಕ್ಕೆ ಕಪ್ಪೆಗಳಿಗೆ ಮದುವೆ ಮಾಡಿದ್ದಾಗಿ ಅವರು ಹೇಳಿದ್ದಾರೆ.
ಮದುವೆಯ ಸಂದರ್ಭದಲ್ಲಿ ಮಳೆಯಾಗುವಂತೆ ನಾವು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಸದ್ಯದಲ್ಲೇ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಮಾಮೂಲಿ ಮದುವೆಯಂತೆ ಈ ಮದುವೆಗೆ ಸಾಕಷ್ಟು ಜನ ಬಂದಿದ್ದರು. ಹಲವು ಮಂತ್ರ ಘೋಷಗಳೊಂದಿಗೆ ಈ ಮದುವೆ ನಡೆದಿದೆ. ಅಲ್ಲದೇ ಇಡೀ ಊರಿನ ಜನಕ್ಕೆ ಊಟ ಹಾಕಲಾಗಿತ್ತು.
ಮಳೆಗಾಗಿ ಮಕ್ಕಳಿಗೆ ಮದುವೆ
ರಾಜ್ಯದಲ್ಲೂ ಕೆಲ ಭಾಗಗಳಲ್ಲಿ ಇಡೀ ಧರೆಯೇ ಮಳೆಗೆ ಮೆತ್ತಗಾಗಿ ಬಾಯ್ಬಿಡುವಂತೆ ಮಳೆ ಸುರಿಯುತ್ತಿದೆ. ಕೆಲ ಪ್ರದೇಶಗಳಲ್ಲಿ ಮಳೆಯ ಆರ್ಭಟಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. ಮನೆ ಧರಾಶಾಯಿಯಾಗಿದೆ. ಆದರೆ ವಿಜಯಪುರ ಭಾಗದಲ್ಲಿ ಮಳೆಯ ಸುಳಿವೇ ಇಲ್ಲ. ಹೀಗಾಗಿ ಈ ಭಾಗದಲ್ಲಿ ವರುಣನ ಸಂತುಷ್ಟಗೊಳಿಸಲು ಜನ ಇಬ್ಬರು ಹೆಣ್ಣು ಮಕ್ಕಳಿಗೆ ಪರಸ್ಪರ ಮದುವೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ನಾಲ್ವತವಾಡ ಪಟ್ಟಣದಲ್ಲಿ ಮಕ್ಕಳಿಗೆ ಮದುವೆ ಮಾಡಿಸಲಾಗಿದೆ. ಇಬ್ಬರು ಪುಟಾಣಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.
ನಾಲ್ವವತವಾಡದ ಹಟ್ಟಿ ಓಣಿಯಲ್ಲಿ ಪ್ರತಿವರ್ಷ ಕಾರಹುಣ್ಣಿಮೆಯ ಮರುದಿನ ಸಸಿ ಹಬ್ಬ ಮಾಡುವ ಪದ್ದತಿ ಇದೆ. ಪ್ರತಿ ವರ್ಷ ನಡೆಯೋ ಈ ಸಸಿ ಹಬ್ಬದಲ್ಲಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನ ಮಹಿಳೆಯರು ಮಾಡ್ತಾರೆ. ಈ ಬಾರಿ ಮುಂಗಾರು ಶುರುವಾದ್ರು ಮಳೆಯ ಆಗಮನ ಆಗದೇ ಇರೋದ್ರಿಂದ ಹೆಣ್ಣು ಮಕ್ಕಳಿಬ್ಬರಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಮಳೆಯರು ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಮಾಡೋದ್ರಿಂದ ಮಳೆರಾಯನ ದೃಷ್ಟಿ ಬೀಳುತ್ತೆ ಎನ್ನುವ ನಂಬಿಕೆ ಇದೆ.
ಇನ್ನು ಸಸಿ ಹಬ್ಬದಂತು ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಮಹಿಳೆಯರು ತಮ್ಮ ಪ್ರದೇಶದ ಇಬ್ಬರು ಹೆಣ್ಣು ಮಕ್ಕಳನ್ನ ಸಿಂಗರಿಸುತ್ತಾರೆ. ಒಂದು ಹೆಣ್ಣು ಮಗಳನ್ನ ಗಂಡಾಗಿ ಇನ್ನೊಂದು ಹೆಣ್ಣು ಮಗುವನ್ನ ಹೆಣ್ಣಾಗಿ ಸಿಂಗರಿಸುತ್ತಾರೆ. ಬಳಿಕ ಪದ್ದತಿಯಂತೆ ಪೂಜೆ ಪುನಸ್ಕಾರಗಳನ್ನ ಮಾಡ್ತಾರೆ. ಅಸಲಿ ಮದುವೆಗಳು ನಡೆಯುವಂತೆಯೇ ಪದ್ದತಿಗಳನ್ನ ಅನುಸರಿಸಲಾಗುತ್ತದೆ. ಇಬ್ಬರು ಪರಸ್ಪರ ಹೂವುಗಳನ್ನ ಬದಲಾಯಿಸಿಕೊಳ್ತಾರೆ. ತಾಳಿ ಕಟ್ಟಿಸುವ ಮೂಲಕ ಮದುವೆಯನ್ನ ಪೂರ್ಣಗೊಳಿಸಲಾಗುತ್ತೆ. ಇದು ಮೊದಲಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.
ಮಳೆಗಾಗಿ ಗ್ರಾಮೀಣ ಭಾಗಗಳಲ್ಲಿ ನಡೆಸಲಾಗುವ ಕಪ್ಪೆ ಮದುವೆ, ಕತ್ತೆ ಮದುವೆಗಳಂತೆ ಮಳೆಗಾಗಿ ನಡೆಯೊ ಮಕ್ಕಳ ಮದುವೆ ಇದು. ಹೀಗೆ ಮಾಡಿದ್ರೆ ಮಳೆಯಾಗುತ್ತೆ ಎನ್ನುವ ನಂಬಿಕೆಯನ್ನ ಹಿರಿಯರು ಇಟ್ಟುಕೊಂಡಿದ್ದಾರೆ. ಕತ್ತೆ ಮದುವೆಯಲ್ಲಿ ಗಂಡು-ಹೆಣ್ಣು ಕತ್ತೆಗಳನ್ನ ತಂದು ಶಾಸ್ತ್ರೋಕ್ತವಾಗಿ ಮೆರವಣಿಗೆ ಮಾಡಿ ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಸೇರಿ ಮದುವೆ ಮಾಡ್ತಾರೆ. ಬಳಿಕ ಭೋಜನದ ವ್ಯವಸ್ಥೆಯನ್ನು ಮಾಡಿರ್ತಾರೆ. ಕಪ್ಪೆಗಳ ಮದುವೆ ಕೂಡ ಇದೆ ರೀತಿ ನಡೆಯುತ್ತೆ. ಈ ಪದ್ದತಿಗಳಂತೆಯೆ ಮಕ್ಕಳ ಮದುವೆಯನ್ನ ಮಾಡುವ ಪದ್ದತಿಯು ಹಲವೆಡೆ ರೂಢಿಯಲ್ಲಿದೆ.