ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು...

By Suvarna News  |  First Published Aug 20, 2020, 4:38 PM IST

ಮಕ್ಕಳಿಂದ ಹಿಡಿದು ಮುದುಕರವರೆಗೆ ಅವನೆಂದರೆ ಎಲ್ಲರಿಗೂ ಇಷ್ಟ. ಎಷ್ಟು ತುಂಟನೋ, ಅಷ್ಟೇ ಜಾಣ. ಎಲ್ಲರ ಮನೆಯ ಮೊದಲ ಪೂಜೆ ಇವನಿಗೇ. ಇಂಥ ಗಣೇಶನ ಕುರಿತ ಹಲವಾರು ಕತೆಗಳು, ವಿಚಾರಗಳು ಇಲ್ಲಿವೆ. 


ವಕ್ರತುಂಡ, ಮಹಾಕಾಯ, ತಿಂಡಿಪೋತ, ತರ್ಲೆ ತುಂಟ, ಜಾಣರ ಜಾಣ, ಬುದ್ದಿಗೆ ಒಡೆಯ, ಸಿದ್ದಿ ಪ್ರದಾಯಕ- ಮುದ್ದು ಮುದ್ದಾದ ಗಣಪತಿಯೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆತ ಮನೆಗೆ ಬರ್ತಾನೆಂದು ಈಗಾಗಲೇ ಎಲ್ಲರೂ ಚಕ್ಕುಲಿ, ಕೋಡುಬಳೆ, ಮೋದಕ ತಯಾರಿಯಲ್ಲಿರುತ್ತೀರಿ. ಮನೆ ಸ್ವಚ್ಛತೆಯೂ ಆಗಿರಬೇಕಲ್ಲ? ಸ್ವಲ್ಪ ಸಮಯ ಮಾಡಿಕೊಂಡು ಗಣಪತಿ ಕುರಿತ ಈ ಕತೆಗಳನ್ನು ಓದಿ, ಪೂರ್ಣ ಮನಸ್ಸಿನಿಂದ ಪೂಜೆ ಮಾಡಿ. 

ಏಕದಂತ
ಗಣಪನ ಆನೆ ತಲೆಯ ಹಿಂದಿನ ಕತೆ ನಿಮಗೆಲ್ಲ ತಿಳಿದಿದೆ. ಆದರೆ, ಆತನ ಒಂದು ದಂತ ಮುರಿದು ಆತ ಏಕದಂತನಾದ ಕತೆ ಗೊತ್ತಿರುವವರು ಅಪರೂಪ. ಬ್ರಹ್ಮಾವರ್ತ ಪುರಾಣದ ಪ್ರಕಾರ, ಪರಶುರಾಮನು ಒಮ್ಮೆ ಕೈಲಾಸಕ್ಕೆ ಶಿವನನ್ನು ಭೇಟಿಯಾಗಲು ಹೋದನು. ಈ ಸಂದರ್ಭದಲ್ಲಿ ಶಿವ ಧ್ಯಾನಸ್ಥನಾಗಿದ್ದನು. ಹಾಗಾಗಿ ಗಣೇಶನು ಪರಶುರಾಮನಿಗೆ ತಂದೆಯ ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಪರಶುರಾಮ ಶಿವನ ವರಪ್ರಸಾದವಾದ ತನ್ನ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದ. ತಂದೆಯ ವರವಾದ ಕೊಡಲಿಯಾಗಿದ್ದರಿಂದ ಗೌರವ ಕೊಡುವ ಸಲುವಾಗಿ ಗಣೇಶನು ಏಟಿಗೆ ತನ್ನ ದಂತವನ್ನು ಅಡ್ಡ ನೀಡಿದ. ಇದರಿಂದ ಆತನ ಒಂದು ದಂತ ಮುರಿಯಿತು. 

ಪಂಚಾಂಗ: ಭಾದ್ರಪದ ಮಾಸದಲ್ಲಿ ಈ 4 ದ್ರವ್ಯಗಳನ್ನು ದಾನ ಮಾಡಿದರೆ ಸಂಪತ್ತು ಸಮೃದ್ಧವಾಗಿರತ್ತೆ!

Latest Videos

undefined

ಮಹಾಭಾರತ ಲಿಪಿಕಾರ
ಗಣೇಶನು ಮಹಾಭಾರತದ ಮೂಲ ಬರಹಗಾರ. ವ್ಯಾಸರು ಮಹಾಭಾರತವನ್ನು ಅರ್ಥ ಮಾಡಿಕೊಂಡು ಬರೆಯತಕ್ಕವನು ಗಣಪತಿಯೇ ಎಂದು, ಮಧ್ಯೆ ಏಳದೆ ಬರೆದುಕೊಡುವಂತೆ ಆತನಲ್ಲಿ ಕೇಳುತ್ತಾರೆ. ಹೀಗೆ ವ್ಯಾಸ ಮಹರ್ಷಿಗಳು ಹೇಳುತ್ತಾ ಹೋದಂತೆ ಗಣಪತಿ ಹಕ್ಕಿ ಪುಕ್ಕದಲ್ಲಿ ಬರೆಯುತ್ತಾ ಹೋಗುತ್ತಾನೆ. ಕಡೆಗೆ ಪುಕ್ಕ ಮುರಿದ ಬಳಿಕ ತನ್ನ ದಂತವನ್ನೇ ಬಳಸಿ ಬರೆಯುತ್ತಾನೆ. 

ವಿವಾಹ?
ದಕ್ಷಿಣ ಭಾರತದಲ್ಲಿ ಗಣಪತಿ ಬ್ರಹ್ಮಚಾರಿ ಎಂಬ ನಂಬಿಕೆಯಿದೆ. ಉಳಿದಂತೆ, ಗಣಪತಿಯು ರಿದ್ದಿ(ಸಂಪತ್ತಿನ ಅಧಿದೇವತೆ) ಹಾಗೂ ಸಿದ್ದಿ(ಜ್ಞಾನದ ಅಧಿದೇವತೆ)ಯನ್ನು ವಿವಾಹವಾಗಿದ್ದ. ಅವರಿಗೆ ಶುಭ ಹಾಗೂ ಲಾಭ ಎಂಬ ಮಕ್ಕಳಿದ್ದಾರೆ ಎಂಬ ನಂಬಿಕೆಯಿದೆ. 

ಗಣೇಶ ಮತ್ತು ತುಳಸಿ
ಗಣೇಶನು ಗಂಗೆಯ ತಟದಲ್ಲಿ ಧ್ಯಾನಮಗ್ನನಾಗಿದ್ದಾಗ ಆತನನ್ನು ನೋಡಿದ ತುಳಸಿಗೆ ಅವನ ಮೇಲೆ ಮನಸ್ಸಾಗುತ್ತದೆ. ಆಕೆ ಗಣೇಶನ ಬಳಿ ಹೋಗಿ ತನ್ನನ್ನು ವಿವಾಹವಾಗುವಂತೆ ಕೋರುತ್ತಾಳೆ. ಆದರೆ, ಗಣೇಶ ತಾನು ಬ್ರಹ್ಮಚಾರಿಯಾಗಿರಲು ಬಯಸುವುದಾಗಿ ಹೇಳುತ್ತಾನೆ. ಇದರಿಂದ ಅವಮಾನಿತಳಾದ ತುಳಸಿ ಆತನಿಗೆ ಸಧ್ಯದಲ್ಲೇ ವಿವಾಹವಾಗುವಂತೆ ಶಾಪ ನೀಡುತ್ತಾಳೆ. ಅದಕ್ಕೆ ಗಣೇಶನು ಸಸ್ಯವಾಗಿಯೇ ಇರುವಂತೆ ತುಳಸಿಗೆ ಪ್ರತಿಶಾಪ ನೀಡುತ್ತಾನೆ. 

ಹುಟ್ಟಿನ ಗುಟ್ಟು
ಪುರಾಣಗಳ ಪ್ರಕಾರ, ಗಂಡುಮಗುವನ್ನು ಬೇಡಿ ಪಾರ್ವತಿಯು ಉಪವಾಸ ಕೂರುತ್ತಾಳೆ. ಇದರ ಫಲವಾಗಿ ಕೃಷ್ಣನ ಪುನರ್ಜನ್ಮವಾಗಿ ಗಣೇಶ ಹುಟ್ಟುತ್ತಾನೆ. ಮತ್ತೊಂದು ಕತೆಯಂತೆ ನಂದಿಯು ಶಿವನಿಗೆ ಪ್ರಾಮಾಣಿಕವಾಗಿದ್ದಂತೆ ತನ್ನ ಜೊತೆಗಿರುವವನೊಬ್ಬ ಬೇಕೆಂದು ತನ್ನದೇ ಬೆವರಿನಲ್ಲಿ ಪಾರ್ವತಿಯು ಗಣೇಶನನ್ನು ಸೃಷ್ಟಿಸುತ್ತಾಳೆ. 

ಇಂದು ಬೆನಕನ ಅಮಾವಾಸ್ಯೆ: ಗಣಪತಿ ಆರಾಧನೆಯಿಂದ ಶುಭಫಲ

ಗಣಪನ ಕೋಪ
ಗಣೇಶನಿಗೆ ಕೋಪ ಬರುತ್ತದೆಂದು ನಂಬಲು ಕಷ್ಟವಾಗಬಹುದು. ಆದರೆ ಒಮ್ಮೆ ಚಂದ್ರನು ಗಣಪತಿಯ ದೊಡ್ಡ ಹೊಟ್ಟೆಯನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕನು. ಇದರಿಂದ ಸಿಟ್ಟಿಗೆದ್ದ ಗಣೇಶನು ಚಂದ್ರನಿಗೆ, ಗಣೇಶ ಚತುರ್ಥಿಯಂದು ಯಾರೇ ಚಂದ್ರನನ್ನು ನೋಡಿದರೂ ಅವರಿಗೂ ಸುಳ್ಳು ಅಪವಾದಗಳು ಸುತ್ತಿಕೊಳ್ಳಲಿ ಎಂದು ಶಾಪ ನೀಡಿದನು. ಹಾಗಾಗಿಯೇ ಗಣೇಶ ಹಬ್ಬದಂದು ಯಾರೂ ಚಂದ್ರನನ್ನು ನೋಡುವುದಿಲ್ಲ. 

ಬಾಳೆಹಣ್ಣಿನ ವಧು
ಈ ಕತೆ ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿದೆ. ಅದರಂತೆ ಒಮ್ಮೆ ದುರ್ಗಾತಾಯಿ ಗಣೇಶನ ಬಳಿ ಮಾತನಾಡುವಾಗ, ನಿನ್ನ ಪತ್ನಿ ನಿನಗೆ ಹೊಟ್ಟೆ ತುಂಬಾ ತಿನ್ನಲು ಕೊಡದಿದ್ದರೆ ಏನು ಮಾಡುವುದು ಎಂದು ಚಿಂತಿತಳಾಗಿ ಕೇಳಿದಳು. ಆಗ ಗಣಪತಿಯು ಬಾಳೆಮರವನ್ನೇ ಕಡಿದು ತಂದು ಇದೇ ನಿನ್ನ ಸೊಸೆ ಎಂದನಂತೆ. ಈಗಲೂ ಕೂಡಾ ದುರ್ಗಾಪೂಜೆಯಲ್ಲಿ ಬಾಳೆಗಿಡಕ್ಕೆ ಸೀರೆ ಉಡಿಸಿ ಸಿಂಗಾರ ಮಾಡಿ, ಗಣೇಶನ ಬಲಬದಿಗೆ ನಿಲ್ಲಿಸಿ ಪೂಜಿಸಲಾಗುತ್ತದೆ. 

ಬೌದ್ಧರಿಂದಲೂ ಪೂಜಿತ
ಗಣಪತಿಯನ್ನು ಕೇವಲ ಹಿಂದೂಗಳು ಪೂಜಿಸುವುದಲ್ಲ. ಬೌದ್ಧರೂ ವಿನಾಯಕನ ಹೆಸರಿನಲ್ಲಿ ಪೂಜಿಸುತ್ತಾರೆ. ಟಿಬೆಟ್, ಚೀನಾ, ಜಪಾನ್‌ಗಳಲ್ಲಿ ಬೌದ್ಧರು  ಗಣೇಶನ ಪೂಜೆ ಮಾಡುತ್ತಾರೆ.

click me!