ಕೊರೋನಾದಿಂದ ಮನುಷ್ಯನನ್ನು ರಕ್ಷಿಸಲು ಮತ್ತೊಮ್ಮೆ ಕೂರ್ಮಾವತಾರ ತಾಳಿದನೇ ವಿಷ್ಣು?

By Suvarna NewsFirst Published Aug 20, 2020, 4:08 PM IST
Highlights

ನಮ್ಮ ಪುರಾಣಗಳಲ್ಲಿ ಕೂರ್ಮಾವತಾರ ತಾಳಿದ ಮಹಾವಿಷ್ಣುವಿನ ಕತೆ ಪ್ರಸಿದ್ಧ. ಈಗ ನೇಪಾಳದಲ್ಲಿ ಚಿನ್ನದ ಬಣ್ಣದ ಚಿಪ್ಪು ಹೊಂದಿರುವ ಆಮೆಯೊಂದು ಎಲ್ಲರಿಂದ ಕೂರ್ಮಾವತಾರ ಎಂದು ಕರೆಸಿಕೊಳ್ಳುತ್ತಿದೆ.

ನೇಪಾಳದ ಧನುಶಾ ಜಿಲ್ಲೆಯ ಧನುಷಧಾಮ್‌ ಎಂಬಲ್ಲಿ ವಿಚಿತ್ರವಾದ ಆಮೆಯೊಂದು ಪತ್ತೆಯಾಗಿದೆ. ಇದರ ಮೈಬಣ್ಣ ಪೂರ್ತಿಯಾಗಿ ಚಿನ್ನದ ಕಲರ್‌ನಲ್ಲಿದೆ. ಇದರ ಮೈಮೇಲಿನ ಚಿಪ್ಪು ಕೂಡ ಚಿನ್ನದ ಹಲಗೆಯಂತೆ ಹೊಳೆಯುತ್ತಿದೆ. ಸಾಮಾನ್ಯವಾಗಿ ಆಮೆಗಳು ಕಪ್ಪು ಮಿಶ್ರಿತ ಕಂದು ಇರುವುದು ವಾಡಿಕೆ. ಬಂಗಾರದ ವರ್ಣದ ಆಮೆಗಳು ಇಲ್ಲವೇ ಇಲ್ಲ ಎನ್ನಬಹುದು. ಅಂಥದ್ದರಲ್ಲಿ ಈ ಆಮೆಯ ವಿಶಿಷ್ಟ ಸ್ವರೂಪ ಅದಕ್ಕೆ ಭಾರಿ ಅಭಿಮಾನಿಗಳನ್ನೂ ದೊಡ್ಡ ಸಂಖ್ಯೆಯ ಭಕ್ತರನ್ನೂ ತಂದುಕೊಟ್ಟಿದೆ. ಜನ ಅದನ್ನು ಮಹಾವಿಷ್ಣುವಿನ ಎರಡನೇ ಅವತಾರವಾದ ಕೂರ್ಮ ಮತ್ತೊಮ್ಮೆ ಅವತಾರವೆತ್ತಿ ಬಂದಿದ್ದಾನೆಂದೇ ಭಾವಿಸಲು ಶುರು ಮಾಡಿದ್ದಾರೆ. ಹಿಂದೆ ಲೋಕವನ್ನು ಉಳಿಸಲು ಮಹಾವಿಷ್ಣು ಕೂರ್ಮಾವತಾರ ಎತ್ತಿ ಭೂಮಿಗೆ ಬಂದಿದ್ದ. ಈಗಲೂ ಕೊರೊನಾ ಮುಂತಾದ ಮಹಾಮಾರಿಗಳಿಂದ ಭಕ್ತರನ್ನು ಕಾಪಾಡಲು ಕೂರ್ಮಾವತಾರ ತಾಳಿದ್ದಾನೆ ಎಂದು ಹೇಳಲಾಗುತ್ತಿದೆ.

ನೇಪಾಳಿಗರಲ್ಲಿ ಬಹುಸಂಖ್ಯಾತರು ಹಿಂದೂಗಳೇ ಆಗಿರುವುದರಿಂದ, ಮಹಾವಿಷ್ಣುವಿನ ದೇವಾಲಯಗಳು ನೇಪಾಳದಲ್ಲಿ ಸಾಕಷ್ಟಿವೆ. ಮಹಾವಿಷ್ಣುವಿನ ಅವತಾರಗಳನ್ನೂ ಅಲ್ಲಿನವರು ನಂಬುತ್ತಾರೆ. ಪುರಾಣಗಳ ಪ್ರಕಾರ, ಹಿಂದೊಮ್ಮೆ ದೇವರಾಜ ಇಂದ್ರನ ಅಹಂನಿಂದ ಸಿಟ್ಟಿಗೆದ್ದ ದುರ್ವಾಸ ಮುನಿ, ಆತನ ಐಶ್ವರ್ಯವೆಲ್ಲ ಮುಳುಗಿ ಹೋಗಲಿ ಎಂದು ಶಪಿಸುತ್ತಾನೆ. ಹಾಗೆ ಅವೆಲ್ಲ ಸಮುದ್ರದಲ್ಲಿ ಮುಳುಗಿಹೋಗುತ್ತವೆ. ಅವುಗಳನ್ನು ಹೊರತೆಗೆಯಲು ತ್ರಿಮೂರ್ತಿಗಳ ಸೂಚನೆಯಂತೆ, ಸುರಾಸುರರು ಸೇರಿ ಸಮುದ್ರ ಮಥನ ಮಾಡುತ್ತಾರೆ. ಮಂದರ ಪರ್ವತವನ್ನೇ ಕಡೆಗೋಲನ್ನಾಗಿ ಮಾಡಿ, ವಾಸುಕಿಯನ್ನು ಹಗ್ಗವನ್ನಾಗಿ ಮಾಡಿ, ಕಡೆಯಲು ಆರಂಭಿಸುತ್ತಾರೆ. ಆದರೆ ಪರ್ವತವು ಮುಳಗತೊಡಗುತ್ತದೆ. ಆಗ ಮಹಾವಿಷ್ಣುವು ಕೂರ್ಮಾವತಾರ ತಾಳಿ, ಮಂದರ ಪರ್ವತವನ್ನು ಎತ್ತಿ ಹಿಡಿದು ಸಮುದ್ರ ಕಡೆಯಲು ಸಹಕರಿಸುತ್ತಾನೆ.

ವಿಜ್ಞಾನಿಗಳ ಪ್ರಕಾರ, ಇದು ಆಮೆಯ ಮೈ ಚರ್ಮದ ಬಣ್ಣದಲ್ಲಿ ಆಗಿರುವ ಒಂದು ರಾಸಾಯನಿಕ ಮಾರ್ಪಾಡು. ಉರಗತಜ್ಞ ಕಮಲ್‌ ದೇವಕೋಟ ಎಂಬವರು ಹೇಳುವ ಪ್ರಕಾರ, ಇದು ಕ್ರೊಮ್ಯಾಟಿಕ್‌ ಲ್ಯೂಸಿಸಂ ಎಂಬ ರಾಸಾಯನಿಕ ಪ್ರಕ್ರಿಯೆ. ಇದು ಪ್ರಾಣಿಗಳು ಹಾಗೂ  ಮನುಷ್ಯರಲ್ಲಿ ಚರ್ಮ ತನ್ನ ಮೂಲಬಣ್ಣವನ್ನು ಬಿಟ್ಟು ಬೇರೆ ಬಣ್ಣ ತಾಳುವಂತೆ ಮಾಡುತ್ತದೆ. ನೇಪಾಳದಲ್ಲಿ ಇದು ಮೊದಲ ಬಾರಿ; ಪ್ರಪಂಚದಲ್ಲಿ ಇಂಥ ಐದು ಆಮೆಗಳು ಇದುವರೆಗೆ ಪತ್ತೆಯಾಗಿವೆಯಷ್ಟೆ. ಇದಕ್ಕೆ ಜೆನೆಟಿಕ್‌ ಕಾರಣಗಳು ಕಾರಣವಿರಬಹುದು; ಅಥವಾ ಪ್ರಕೃತಿಯ ಸತತ ನೆಗೆಟಿವ್‌ ಶಕ್ತಿಯಿಂದಾಗಿಯೂ ಹೀಗಾಬಹುದಂತೆ.

ಶಿಲ್ಪಾ ಶೆಟ್ಟಿ ಕೈಯಲ್ಲಿ ಎರಡು ವಾಚು ಯಾಕೆ? 

ಕೂರ್ಮ ದೇವಾಲಯಗಳು
ಆಮೆಯನ್ನು ಕೂರ್ಮಾವತಾರ ಎಂದು ಪೂಜಿಸುವ ದೇವಾಲಯಗಳು ಭಾರತದಲ್ಲಿವೆ. ಅದರಲ್ಲಿ ಒಂದು ನಮ್ಮ ಕರ್ನಾಟಕದಲ್ಲೇ ಇದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬಳಿಯಿರುವ ಗವಿ ರಂಗಾಪುರದ ಗವಿ ರಂಗನಾಥಸ್ವಾಮಿಯ ದೇವಾಲಯ ಪ್ರಸಿದ್ಧ. ಗವಿಯೊಂದರಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯು ಕೂರ್ಮಾವತಾರದಲ್ಲಿರುವುದು ವಿಶೇಷ. ಹಾಗಾಗಿ ಇದೊಂದು ಪ್ರಸಿದ್ಧ ಕೂರ್ಮ ದೇವಾಲಯ.

ಕೃಷ್ಣನ ಆ'ರಾಧ'ನೆಯಲ್ಲೇ ದೈವತ್ವಕ್ಕೇರಿದಳು ರಾಧೆ...

ಇನ್ನೆರಡು ಕೂರ್ಮ ದೇವಾಲಯಗಳು ಆಂಧ್ರಪ್ರದೇಶದಲ್ಲಿವೆ. ಒಂದು ಶ್ರೀಕಾಕುಲಂ ಜಿಲ್ಲೆಯ ಗಾರಮಂಡಲದಲ್ಲಿರುವ ಶ್ರೀಕೂರ್ಮಂ ಎಂಬ ಗ್ರಾಮದ ಬಲು ಪ್ರಸಿದ್ಧ ಹಾಗೂ ಸಾಕಷ್ಟು ಪುರಾತನವಾದ ಅದ್ಭುತ ದೇವಾಲಯ. ಶ್ರೀಕಾಕುಲಂ ಪಟ್ಟಣದಿಂದ ಹದಿನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿದೆ. ಇದರ ಕಾಲಮಾನ ಸುಮಾರು ಹನ್ನೆರಡನೇಯ ಶತಮಾನ. ಶ್ರೀ ರಾಮಾನುಜಾಚಾರ್ಯರು ಪುರಿಯ ಜಗನ್ನಾಥನಿಂದ ಪ್ರಭಾವಿತರಾಗಿ ಇಲ್ಲಿ ಕೂರ್ಮಕ್ಷೇತ್ರವನ್ನು ಮತ್ತೆ ಪ್ರವರ್ಧಮಾನಕ್ಕೆ ಕರೆತಂದರು ಎನ್ನಲಾಗುತ್ತದೆ. ಶ್ರೀ ಕೂರ್ಮಂ ದೇವಾಲಯದಲ್ಲಿ ವಿಷ್ಣುವಿನನ್ನು ಕೂರ್ಮನಾಥನನ್ನಾಗಿ ಪೂಜಿಸಲಾಗುತ್ತದೆ. ಇನ್ನೊಂದು ದೇವಾಲಯ ಆಂಧ್ರದ ಚಿತ್ತೂರು ಜಿಲ್ಲೆಯ ಪಲಮನೇರ ಮಂಡಲದಲ್ಲಿರುವ ಕೂರ್ಮಾಯಿ ಅಥವಾ ಕೂರ್ಮೈ ಗ್ರಾಮದ ಕೂರ್ಮನಾಥನ ದೇವಾಲಯ. ಇಲ್ಲಿರುವ ವಿಷ್ಣುವನ್ನು ಕೂರ್ಮ ವರದರಾಜ ಸ್ವಾಮಿ ಎಂದು ಆರಾಧಿಸಲಾಗುತ್ತದೆ. 

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ! 

click me!