ಮುದ್ದು ಮಗುವಿನ ಮೇಲೆ ಕೆಟ್ಟ ಕಣ್‌ದೃಷ್ಟಿ ತಾಕಿದರೆ ಹೀಗೆ ಮಾಡಿ ...

By Suvarna News  |  First Published Aug 19, 2020, 7:06 PM IST

ಹಿಂದೂ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳಿವೆ. ಅಂತಹ ಆಚರಣೆಗಳಲ್ಲಿ ದೃಷ್ಟಿ ತೆಗೆಯುವುದು ಸಹ ಒಂದು. ಪುಟ್ಟ ಮಗುವಿಗೆ, ಗರ್ಭಿಣಿಗೆ, ಮಧುಮಗ, ಮಧುಮಗಳಿಗೆ ಮತ್ತು ವ್ಯಾಪಾರ ಅಥವಾ ಉದ್ಯೋಗದಲ್ಲಿ ಅಭಿವೃದ್ಧಿ ಹೊಂದಿದಾಗ ಯಾವುದೇ ಕೆಟ್ಟ ದೃಷ್ಟಿ ತಾಗದಿರಲಿ ಎಂದು ದೃಷ್ಟಿ ನಿವಾಳಿಸಿ ತೆಗೆಯುವುದು ರೂಢಿ. ಇದು ಮೂಢ ನಂಬಿಕೆ ಎಂದು ಮೇಲ್ನೋಟಕ್ಕೆ ಕಂಡರೂ ಇದು ನಿಜವೇ ಆಗಿದೆ. ಯಾರದ್ದಾದರು ಕೆಟ್ಟದೃಷ್ಟಿ ಬಿದ್ದರೆ ಆಗುವ ಕೆಲಸ ಆಗುವುದಿಲ್ಲ, ಆರೋಗ್ಯ ಹಾಳಾಗುವುದು, ಮಗು ಹಾಲುಕುಡಿಯದಿರುವುದು ಹೀಗೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾದಾಗ ದೃಷ್ಟಿ ತೆಗೆಯುವುದರಿಂದ ಸರಿಹೋಗುತ್ತದೆ. ಹಾಗಾದರೆ ಕೆಟ್ಟ ಕಣ್‌ದೃಷ್ಟಿ ಬಿದ್ದಾಗ ಏನಾಗುತ್ತದೆ ಅದಕ್ಕೇನು ಮಾಡಬೇಕು ಎಂಬುದನ್ನು ನೋಡೋಣ..


ಮನೆಯಲ್ಲಿ ನೆಮ್ಮದಿ, ಖುಷಿ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಉನ್ನತಿ ಹೀಗೆ ಎಲ್ಲವೂ ಸರಿಯಾಗಿ ಸಾಗುತ್ತಿರುತ್ತದೆ. ಸ್ವಲ್ಪ ಸಮಯದ ನಂತರ ಎಲ್ಲದಕ್ಕೂ ಅಡೆತಡೆ ಸಣ್ಣಪುಟ್ಟ ಕಿರಿಕಿರಿ ಆರಂಭವಾಗುತ್ತದೆ. ವ್ಯಾಪಾರದಲ್ಲಿ ನಷ್ಟವಾಗುತ್ತದೆ, ಉದ್ಯೋಗದಲ್ಲಿ ತೊಂದರೆ, ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ.ಅಂತ ಸಮಯದಲ್ಲಿ  ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿರಬೇಕು ಎಂದು ಸಾಮಾನ್ಯವಾಗಿ ಮಾತನಾಡಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಬೇರೆಯವರ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದೇ ಅಸೂಯೆ ಪಡುವುದಕ್ಕೆ ಕೆಟ್ಟದೃಷ್ಟಿ ಎಂದು ಹೇಳಬಹುದು. ಯಾರ ಕಣ್ಣು ಬಿದ್ದಿದೆ ಗೊತ್ತಿಲ್ಲ,ಯಾವುದೂ ಕೈ ಹತ್ತುತ್ತಿಲ್ಲ ಎಂದು ಶಪಿಸಿಕೊಳ್ಳುತ್ತಿರುತ್ತಾರೆ. 



ಹೌದು, ಇದು ಮೂಢನಂಬಿಕೆ ಎನಿಸಿದರೂ ಕೆಟ್ಟ ಕಣ್‌ದೃಷ್ಟಿ ಬೀಳುವುದರಿಂದ ಸರಿಯಾಗಿರುವುದು ಹಾಳಾಗುತ್ತದೆ. ಇಂತಹ ದೃಷ್ಟಿ ಉಳ್ಳವರು ಒಂದು ಸುಂದರವಾದ ಹೂವನ್ನು ನೋಡಿ ತುಂಬಾ ಚೆನ್ನಾಗಿದೆ ಎಂದರೆ ಅದು ಸ್ವಲ್ಪ ಸಮಯದ ನಂತರ ಬಾಡಿ ಹೋಗುತ್ತದೆ. ಚೆನ್ನಾಗಿ ಆಟವಾಡಿಕೊಂಡಿದ್ದ ಮಗು ಇದ್ದಕ್ಕಿದ್ದಂತೆ ಹಠ ಹಿಡಿಯುತ್ತದೆ, ಅಳುತ್ತದೆ, ಹುಷಾರು ತಪ್ಪುತ್ತದೆ ಇದಕ್ಕೆಲ್ಲಾ ಕಾರಣ ದೃಷ್ಟಿ ದೋಷವೂ ಇರಬಹುದು. ಮಗುವನ್ನು ನೋಡಿ ಮುದ್ದಾಗಿದೆ ಎಂದು ಹೇಳಿ ಹೋದವರ ದೃಷ್ಟಿ ಸರಿಯಿಲ್ಲದೆಯೂ ಇರಬಹುದು.ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಪೂಜಿಸಿ, ಮಂತ್ರಿಸಿದ ತಾಯತ ಅಥವಾ ಯಂತ್ರಗಳನ್ನು ಕಟ್ಟುವುದು ವಾಡಿಕೆ. ಗರ್ಭವತಿಯರಿಗೂ ಕೆಟ್ಟದೃಷ್ಟಿ ತಾಗುತ್ತದೆ, ಇದಕ್ಕೆ ಉಪ್ಪು ಸಾಸಿವೆ, ಮೆಣಸಿಕಾಯಿ ನಿವಾಳಿಸಿ ತೆಗೆಯಬೇಕು. ದೃಷ್ಟಿ ದೋಷ ಮತ್ತು ಅದಕ್ಕೆ ಮಾಡಬೇಕಾದ ಉಪಾಯಗಳ ಬಗ್ಗೆ ನೋಡೋಣ.

ಇದನ್ನು ಓದಿ: ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿದರೆ ಅದೃಷ್ಟ ಬರುತ್ತೆ…! 

ವ್ಯಾಪಾರದಲ್ಲಿ ನಷ್ಟ
ವ್ಯಾಪಾರದಲ್ಲಿ ಉತ್ತಮ ಲಾಭ ಬರುತ್ತಿರುತ್ತಿರುತ್ತದೆ. ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಇದ್ದಕ್ಕಿದ್ದಂತೆ ಮಂದವಾಗುತ್ತದೆ. ಹೇಳಿಕೊಳ್ಳುವಷ್ಟು ವ್ಯಾಪಾರವೂ ಇಲ್ಲ, ಲಾಭವಂತೂ ಇಲ್ಲವೇ ಇಲ್ಲ. ಹೀಗಾಗಲು ಕಾರಣವೆನೆಂದು ಯೋಚಿಸಿ ಸುಸ್ತಾಗಿರುತ್ತೀರ. ಇದಕ್ಕೆ ದೃಷ್ಟಿ ದೋಷವು ಕಾರಣವಾಗಿರಬಹುದು. ಯಾರದ್ದಾದರು ಕೆಟ್ಟ ಕಣ್ಣು ನಿಮ್ಮ ವ್ಯಾಪಾರದ ಮೇಲೆ ಬಿದ್ದಿರಬಹುದು. ಹೀಗಾದಾಗ ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣು ಮತ್ತು ಮೆಣಸಿಕಾಯಿಯನ್ನು ಕಟ್ಟಬೇಕು. ಪ್ಲಾಸ್ಟಿಕ್‌ನ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಬಳಸುವುದು ಒಳ್ಳೆಯದಲ್ಲ.

ಮಗುವಿಗೆ ದೃಷ್ಟಿಯಾಗುವುದು
ಚಿಕ್ಕ ಮಕ್ಕಳಿಗೆ, ಒಂದು ವರ್ಷದೊಳಗಿನ ಮಗುವಿಗೆ ದೃಷ್ಟಿಯಾಗುವುದು ಬೇಗ. ಹೀಗಾದಾಗ ಹಾಲು ಕುಡಿಯುವುದಿಲ್ಲ, ಹಠ ಮಾಡುವುದು, ಜೋರಾಗಿ ಅಳುವುದು ಹೀಗೆ ಅನೇಕ ರೀತಿಯಲ್ಲಿ ಸಮಸ್ಯೆಗಳುಂಟಾಗುತ್ತವೆ. ಹೀಗಾದಾಗ ಉಪ್ಪು,ಸಾಸಿವೆ ನಿವಾಳಿಸಿ ಹಾಕಬೇಕು. ಪೂಜಿಸಿ, ಮಂತ್ರಿಸಿದ ತಾಯತ ಅಥವಾ ಯಂತ್ರವನ್ನು ಕಪ್ಪುದಾರದಲ್ಲಿ ಕಟ್ಟಿ, ಕುತ್ತಿಗೆಗೆ ಅಥವಾ ಕೈಗೆ ಕಟ್ಟಬೇಕು. 

ಇದನ್ನು ಓದಿ: ವಾರಕ್ಕನುಸಾರ ಹೀಗೆ ಮಾಡಿ, ಸಂಕಷ್ಟಗಳಿಂದ ಮುಕ್ತಿ ಪಡೆಯಿರಿ. 

ಹಸಿವಾಗದಿರುವುದು
ಮಕ್ಕಳಿಗಷ್ಟೇ ಅಲ್ಲ ಎಲ್ಲ ವಯಸ್ಸಿನವರಿಗೂ ಕೆಟ್ಟ ದೃಷ್ಟಿ ತಾಗುತ್ತದೆ. ಆಹಾರ ಸೇರದೇ ಇರುವುದು, ಆಗಾಗ ಹುಷಾರು ತಪ್ಪುವುದು, ಮಾತಿಗೆ ಮುಂಚೆ ಸಿಟ್ಟು ಮಾಡುವುದು ಹೀಗಾದಾಗ ಲೋಟದಲ್ಲಿ ನೀರು ತೆಗೆದುಕೊಂಡು ಏಳು ಬಾರಿ ತಲೆಯ ಮೇಲಿಂದ ನಿವಾಳಿಸಿ, ಅದನ್ನು ನಾಲ್ಕು ರಸ್ತೆ ಕೂಡುವಲ್ಲಿ ಚೆಲ್ಲಬೇಕು. ತಿರುಗಿ ನೋಡದೇ ಬರಬೇಕು.

ಮನೆಯೊಳಗೆ ಕೆಟ್ಟಶಕ್ತಿ ಪ್ರವೇಶಿಸದಿರಲು ಹೀಗೆ ಮಾಡಿ
ಮನೆಯಲ್ಲಿ ಒಂದು ತುಳಸಿ ಗಿಡವನ್ನು ನೆಡುವುದರಿಂದ ಕೆಟ್ಟ ಶಕ್ತಿಯು ಮನೆಯನ್ನು ಪ್ರವೇಶಿಸುವುದಿಲ್ಲ. ಆಗಾಗ ಗಂಗಾಜಲವನ್ನು ಮನೆಗೆಲ್ಲ ಸಿಂಪಡಿಸುತ್ತಿರಬೇಕು. ಪೂಜೆ ಮತ್ತು ಆರತಿಯನ್ನು ಮಾಡುವಾಗ ಘಂಟೆ, ಜಾಗಟೆಯನ್ನು ಬಾರಿಸಬೇಕು.

ಇದನ್ನು ಓದಿ: ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ! 
 
ದೃಷ್ಟಿ ಯಾವಾಗ ಮತ್ತು ಯಾರು ನಿವಾಳಿಸಬೇಕು?
ವಾರ ಶುದ್ಧಿ ನೋಡಿ ದೃಷ್ಟಿ ತೆಗೆಯಬೇಕು. ಭಾನುವಾರ, ಗುರುವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ದೃಷ್ಟಿ ನಿವಾಳಿಸಬಹುದು. ದೊಡ್ಡವರು ಚಿಕ್ಕವರಿಗೆ ದೃಷ್ಟಿ ತೆಗೆಯಬೇಕು. ಚಿಕ್ಕವರು ದೊಡ್ಡವರಿಗೆ ದೃಷ್ಟಿ ತೆಗೆಯುವಂತಿಲ್ಲ. ಗರ್ಭವತಿ ಮಹಿಳೆಯರು ದೃಷ್ಟಿ ತೆಗೆಯುವಂತಿಲ್ಲ. ಮನೆಯಲ್ಲಿ ವಿಷ್ಣುಸಹಸ್ರನಾಮ ಪಠಣ ಅಥವಾ ಶ್ರವಣ ಮಾಡುವುದರಿಂದ ಕೆಟ್ಟಶಕ್ತಿಯು ಮನೆಯನ್ನು ಪ್ರವೇಶಿಸುವುದಿಲ್ಲ.

Tap to resize

Latest Videos

click me!