ಕೃಷ್ಣನ ಅವತಾರಕ್ಕೆ ಕೃತಜ್ಞತೆ ಸಲ್ಲಿಸುವ ಅಷ್ಟಮಿ!

By Kannadaprabha News  |  First Published Aug 11, 2020, 8:58 AM IST

ದೇಶದ ಬೇರೆ ಕಡೆಗಳಲ್ಲಿ ಚಾಂದ್ರಮಾನ ಪದ್ಧತಿಯ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು (ಈ ಬಾರಿ ಆ.11) ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಆದರೆ ಉಡುಪಿಯಲ್ಲಿ ಮಾತ್ರ ಸೌರಮಾನ ಪದ್ಧತಿಯನ್ನು ಅನುಸರಿಸುವುದರಿಂದ, ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು (ಈ ಬಾರಿ ಸೆ.11ರಂದು) ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ


- ಸುಭಾಶ್ಚಂದ್ರ ಎಸ್‌.ವಾಗ್ಳೆ

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು 2 ದಿನಗಳ ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ರಾತ್ರಿ ಹೊತ್ತು ಹುಟ್ಟಿದ್ದರಿಂದ ಉಡುಪಿಯ ಕೃಷ್ಣಮಠದಲ್ಲಿ ಮತ್ತು ಭಕ್ತರ ಮನೆಮನೆಗಳಲ್ಲಿ ರಾತ್ರಿ ಕೃಷ್ಣ ಹುಟ್ಟಿದ ಮುಹೂರ್ತದಲ್ಲಿ ಅಘ್ರ್ಯ ಪ್ರದಾನ ಮಾಡಲಾಗುತ್ತದೆ. ಅದಕ್ಕಾಗಿ ಭಕ್ತರು ದಿನವಿಡೀ ಉಪವಾಸ ಕುಳಿತು ಕೃಷ್ಣನ ಭಜನೆ, ಪಾರಾಯಣಗಳನ್ನು ನಡೆಸುತ್ತಾರೆ.

Tap to resize

Latest Videos

ಸಜ್ಜನರ ರಕ್ಷೆ ಮತ್ತು ದುರ್ಜನರ ಶಿಕ್ಷೆಗಾಗಿ ಕೃಷ್ಣನು ಈ ಭೂಮಿಯಲ್ಲಿ ಅವತಾರ ಎತ್ತುವುದರಿಂದ, ಈ ಅವತಾರದ ಘಳಿಗೆಯಲ್ಲಿ ಅವನಿಗೆ ಕೃತಜ್ಞತಾಪೂರ್ವಕವಾಗಿ ಶಂಖದ ಮೂಲಕ ಹಾಲಿನ ಅಘ್ರ್ಯವನ್ನು ನೀಡುವುದು ಸಂಪ್ರದಾಯವಾಗಿದೆ. ಕೃಷ್ಣಮಠದಲ್ಲಿ ಪ್ರರ್ಯಾಯ ಮಠಾಧೀಶರು ಕೃಷ್ಣನ ಸಮ್ಮುಖದಲ್ಲಿ ಪ್ರಥಮ ಅಘ್ರ್ಯ ಪ್ರದಾನ ಮಾಡುತ್ತಾರೆ. ನಂತರ ಈ ಅವತಾರ ಗಳಿಗೆಯನ್ನು ಸೃಷ್ಟಿಸಿದ ಚಂದ್ರನಿಗೆ ಕೃತಜ್ಞತಾ ಪೂರ್ವಕವಾಗಿ ಹೊರಗೆ ತುಳಸಿಕಟ್ಟೆಯಲ್ಲಿ ಸಾರ್ವಜನಿಕವಾಗಿ ಅಘ್ರ್ಯ ಪ್ರದಾನ ನಡೆಯುತ್ತದೆ.

ಅಘ್ರ್ಯ ಪ್ರದಾನ ಅತ್ಯಂತ ಸಂಪ್ರದಾಯಬದ್ಧವಾಗಿ ಮಠದೊಳಗೆ ನಡೆಯುವ ಆಚರಣೆಯಾಗಿದೆ. ಆದರೆ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಜವಾದ ಜನರ ಆಚರಣೆ ನಡೆಯುವುದು ಮರುದಿನ ಹಗಲಿನಲ್ಲಿ, ಇದನ್ನು ಕೃಷ್ಣ ಲೀಲೋತ್ಸವ ಅಥವಾ ವಿಠಲಪಿಂಡಿ ಎಂದು ಕರೆಯಲಾಗುತ್ತದೆ. ಅಂದು ಕೃಷ್ಣನ ರಥಬೀದಿ ಅಬಾಲವೃದ್ಧರಾದಿಯಾಗಿ ತುಂಬಿತುಳುಕುತ್ತದೆ.

ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…!

ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ (ಮಣ್ಣಿನ) ಸಣ್ಣ ವಿಗ್ರಹವನ್ನು ರಥದಲ್ಲಿಟ್ಟು ಉತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗೊಲ್ಲ ವೇಷಧಾರಿಗಳು ಬಾಲಕೃಷ್ಣ ಬೆಣ್ಣೆ, ಮೊಸರು, ಕಜ್ಜಾಯ ಇತ್ಯಾದಿಗಳನ್ನು ಕದಿಯುವ ಹೋಳಿಯಾಡುವ ಲೀಲೆಗಳನ್ನು ರಥಬೀದಿಯಾದ್ಯಂತ ಪ್ರದರ್ಶಿಸುತ್ತಾರೆ. ಇದು ಇಡೀ ಉತ್ಸವದ ಕೇಂದ್ರ ಬಿಂದುವಾಗಿರುತ್ತದೆ.

ಬಾಲಕ ಕೃಷ್ಣನಿಗೆ ನೈವೇದ್ಯ ಮಾಡಿದ ಚಕ್ಕುಲಿ, ಉಂಡೆ, ಕಜ್ಜಾಯ, ಬಾಳೆಹಣ್ಣುಗಳನ್ನು ಅಷ್ಟಮಠಾಧೀಶರು ರಥದಿಂದ ಭಕ್ತರ ಮೇಲೆ ಎರಚುತ್ತಾರೆ. ಈ ಪ್ರಸಾದವನ್ನು ಪಡೆಯಲು ಭಕ್ತರು ನಡೆಸುವ ಮೇಲಾಟ ಈ ಉತ್ಸವದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ.

ನಂತರ ಮೃಣ್ಮಯ ವಿಗ್ರಹವನ್ನು ರಥದಿಂದ ಇಳಿಸಿ, ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ತುಂಬಿದ ಸರೋವರಕ್ಕೆ ಹಾರಿ ಈ ಮೂರ್ತಿಯನ್ನು ಎತ್ತಿ ತರುವುದಕ್ಕೂ ಯುವಕರಲ್ಲಿ ಪೈಪೋಟಿ ನಡೆಯುತ್ತದೆ. ಯಾರ ಕೈಗೆ ಈ ವಿಗ್ರಹ ಸಿಗುತ್ತದೋ ಅದು ಅವರ ಪಾಲಾಗುತ್ತದೆ.

ಕೃಷ್ಣಾಷ್ಟಮಿಯ ಪ್ರಯುಕ್ತ ವಾರದ ಹಿಂದಿನಿಂದಲೇ ಮಕ್ಕಳಿಗೆ ಕೃಷ್ಣ-ರಾಧೆ ಸ್ಪರ್ಧೆ, ರಂಗೋಲಿ, ಹಾಡುವುದು, ಹೂಕಟ್ಟುವುದು, ಹುಲಿ ವೇಷ ಸ್ಪರ್ಧೆ ಇತ್ಯಾದಿಗಳು ನಡೆಯುತ್ತವೆ. ಇದರಲ್ಲಿ ಭಾಗವಹಿಸುವುದಕ್ಕೆ ಉಡುಪಿಯ ಮಕ್ಕಳ ಮತ್ತವರ ಹೆತ್ತವರ ಉತ್ಸಾಹ ಹೇಳತೀರದು.

ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣ ಈ ಫೋಟೋಗಳ ತನ್ನಿ ವಾಸ್ತು ದೋಷ ನಿವಾರಸಿಕೊಳ್ಳಿ..! 

ಉಡುಪಿ ಅಷ್ಟಮಿಯಲ್ಲಿ ಹುಲಿಗಳನ್ನು ಕಂಡಂತೆ....

ರಕ್ಷಿತ್‌ ಶೆಟ್ಟಿಅಭಿನಯದ ‘ಉಳಿದವರು ಕಂಡಂತೆ’ ಸಿನಿಮಾ ನೋಡಿದವರಿಗೆ ಅದರಲ್ಲಿ ಬರುವ ಹುಲಿವೇಷಧಾರಿಗಳ ಲಯಬದ್ಧ ಕುಣಿತ ಚೆನ್ನಾಗಿ ನೆನಪಿರುತ್ತದೆ.

ಈ ಹುಲಿಗಳ ಕುಣಿತ ಉಡುಪಿಯ ಕೃಷ್ಣಲೀಲೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಹುಲಿಯ ವೇಷವನ್ನು ಧರಿಸಿ, ಅಷ್ಟಮಿಯ ಮೊದಲು 2-3 ದಿನ ಉಡುಪಿಯಾದ್ಯಂತ ಅಂಗಡಿ, ಹೊಟೇಲು, ಮನೆಗಳ ಮುಂದೆ ಕುಣಿಯುತ್ತ, ಅವರ ನೀಡಿದ ಹಣವನ್ನು ತೆಗೆದುಕೊಂಡು ಮನೋರಂಜನೆ ನೀಡುವ ಈ ಕಲೆಗೆ ಅದರದ್ದೇ ಆದ ಗತ್ತಿದೆ, ಗಾಂಭೀರ್ಯವಿದೆ.

ಈ ಹುಲಿವೇಷಗಳ ಕುಣಿತಕ್ಕೆ ಒಂದು ಮಟ್ಟು, ಲಯ, ಹೆಜ್ಜೆಗಾರಿಕೆ ಇದೆ. ಈ ಕಲೆ ದಿನವಿಡೀ ಕುಣಿಯುವುದಕ್ಕೆ ಬಹಳ ತ್ರಾಣವನ್ನು, ಶುದ್ಧಾಚಾರವನ್ನು ಬಯಸುತ್ತದೆ. ಅದಕ್ಕಾಗಿ ವಾರಗಟ್ಟಲೇ ತರಬೇತಿ ಬೇಕಾಗುತ್ತದೆ. ಕೆಲವು ಹುಲಿತಂಡಗಳಂತೂ ತಮ್ಮ ಕಸುಬುಗಾರಿಕೆಯಿಂದ ಎರಡೇ ದಿನಗಳಲ್ಲಿ ಲಕ್ಷಗಟ್ಟಲೇ ಸಂಪಾದಿಸುತ್ತವೆ.

click me!