ರೋಜಾ ಆಚರಿಸಿದ ಮುಸ್ಲಿಂ ಬಾಲಕಿಗೆ ಹಿಂದೂವಿನ ಮನೆಯಲ್ಲಿ ಸತ್ಕಾರ!

Published : Apr 19, 2022, 06:14 PM ISTUpdated : Apr 19, 2022, 06:17 PM IST
ರೋಜಾ ಆಚರಿಸಿದ ಮುಸ್ಲಿಂ ಬಾಲಕಿಗೆ ಹಿಂದೂವಿನ ಮನೆಯಲ್ಲಿ ಸತ್ಕಾರ!

ಸಾರಾಂಶ

ರಂಜಾನ್ ಪ್ರಯುಕ್ತ ಬೆಳಗಿನ ಜಾವದಿಂದ ಸಂಜೆವರೆಗೆ ರೋಜಾ ಆಚರಿಸಿದ ಪುಟ್ಟ ಬಾಲಕಿಯ ಮನೋಬಲವನ್ನು ಗೌರವಿಸುವ ಸಲುವಾಗಿ ಹಿಂದೂಗಳ ಮನೆಯಲ್ಲಿ ಆಕೆಗೆ ಆರತಿ ಎತ್ತಿ ಹೊಸ ಬಟ್ಟೆ ನೀಡಲಾಗಿದೆ. ಇಂಥ ಅಪರೂಪದ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ಮುದ್ದೇಬಿಹಾಳ.

ಷಡಕ್ಷರಿ ಕಂಪೂನವರ್,  ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ರಾಜ್ಯದಲ್ಲಿ ಕೋಮು ಗಲಾಟೆಗಳಿಂದ ಹಿಂದೂ-ಮುಸ್ಲಿಂ ನಡುವಿನ ಭಾವೈಕ್ಯತೆಗೆ ಕೊಡಲಿ ಪೆಟ್ಟು ಬೀಳ್ತಿದೆ. ಆದ್ರೆ ಇದೆಲ್ಲದರ ನಡುವೆ ಕೆಲವೆಡೆ ನಡೆಯುವ ಘಟನೆಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿ ನಿಲ್ತಿವೆ.. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಈ ಹಿಂದೂ ಮುಸ್ಲಿಂ ಎರಡು ಕುಟುಂಬಗಳ ಅನ್ಯೋನ್ಯತೆ ಕೋಮುವಾದಿಗಳಿಗೆ ಪಾಠ ಹೇಳುವಂತಿದೆ.

ಬ್ರಾಹ್ಮಣ-ಮುಸ್ಲಿಂ ಕುಟುಂಬದ ನಡುವೆ ಅನುಬಂಧ!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರಪೇಟಿ ಗಲ್ಲಿಯಲ್ಲಿರುವ ಬ್ರಾಹ್ಮಣ ಸಮಾಜದ ವಾಸುದೇವ ನಾರಾಯಣರಾವ್ ಶಾಸ್ತ್ರೀ ಹಾಗೂ ಫೋಟೋಗ್ರಾಫರ್ ಆಗಿರುವ ಅಲ್ಲಿಸಾಬ(ಬುಡ್ಡಾ) ಬಾ.ಕುಂಟೋಜಿ ಅವರ ಸ್ನೇಹದ ಬಾಂಧವ್ಯಕ್ಕೆ ಭಾವ್ಯಕ್ಯತೆಯ ರೂಪವನ್ನು ನೀಡುವ ಮೂಲಕ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರು ಎಂದು ಸಾರುವ ಮಾದರಿ ಕಾರ್ಯ ಮಾಡಿದ್ದಾರೆ.

ಮುಸ್ಲಿಂ ಬಾಲಕಿಗೆ ಹಿಂದೂ ಸಂಪ್ರದಾಯದಂತೆ ಗೌರವ!
ಅಲ್ಲಿಸಾಬ(ಬುಡ್ಡಾ) ಕುಂಟೋಜಿ ಅವರ ಮೊಮ್ಮಗಳಾಗಿರುವ ಆರು ವರ್ಷದ ಬಾಲಕಿ ಶಿಫಾನಾಜ್ ಮಹ್ಮದ ರಫೀಕ (ಮುನ್ನಾ) ಸಾತಕೇಡ  ಅವರ ಮಗಳು ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಸಂಜೆ ಆರು ಗಂಟೆಯವರೆಗೆ ರಂಜಾನ್ ಹಬ್ಬದ ನಿಮಿತ್ಯ ರೋಜಾ (ಉಪವಾಸ ವ್ರತ) ಆಚರಿಸಿದ್ದಾಳೆ. ಇದನ್ನು ಅರಿತುಕೊಂಡ ಬುಡ್ಡಾ ಕುಂಟೋಜಿ ಅವರ ಬಾಲ್ಯದ ಸ್ನೇಹಿತರಾದ ವಾಸುದೇವ ಶಾಸ್ತ್ರೀ ಅವರು ಶಿಫಾನಾಜ್‌ಗೆ ಗೌರವಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಮುಸ್ಲಿಂ ಸಮಾಜದವರಾದ ಕುಂಟೋಜಿ ಪರಿವಾರದವರ ಒಪ್ಪಿಗೆ ಪಡೆದುಕೊಂಡು ಶಾಸ್ತ್ರೀ ಅವರು ತಮ್ಮ ಮನೆಯಲ್ಲಿ ಗೌರವಿಸಲು ಕರೆತಂದು ಸತ್ಕಾರ ಮಾಡಿದ್ದಾರೆ. ರೋಜಾ ಮಾಡಿದ ಶಿಫಾನಾಜ್‌ಗೆ ಶಾಸ್ತ್ರೀ ಅವರ ಮನೆಯಲ್ಲಿ ಹಿಂದೂಗಳ ಸಂಪ್ರದಾಯದಂತೆ ದೀಪದ ಆರುತಿ ಬೆಳಗಿ ಹೊಸ ಬಟ್ಟೆ ಕೊಟ್ಟು ಆಕೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ವಿಶೇಷವೆಂದರೆ ಶಾಸ್ತ್ರೀಯವರ ಮಕ್ಕಳಾದ ಗೌರಿ ಹಾಗೂ ರಾಣಿ ಮುಸ್ಲಿಂ ಧರ್ಮೀಯರು ಧರಿಸುವಂತೆ ಬಾಲಕಿ ಶಿಫಾನಾಜ್‌ಗೆ ವಸ್ತ್ರವನ್ನು ಸುತ್ತಿ ಮುದ್ದಿಸುವ ದೃಶ್ಯ ಎರಡೂ ಕುಟುಂಬಗಳ ಅನ್ಯೋನ್ಯತೆಗೆ ಸಾಕ್ಷಿಯಾಗಿದೆ.

Karaga Festival ಆನೇಕಲ್ ಪಟ್ಟಣದ ಕರಗ ಉತ್ಸವದ ಎರಡನೇ ದಿನ ಕೋಟೆ ಜಗಳ

ಹಿಂದೂ ಸಂಪ್ರದಾಯವನ್ನು ಗೌರವಿಸುವ ಮುಸ್ಲಿಮರು!
ತಮ್ಮ ಮಗಳು ಮೊದಲನೇ ರೋಜಾ ಮಾಡಿದ್ದಕ್ಕೆ ಸಂಭ್ರಮಿಸಿದ ಶಾಸ್ತ್ರೀ ಕುಟುಂಬದವರ ಆತಿಥ್ಯ ಸ್ವೀಕರಿಸಲು ಅವರ ಮನೆಗೆ ಹೋದ ಮಹ್ಮದ ರಫೀಕ ಸಾತಖೇಡ ಹಾಗೂ ಅವರ ಪತ್ನಿ ಫಿರ್ದೋಷ್  ಅವರು ಮಗಳಿಗೆ ಆರತಿ ಎತ್ತಿ ಹೂ ಮುಡಿಸುವುದನ್ನು ಗೌರವ ಭಾವನೆಯಿಂದಲೇ ಸ್ವೀಕರಿಸಿದರು. ಅಲ್ಲದೇ ಈ ಆಚರಣೆಯ ಬಗ್ಗೆ ಖುಷಿಯಾಗಿದೆ ಎಂದು ಹೇಳಿಕೊಂಡರು. ಈ ಸಂದರ್ಭದಲ್ಲಿ ಬಾಲಕಿಯ ತಂದೆ ಮಹ್ಮದ ರಫೀಕ ಸಾತಖೇಡ, ಅವರ ಪತ್ನಿ ಫಿರ್ದೋಷ್, ಅಜ್ಜಿ ಸಲ್ಮಾಬೇಗಂ ಕುಂಟೋಜಿ ಮೊದಲಾದವರು ಇದ್ದರು.

ಬೇಧಭಾವ ಏಕೆ?
ಕುಡಿವ ನೀರು, ಉಸಿರಾಡುವ ಗಾಳಿ, ಸುಡುವ ಅಗ್ನಿ ಒಂದೇ ಆಗಿದೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕು ನಡೆಸಬೇಕು. ಆರು ವರ್ಷದ ಶಿಫಾನಾಜ್‌ಗೆ ನಮ್ಮ ಮನೆಗೆ ಬಂದು ನೀವೇಕೆ ನಮಾಜ್ ಮಾಡುವುದಿಲ್ಲ? ದೇವರಿಗೆ ಏಕೆ ಕೈ ಮುಗಿಯುತ್ತೀರಿ? ನಮ್ಮ (ಮುಸ್ಲಿಂ ಸಂಪ್ರದಾಯದಂತೆ) ಮನೆಯಲ್ಲಿ ಅಲ್ಲಾಹನಿಗೆ ಬೇಡಿಕೊಳ್ಳುವಂತೆ ಏಕೆ ಬೇಡಿಕೊಳ್ಳುವುದಿಲ್ಲ ಎಂದೆಲ್ಲಾ ಪ್ರಶ್ನಿಸುತ್ತಾಳೆ. ಆಕೆಯ ಮುಗ್ಧತೆ ದೊಡ್ಡವರ ಮನಸ್ಸಲ್ಲಿ ಕೋಮು ಭಾವನೆ ಬಿತ್ತಿ ಅಶಾಂತಿ ಸೃಷ್ಟಿಸುವ ಮನಸ್ಸನ್ನು ಪರಿವರ್ತನೆ ಮಾಡುವಂತಿದೆ. ಸಹೋದರರಂತೆ ಇರುವ ನಾವೆಲ್ಲ ಒಂದೇ ಎಂಬ ಭಾವದಿಂದ ಸಾಗಬೇಕಾಗಿದೆ. ಆಕೆ ಹುಟ್ಟಿದ್ದು ಮುಸ್ಲಿಂ ಮನೆತನದಲ್ಲೇ ಆಗಿದ್ದರೂ ಆಚರಣೆಯಲ್ಲ ಹಿಂದೂಗಳ ಪದ್ಧತಿಯನ್ನೇ ನೋಡಿ ಅದನ್ನು ಕಲಿಯುತ್ತಾಳೆ. ಅವರಲ್ಲಿನ ಸಂಸ್ಕೃತಿಯನ್ನು ನಮಗೆ ಕಲಿಸುತ್ತಾಳೆ. ಇದರಲ್ಲಿ ನಾವ್ಯಾರೂ ಬೇಧಭಾವ ಮಾಡಿಲ್ಲ ಎನ್ನುತ್ತಾರೆ ಜ್ಯೋತಿ ವಾಸುದೇವ ಶಾಸ್ತ್ರೀ..

ಧರ್ಮಕ್ಕೂ ಮಿಗಿಲಾದ ಭಕ್ತಿ: ಮುಸ್ಲಿಂ ರಾಮ ಭಕ್ತನೊರ್ವರಿಂದ ಶ್ರೀರಾಮ ಕೋಟಿ ವ್ರತ!

ಎರಡು ಕುಟುಂಬಗಳ ಅನ್ಯೋನ್ಯತೆ!
ನಮ್ಮ ಎರಡೂ ಕುಟುಂಬಗಳಲ್ಲೂ ಅನ್ಯೋನ್ಯತೆ ಇದೆ. ಧರ್ಮದ ಹೆಸರಿನಲ್ಲಿ ದ್ವೇಷ, ಅಸೂಯೆ ಹುಟ್ಟಿಸಿ ನಮ್ಮದೇ ಧರ್ಮ ದೊಡ್ಡದು ಎಂದು ಬಿಂಬಿಸುವ ಕೆಲವರ ಮನಸ್ಥಿತಿಗಳು ಬದಲಾಗಬೇಕಾಗಿದೆ. ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ನಡೆಸಬೇಕಾಗಿದೆ ಎಂದು ಶಿಫಾನಾಜ್ ಅಜ್ಜ ಅಲ್ಲಿಸಾಬ ಕುಂಟೋಜಿ ಹೇಳಿದ್ದಾರೆ. ಇತ್ತ ಶಿಫಾನಾಜ್ ನನ್ನ ಸ್ವಂತ ಮೊಮ್ಮಗಳಿಗಿಂತಲೂ ಹೆಚ್ಚು ಎಂಬ ಭಾವನೆ ನನ್ನದು. ಆಕೆ ಜನಿಸಿದ ಮೇಲೆ ಹೆಚ್ಚಾಗಿ ನಮ್ಮ ಮನೆಯಲ್ಲಿಯೇ ಇದ್ದು ಬೆಳೆದಿದ್ದಾಳೆ. ಆಕೆ ರೋಜಾ ಮಾಡಿರುವುದು ಖುಷಿಯಾಗಿದ್ದು ಅದಕ್ಕಾಗಿ ಆಕೆಗೆ ನಮ್ಮ ಸಂಸ್ಕೃತಿಯಂತೆ ಗೌರವಿಸಿದ್ದೇವೆ. ನಮಗೆ ಹಿಂದೂ ಮುಸ್ಲಿಂ ಧರ್ಮ ಮುಖ್ಯವಲ್ಲ. ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳು ಮುಖ್ಯವಾಗಿವೆ ಎಂದು ವಾಸುದೇವ ಶಾಸ್ತ್ರೀ ಹೇಳಿಕೊಂಡಿದ್ದಾರೆ..

PREV
Read more Articles on
click me!

Recommended Stories

ಜನವರಿ 9 ರಿಂದ ಮಿಥುನ ಸೇರಿದಂತೆ 3 ರಾಶಿಗೆ ಅದೃಷ್ಟ, ಸೂರ್ಯ-ಗುರುಗಳು ಭಾರಿ ಆರ್ಥಿಕ ಲಾಭ
2025 ಅಬ್ಬರದಿಂದ ಕೊನೆಗೊಳ್ಳುತ್ತದೆ, ಈ 3 ರಾಶಿಗೆ 2026 ರವರೆಗೆ ಅಚಲ ಅದೃಷ್ಟ