ಯಜ್ಞ-ಯಾಗಾದಿಗಳಿಗೆ ನೀಡಿದ ದಾನವೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಅದು ನಮ್ಮ ಸ್ವಂತ ದುಡಿಮೆಯಿಂದ ಬಂದದ್ದಾಗಿರಬೇಕು. ಪ್ರತಿಯೊಂದು ಹಳ್ಳಿಯ ಯುವಕರು ದೇಶ-ವಿದೇಶದ ಮಹಾನಗರಗಳಿಗೆ ವಲಸೆ ಹೊಗುತ್ತಿದ್ದಾರೆ. ಇದು ಹಳ್ಳಿಗಳಿಗೆ ಆತಂಕದ ವಿಷಯ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಯಲ್ಲಾಪುರ (ಮಾ.3) : ಹಣದಿಂದ ದೊರೆಯುವ ಐಹಿಕ ಸುಖ-ಭೋಗಗಳು ಶಾಶ್ವತವಾದುದಲ್ಲ. ಆದರೆ ನಾವು ಮಾಡಿದ ದಾನ-ಧರ್ಮಾದಿಗಳು ಮಾತ್ರ ನಮ್ಮ ಬೆನ್ನಿಗೆ ನಿಲ್ಲುತ್ತವೆ. ಅದರಲ್ಲೂ ಮಂದಿರ, ಕೆರೆ, ಸರೋವರಗಳ ನಿರ್ಮಾಣಕ್ಕೆ ನೀಡಿದ ಮತ್ತು ಅನ್ನದಾನ ಅತ್ಯಂತ ಶ್ರೇಷ್ಠವಾದುದು. ಇವು ನಮ್ಮನ್ನು ಶ್ರೇಷ್ಠತ್ವದೆಡೆ ಕರೆದೊಯ್ಯುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬೀಗಾರ-ತಾರಗಾರಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ(Sri lakshminarasimha temple)ದ ನೂತನ ಶಿಲಾಮಯ ಮಂದಿರದ ಪ್ರತಿಷ್ಠಾಪನಾ ಮಹೋತ್ಸವದ ಸಾನ್ನಿಧ್ಯವಹಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತ ತಮ್ಮಣ್ಣ ಕೋಮಾರ ಬೀಗಾರ ಅವರನ್ನು ಸನ್ಮಾನಿಸಿ, ಆಶೀರ್ವಚನ ನೀಡಿದರು.
Bhagavad Gita Campaign: ಕರ್ನಾಟಕದ ಎಲ್ಲ ಜೈಲಲ್ಲೂ ಭಗವದ್ಗೀತಾ ಅಭಿಯಾನ: ಸ್ವರ್ಣವಲ್ಲೀ ಶ್ರೀ
ಯಜ್ಞ-ಯಾಗಾದಿಗಳಿಗೆ ನೀಡಿದ ದಾನವೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಅದು ನಮ್ಮ ಸ್ವಂತ ದುಡಿಮೆಯಿಂದ ಬಂದದ್ದಾಗಿರಬೇಕು. ಪ್ರತಿಯೊಂದು ಹಳ್ಳಿಯ ಯುವಕರು ದೇಶ-ವಿದೇಶದ ಮಹಾನಗರಗಳಿಗೆ ವಲಸೆ ಹೊಗುತ್ತಿದ್ದಾರೆ. ಇದು ಹಳ್ಳಿಗಳಿಗೆ ಆತಂಕದ ವಿಷಯ. ದೇವಸ್ಥಾನ ನಿರ್ಮಿಸುವುದು ಕಷ್ಟವಾದರೂ ನಿರ್ಮಿಸುತ್ತಿದ್ದೀರಿ. ಆದರೆ ಅದರ ಜತೆ ಪೂಜೆ ವಿಧಿ-ವಿಧಾನಗಳು ಮುಂದಿನ ತಲೆಮಾರಿಗೂ ಮುಂದುವರಿಯುವಂತಾಗಬೇಕು. ಈ ನಿಟ್ಟಿನಲ್ಲಿ ಯುವಕರು ನಮ್ಮಲ್ಲಿಯೇ ಉಳಿಯುವಂತೆ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗಗಳೊಂದಿಗೆ ಕೃಷಿ ನಡೆಸುವಂತಹ ಪ್ರಕ್ರಿಯೆಗೆ ಮಹತ್ವ ನೀಡಬೇಕು. ದೇವಸ್ಥಾನ ಕಟ್ಟುವ ಉದ್ದೇಶ ಮತ್ತು ಪೂಜೆ ಮಾಡುವುದರಿಂದ ಭಕ್ತಿ-ಭಾವ ಬೆಳೆದು; ದೇವರಲ್ಲಿ ತಲ್ಲೀನತೆ ಬೆಳೆಯುತ್ತಾ ಹೃದಯದ ಗುಡಿಯಲ್ಲೇ ದೇವರು ನೆಲೆಸುವಂತೆ ನಾವು ಎತ್ತರಕ್ಕೆ ತಲುಪಬೇಕು. ಭಕ್ತರಿಗೆ ಮಾತ್ರ ನಾರಸಿಂಹ ದೇವರು ಸೌಮ್ಯವಾಗಿ ರಕ್ಷಿಸುತ್ತಾನೆ. ಆದರೆ ದುಷ್ಟರನ್ನು ಉಗ್ರನಾಗಿಯೇ ಶಿಕ್ಷಿಸುತ್ತಾನೆ ಎಂದರು.
ಸಚಿವ ಶಿವರಾಮ ಹೆಬ್ಬಾರ(Minister shivaram Hebbar) ಮಾತನಾಡಿ, ಇಲ್ಲಿ ಸುಂದರವಾದ ಮಂದಿರ ನಿರ್ಮಾಣಕ್ಕೆ ಎಲ್ಲರೂ ಸಾಕಷ್ಟುಪ್ರಯತ್ನ ಪಟ್ಟಿದ್ದಾರೆ. ಈ ಪ್ರದೇಶದ ಜನರಲ್ಲಿ ಸದಾ ಶ್ರದ್ಧೆ, ವಿಶ್ವಾಸ, ಪ್ರೀತಿಯನ್ನು ಕಾಣಬಹುದು. ನಿಮ್ಮ ಊರಿನ ಅಭಿವೃದ್ಧಿಗಾಗಿ ನಾನು ಎಲ್ಲ ರೀತಿಯ ನೆರವನ್ನು ನೀಡಲು ಬದ್ಧನಾಗಿದ್ದೇನೆ ಎಂದರು.
ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಂತಹ ಶಿಲಾಮಯ ಮಂದಿರ ಸಾವಿರಾರು ವರ್ಷ ಉಳಿಯಬಲ್ಲದು. ಕೆಲವು ವರ್ಷಗಳ ಹಿಂದೆ ಅನೇಕ ಚಿಂತಕರು 21ನೇ ಶತಮಾನ ಭಾರತೀಯ ಸಂಸ್ಕೃತಿಯನ್ನು ನುಂಗಿಹಾಕುತ್ತವೆ ಎಂದು ಹೇಳಿದ್ದರು. ಆದರೆ ವಿಶ್ವಮಟ್ಟಕ್ಕೆ ನಮ್ಮ ಸಂಸ್ಕೃತಿ ವಿಸ್ತಾರಗೊಳ್ಳುತ್ತಿದೆ. ನಮ್ಮ ಸ್ವರ್ಣವಲ್ಲಿ ಶ್ರೀಗಳಂತಹ ಮಹಾನ್ ಸಾಧಕರ ತಪಸ್ಸಿನಿಂದ ಎಲ್ಲೆಡೆ ಧರ್ಮಾಚರಣೆ, ಧಾರ್ಮಿಕ ಪರಂಪರೆ ವಿಸ್ತಾರಗೊಳ್ಳಲು ಸಾಧ್ಯವಾಗಿದೆ. ಇದು ಋುಷಿಮುನಿಗಳ ಕೊಡುಗೆ. ಕುಗ್ರಾಮವಾದ ಬೀಗಾರ-ತಾರಗಾರಿನಲ್ಲಿ ಪ್ರತಿಭಾವಂತರಿಗೆ ಜನ್ಮ ನೀಡಿದ ಭೂಮಿ ಎಂದರು.
ಅನ್ಯಾಯದ ಹಣದಿಂದ ಅನಾರೋಗ್ಯ: ಸ್ವರ್ಣವಲ್ಲೀ ಶ್ರೀ
ಉಡುಪಿಯ ಸಂಸ್ಕೃತ ಉಪನ್ಯಾಸಕ ಡಾ. ಗಣಪತಿ ಭಟ್ಟ, ಸನ್ಮಾನ ಸ್ವೀಕರಿಸಿದ ತಮ್ಮಣ್ಣ ಬೀಗಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹನುಮಂತ ನಾಯ್ಕ ಮಾತನಾಡಿದರು. ಗುಜರಾತ್ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ನರಸಿಂಹ ಕೋಮಾರ, ಸ್ವರ್ಣವಲ್ಲಿ ಮಠದ ವ್ಯವಸ್ಥಾಪಕ ಎಸ್.ಎನ್. ಗಾಂವ್ಕರ್ ಉಪಸ್ಥಿತರಿದ್ದರು. ಸುಬ್ರಾಯ ಭಟ್ಟಸಂಗಡಿಗರ ವೇದಘೋಷದೊಂದಿಗೆ ಆರಂಭವಾದ ಸಭೆಯಲ್ಲಿ ಮಹಾಬಲೇಶ್ವರ ಹೆಬ್ಬಾರ ದಂಪತಿ ಶ್ರೀಗಳಿಗೆ ಫಲ ಸಮರ್ಪಿಸಿದರು. ದೇವಸ್ಥಾನದ ಅಧ್ಯಕ್ಷ ನಾರಾಯಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಗ.ನಾ. ಕೋಮಾರ ಸ್ವಾಗತಿಸಿದರು. ಶಿಕ್ಷಕಿ ಪಲ್ಲವಿ ಕೋಮಾರ ಕಾರ್ಯಕ್ರಮ ನಿರ್ವಹಿಸಿದರು. ಜಿ.ಎನ್. ಕೋಮಾರ ವಂದಿಸಿದರು.