Hanuman temples in Karnataka: ಆಂಜನೇಯನ ಈ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?

By Suvarna NewsFirst Published Apr 4, 2023, 11:53 AM IST
Highlights

ಏಪ್ರಿಲ್ 6ರಂದು ಹನುಮ ಜಯಂತಿ. ಕರ್ನಾಟಕದ ಆಂಜನೇಯ ದೇವಾಲಯಗಳಲ್ಲಿ ಭಕ್ತರು ಬಹಳ ಸಂಖ್ಯೆಯಲ್ಲಿ ನೆರೆಯುತ್ತಾರೆ. ಅಂದ ಹಾಗೆ, ಕರ್ನಾಟಕದ ಪ್ರಸಿದ್ಧ ಆಂಜನೇಯ ದೇವಾಲಯಗಳು ಯಾವೆಲ್ಲ ಗೊತ್ತಾ?

ಆಂಜನೇಯನೆಂದರೆ ಭಕ್ತಿಗೂ, ಶಕ್ತಿಗೂ ದೇವರು. ಆತ ಪ್ರಾಣದೇವರು, ವಾಯುದೇವರು. ಆಂಜನೇಯನಿಗಾಗಿ ಕರ್ನಾಟಕದಲ್ಲಿ ಹಲವಾರು ದೇವಾಲಯಗಳಿವೆ. ಅವುಗಳಲ್ಲಿ ಬಹಳಷ್ಟು ತಮ್ಮ ಪವಾಡಗಳು, ಶಕ್ತಿಗಾಗಿ ಹೆಸರು ಮಾಡಿವೆ. ಕರ್ನಾಟಕದ ಕೆಲ ಪ್ರಮುಖ ಆಂಜನೇಯ ದೇವಾಲಯಗಳು ಯಾವೆಲ್ಲ ನೋಡೋಣ. 

ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ
ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಶಾ ನದಿಯ ದಡದಲ್ಲಿರುವ ಹನುಮ ದೇವಾಲಯವು ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ನದಿಯ ದಡದಲ್ಲಿರುವುದರಿಂದ ಇದನ್ನು 'ಹೊಳೆ ಆಂಜನೇಯ ಸ್ವಾಮಿ' ಎಂದು ಕರೆಯಲಾಗುತ್ತದೆ. ಇಲ್ಲಿರುವ ಭಗವಾನ್ ಹನುಮಾನ್ ವಿಗ್ರಹವನ್ನು ಮಾಧ್ವ ಗುರುಗಳಾದ ಶ್ರೀಪಾದರಾಜ ಮತ್ತು ವ್ಯಾಸರಾಜರು ಸ್ಥಾಪಿಸಿದರು. ಈ ದೇವಾಲಯವನ್ನು 550 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. 2004ರ ರಾಮನವಮಿ ಹಬ್ಬದ ಸಮಯದಲ್ಲಿ ಇಲ್ಲಿ ಒಂದು ಪವಾಡ ಸಂಭವಿಸಿತು - ಅಲ್ಲಿ ದೇವಾಲಯದ ಬಾಗಿಲು ಮುಚ್ಚಿದ ನಂತರವೂ, ಗಂಟೆಗಳು, ಶಂಕುಗಳು, ಡೋಲುಗಳು ಮತ್ತು ಜಾಗಟೆಗಳ ಶಬ್ದಗಳು ಕೇಳಿಬಂದವು. ನಂತರ 2011ರಲ್ಲಿ ಚಂದ್ರಗ್ರಹಣದ ಸಮಯದಲ್ಲೂ ಇದೇ ರೀತಿಯ ಪವಾಡ ಕಂಡು ಬಂತು.

Latest Videos

ಯಲಗೂರೇಶ್ವರ ದೇವಸ್ಥಾನ
'ಮಾತನಾಡುವ ಹನುಮಂತ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯಲಗೂರೇಶ್ವರ ಅತ್ಯಂತ ಶಕ್ತಿಶಾಲಿ ಮತ್ತು ನಾಡಿನಾದ್ಯಂತ ಜನಪ್ರಿಯ. ಭಕ್ತರಿಂದ ಪ್ರೀತಿಯಿಂದ 'ಯಲಗೂರು ಹನುಮಪ್ಪ' ಎಂದೇ ಕರೆಯಲ್ಪಡುವ ಈ ದೇವಾಲಯ ಇರುವುದು  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಒಂದು ಪುಟ್ಟ ಗ್ರಾಮ ಯಲಗೂರಿನಲ್ಲಿ . ದೇವಾಲಯವು ಅದ್ಭುತವಾದ ಇತಿಹಾಸವನ್ನು ಹೊಂದಿದೆ ಮತ್ತು ಇಲ್ಲಿರುವ ಹನುಮಾನ್ ವಿಗ್ರಹವು ಅತ್ಯಂತ ದೈವಿಕ, ಶಕ್ತಿಯುತವಾಗಿದೆ. ಇಲ್ಲಿ ನಿಮ್ಮ ಪ್ರಾರ್ಥನೆಗೆ ಹೂ ಪ್ರಸಾದದ ಮೂಲಕ ಉತ್ತರ ನೀಡುತ್ತಾನೆ ಆಂಜನೇಯ. 

Garuda Purana: ಸಾವಿನ ಸಮಯದಲ್ಲಿ ಈ ವಸ್ತುಗಳು ಬಳಿಯಿದ್ದರೆ ನೇರ ಸ್ವರ್ಗವೇ ಪ್ರಾಪ್ತಿ!

ಕೋರವಾರೇಶ ದೇವಸ್ಥಾನ
ಕೋರವಾರ ದೇವಸ್ಥಾನದಲ್ಲಿರುವ ಹನುಮಂತನನ್ನು 'ಕೋರವಾರೇಶ' ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ದೇವಾಲಯವು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿರುವ ಕೋರವಾರದಲ್ಲಿದೆ. ಕೊರವರೇಶ್ವರ ವಿಗ್ರಹವನ್ನು 1535ರಲ್ಲಿ ಶ್ರೀ 1008 ಶ್ರೀ ವಾದಿರಾಜ ತೀರ್ಥರು ಸೋಂದೆ ಮಠದಿಂದ ಪ್ರತಿಷ್ಠಾಪಿಸಿದರು. ಈ ಗ್ರಾಮದಲ್ಲಿ ವಿಗ್ರಹವನ್ನು ಸ್ಥಾಪಿಸಲು ಕೋರವಾರೇಶ ದೇವರು ಸ್ವತಃ ಕೇಳಿಕೊಂಡನೆಂದು ಹೇಳಲಾಗುತ್ತದೆ. ವಿಗ್ರಹವು ಸಾಲಿಗ್ರಾಮದಂತಿದ್ದು 5 ಅಡಿ ಎತ್ತರವಿದೆ. ವಿಗ್ರಹವು ಸೊಂಟದ ಮೇಲೆ ಎಡಗೈಯನ್ನು ಹೊಂದಿದ್ದು ಬಲಗೈಯಿಂದ ಭಕ್ತರನ್ನು ಆಶೀರ್ವದಿಸುತ್ತಿದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಿಂದ ಹನುಮ ಜಯಂತಿಯವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. 

ಕಾಂತೇಶ ದೇವಸ್ಥಾನ, ಕದರಮಂಡಲಗಿ
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಅತ್ಯಂತ ಜನಪ್ರಿಯ ಚಿಕ್ಕ ಗ್ರಾಮ. ಶ್ರೀ ಹನುಮಂತನ ವಿಗ್ರಹವು ಹೊಳೆಯುವ ಕಣ್ಣುಗಳು ಮತ್ತು ವಿಶಾಲವಾದ ಭುಜಗಳಿಂದ ಭಕ್ತರಿಗೆ ಬೆರಗುಗೊಳಿಸುವ ನೋಟವನ್ನು ನೀಡುತ್ತದೆ. ಆದ್ದರಿಂದ ದೇವರನ್ನು 'ಕಾಂತೇಶ' ಎಂದೂ ಕರೆಯುತ್ತಾರೆ. ಹನುಮಂತ ಸೂರ್ಯನನ್ನು ಹಣ್ಣೆಂದು ತಿನ್ನಲು ಹಾರಿದ್ದು ಇದೇ ಊರಿನಿಂದ ಎಂಬ ನಂಬಿಕೆ ಇದೆ. 

ಭ್ರಾಂತೇಶ ದೇವಸ್ಥಾನ, ಶಿಕಾರಿಪುರ
ಭ್ರಾಂತೇಶನನ್ನು ಜನರು ಇಲ್ಲಿ ಹನುಮಂತ ಎಂದು ಕರೆಯುತ್ತಾರೆ. ಇದನ್ನು ಹುಚ್ಚರಾಯ ಸ್ವಾಮಿ ದೇವಾಲಯ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಹನುಮ ಜಯಂತಿಯಂದು ದೇವಸ್ಥಾನದ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಮತ್ತು ನಂತರ ಪಟಾಕಿಗಳನ್ನು ಸುಡುವುದರೊಂದಿಗೆ ತೆಪ್ಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಸುಮಾರು ಮೂರು ಲಕ್ಷ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ಅಂದಾಜಿದೆ.

Hanuman Jayanti 2023: ವರ್ಷದಲ್ಲಿ ಎರಡು ಬಾರಿ ಹನುಮ ಜನ್ಮೋತ್ಸವ ಆಚರಣೆ ಏಕೆ?

ಶಾಂತೇಶ ದೇವಸ್ಥಾನ, ಸಾತೇನಹಳ್ಳಿ
ಸಾತೇನಹಳ್ಳಿಯ ಹನುಮಾನ್ ವಿಗ್ರಹವನ್ನು ಶಾಂತೇಶ ಎಂದು ಕರೆಯಲಾಗುತ್ತದೆ. ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿದೆ. ಇಲ್ಲಿನ ವಿಗ್ರಹವನ್ನು ಶ್ರೀ ವ್ಯಾಸ ತೀರ್ಥರ ಗುರುಗಳಾದ ಬ್ರಹ್ಮಣ್ಯೇ ತೀರ್ಥರು ಪ್ರತಿಷ್ಠಾಪಿಸಿದರು. ಇಲ್ಲಿರುವ ಶ್ರೀ ಹನುಮಂತನು ತನ್ನ ತಲೆಯ ಮೇಲೆ ಅಮೂಲ್ಯವಾದ ಸಾಲಿಗ್ರಾಮವನ್ನು ಹೊಂದಿದ್ದು, ಜಗತ್ತಿಗೆ ನಿತ್ಯವೂ ಸತ್ಯವೂ ಆದ ಮಾಧ್ವ ತತ್ತ್ವವನ್ನು ಪಸರಿಸುತ್ತದೆ. ಈ ದೇವಾಲಯವು ಬೇಲೂರು ಹಳೇಬೀಡು ದೇವಾಲಯಗಳು ಮತ್ತು ಕಂಬಗಳನ್ನು ನೆನಪಿಸುವ ದೊಡ್ಡ ಪುರಾತತ್ವ ರಚನೆಯನ್ನು ಹೊಂದಿದೆ.

click me!