Mahavir Jayanti 2023: ಅನ್ನದಾನ, ಅಭಯದಾನ, ವಿದ್ಯಾದಾನ ಶ್ರೇಷ್ಠದಾನ ಎಂದಿದ್ದ ಮಹಾಸನ್ಯಾಸಿ

By Suvarna NewsFirst Published Apr 4, 2023, 7:59 AM IST
Highlights

ಬಿಹಾರದ ವೈಶಾಲಿಯ ಕ್ಷತ್ರಿಯ ಪುತ್ರರಾದ ಮಹಾವೀರ ಜೈನರು ದಾರ್ಶನಿಕರೂ ಸರ್ವೋದಯ ತೀರ್ಥ ಪ್ರವರ್ತಕರೂ ಸರ್ವಜೀವ ದಯಾಪರರೂ ಲೋಕೋದ್ಧಾರಕರೂ ಆದ ಕರುಣಾಮಯಿಗಳು. ಇವರ ವಿಹಾರದಿಂದ ಮಗಧ ದೇಶದ ಹೆಸರು ಬಿಹಾರ ಎಂದಾಯಿತು.

ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಜೈನ ಮಠ

ಕ್ರಿಸ್ತ ಪೂರ್ವ 599ರ (27-03-598) ಚೈತ್ರ ಶುಕ್ಲ ತ್ರಯೋದಶಿಯಂದು ಉತ್ತರ ಫಾಲ್ಗುಣಿ ನಕ್ಷತ್ರದ ಸೋಮವಾರ ಭಗವಾನ್‌ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣವಾಯಿತು. 20 ಕೋಟಾಕೋಟಿಯ ಒಂದು ವರ್ತುಲದಲ್ಲಿ ಉತ್ಸರ್ಪಿಣಿಯ ಆರು ಕಾಲ, ಅವಸರ್ಪಿಣಿಯ ಆರು ಕಾಲ. ಅದರಲ್ಲಿ ಅವಸರ್ಪಿಣಿಯ ದುಷಮ-ಸುಷಮಾ ಎನ್ನುವ ಕಾಲವು ಕೊನೆಗೊಳ್ಳಲು (ಚತುರ್ಥಕಾಲ, ಈಗಿನ ಕಾಲ ದುಷಮ ಎಂಬ ಪಂಚಮ ಕಾಲವಾಗಿದೆ) 74 ವರ್ಷ 11 ತಿಂಗಳು ಏಳುವರೆ ದಿನಗಳ ಕಾಲ ಉಳಿದಿದ್ದಿತು. ಗ್ರೀಷ್ಮ ಋತು ಚೈತ್ರ ಶುಕ್ಲ ಮಧ್ಯರಾತ್ರಿಯ ಸಮಯ ಜಿನಬಾಲಕನ ಜನನವಾಯಿತು. ತಾಯಿ ತ್ರಿಶಾಲ (ಪ್ರಿಯಕಾರಿಣಿ), ತಂದೆ ಸಿದ್ಧಾರ್ಥನು ಜ್ಞಾತೃ ವಂಶದ ಕ್ಷತ್ರಿಯ ಕಾಶ್ಯಪ ಗೋತ್ರದವನು.

Latest Videos

ಇವರು ತಮಗಿಂತ 250 ವರ್ಷ ಪೂರ್ವದ 23ನೇ ತೀರ್ಥಂಕರ ಭಗವಾನ್‌ ಪಾಶ್ರ್ವನಾಥರ ಅನುಯಾಯಿಗಳೂ ಶ್ರವಣೋಪಸಾಕರೂ ಆಗಿದ್ದರು. ಜಿನ ಶಿಶುವು ತ್ರಿಶಲೆಯ ಗರ್ಭದಲ್ಲಿದ್ದಾಗಲೇ ವೈಶಾಲಿ ರಾಜ್ಯದಲ್ಲಿ ಶುಭಶಕುನಗಳು ಕಂಡುಬಂದವು. ಸಸ್ಯಗಳಲ್ಲಿ ಸಮೃದ್ಧತೆ, ವೃಕ್ಷಗಳಲ್ಲಿ ಯಥೇಚ್ಛ ಫಲ, ರತ್ನವೃಷ್ಟಿ, ರಾಜನ ಕೋಶದಲ್ಲಿ ದಿನೇದಿನೇ ವೃದ್ಧಿಯನ್ನು ಕಂಡ ಮಾತಾಪಿತರು ಜಿನಬಾಲಕನ ಜನನವಾದ ಶುಭದಿನವೇ ಬಾಲಕನಿಗೆ ವರ್ಧಮಾನ ಎಂಬ ಶುಭನಾಮಕರಣ ಮಾಡಿದರು. ಭಗವಂತ ಜ್ಞಾತೃ ನಾಗ ಕುಲದಲ್ಲಿ ಜನಿಸಿರುವುದರಿಂದ ಇವರಿಗೆ ಜ್ಞಾತೃಪುತ್ರ ಎನ್ನುವ ಹೆಸರಾಯಿತು. ಸಾಧನೆಯ ದೀರ್ಘಕಾಲದಲ್ಲಿ ಬಾಲಕಾವಸ್ಥೆಯಲ್ಲಿರುವಾಗ ಸಂಜಯಂತ, ವಿಜಯವಂತ ಎಂಬೀರ್ವರು ಮುನಿವರ್ಯರಿದ್ದರು. ಅವರ ಮನದಲ್ಲಿ ಕೆಲವು ಸಮಯದಿಂದ ಪುನರ್ಜನ್ಮ ಎಂಬುದು ಇದೆಯೋ ಇಲ್ಲವೋ ಎಂಬುದರ ಕುರಿತು ಬಹಳ ಸಂದೇಹವಿತ್ತು. ಅದಕ್ಕೆ ಸರಿಯಾದ ಉತ್ತರ ಅವರಿಗೆ ಸಿಕ್ಕಿರಲಿಲ್ಲ. ಇದರ ಬಗ್ಗೆ ಯಾರಲ್ಲಿ ಕೇಳುವುದು? ಇದಕ್ಕೆ ಸರಿಯಾದ ಸಮಾಧಾನ ನೀಡಬಲ್ಲವರು ಯಾರು ಎಂಬ ಗೊಂದಲದಲ್ಲಿದ್ದಾಗ ಅವರಿಗೆ ಬಾಲಕ ವರ್ಧಮಾನರ ನೆನಪು ಬಂತು. ಅವರದು ಶ್ರೇಷ್ಠ ತೀರ್ಥಂಕರರ ಜನ್ಮ. ಮತಿ, ಶ್ರುತ, ಅವಧಿಜ್ಞಾನ ಸಂಪನ್ನರೆಂದು ತಿಳಿದು ಅವರ ದರ್ಶನ ಮಾಡಿದರು. ತಕ್ಷಣ ಅವರ ಸಂಶಯ ಪರಿಹಾರವಾಯಿತು. ಪುನರ್ಜನ್ಮ ಇರದೇ ಇರುತ್ತಿದ್ದರೆ ಬಾಲಕ ವರ್ಧಮಾನರ ಜನನ ಹೇಗಾಗುತ್ತಿತ್ತು? ಹಾಗಾಗಿ ಪುನರ್ಜನ್ಮ ಸಿದ್ಧಾಂತ ಎಂಬುದು ಸತ್ಯ ಎಂಬ ನಿರ್ಧಾರಕ್ಕೆ ಬಂದರು. ಹಾಗೂ ತಮ್ಮ ಮತಿಗೆ ಸಂತೃಪ್ತಿಯ ಉತ್ತರ ಸಿಕ್ಕಿದ್ದರಿಂದ, ದರ್ಶನ ಮಾತ್ರದಿಂದ ಸಂಶಯ ನಿವಾರಣೆಯಾದ ಸಂತೋಷದಲ್ಲಿ ಬಾಲಕನಿಗೆ ‘ಸನ್ಮತಿ’ ಎಂಬ ಹೆಸರಿಟ್ಟರು.

Daily Horoscope: ಮಹಾವೀರ ಜಯಂತಿಯ ಈ ದಿನ ನಿಮಗೆ ಹೇಗಿರಲಿದೆ ?

ಗಣ್ಯಾತಿಗಣ್ಯರ ಮೇಲೆ ಪ್ರಭಾವ
ಬಾಲ್ಯಾವಸ್ಥೆಯಲ್ಲಿ ಅಪಾರ ಧೈರ್ಯ ಪ್ರದರ್ಶಿಸಿ ಮದವೇರಿದ ಆನೆಯನ್ನು ಅಡಗಿಸಿದರು ಮತ್ತು ವಿಕಾರ ರೂಪವುಳ್ಳ ಕ್ರೂರಮನಸ್ಸಿನ ಸಂಗಮ ಎನ್ನುವ ದೇವನನ್ನು ತಮ್ಮ ಶಾಂತ ಕ್ಷಾತ್ರಧರ್ಮದ ಪ್ರಸನ್ನ ಮುದ್ರೆಯಿಂದ ಮಣಿಸಿದರು. ಶತ್ರುಗಳನ್ನು ಅರೆ ಕ್ಷಣದಲ್ಲಿ ಶರಣಾಗುವಂತೆ ಮಾಡುತ್ತಿದ್ದ ಪರಿಯಿಂದಾಗಿ ಜನಪದಜ, ವಿದ್ವಾಂಸರ, ಬಾಯಿಯಲ್ಲಿ ಅವರಿಗೆ ವೀರಾಧಿವೀರ ಮಹಾವೀರ ಎಂಬ ಹೆಸರು ಜನಪ್ರಿಯವಾಯಿತು. ಇವರ ಸಂದೇಶದಿಂದ ಪ್ರಭಾವಿತರಾದವರಲ್ಲಿ ಮಗದ ಸಾಮ್ರಾಟ ಮಹಾರಾಜ ಶ್ರೇಣೀಕಬಿಂಬಸಾರ, ಇಂದ್ರಭೂತಿ ಗೌತಮ ಗಣದರರು, ಇತರ 10 ಗಣದರರಾದ, 1.ಅಗ್ನಿ ಭೂತಿ, 2.ವಾಯುಭೂತಿ, 3.ಶುಚಿದತ್ತ, 4.ಸುದಮ, 5.ಮಾನುವ್ಯ, 6.ಮರ್ಯ ಪುತ್ರ, 7.ಅಕಂಪನ, 8.ಅಚಲ, 9.ಮೇದಾರ್ಯ, 10.ಪ್ರಯಾಸ ಅಲ್ಲದೆ ಗೌತಮ ಬುದ್ಧ, ರಾಜ ಶ್ರೇಣಿಕ, ಪರ್ಶಿಯಾದ ದೊರೆ ದಾರಶಾಹ, ಹೇಮಾಂಗ ದೇಶದ (ಈಗಿನ ಮೈಸೂರು) ರಾಜ ಜೀವಂಧರ, ಸಿಂಧೂ ದೇಶದ ಉದಯನ್‌, ಡಯೋಜನಿಸ್‌ ಅವರಂತಹ ಶ್ರೇಷ್ಠರಿದ್ದಾರೆ. ಬಿಹಾರದ ವೈಶಾಲಿಯ ಕ್ಷತ್ರಿಯ ಪುತ್ರರಾದ ಮಹಾವೀರ ಜೈನರು ದಾರ್ಶನಿಕರೂ ಸರ್ವೋದಯ ತೀರ್ಥ ಪ್ರವರ್ತಕರೂ ಸರ್ವಜೀವ ದಯಾಪರರೂ ಲೋಕೋದ್ಧಾರಕರೂ ಆದ ಕರುಣಾಮಯಿಗಳು. ಇವರ ವಿಹಾರದಿಂದ ಮಗಧ ದೇಶದ ಹೆಸರು ಬಿಹಾರ ಎಂದಾಯಿತು.

ಭಗವಾನ್‌ ಮಹಾವೀರರ ಸಂದೇಶ
ಭಗವಂತನ ಬಾಲ್ಯಕಾಲದಲ್ಲಿ ಭಾರತದಾದ್ಯಂತ ಜನರು ಅನಕ್ಷರತೆ, ಬಡತನದಿಂದ ನಲುಗಿ ಹೋಗಿದ್ದರು. ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಶೂದ್ರರೆನ್ನುವವರಲ್ಲಿ ಪರಸ್ಪರ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿತ್ತು. ಪ್ರಾಣಿ ಬಲಿಯ ಮೂಲಕ ದೇವತಾರಾಧನೆಯ ಪದ್ಧತಿಯು ಜಾರಿಯಲ್ಲಿತ್ತು. ಮತ್ತು ಪರಸ್ಪರ ದ್ವೇಷ ಅಸೂಯೆಗಳ ಮೂಲಕ ಶ್ರೇಷ್ಠ ಆತ್ಮನ ವೈಭವವೂ ಮಂಕಾಗಿ ಹೋಗಿತ್ತು. ಶ್ರೀಮಂತರು ವ್ಯಸನ ಲೋಲುಪತೆಗೆ ಒಳಗಾಗಿದ್ದರು. ಬಡವರು ಶೋಷಣೆಗೆ ಒಳಗಾಗಿದ್ದರು. ಬಡವ ಶ್ರೀಮಂತ ಎನ್ನುವ ಆರ್ಥಿಕ ಅಸಮಾನತೆಗೆ ಒಳಗಾಗದ ಕಪ್ಪು ಬಿಳುಪು ಎನ್ನುವ ವರ್ಣ ದ್ವೇಷಕ್ಕೆ ಹೊರತಾದ ಬಲಿಷ್ಠ ಕನಿಷ್ಠ ಎಂಬ ತರ-ತಮ ಭೇದಕ್ಕಿಂತ ಹೊರತಾದ ಸತ್ಕರ್ಮದಿಂದ ಸರ್ವ ಜೀವರಿಗೂ ಸದ್ಗತಿ, ದುಷ್ಕರ್ಮದಿಂದ ದುರ್ಗತಿ ಎಂಬ ವಿವೇಕವಾಣಿಯನ್ನು ಹಾಗೂ ನಮ್ಮ ದೇಹದಲ್ಲಿ ಆತ್ಮಶಕ್ತಿ ಇದೆ. ಅದು ಜ್ಞಾನ ದರ್ಶನ. ಚೇತನ ಶಕ್ತಿವುಳ್ಳದ್ದು. ಅದು ಹೇಗೆಂದರೆ, ಹಾಲಿನಲ್ಲಿ ತುಪ್ಪ, ಎಳ್ಳಿನಲ್ಲಿ ಎಣ್ಣಿ, ಕಲ್ಲಿನಲ್ಲಿ ಬಂಗಾರ, ಕಟ್ಟಿಗೆಯಲ್ಲಿ ಬೆಂಕಿ ಇರುವಂತೆ ದೇಹದಲ್ಲಿ ಆತ್ಮ ತುಂಬಿದ್ದಾನೆ. ಅದು ಅಜರಾಮರವಾದುದು. ಅದಕ್ಕೆ ಸಾವಿಲ್ಲ. ನಾಶವಿಲ್ಲ. ತನ್ನ ಆಯುಷ್ಯ ಮುಗಿದಾಗ ದೇಹವು ನಾಶವಾಗುತ್ತದೆ. ಆದರೆ ಆತ್ಮನು ಈ ದೇಹವನ್ನು ಬಿಟ್ಟು ತನ್ನ ಆಯುಷ್ಯ ಮುಗಿದಾಗ ಇನ್ನೊಂದು ದೇಹವನ್ನು ಪ್ರಾರಂಭ ಗರ್ಭಾವಸ್ಥೆಯಲ್ಲೇ ಪರಕಾಯ ಪ್ರವೇಶ ಮಾಡುತ್ತದೆ. ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲಗಳೆಂಬ ಆರು ದ್ರವ್ಯಗಳು ಅನಾದಿನಿಧನ. ಈ ಜಗತ್ತನ್ನು ಯಾರೂ ಸೃಷ್ಟಿಸಿಲ್ಲ. ನಾಶಮಾಡುವುದೂ ಇಲ್ಲ. ಇವು ಸ್ವಭಾವ ಸಿದ್ಧವಾದುದವುಗಳು ಎಂಬ ಪ್ರಾಚೀನ ವೈಜ್ಞಾನಿಕ ಆರ್ಷಸತ್ಯವನ್ನು ತಿಳಿಸಿದರು. ಅಂತೆಯೇ ಈ ವರ್ಷದ ಏಪ್ರಿಲ್‌ 3, 4ರಂದು 2023ರಂದು ವಿಶ್ವದಾದ್ಯಂತ ಆಚರಿಸಲಿರುವರು.

Mahavir Jayanti 2023: ಮಹಾವೀರರು ಹೇಳಿದ ಯಶಸ್ವಿ ಜೀವನದ ಪಂಚಶೀಲ ತತ್ವಗಳು

ಮಹಾತ್ಮ ಗಾಂಧಿ, ಜಾರ್ಜ್ ಬರ್ನಾಡ್‌ ಶಾ ಜೀವನಕ್ಕೆ ಪ್ರೇರಕ ದೇವರು ಬಸವಣ್ಣನವರ ವಚನಗಳು. ಇವರ ಅನುಭವ ಮಂಟಪ ಸರ್ವೋದಯ ಧರ್ಮ ತೀರ್ಥದ ಸಂದೇಶ ಪಂಚ ಅಣು ವ್ರತ ಸರಳ ಕನ್ನಡದಲ್ಲಿ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡೆಯಬೇಡ, ತನ್ನ ಬಣ್ಣಿಸಲು ಬೇಡ, ಇದಿರ ಅಳಿಯಲು ಬೇಡ, ಇದುವೆ ಅಂತರಂಗ ಶುದ್ಧಿ ಇದು ಬಹಿರಂಗ ಬದುಕು ತಿದ್ದುವ ಪರಿ ಎಂಬ ಅರ್ಥ ಭಗವಾನ್‌ ಮಹಾವೀರ ಸ್ವಾಮಿಯ ದಿವ್ಯಸಂದೇಶದ ದಿವ್ಯ ಅಣಿ ಮುತ್ತು ಸರಳ ಕನ್ನಡದಲ್ಲಿ 12ನೇ ಶತ ಮಾನದಲ್ಲಿ ಮತ್ತೆ ನುಡಿದರು.

ಸಹಬಾಳ್ವೆಯೇ ಭಾರತದ ಜೀವಾಳ
ಗಾಢ ಧರ್ಮನಿಷ್ಠ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ಇಲ್ಲಿನ ಬಹುತೇಕ ಜನರ ಬದುಕಿನಲ್ಲಿ ಇಂದಿಗೂ ಧರ್ಮ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಭಾರತೀಯರ ಬದುಕಿನಲ್ಲಿ ಧರ್ಮ ಮಹತ್ವದ ಪಾತ್ರ ವಹಿಸಿದ್ದರೂ, ನಾಸ್ತಿಕರು ಮತ್ತು ಆಜ್ಞೇಯತಾವಾದಿಗಳೂ ಕೂಡ ಒಟ್ಟಿಗೆ ಬದುಕುತ್ತಿದ್ದಾರೆ. ವಿವಿಧ ಧರ್ಮೀಯರ, ಧರ್ಮಗಳ ನಡುವೆ ಸಾಮರಸ್ಯದ ಸಹಬಾಳ್ವೆ ಭಾರತೀಯ ಸಂಸ್ಕೃತಿ ಭಗವಾನ್‌ ಮಹಾವೀರ ಸ್ವಾಮಿಯ ದಿವ್ಯಸಂದೇಶ.

ಪಂಚಭೂತಗಳಲ್ಲಿ ದಯೆ, ಸರ್ವರಿಗೂ ಬದುಕುವ ಹಕ್ಕು ಇದೆ. ಪ್ರಕೃತಿ ಪರಿಸರದ ಮಣ್ಣು ಅಗೆಯುವಾಗ ಕಲ್ಲು ವೃಕ್ಷಗಳನ್ನು ಕಡಿಯುವ ಸಂದರ್ಭ ಅನಗತ್ಯ ಹಿಂಸೆ ಆಗದಂತೆ, ನೀರು ವ್ಯರ್ಥ ಚೆಲ್ಲದಂತೆ, ಹೂ ಹಣ್ಣು ಕೀಳುವಾಗ ಅಗತ್ಯ ನಿಯಮಗಳನ್ನು ರೂಪಿಸಿ, ಪರ್ಯಾವರಣ ಸಮತೋಲನ ಕಾಪಾಡುವ ನಿಯಮ ರೂಪಿಸಿದ ಮಹಾ ಶ್ರಮಣ ಸ್ವಯಂ ಭೂ ಆಗಿದ್ದರು. ಸತ್ವ ಇರುವ ಸಾತ್ವಿಕರಲ್ಲಿ ಜ್ಞಾನಿಗಳಲ್ಲಿ ಮಿತ್ರಭಾವನೆಯಿರಲಿ. ಗುಣಿಗಳ ಆದರ ಸತ್ಕಾರವಿರಲಿ. ವಿಪರೀತ ಮನೋಧರ್ಮದ ವ್ಯಕ್ತಿಗಳಲ್ಲಿ ಮಧ್ಯಭಾವನೆಯಿರಲಿ. ಪರಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೇಡು ಬಯಸುವುದರಿಂದ ಕರ್ಮವೂ ಬಿಡದೆ ಬೆಂಬತ್ತಿ ಬರುವುದು. ತನಗಿಂತ ಕನಿಷ್ಠರಾದವರ ಬಗ್ಗೆ, ಪಶುಪಕ್ಷಿ ಪ್ರಾಣಿಸಸ್ಯ ಸಂಕುಲದ ಬಗ್ಗೆ ಜೀವದಯೆ ಇರಲಿ. ಅನ್ನದಾನ, ಅಭಯದಾನ ಶಾಸ್ತದಾನ, ವಿದ್ಯಾದಾನ ಶ್ರೇಷ್ಠದಾನಗಳು. ಗುಣಗಳ ಭಂಡಾರ ಭಗವಂತ. ಅವರ ಗುಣಗಳ ಆರಾಧಕರಾಗೋಣ.

click me!