ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?

By Suvarna News  |  First Published Apr 13, 2020, 5:04 PM IST

ಆಂಜನೇಯ, ಹನುಮಂತ ಎಂದೆಲ್ಲ ಕರೆಯಲ್ಪಡುವ ರಾಮ ಬಂಟನಿಗೆ ಮದುವೆಯಾಗಿದೆ ಎಂಬ ವಿಷಯ ನಿಮಗೆ ಗೊತ್ತಿದೆಯೇ? ಹೌದು. ಆದರೆ, ಈ ವಿಷಯ ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ. ಇದಕ್ಕೆ ಕಾರಣಗಳೂ
ಇಲ್ಲವೆಂದಲ್ಲ. ಇನ್ನೊಂದು ಕುತೂಹಲಕರ ವಿಷಯ ಎಂದರೆ ಆಂಜನೇಯ ವಿವಾಹವಾದರೂ ಬ್ರಹ್ಮಚಾರಿ. ತೆಲಂಗಾಣದ ಹೈದರಾಬಾದಿನಲ್ಲಿ ಆಂಜನೇಯನ ಪತ್ನಿಯ ದೇವಾಲಯವಿದೆ.  ಯಾರದು
ತಿಳಿದುಕೊಳ್ಳಬೇಕೇ? ಇಲ್ಲಿ ನೋಡಿ...


ರಾಮಬಂಟ ಆಂಜನೇಯನಿಗೂ ಮದುವೆಯಾಗಿದೆ. ಅವನಿಗೂ ಹೆಂಡತಿ ಇದ್ದಾಳೆ. ಈ ವಿಷಯ ನಿಮಗೆ ಗೊತ್ತೇ? ಹನುಮಂತನ ಸ್ವಾಮಿ ನಿಷ್ಠೆ ಲೋಕಕ್ಕೆ ಮಾದರಿ. ಮಹಾಕಾವ್ಯ ರಾಮಾಯಣದಲ್ಲಿ ಅತ್ಯಂತ ವಿಶೇಷವಾದ ರಾಮಭಕ್ತಿಯನ್ನು ತೋರಿದ ಹನುಮ, ಮಾನವರ ಕಷ್ಟಗಳ ನಿವಾರಿಸುವ ಪ್ರಭಾವಿ ಶಕ್ತಿ ಎಂದೇ
ನಂಬಲಾಗಿದೆ. ಆಂಜನೇಯನನ್ನು ಶಿವನ 11ನೇ ಅವತಾರ ಎಂಬ ಪ್ರತೀತಿ ಇದೆ.

ಇದನ್ನೂ ಓದಿ: ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ

ಅತ್ಯಂತ ಶಕ್ತಿವಂತ ಮತ್ತು ಬುದ್ಧಿವಂತನಾದ ಆಂಜನೇಯನ ಹೆಸರು ಚಿರಂಜೀವಿಗಳ ನಾಮಸ್ಮರಣೆಯಲ್ಲಿಯೂ ಇದೆ. ಹನುಮಂತನು ಮದುವೆಯಾಗಿದ್ದರೂ ಬ್ರಹ್ಮಚಾರಿ ಎಂದೇ ಕರೆಯಲಾಗುತ್ತದೆ. ಇದಕ್ಕೆ
ಕಾರಣವೇನೆಂಬುದನ್ನು ತಿಳಿಯೋಣ.

ವಿದ್ಯೆ ಕಲಿಯಲು ಮದುವೆಯಾದ
ಪರಾಶರ ಸಂಹಿತೆಯಲ್ಲಿ ಪರಾಶರ ಮಹರ್ಷಿಗಳ ಪ್ರಕಾರ ಹನುಮಂತನ ಗುರು ಸೂರ್ಯದೇವ. ಸೂರ್ಯದೇವನಿಂದ ಅನೇಕ ವಿಧದ ವಿದ್ಯೆಗಳ ಕಲಿತು, ನವ (ನಿಧಿ) ವ್ಯಾಕರಣದಲ್ಲಿ ಕೇವಲ 5 ವಿಧಗಳನ್ನು ಮಾತ್ರ ಕಲಿಯುತ್ತಾನೆ. ಹನುಮನಿಗೆ ಉಳಿದ ನಾಲ್ಕು ವಿಧಗಳನ್ನು ಕಲಿಯಲು ಸಂಸಾರಸ್ಥನಾಗಿರುವುದು ಕಡ್ಡಾಯವಾಗಿರುತ್ತದೆ. ಲೋಕಕಲ್ಯಾಣಕ್ಕಾಗಿ ಆ ನಾಲ್ಕು ನಿಧಿಗಳನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ದೇವಾನು ದೇವತೆಗಳು ಸೂರ್ಯದೇವನ ಮೊರೆ ಹೋಗುತ್ತಾರೆ. ಆಗ ಸೂರ್ಯದೇವ ತನ್ನ ರಶ್ಮಿಯಿಂದ ಸುಂದರವಾದ ಯುವತಿಯನ್ನು ಸೃಷ್ಟಿಸುತ್ತಾನೆ. ಅವಳೇ ಸುವರ್ಚಲಾ ದೇವಿ. ತಂದೆ ಸೂರ್ಯನಿಂದ ಬಂದ ಸುವರ್ಚಲಾಳ ವರ್ಚಸ್ಸನ್ನು ತಡೆದುಕೊಳ್ಳುವ ಶಕ್ತಿ ಇದ್ದದ್ದು ಆಜೀವನ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸಿದ ಹನುಮಂತನಿಗೆ ಮಾತ್ರವಾಗಿತ್ತು.

ಇದನ್ನೂ ಓದಿ: ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಗುರುದಕ್ಷಿಣೆಯಾಗಿ ಮಗಳ ಕೊಟ್ಟ ಸೂರ್ಯದೇವ
ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ಮಗಳು ಸುವರ್ಚಲಾ ದೇವಿಯನ್ನು ಮದುವೆಯಾಗುವಂತೆ ಹನುಮಂತನಲ್ಲಿ ಹೇಳುತ್ತಾನೆ. ಧರ್ಮಸಂಕಟದಲ್ಲಿದ್ದ ಹನುಮನನ್ನು ಮದುವೆಗೆ ಒಪ್ಪಿಸುವಲ್ಲಿ ದೇವತೆಗಳು
ಸಫಲರಾಗುತ್ತಾರೆ. 5 ನಿಧಿಯನ್ನು ಪಡೆದುಕೊಂಡ ಹನುಮ ಇನ್ನು ನಾಲ್ಕು ನಿಧಿಯನ್ನು ಪಡೆಯುವ ಮೂಲಕ ಲೋಕ ಕಲ್ಯಾಣವಾಗುತ್ತದೆ ಎಂಬ ಕಾರಣಕ್ಕೆ ವಿವಾಹದ ಪ್ರಸ್ತಾಪವನ್ನು ಒಪ್ಪುತ್ತಾನೆ. ಹನುಮಂತನು
ಮದುವೆಯಾದ ನಂತರವೂ ಬ್ರಹ್ಮಚಾರಿಯಾಗಿಯೇ ಉಳಿಯುವಂತೆ ಸೂರ್ಯದೇವ ವರವನ್ನು ನೀಡುತ್ತಾನೆ.

ಸುವರ್ಚಲಾ ದೇವಿಯ ತಪಸ್ಸು
ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲಾ ದೇವಿ ಮತ್ತು ಹನುಮಂತನ ವಿವಾಹವಾಗುತ್ತದೆ. ವಿವಾಹವಾದ ನಂತರ ಸುವರ್ಚಲಾ ದೇವಿ ತಪಸ್ಸನ್ನಾಚರಿಸವಲ್ಲಿ ನಿರತಳಾಗುತ್ತಾಳೆ, ಹನುಮಂತ ವ್ಯಾಕರಣವನ್ನು (ನಿಧಿ) ಕಲಿಯುವುದರ ಮೂಲಕ 9 ವ್ಯಾಕರಣಗಳ ಸಿದ್ಧಿಯನ್ನು ಪಡೆದು, ಅಷ್ಟ ಸಿದ್ಧಿಯನ್ನು, ನವನಿಧಿಯನ್ನು ಕರುಣಿಸುವ ದಾತಾರನಾಗುತ್ತಾನೆ. ರಾಮಭಕ್ತಿಯಿಂದ ಜಗತ್ತಿನ ಒಳಿತಿಗೆ ಶ್ರಮಿಸುತ್ತಾನೆ.

ದೇವಲಯವೂ ಇದೆ
ಲೋಕ ಕಲ್ಯಾಣಾರ್ಥಕ್ಕಾಗಿ ಆದ ಈ ಮದುವೆಯಿಂದ ಹನುಮಂತನ ಬ್ರಹ್ಮಚರ್ಯಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ಹೈದಾರಾಬಾದಿನಿಂದ ಇನ್ನೂರ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುವರ್ಚಲಾ ದೇವಿ ದೇವಸ್ಥಾನವಿದೆ.

ಇದನ್ನೂ ಓದಿ: ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಪ್ರತೀತಿ 
ಸುವರ್ಚಲಾ ದೇವಿ ಮತ್ತು ಹನುಮಂತನನ್ನು ಈ ರೂಪದಲ್ಲಿ ಪೂಜೆ ಮಾಡಿದರೆ ದಾಪಂತ್ಯ ಜೀವನ ಚೆನ್ನಾಗಿರುತ್ತದೆ. ಪತಿ-ಪತ್ನಿಯ ನಡುವೆ ಯಾವುದೇ ಭಿನ್ನಭಿಪ್ರಾಯ ಬರದೇ ಜೀವನ ಪರ್ಯಂತ
ಸಂತೋಷದಿಂದಿರುತ್ತಾರೆ ಎಂಬ ನಂಬಿಕೆ ಇದೆ.

click me!