Puri Jagannath Ratha Yatra: ರಥದ ಹಗ್ಗ ಮುಟ್ಟಿದರೆ ಜಗನ್ನಾಥನ ಪಾದ ಸ್ಪರ್ಶಿಸಿದಂತೆ!

By Suvarna News  |  First Published Jul 4, 2023, 12:28 PM IST

ಚಾರಧಾಮ್‌ಗಳಲ್ಲಿ ಒಂದಾದ ಪುರಿ ಜಗನ್ನಾಥ ರಥಯಾತ್ರೆಯನ್ನು ಕಣ್ತುಂಬಿಕೊಳ್ಳುವುದು ಭಾಗ್ಯ. ಅಂಥದ್ರಲ್ಲಿ ತ್ರಿವಳಿ ತೇರನ್ನೆಳೆಯುವ ಭಾಗ್ಯ ಸಿಕ್ಕರೆ? ಜೀವನದ ಮುಕ್ತಿ ಸಿಗುತ್ತೆ ಎಂಬ ನಂಬಿಕೆ ಇರೋ ಈ ತ್ರಿವಳ ತೇರನ್ನೆಳೆದ ಸಾಕ್ಷಾತ್ ಅನುಭವವಿದು.  


- ರಜನಿ. ಎಂ.ಜಿ. ಏಷ್ಯಾನೆಟ್ ಸುವರ್ಣನ್ಯೂಸ್

ಪುರಿ ಜಗನ್ನಾಥನನ್ನು ನೋಡುವುದು ಒಂದು ಅನುಭವವಾದರೆ, ಜಗನ್ನಾಥ ರಥಯಾತ್ರೆ ನೋಡುವುದೇ ಮತ್ತೊಂದು ಅನುಭವ. ಜಗನ್ನಾಥನ ದೇಗುಲ ಶ್ರೀಮಂದಿರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಗುಂಡಿಚಾ ದೇವಸ್ಥಾನಕ್ಕೆ ಅಣ್ಣ ಬಲಭದ್ರ, ತಂಗಿ ಸುಭದ್ರಾ ಜೊತೆ ಜಗನ್ನಾಥ ರಥವೇರಿ ಬರುತ್ತಾನೆ. ಗರ್ಭಗುಡಿಯಿಂದ ಹೊರಬರುವ ಈ ಸಹೋದರರನ್ನು ನೋಡಲು ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಬಂದಿರುತ್ತಾರೆ. ಗುಂಡಿಚಾ ದೇಗುಲದಲ್ಲಿ 9 ದಿನ ಉಳಿಯುವ ಭಗವಂತ ಆನಂತರ ಹಿಂದಿರುಗಿ ತನ್ನ ಶ್ರೀಮಂದಿರಕ್ಕೆ ತೆರಳುತ್ತಾನೆ. ಬಹುದಾ ಯಾತ್ರೆ ಎಂದು ಕರೆಯುವ ಈ ರಥೋತ್ಸವದಲ್ಲೂ 10 ಲಕ್ಷ ಜನ ಭಾಗವಹಿಸುತ್ತಾರೆ.

Tap to resize

Latest Videos

ನಾನು ಪುರಿಗೆ ಹೋದಾಗ ಭಗವಂತ ಗುಂಡಿಚಾ ದೇಗುಲದಲ್ಲಿದ್ದ. ರಥೋತ್ಸವ ಬರುವ ಗ್ರ್ಯಾಂಡ್​ ರೋಡಿನಲ್ಲೇ ಇಸ್ಕಾನ್​ ಕಟ್ಟಡ ಇರುವುದರಿಂದ ಅದರ ಟೆರೇಸ್​​ ಮೇಲೆ ನಿಂತು ರಥೋತ್ಸವ ನೋಡಲು ನಮಗೆ ವ್ಯವಸ್ಥೆಯಾಗಿತ್ತು. ಆದರೆ ರಥಯಾತ್ರೆಯಲ್ಲಿ ನಾವೂ ತೇರನ್ನೆಳೆಯಬಹುದೇ?  ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರವಿರಲಿಲ್ಲ. ಹತ್ತಾರು ಲಕ್ಷ ಜನ ಭಾಗವಹಿಸುವ ಯಾತ್ರೆಯಲ್ಲಿ ಕೆಳಗಿಳಿದು ಹೋಗುವುದು ರಿಸ್ಕಿ. ಹೋದರೂ ತೇರಿನ ಹಗ್ಗ ಮುಟ್ಟುತ್ತೇವೆಂಬ ಖಾತ್ರಿ ಇಲ್ಲ. ಜೊತೆಗೆ ಕಾಲ್ತುಳಿತ, ಕಳೆದು ಹೋಗುವ ಭಯವೂ ಇತ್ತು. ಅಲ್ಲದೆ ಮಾಂಗಲ್ಯ ಹಾಕಿಕೊಂಡು ಹೋಗಬೇಡಿ, ಮೊಬೈಲ್​ ಇದ್ದರೆ ವಾಪಾಸ್​ ಸಿಗಲ್ಲ ಅಂತೆಲ್ಲಾ ಎಚ್ಚರಿಕೆ ನೀಡಿದ್ದು ಇನ್ನಷ್ಟು ಭಯ ಮೂಡಿಸಿತ್ತು.

ಪುರಿಯ ರಥಬೀದಿ ಗ್ರ್ಯಾಂಡ್​ ರೋಡ್​​  ಸುಮಾರು 350 ಅಡಿಯ ವಿಶಾಲ ರಸ್ತೆ ಜನರಿಂದ ಕಿಕ್ಕಿರಿದಿತ್ತು. ಇಸ್ಕಾನ್​ ಕಟ್ಟಡ ಹೊಕ್ಕೆವಾದರೂ, ಹೊರಗಿನ ಆಕರ್ಷಣೆ ನಮ್ಮನ್ನು ರಸ್ತೆಗಿಳಿಯುವಂತೆ ಮಾಡಿತು. ಆವೇಳೆಗಾಗಲೇ ಚೇರಾ ಪಹರಾ ನಡೆದಿತ್ತು. ಅಂದರೆ ಪುರಿಯ ಮಹಾರಾಜ ಸ್ವತಃ ಚಿನ್ನದ ಪೊರಕೆ ಹಿಡಿದು ಪುರಿಯ ಮುಖ್ಯ ರಸ್ತೆಯನ್ನು ಗುಡಿಸುತ್ತಾನೆ. ಶ್ರೀಗಂಧದ  ನೀರಿನಿಂದ ರಥ ಬರುವ ಹಾದಿಗೆ ಪರಿಮಳ ಚಿಮುಕಿಸುತ್ತಾನೆ . ಇದಾದ ನಂತರ ರಥಯಾತ್ರೆ ಪ್ರಾರಂಭವಾಗುತ್ತದೆ. 

ಪುರಿ ಜಗನ್ನಾಥ ದೇಗುಲದ ಮೇಲೊಂದು NO FLYING ZONE, ಇಲ್ಲಿ ಹಕ್ಕಿಯೂ ಹಾರೋಲ್ಲ

ಇಡೀ ಜಗತ್ತೇ ಜಗನ್ನಾಥನ ದರ್ಶನಕ್ಕೆ ಕಾದಿದೆಯೇನೋ ಎಂಬಂತೆ ಗ್ರ್ಯಾಂಡ್​ ರೋಡ್​ ಕಾಣುತ್ತಿತ್ತು. ದೂರದಲ್ಲಿ ರಥದ ಕಳಸ ಕಾಣಿಸುತ್ತಿದ್ದಂತೆ ಎಲ್ಲೆಲ್ಲೂ ಜೈ ಜಗನ್ನಾಥ ಎಂಬ ಕೂಗು ಮುಗಿಲು ಮುಟ್ಟುತ್ತಿತ್ತು. ಕೆಲವರು ರಥವನ್ನು ನೋಡಿ ಅಳುತ್ತಿದ್ದರೆ, ಇನ್ನೂ ಕೆಲವರು ಆ ಜನಸಂದಣಿಯಲ್ಲೇ ಶಿರಸಾಷ್ಟಾಂಗ ನಮಸ್ಕರಿಸುತ್ತಿದ್ದರು. ಗಂಡು ಹೆಣ್ಣೆನ್ನದೆ ಎಲ್ಲರೂ ಭಾವಪರವಶರಾಗಿ ಹರೇರಾಮ ಹರೇ ಕೃಷ್ಣ ಎಂದು ಕುಣಿಯುತ್ತಿದ್ದರು. ಡೊಳ್ಳು ತಮಟೆ ಮೊದಲಾದ ಮಂಗಳ ವಾದ್ಯಗಳ ಸದ್ದೂ ರಸ್ತೆಯನ್ನು ತುಂಬಿತ್ತು.  ಇಸ್ಕಾನ್​​ ಅನುಯಾಯಿಗಳು ಹಾಡುತ್ತಿದ್ದ ಭಜನೆಗೆ ಜನಸ್ತೋಮದ ಭಕ್ತಿಯ ಪರಾಕಾಷ್ಟೆ ಮೇರೆ ಮೀರುವಂತೆ ಕಾಣುತ್ತಿತ್ತು. ಯಾವ ಹಿಂಜರಿಕೆಯಿಲ್ಲದೆ ಪರವಶವಾಗಿ ಕುಣಿಯುತ್ತಿದ್ದ ಸಾವಿರಾರು ಜನರ ನಡುವೆ ನಾವೂ ಹೆಜ್ಜೆ ಹಾಕಿದೆವು.

ಈ ಮಧ್ಯೆ ರಥವನ್ನೆಳೆಯಲು ಸಾಧ್ಯವೇ ಎಂದು ನೋಡಲು ಹೊರಟೆ. ಲಕ್ಷಾಂತರ ಜನರ ನಡುವೆ ರಥದ 5 ಹಗ್ಗಗಳನ್ನು ಹುಡುಕುವುದೇ ಕಷ್ಟ. ಆ ಹಗ್ಗವನ್ನು  ಮುಟ್ಟುವುದೇ ಜಗನ್ನಾಥನ ಚರಣ ಸ್ಪರ್ಶಿಸಿದಂತೆ ಎಂದು ಭಾವಿಸುವ ಲಕ್ಷಾಂತರ ಜನ ಹಗ್ಗವನ್ನು ಹಿಡಿಯಲು ಹಾತೊರೆಯುತ್ತಿರುತ್ತಾರೆ. ಅವರ ನಡುವೆ ಜಾಗ ಮಾಡಿಕೊಂಡು ಅದು ಹೇಗೋ ಕಷ್ಟಪಟ್ಟು ಹಗ್ಗವನ್ನು ಹಿಡಿಯುವಲ್ಲಿ ಯಶಸ್ವಿಯಾದೆ. ಅಷ್ಟರಲ್ಲಿ ನನ್ನ ಕಾಲನ್ನು ಅದೆಷ್ಟು ಜನ ತುಳಿದರೋ, ನಾನೆಷ್ಟು ಜನರ ಕಾಲು ತುಳಿದೆನೋ ತಿಳಿಯದು. ಆ ಹಗ್ಗದ ಚಿಕ್ಕದ ದಾರದ ತುಂಡನ್ನು ಕಿತ್ತುಕೊಂಡು ಪ್ರಸಾದದಂತೆ ಮನೆಗೆ ಕೊಂಡೊಯ್ಯುವ ಜನರ ಭಕ್ತಿ ಕಂಡು ಬೆರಗಾದೆ. ಬಲಭದ್ರ, ಸುಭದ್ರಾ ರಥವನ್ನು ಹೇಗೋ ಮಾಡಿ ಎಳೆಯಬಹುದು. ಆದರೆ ಜಗನ್ನಾಥನ ರಥದ ಬಳಿ ಹೋಗುವುದೆಂದರೆ ಚಕ್ರವ್ಯೂಹ ಹೊಕ್ಕಂತೆಯೇ ಸರಿ. ಅದ್ಯಾವುದೋ ಧೈರ್ಯದಲ್ಲಿ ಒಳನುಗ್ಗಿ ಹಬ್ಬ ಹಿಡಿದೆನಾದರೂ ಆನಂತರ ಕೈ ಬಿಡಲಾಗಲಿಲ್ಲ. ಸಾವಿರಾರು ಕೈಗಳು ಹಿಡಿದ 100 ಅಡಿ ಉದ್ದದ ಆ ಹಗ್ಗ ಯಾರ ನಿಯಂತ್ರಣದಲ್ಲೂ ಇರದೆ ಅತ್ತಿಂದಿತ್ತ ತೂಗಾಡುತ್ತಿರುತ್ತಿತ್ತು. ಅಲೆಯಂತೆ ತುಯ್ದಾಡುವ ಆ ಚಕ್ರವ್ಯೂಹದಲ್ಲಿ ಸಿಲುಕಿ, ಜನರ ನಡುವೆ ಸಿಲುಕಿದ್ದೆ. ಒಬ್ಬ ಪತ್ರಕರ್ತೆಯಾಗಿ ಕಾಲ್ತುಳಿತ ಹೇಗಾಗುತ್ತದೆ, ಜನಸಂದಣಿಯಲ್ಲಿ ಸಾವು ಹೇಗೆ ಸಂಭವಿಸುತ್ತದೆ ಎಂದು ತಿಳಿದ ಸಾಕ್ಷಾತ್​ ಅನುಭವವದು. ಆದರೆ ಜೈ ಜಗನ್ನಾಥ ಎಂದು  ಅಲ್ಲಿಂದ ಒಮ್ಮೆ ಹೊರಬಿದ್ದರೆ ಯುದ್ಧವನ್ನು ಗೆದ್ದ  ಸಾರ್ಥಕ ಅನುಭವ. 

Puri Ratha Yatra: ಭಕ್ತಿಯ ಉನ್ಮಾದದಲ್ಲಿ ಮಿಂದೇಳುವ ಭಕ್ತರ ನೋಡುವುದೇ ಇಲ್ಲೊಂದು ಸಂಭ್ರಮ!

ಕೂಡಲೇ ಇಸ್ಕಾನ್​ ಕಟ್ಟಡದ ಟೆರೇಸ್​ಗೆ ಓಡಿದೆ. ಅಲ್ಲಿ ಕಂಡ ದೃಶ್ಯ ನಾನೆಂದೂ ಮರೆಯಲಾರೆ. ರಥದ ಹಿಂದೆ ಮುಂದೆ ಹತ್ತಾರು ಲಕ್ಷ ಜನ  ಜಗನ್ನಾಥನ ರಥಕ್ಕೆ ಮುತ್ತಿದ ಜೇನಿನಂತೆ ಕಾಣುತ್ತಿದುದು  ಒಂದೆಡೆಯಾದರೆ ಅಲೆಗಳಂತೆ  ಉಕ್ಕೇರುತ್ತಿದ್ದ ಜನರ ಉತ್ಕಟ ಭಕ್ತಿ ನನ್ನನ್ನು ಮೂಕ ವಿಸ್ಮಿತಳನ್ನಾಗಿಸಿತು. ಆ ಭಕ್ತಿ ಸಮುದ್ರದ ಎದುರು ನಾನೆಂಬ ಕಣ ಅದೆಷ್ಟು ಚಿಕ್ಕದು ಎಂಬುದು ಅರಿವಿಗೆ ಬಂತು. ಜನರ ಸಾಮೂಹಿಕ ಪ್ರಾರ್ಥನೆ ಭಗವಂತನನ್ನೇ ಧರೆಗೆ ಎಳೆದು ತರುತ್ತದೆ ಎಂದು  ಕುವೆಂಪು ರಾಮಾಯಣ ದರ್ಶನಂನಲ್ಲಿ ಹೇಳಿದ್ದು ಅಲ್ಲಿ ಕಣ್ಣಾರೆ ಕಂಡಂತಾಯಿತು. ರಥದಲ್ಲಿದ್ದ ದೇವರು, ರಥದ ಹಿಂದೆ ಮುಂದೆ ಸಾಗುತ್ತಿದ್ದ ಜನಸಾಗರವನ್ನೂ ಆವರಿಸಿ ಮುಗಿಲೆತ್ತರ ಬೆಳೆದಂತಾಯಿತು. ಅರ್ಜುನನ ಎದುರು ನಿಂತಿದ್ದ ವಿಶ್ವರೂಪ ನಮ್ಮ ಕಣ್ಮುಂದೂ ಮೂಡಿದಂತಾಯಿತು. ಆನಂತರ ಈ ಕಣ್ಣಿಗೆ, ಈ ಕಿವಿಗೆ ಏನೇ ಕಂಡರೂ, ಏನೇ ಕೇಳಿದರೂ ಉಳಿದಿದ್ದು ಜಗನ್ನಾಥನ ರೂಪವೊಂದೇ.. ಆತನ ಸ್ಮರಣೆಯೊಂದೆ!

click me!