Asianet Suvarna News Asianet Suvarna News

Puri Ratha Yatra: ಭಕ್ತಿಯ ಉನ್ಮಾದದಲ್ಲಿ ಮಿಂದೇಳುವ ಭಕ್ತರ ನೋಡುವುದೇ ಇಲ್ಲೊಂದು ಸಂಭ್ರಮ!

ಚಾರ್‌ಧಾಮ್‌ಗಳಲ್ಲಿ ಒಂದಾದ ಪುರಿ ಜಗನ್ನಾಥನ ವಿಗ್ರಹವೇ ವಿಭಿನ್ನ. ಅದನ್ನು ನಿರ್ವಹಿಸುವ ರೀತಿ, ಬಳಸುವ ಮರದ ಬಗ್ಗೆಯೂ ಹತ್ತು ಹಲವು ವಿಶೇಷಗಳಿವೆ. ರಥಯಾತ್ರೆಯ ಕೌತುಕದೊಂದಿಗೆ ಇಲ್ಲಿಯ ತ್ರಿಮೂರ್ತಿಗಳ ವಿಶೇಷವೇನು? ಇಲ್ಲಿದೆ.

jagannatha subhadra balarama statues of puri decked with gold after ratha yatra orissa
Author
First Published Jul 2, 2023, 5:18 AM IST

- ರವಿಶಂಕರ್ ಭಟ್, ಕನ್ನಡ ಪ್ರಭ

ಪುರಿ ಜಗನ್ನಾಥ. ಹೆಸರೇ ಜಗದ್ವಿಖ್ಯಾತ. ಜಗನ್ನಾಥನ ತೇರೂ ವಿಶ್ವಪ್ರಸಿದ್ಧ. ರಥೋತ್ಸವ ನಡೆವ ಅಷ್ಟೂ ದಿನ ಒಡಿಶಾ ರಾಜ್ಯದ ಕಡಲತಡಿಯ ಪುರಿ ನಗರಿಯಲ್ಲಿ ಜನ ಸಾಗರ. ರಥೋತ್ಸವದ 9-10 ದಿನಗಳಲ್ಲಿ 25ರಿಂದ 30 ಲಕ್ಷ ಪ್ರವಾಸೀ ಭಕ್ತಗಣಕ್ಕೆ ಆಶ್ರಯ ನೀಡುತ್ತದೆ ಜಗನ್ನಾಥ ಪುರಿ. ಈ ಋತುವಿನಲ್ಲಿ ಏಕಕಾಲಕ್ಕೆ ಏನಿಲ್ಲವೆಂದರೂ 8-10 ಲಕ್ಷ ಹೊರಗಿನವರಿಗೆ ಪುರಿ ಆಶ್ರಯತಾಣ. ದೇವರ ವಿಗ್ರಹಗಳ ಜೀರ್ಣೋದ್ಧಾರ ನಡೆದ ವರ್ಷವಾದ 2015ರಲ್ಲಿ 50 ಲಕ್ಷ ಜನ ಆಗಮಿಸಿದ್ದ ಅಂದಾಜಿದೆ. ಶಿಲೆ ಅಥವಾ ಲೋಹದಿಂದಲ್ಲ, ಶ್ರೇಷ್ಠ ಗುಣಮಟ್ಟದ ನಿರ್ದಿಷ್ಟ ಬೇವಿನ ಮರದಿಂದ ವಿಗ್ರಹಗಳನ್ನು ತಯಾರಿಸಲಾಗಿದ್ದು, ಕಾಲಕಾಲಕ್ಕೆ ಹೊಸ ವಿಗ್ರಹಗಳನ್ನು ಕಡೆದು ಮರುಸ್ಥಾಪಿಸಲಾಗುವುದು ಇಲ್ಲಿನ ವಿಶೇಷತೆ. ಆ ವರ್ಷ ರಥಯಾತ್ರೆಯ ಮೊದಲ ದಿನ 25 ಲಕ್ಷ ಜನ ನೆರೆದಿದ್ದರು ಎನ್ನುತ್ತವೆ ವರದಿಗಳು. ಜಗತ್ತಿನ ಯಾವುದೇ ರಥಯಾತ್ರೆಗೆ ಸೇರಿದ ಗರಿಷ್ಠ ಜನಸಮೂಹ ಎಂಬ ಅನೌಪಚಾರಿಕ ದಾಖಲೆಯ ಶ್ರೇಯ ಇದರದ್ದು. ಜನಪ್ರವಾಹಕ್ಕೇ ವಿಖ್ಯಾತವಾದ ಪುರಿ ಜಗನ್ನಾಥನ ಈ ವರ್ಷದ ಮಹಾ ರಥೋತ್ಸವ ಮೊನ್ನೆ ಬುಧವಾರ ಸಂಪನ್ನವಾಗಿದೆ. ಈ ಹಿನ್ನೆಲೆಯಲ್ಲಿ ರಥ 'ಜಾತ್ರೆ'ಯ ಕೆಲವು ಕೌತುಕದ ಸಂಗತಿಗಳು ಇಲ್ಲಿವೆ.

ನೋಡುಗರ ಮೈನವಿರೇಳಿಸುವ ತ್ರಿವಳಿ ತೇರು
ಪುರಿಯಲ್ಲಿ‌ ಜಗನ್ನಾಥನು (ಕೃಷ್ಣ) ತನ್ನ ಸೋದರ ಬಲಭದ್ರ (ಬಲರಾಮ) ಹಾಗೂ ಸೋದರಿ ಸುಭದ್ರಾದೇವಿಯರ ಜೊತೆಗೆ ನೆಲೆಸಿದ್ದಾನೆ. ಇತರೆಡೆ ಉತ್ಸವ ಮೂರ್ತಿಗಳ ಯಾತ್ರೆ ನಡೆದರೆ, ಪುರಿಯಲ್ಲಿ ಮೂರೂ ದೇವರ ಮೂಲ ವಿಗ್ರಹಗಳನ್ನೇ ರಥಗಳಲ್ಲಿಟ್ಟು ಮೆರವಣಿಗೆ ಮಾಡುವುದು ವಿಶೇಷ. ಅಗಾಧವಾಗಿದ್ದು, ನೋಡುಗರಿಗೆ ರೋಮಾಂಚನ ನೀಡುವ ಪ್ರತಿ ರಥವೂ ಅದರದ್ದೇ ಆದ ವೈಶಿಷ್ಟ್ಯ ಹೊಂದಿದೆ. ನಂದಿಘೋಷ ಹೆಸರಿನ ಜಗನ್ನಾಥನ ರಥ 44 ಅಡಿ 2 ಇಂಚು ಎತ್ತರ, 16 ಚಕ್ರ, ಸಾಂಕೇತಿಕವಾಗಿ 4 ಶ್ವೇತ ವರ್ಣದ ಅಶ್ವ, ಕೆಂಪು-ಹಳದಿ ವಸ್ತ್ರದ ಹೊದಿಕೆ ಹೊಂದಿದ್ದರೆ, ತಾಳಧ್ವಜ ಹೆಸರಿನ ಬಲಭದ್ರನ ರಥ 43 ಅಡಿ 3 ಇಂಚು ಎತ್ತರ, 14 ಚಕ್ರ, 4 ಕೃಷ್ಣ ವರ್ಣದ ಅಶ್ವ, ಕೆಂಪು-ಹಸಿರು ಬಣ್ಣದ ಹೊದಿಕೆ ಹೊಂದಿದೆ. ಸುಭದ್ರೆಯ ರಥಕ್ಕೆ ದರ್ಪದಳನ ಅಥವಾ ದೇವಿದಳನವೆಂಬ ಹೆಸರಿದ್ದು, 42 ಅಡಿ 3 ಇಂಚು ಎತ್ತರ, 12 ಚಕ್ರ, 4 ರಕ್ತ ವರ್ಣದ ಅಶ್ವ ಹಾಗೂ ಕೆಂಪು-ಕಪ್ಪು ಬಣ್ಣದ ಹೊದಿಕೆ ಹೊಂದಿದೆ. ಪ್ರತಿ ವರ್ಷವೂ ಮೂರೂ ರಥಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ ಎಂಬುದು‌ ಇನ್ನೊಂದು ಅಚ್ಚರಿ.

ಪ್ರತಿವರ್ಷ ರಥಗಳ ನಿರ್ಮಾಣಕ್ಕೇ ಬೇಕು 1000 ಮರ!
ಜಗನ್ನಾಥ ಕ್ಷೇತ್ರದಲ್ಲಿ ಕೆಲವು ವಸ್ತುಗಳನ್ನು ಮರುಬಳಕೆ ಮಾಡದಿರುವ ಸಂಪ್ರದಾಯವಿದೆ, ಇವುಗಳಲ್ಲಿ ಯಾತ್ರೆಯ ರಥಗಳೂ ಸೇರಿವೆ. ಪ್ರತಿವರ್ಷ ಮೂರೂ ರಥಗಳನ್ನು ಹೊಸದಾಗಿ ತಯಾರಿಸುವ ಪರಿಪಾಠವಿದ್ದು, ಇದಕ್ಕೆ ಸಾವಿರಾರು ಮರಗಳು ಬೇಕಾಗುವ ಹಿನ್ನೆಲೆಯಲ್ಲಿ ಕಳೆದೊಂದು ದಶಕದಲ್ಲಿ ಸಂಪ್ರದಾಯವನ್ನು ಸಣ್ಣದಾಗಿ ಮಾರ್ಪಾಡು ಮಾಡಲಾಗಿದೆ. ಇದೀಗ ರಥಗಳ ಭಾರೀ ತೊಲೆಗಳನ್ನು ಮರುಬಳಕೆಗೆ ಕಾಪಿಡಲಾಗುತ್ತದೆ. ರಥಗಳ ಚಕ್ರ, ಚೌಕಟ್ಟು ಮತ್ತಿತರೆ ಭಾಗಗಳ ಪೈಕಿ ಕೆಲವನ್ನು ಹರಾಜು ಹಾಕಲಾಗುತ್ತದೆ. ಇನ್ನು ಕೆಲವನ್ನು ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಒಲೆಗಳಿಗೆ ಉರುವಲಾಗಿ ಬಳಸಲಾಗುತ್ತದೆ.  ಕೆಲ ಭಾಗಗಳನ್ನು ಮರುಬಳಸುವ ಪರಿಪಾಠ ಆರಂಭವಾದ ಹಿನ್ನೆಲೆಯಲ್ಲಿ ಯಾತ್ರೆಯ ನಂತರ ಮೂರೂ ರಥಗಳನ್ನು ನಾಜೂಕಾಗಿ ಬಿಚ್ಚಿಡಲಾಗುತ್ತದೆ. ಇಷ್ಟಾದರೂ ಪ್ರತಿವರ್ಷ ರಥಗಳ ಮರುನಿರ್ಮಾಣಕ್ಕೆ ವಿವಿಧ ಜಾತಿಯ ಸುಮಾರು 1000 ಮರಗಳನ್ನು ಕಡಿದು ತರಬೇಕಾಗುತ್ತದೆ.

Puri Ratha Yatra: ಬಟ್ಟಲುಗಣ್ಣಿನ ಭಗವಂತ ಗರ್ಭಗುಡಿ ಬಿಟ್ಟು ಹೊರಬರುವುದೇಕೆ?

9 ದಿನಗಳ‌ ಕಾಲ ನಡೆಯುವ ಮಹಾ ರಥಯಾತ್ರೆ
ವಿಶ್ವದಲ್ಲೇ ಅತಿದೊಡ್ಡ ರಥಯಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಜಗನ್ನಾಥನ ರಥೋತ್ಸವ 9 ದಿನಗಳ ಮಹಾ ಜಾತ್ರೆ. ಆಷಾಢ ಮಾಸ ಶುಕ್ಲಪಕ್ಷದ ಬಿದಿಗೆಯಿಂದ ದಶಮಿಯವರೆಗೆ ನಡೆಯುವ ಮಹೋತ್ಸವ ಇದು. ಮೊದಲ‌ ದಿನ ಜಗನ್ನಾಥ  ಮಂದಿರದ ಸಿಂಹದ್ವಾರದ ಬಳಿ ಪೂಜೆ-ಪುನಸ್ಕಾರ, ಸಾಂಪ್ರದಾಯಿಕ ಶಿಷ್ಟಾಚಾರಗಳ ಬಳಿಕ ರಥಯಾತ್ರೆ ಆರಂಭ. ಪುರಿಯ 'ಬಡಾ ದಂಡಾ' ಖ್ಯಾತಿಯ, ಸುಮಾರು 100-110 ಅಡಿ ವಿಸ್ತಾರವಾದ ರಥಬೀದಿಯಲ್ಲಿ ಸಾಗುತ್ತದೆ ಮೆರವಣಿಗೆ. ಜಗನ್ನಾಥನ ಉದ್ಯಾನ ನಿವಾಸ, ಚಿಕ್ಕಮ್ಮನ ಮನೆ ಎಂದೆಲ್ಲ ಪ್ರತೀತಿ ಇರುವ ಗುಂಡಿಚಾ ದೇವಸ್ಥಾನದವರೆಗಿನ 3 ಕಿಲೋಮೀಟರ್ ಉದ್ದದ ಹಾದಿ ಕ್ರಮಿಸಲು ಕೆಲವೊಮ್ಮೆ ಇಡೀ ದಿನ ಬೇಕಾಗುತ್ತದೆ. ಸಂಜೆಯೊಳಗೆ ತಲುಪದಿದ್ದರೆ ರಥ ಎಲ್ಲಿದೆಯೋ ಅಲ್ಲಿಯೇ ರಾತ್ರಿ ಕಳೆದು ಮರುದಿನ ಯಾತ್ರೆ ಮುಂದುವರಿಸಿದ್ದೂ ಉಂಟು. ಹಾಗೆ ಗುಂಡಿಚಾ ದೇವಸ್ಥಾನ ತಲುಪುವ ಜಗನ್ನಾಥ, ತನ್ನ ಸೋದರ-ಸೋದರಿಯ ಜೊತೆಗೆ ಮುಂದಿನ ಏಳು ದಿನಗಳ‌ ಕಾಲ‌ ಅಲ್ಲಿಯೇ‌ ತಂಗಿ, ಭಕ್ತರಿಗೆ ದರ್ಶನ ನೀಡುತ್ತಾನೆ. ದಶಮಿಯಂದು ಬಹುದಾ (ಮರಳಿ ಬರುವ) ಯಾತ್ರೆ ನಡೆಯುತ್ತದೆ. ಗುಂಡಿಚಾದಿಂದ ಜಗನ್ನಾಥ ಮಂದಿರಕ್ಕೆ ರಥಗಳು ಬರುವುದರೊಂದಿಗೆ ಯಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತದೆ.

200 ಕಿಲೋ ಚಿನ್ನಾಭರಣ ತೊಡಿಸುವ ಸುನಾವೇಷ್
ಬಹುದಾ ಯಾತ್ರೆಯ ಬಳಿಕ ರಥಗಳು ಜಗನ್ನಾಥ ಮಂದಿರದ ಸಿಂಹದ್ವಾರದ ಬಳಿ ನೆಲೆಗೊಳ್ಳುತ್ತವೆ. ಆ ರಥಗಳಲ್ಲೇ ವಿರಾಜಮಾನರಾಗಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರ ವಿಗ್ರಹಗಳನ್ನು ಮರುದಿನ, ಅಂದರೆ ಏಕಾದಶಿಯಂದು ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗುತ್ತದೆ. ಹಿಂದೆಲ್ಲ ಸುಮಾರು 370 ಕಿಲೋ ತೂಕದ, 135 ವಿವಿಧ ಚಿನ್ನಾಭರಣಗಳೊಂದಿಗೆ ಜಗನ್ನಾಥ, ಬಲಭದ್ರ, ಸುಭದ್ರೆಯರನ್ನು ಅಲಂಕರಿಸಲಾಗುತ್ತಿತ್ತಂತೆ. ಸುರಕ್ಷತೆ ಸೇರಿ ಅನೇಕ ಕಾರಣಗಳಿಗಾಗಿ ಈಗ ಸರಿಸುಮಾರು 208 ಕಿಲೋ ತೂಕದ ಆಭರಣಗಳನ್ನು ದೇವರಿಗೆ ತೊಡಿಸಲಾಗುತ್ತದೆ. ಸೋನಾ (ಚಿನ್ನ), ವೇಷ್ (ಅಲಂಕೃತ) ದೇವರ ದರ್ಶನ ಪಡೆಯಲೂ‌ ಲಕ್ಷೋಪಲಕ್ಷ ಜನ ಆಗಮಿಸುತ್ತಾರೆ. ಅಂದು ರಾತ್ರಿ ವೇಳೆಯೂ ಸ್ವರ್ಣಾಲಂಕೃತ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮರುದಿನ, ದ್ವಾದಶಿಯಂದು ದೇವರ ವಿಗ್ರಹಗಳನ್ನು ಮೂಲಮಂದಿರದ ಸ್ವಸ್ಥಾನಕ್ಕೆ ಮರಳಿಸಲಾಗುತ್ತದೆ. ಇದರೊಂದಿಗೆ ವಾರ್ಷಿಕ ರಥಯಾತ್ರೆಗೆ ವಿಧ್ಯುಕ್ತ ತೆರೆ ಬೀಳುತ್ತದೆ. 

ಭಕ್ತರು ಎಳೆವ ಒಂದೊಂದು ಹಗ್ಗವೂ 220 ಅಡಿ ಉದ್ದ!
ಯಾತ್ರೆಯಲ್ಲಿ ರಥಗಳನ್ನು ಎಳೆಯಲು ಬಳಸುವ ಹಗ್ಗಗಳೂ ವಿಶೇಷವೇ. ರಥಗಳಂತೆ ಪ್ರತಿವರ್ಷವೂ ಯಾತ್ರೆಗೆ ಬಳಸುವ ಹಗ್ಗಗಳನ್ನು ಹೊಸದಾಗಿ ತಯಾರಿಸಲಾಗುತ್ತದೆ. ಸೆಣಬಿನ ನಾರಿನಿಂದ ರಥವನ್ನು ಎಳೆಯುವ ಹುರಿಹಗ್ಗಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿ ಹಗ್ಗವೂ ಸುಮಾರು 220 ಅಡಿ ಉದ್ದವಿದ್ದು, 8 ಇಂಚು ದಪ್ಪವಿರುತ್ತದೆ. ಪ್ರತಿ ಹಗ್ಗ ತಯಾರಿಸಲು 100 ಕೆ.ಜಿ.ಗೂ ಹೆಚ್ಚು ಸೆಣಬು ಬೇಕಾಗುತ್ತದೆ. ಒಂದು ಹಗ್ಗವನ್ನು ಹುರಿ ಮಾಡಲು 15 ಕಾರ್ಮಿಕರಿಗೆ 2 ದಿನಗಳಷ್ಟು ಸಮಯ ತಗಲುತ್ತದೆ. ರಥಗಳನ್ನು ಎಳೆಯಲು 14 ಹಗ್ಗಗಳು ಬೇಕಿದ್ದರೆ, ರಥದ ಸುತ್ತಲೂ ಭದ್ರತೆಗಾಗಿ ನಿರ್ಬಂಧಿತ ವಲಯ ಸ್ಥಾಪಿಸಲು 12 ಹಗ್ಗಗಳನ್ನು ತಯಾರಿಸಲಾಗಿದೆ. ಹಿಂದೆಲ್ಲ ಕೇರಳದಿಂದ ಹಗ್ಗಗಳನ್ನು ತರಿಸಲಾಗುತ್ತಿತ್ತು. ಇದೀಗ ಒಡಿಶಾದಲ್ಲೇ ಹಗ್ಗ ತಯಾರಿಸಲಾಗುತ್ತಿದೆ.

Puri Jagannath Ratha Yatra: ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ!

ಏಕಕಾಲಕ್ಕೆ ಲಕ್ಷೋಪಲಕ್ಷ ಭಕ್ತರ ಭಾವೋನ್ಮಾದ
ರಥಯಾತ್ರೆಯ ಅನುಭೂತಿಯನ್ನು ಟೀವಿ ಪ್ರಸಾರದಲ್ಲಿ ವೀಕ್ಷಿಸಿದರೆ ಸಾಲದು, ಪ್ರತ್ಯಕ್ಷವಾಗಿ ನೋಡಿಯೇ ಆನಂದಿಸಬೇಕು. ಮೂರು ರಥಗಳ ಪೈಕಿ ಮೊದಲಿಗೆ ಅಣ್ಣ ಬಲಭದ್ರ, ನಂತರ ತಂಗಿ ಸುಭದ್ರೆ, ಕಡೆಯದಾಗಿ ಜಗನ್ನಾಥನ ರಥಗಳು ಒಂದೊಂದಾಗಿ ಮೆರವಣಿಗೆಯಲ್ಲಿ ಸಾಗಿ ಬರುತ್ತವೆ. ಮೊದಲ ದಿನದ ಗುಂಡಿಚಾ ಯಾತ್ರೆಯಂದು ಗರಿಷ್ಠ ಸಂಖ್ಯೆಯಲ್ಲಿ ಭಕ್ತ ಜನ ಸೇರುತ್ತಾರಂತೆ. ರಥಗಳು ಸಾಗುವ 3 ಕಿಲೋಮೀಟರ್ ಉದ್ದದ 'ಬಡಾ ದಂಡಾ' ಬೀದಿಯಲ್ಲಿ ಅಂದು ಏಕಕಾಲಕ್ಕೆ 10ರಿಂದ 15 ಲಕ್ಷ ಜನ ನೆರೆದಿರುತ್ತಾರೆ ಎಂದರೆ ಆ ಜನಸಾಂದ್ರತೆಯನ್ನೊಮ್ಮೆ ಊಹಿಸಿ. ಪುರಿ ಹೇಳಿ ಕೇಳಿ ಕರಾವಳಿ ನಗರಿ. ಬೇಸಿಗೆಯ ಉರಿಬಿಸಿಲು, ಮಾಪಕದಲ್ಲಿ ತಾಪಮಾನ 33-35 ಡಿಗ್ರಿ ಸೆಲ್ಷಿಯಸ್ ಇದ್ದರೂ, 45-46 ಡಿಗ್ರಿ ಸೆಲ್ಷಿಯಸ್ ಧಗೆ ಇದ್ದಂಥ ಅನುಭವ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಪ್ರದೇಶವಾದ ಕಾರಣ ಧಾರಾಕಾರವಾಗಿ ಹರಿಯುವ ಬೆವರು, ಈ ಪರಿಸ್ಥಿತಿಯಲ್ಲಿ ನಿಂತ ಜಾಗದಲ್ಲಿ ತಿರುಗಲೂ ಜಾಗವಿಲ್ಲದಷ್ಟು ಜನಜಂಗುಳಿ... ಬಸವಳಿದು ಕುಸಿಯಲು ಇದಕ್ಕಿಂತ ಪ್ರಶಸ್ತ ಸನ್ನಿವೇಶ ಇನ್ನೊಂದಿಲ್ಲ. ಇದನ್ನು ತಡೆಗಟ್ಟಲೆಂದೇ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಟೊಂಕ ಕಟ್ಟಿ ನಿಲ್ಲುತ್ತವೆ. ಅಗ್ನಿಶಾಮಕ ದಳದ ವಾಹನಗಳು ರಥಯಾತ್ರೆಯುದ್ದಕ್ಕೂ ಭಕ್ತರ ಮೇಲೆ ನೀರು ಸಿಂಪಡಿಸುತ್ತಾ ಶಾಖದ ತೀವ್ರತೆ ಶಮನಗೊಳಿಸುತ್ತಿದ್ದರೆ, ಸಂಘ-ಸಂಸ್ಥೆಗಳ ಸ್ವಯಂಸೇವಕರು ರಸ್ತೆಯ ಇಕ್ಕೆಲಗಳಲ್ಲೂ ಕುಡಿಯುವ ನೀರು, ಮಜ್ಜಿಗೆ, ಪಾನಕಗಳನ್ನು ಯಥೇಚ್ಛವಾಗಿ ವಿತರಿಸಿ ಭಕ್ತಾದಿಗಳ ದಣಿವಾರಿಸುತ್ತಾರೆ. ಭಕ್ತರೋ, ದೇವನಿಷ್ಠೆಯ ಪರಾಕಾಷ್ಠೆಯಲ್ಲಿರುತ್ತಾರೆ. ರಥಗಳ ದರ್ಶನಕ್ಕಾಗಿ ಬಡಾ ದಂಡಾದ ಇಕ್ಕೆಲಗಳಲ್ಲಿ ನಿಂತು  ನಿರೀಕ್ಷಿಸುತ್ತಿದ್ದವರು, ತಾಳ ಹಾಕಿ, ತಮಟೆ ಬಡಿದು ಜಗನ್ನಾಥ ನಾಮಸ್ಮರಣೆ ಮಾಡುತ್ತ ನರ್ತಿಸುತ್ತಿದ್ದವರು, ದೇವರಥಗಳ ದರ್ಶನದಿಂದ ಭಾವಪರವಶರಾಗಿ ದಳದಳನೆ ಕಣ್ಣೀರಿಡುತ್ತಿದ್ದವರು, ತೇರೆಳೆವ ಹಗ್ಗ ಹಿಡಿದು ಕೃತಾರ್ಥರಾಗಲು ಹಾತೊರೆಯುತ್ತಿದ್ದವರು, ತಮ್ಮ ಮನೆಯ ದೇವರ ಮುಂದಿಡುವ ಸಲುವಾಗಿ ಹಗ್ಗದ ಎಳೆಯನ್ನು ಕಿತ್ತುಕೊಳ್ಳುತ್ತಿದ್ದವರು, ರಥ ಸಾಗುವ ಹಾದಿಯಲ್ಲಿ ತೆಂಗಿನಕಾಯಿ ಒಡೆದು ದೀರ್ಘದಂಡ ನಮಸ್ಕಾರ ಹಾಕುತ್ತಿದ್ದವರು, ಅಲ್ಲಲ್ಲಿ ನಿಂತು ಹೊರಡುವ ರಥಗಳನ್ನು ಜೀಕುವ ವೇಳೆ ಭಾವೋನ್ಮಾದದೊಂದಿಗೆ ಜೈ ಜಗನ್ನಾಥ್ ಎಂದು ಏಕಕಂಠದಲ್ಲಿ ಕೂಗುತ್ತಿದ್ದವರು... ಒಂದೊಂದು ದೃಶ್ಯವೂ ಅದ್ಭುತ, ಅಪರೂಪ. ಕಣ್ಣಾರೆ ಕಂಡರಷ್ಟೇ ಇವೆಲ್ಲವುಗಳ ಅನುಭವ ಸಾಧ್ಯ.

ಅರೆಕ್ಷಣ ಮೈಮರೆತರೆ ಪ್ರಾಣಕ್ಕೇ ಸಂಚಕಾರ
ರಥಯಾತ್ರೆ ವೀಕ್ಷಣೆಯೇ ಒಂದು ರೋಮಾಂಚಕಾರಿ ಅನುಭವವಾದರೆ, ರಥ ಎಳೆಯುವುದು ಮತ್ತೂ ರೋಚಕ ಹಾಗೂ ಸಾಹಸೀ ಅನುಭವ. ಸಾಗರೋಪಾದಿಯ ಜನಜಾತ್ರೆಯ ನಡುವೆ ಬಲಭದ್ರ ಹಾಗೂ ಸುಭದ್ರೆಯರ ರಥಗಳಿಗೆ ಕಟ್ಟಿದ ಹಗ್ಗಗಳನ್ನು ಹಾಗೂ ಹೀಗೂ ಹಿಡಿದೆಳೆದು ಸಂಭ್ರಮಿಸಬಹುದು. ಜಗನ್ನಾಥ ರಥಕ್ಕೆ ಹೋಲಿಸಿದರೆ ಬಲಭದ್ರ-ಸುಭದ್ರೆಯರ ರಥ ಎಳೆಯಲು ಜನದಟ್ಟಣೆ ತುಸು ಕಡಿಮೆ. ಹಾಗಾಗಿ, ಹಗ್ಗಗಳು ಎಲ್ಲಿವೆ ಎಂದು ಗುರುತಿಸಿ, ಹೇಗಾದರೂ ನುಸುಳಿ, ಹಗ್ಗಕ್ಕೆ ಕೈ ಹಾಕಿ ತೇರೆಳೆದು ಸಂಭ್ರಮಿಸಬಹುದು. ಅತಿಯಾದ ಶ್ರಮವಿಲ್ಲದೆ ಸಂದಣಿಯಿಂದ ಹೊರಬಂದು ರಸ್ತೆ ಬದಿಗೆ ಸರಿದುಕೊಳ್ಳಬಹುದು. ಆದರೆ, ಜಗನ್ನಾಥನ ರಥದ ಹಗ್ಗಗಳಿಗೆ ಕೈಹಾಕಿ ಎಳೆಯುವುದು ಎಂದರೆ ಅದೊಂದು ಅಪೂರ್ವ ಸಾಹಸ. ಸುಮಾರು 70 ಮೀ. ಉದ್ದದ ಹಗ್ಗಗಳ ಇಕ್ಕೆಲಗಳಲ್ಲೂ ಜೇನ್ನೊಣ ಮುತ್ತಿದಂತೆ ಜನದಟ್ಟಣೆ. ರಥಕ್ಕೆ ಕಟ್ಟಿದ ನಾಲ್ಕು ಹಗ್ಗಗಳು ಎಲ್ಲಿವೆ ಎಂದು ಗುರುತಿಸಲಾಗದಷ್ಟು ಜನಸಾಗರ. ಅದರೊಳಕ್ಕೆ ನುಸುಳಬೇಕೆಂದರೆ ರಥ ಬರುವ ಮುನ್ನವೇ ರಸ್ತೆ ಮಧ್ಯಕ್ಕೆ ತೆರಳಿರಬೇಕು. ರಥ ಸಮೀಪಿಸಿದ ಬಳಿಕ ಒಳನುಸುಳುವುದು ಸಾಧ್ಯವೂ ಇಲ್ಲ, ಅಂತಹ ಪ್ರಯತ್ನ ಸಾಧುವೂ ಅಲ್ಲ. ಮೊದಲೇ ಬೀದಿ ಮಧ್ಯೆ ನಿಂತವರು ರಥ ಸಮೀಪಿಸುತ್ತಿದ್ದಂತೆ ಅಭಿಮನ್ಯು ಚಕ್ರವ್ಯೂಹ ಪ್ರವೇಶಿಸಿದ ಹಾಗೆ ಜನಪ್ರವಾಹದೊಳಗೆ ತೂರಿಕೊಳ್ಳುತ್ತಾರೆ. ಅಲ್ಲಲ್ಲಿ ನಿಂತು ಸಾಗುವ ಜಗನ್ನಾಥನ ತೇರೆಳೆಯುವ ಸಂದರ್ಭದ ಮತ್ತೊಂದು ವಿಸ್ಮಯವೆಂದರೆ, ಆ ಅನೂಹ್ಯ ದಟ್ಟಣೆಯಲ್ಲೂ ಅದು ಯಾರೋ ತೇರಿನ ಹಗ್ಗ ಹಿಡಿಯಲು ಅವಕಾಶ ಕಲ್ಪಿಸುತ್ತಾರೆ. ಸ್ವಾರ್ಥವಿಲ್ಲದೆ, ಮಹಿಳೆಯರಿಗೆ ವಿಶೇಷವಾಗಿ ಜಾಗ ಮಾಡಿಕೊಟ್ಟು ಪುಣ್ಯ ಕಟ್ಟಿಕೊಳ್ಳುತ್ತಾರೆ. ಇಷ್ಟಾದ ಮೇಲೆ ಯಾವುದೂ, ಯಾರದ್ದೂ ನಿಯಂತ್ರಣದಲ್ಲಿರುವುದಿಲ್ಲ. ಹಿಂದೆ-ಮುಂದೆ, ಬಲಕ್ಕೆ-ಎಡಕ್ಕೆ ಸೂಜಿ ತೂರಿಸಲೂ ಜಾಗವಿಲ್ಲದಷ್ಟು ಬಿಗಿ. ಒಂದೊಮ್ಮೆ ರಥದ ಮೇಲಿರುವ ಪಾಂಡಾಗಳು (ಜಗನ್ನಾಥನನ್ನು ಅರ್ಚಿಸುವ ಪೂಜಾರಿಗಳು) ಜಾಗಟೆ ಬಡಿಯುತ್ತಿದ್ದಂತೆ ನೆರೆದವರಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ. ಜೈ ಜಗನ್ನಾಥ್ ಎನ್ನುತ್ತಾ ಹಗ್ಗ ಜೀಕುತ್ತಾರೆ. ನಾವು ಹಗ್ಗ ಎಳೆದೆವೋ, ಹಗ್ಗವೇ ನಮ್ಮನ್ನು ಎಳೆಯಿತೋ ಎಂಬುದೂ ಅರಿವಿಗೆ ಬಾರದ ಸ್ಥಿತಿಯಲ್ಲಿ ಜನಪ್ರವಾಹ ಸಾಗರದಲೆಯಂತೆ ಮುಂದೆ ಸಾಗುತ್ತದೆ. ಅದರ ಲಯಕ್ಕೆ ತಕ್ಕಂತೆ ನಾವೂ ಸಾಗಬೇಕು. ನಮ್ಮ ಕಾಲುಗಳನ್ನು ಯಾರೋ ತುಳಿಯುತ್ತಿರುತ್ತಾರೆ, ನಾವೂ ಯಾರ ಕಾಲನ್ನೋ ತುಳಿಯುತ್ತಿರುತ್ತೇವೆ. ನೆಲಭಾಗದಲ್ಲಿ ಏನಾಗುತ್ತಿದೆ ಎಂಬುದು ಕಾಣುವುದಿಲ್ಲ. ಆದರೆ, ಕಾಲ್ತುಳಿತದ ನೋವು ಸಾರುತ್ತಿರುತ್ತದೆ. ಸುತ್ತಲಿನ ಒತ್ತಡಕ್ಕೆ ಏದುಸಿರು ಬರತೊಡಗುತ್ತದೆ. ಇನ್ನೇನು ಕಣ್ಣು ಕತ್ತಲು ಕವಿಯುತ್ತದೆ, ಸಹಿಸಲು ಸಾಧ್ಯವೇ ಇಲ್ಲ, ಹೊರಹೋಗಿಬಿಡೋಣ ಎಂದೆನಿಸಿದರೆ ಅದಕ್ಕೆಲ್ಲಿದೆ ಅವಕಾಶ?  ಒಂದೇ ಒಂದು ಕ್ಷಣ ಆಯತಪ್ಪಿ ಮುಗ್ಗರಿಸಿದಿರೋ, ಖೇಲ್ ಖತಂ! ಕೆಳಕ್ಕೆ ಬಿದ್ದರೆ, ಬಿದ್ದವರಿಗೆ ಮಾತ್ರವಲ್ಲ ಹಿಂದೆ ಹೆಜ್ಜೆ ಹಾಕುತ್ತಿದ್ದವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಸಪಾಟಾದ ಬೀದಿಯಲ್ಲಿ ಇದ್ದಕ್ಕಿದ್ದಂತೆ ಉಬ್ಬು ಎದುರಾದರೆ ಅವರೂ ಮುಗ್ಗರಿಸದೆ ಇದ್ದಾರೆಯೇ? ಒಬ್ಬೊಬ್ಬರೇ ಮುಗ್ಗರಿಸಿದರೆ ಅದರಿಂದ ಆಗುವ ಅನಾಹುತ ವರ್ಣಿಸಲು ಕೂಡ ಅಸಾಧ್ಯ. ಆದರೆ, ಹಾಗಾಗದಂತೆ ಅದ್ಯಾವುದೋ ಶಕ್ತಿ ತಡೆಯುತ್ತಿದೆಯೇನೋ ಎಂದು ಭಾಸವಾಗುತ್ತದೆ. ಅಷ್ಟರಲ್ಲಿ ಆ ಹಂತದ ಜೀಕುವಿಕೆ ನಿಲ್ಲುತ್ತದೆ. ಅರೆಕ್ಷಣದಲ್ಲಿ ಉಬ್ಬರ ಇಳಿದ ಸಮುದ್ರದಂತೆ ಎಲ್ಲವೂ ಶಾಂತವಾಗುತ್ತದೆ. ಚಕ್ರವ್ಯೂಹದಿಂದ ಹೊರಹೋಗಬೇಕಿದ್ದರೆ ಇದೇ ಸದವಕಾಶ. ಜನದಟ್ಟಣೆಯನ್ನು ಸೀಳುತ್ತಾ ಹಗ್ಗದ ಕೊನೆಯವರೆಗೆ ಸಾಗಿ ಅಲ್ಲಿಂದ ರಸ್ತೆ ಬದಿಗೆ ನುಸುಳಿಕೊಳ್ಳಬೇಕು. ಹಾಗೆ ಮಾಡಿಕೊಳ್ಳದಿದ್ದಲ್ಲಿ, ರಥಯಾತ್ರೆ ಮುಗಿಯುವವರೆಗೂ 'ಚಕ್ರವ್ಯೂಹ'ದೊಳಗೇ 'ಬಂಧಿ'!
 

jagannatha subhadra balarama statues of puri decked with gold after ratha yatra orissa


 
ಛಪ್ಪನ್ ಭೋಗ್ ಮಹಾ ಪ್ರಸಾದ ಸವಿಯುವ ಭಾಗ್ಯ!
ಬಹುಜನಪ್ರಿಯ ಜಗನ್ನಾಥ ಭೋಜನಪ್ರಿಯನೂ ಆಗಿರಬೇಕು. ಹಾಗಾಗಿಯೇ ಅವನಿಗೆ 56 ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. 9 ಬಗೆಯ ಅನ್ನ, 11 ಬಗೆಯ ಸಿಹಿ ತಿನಿಸು, 13 ಬಗೆಯ ಭಕ್ಷ್ಯ, 9 ಬಗೆಯ ಕ್ಷೀರೋತ್ಪನ್ನ, 14 ಬಗೆಯ ವ್ಯಂಜನಗಳನ್ನು ನೈವೇದ್ಯಕ್ಕೆಂದು ತಯಾರಿಸಲಾಗುತ್ತದೆ. ವಿಶ್ವದಲ್ಲೇ ಅತಿದೊಡ್ಡದು ಎಂದು ಬಣ್ಣಿಸಲಾಗುವ ಜಗನ್ನಾಥ ಮಂದಿರದ ಬೃಹತ್ ಅಡುಗೆಮನೆಯಲ್ಲಿರುವ 250 ಒಲೆಗಳಲ್ಲಿ 600ಕ್ಕೂ ಹೆಚ್ಚು ಬಾಣಸಿಗರು ನೈವೇದ್ಯ ಸಿದ್ಧಪಡಿಸುತ್ತಾರೆ. ಸೌದೆಯೇ ಇಂಧನ. ಮಣ್ಣಿನ ಮಡಿಕೆಗಳಲ್ಲೇ ಅಡುಗೆ ತಯಾರಿ. ಒಮ್ಮೆ ಬಳಸಿದ ಮಡಿಕೆಯನ್ನು ಮತ್ತೊಮ್ಮೆ ಬಳಸದಿರುವುದು ಇಲ್ಲಿನ ವಿಶೇಷ. ಪ್ರಸಾದ ತಯಾರಿಗೆಂದೇ ನಿತ್ಯ 15000 ಮಡಿಕೆಗಳನ್ನು ಬಳಸಲಾಗುತ್ತದೆ. ದಿನಕ್ಕೆ 7 ಬಾರಿ ತಲಾ 8 ಬಗೆಯ (ಎಲ್ಲ ಸೇರಿ ಒಟ್ಟು 56) ಭಕ್ಷ್ಯಗಳನ್ನು ದೇವರಿಗೆ ನಿವೇದಿಸಲಾಗುತ್ತದೆ. ದಿನವೊಂದಕ್ಕೆ 1 ಲಕ್ಷ ಜನರಿಗಾಗುವಷ್ಟು ಮಹಾಪ್ರಸಾದ ಸಿದ್ಧಪಡಿಸುವ ಸಾಮರ್ಥ್ಯವನ್ನು ಜಗನ್ನಾಥ ಮಂದಿರದ ಅಡುಗೆ ಮನೆ ಹೊಂದಿದೆ ಎಂಬುದು ಮತ್ತೊಂದು ವಿಸ್ಮಯಕಾರಿ ಅಂಶ. ಇನ್ನೂ ಅಚ್ಚರಿ ಎಂದರೆ ನಮ್ಮ ತೀರ್ಥಕ್ಷೇತ್ರಗಳಲ್ಲಿ ಇರುವಂತೆ ಜಗನ್ನಾಥ ಮಂದಿರದಲ್ಲಿ ಉಚಿತ ಅನ್ನ ಸಂತರ್ಪಣೆ/ದಾಸೋಹ ನಡೆಯುವುದಿಲ್ಲ. ನೈವೇದ್ಯ ಮಾಡಿದ ಪ್ರಸಾದವನ್ನು ಆನಂದ ಬಜಾರ್ ಎಂಬ ಪ್ರಾಂಗಣದಲ್ಲಿ ವಿತರಿಸಲಾಗುತ್ತದೆ. ಭಕ್ತರು ತಮಗೆ ಬೇಕಾದ ಖಾದ್ಯಗಳನ್ನು ಅದೆಷ್ಟು ದರವಾದರೂ ತೆತ್ತು ಸ್ವೀಕರಿಸುತ್ತಾರೆ. ಮಹಾ ಪ್ರಸಾದ ದಕ್ಕುವುದೇ ತಮ್ಮ ಭಾಗ್ಯ ಎಂದು ಬಗೆಯುತ್ತಾರೆ. ಏಳೆಂಟು ಖಾದ್ಯಗಳನ್ನು ತಟ್ಟೆ ಲೆಕ್ಕದಲ್ಲಿ ಸ್ವೀಕರಿಸುವುದೂ ಉಂಟು. 50 ರು.ಗಳಿಂದ 500 ರು.ಗಳವರೆಗೂ ಪಾವತಿಸಿ ಜಗನ್ನಾಥ ಪ್ರಸಾದ ಪಡೆದು ಪುನೀತ ಭಾವದಲ್ಲಿ ಮಿಂದೇಳುತ್ತಾರೆ.

ಜೀವನದಲ್ಲೊಮ್ಮೆ ಸವಿಯಲೇಬೇಕು ಪುರಿ ಜಗನ್ನಾಥನ 56 ಬಗೆಯ ಮಹಾಪ್ರಸಾದ

ಲಕ್ಷಾಂತರ ಭಕ್ತರ ಹಸಿವಿಂಗಿಸುವ ಇಸ್ಕಾನ್ ಅಂಗಸಂಸ್ಥೆ
ಪುರಿ ಜಗನ್ನಾಥ ರಥಯಾತ್ರೆಗೆ ಬರುವ ಭಕ್ತರ ಹಸಿವು ಇಂಗಿಸುವಲ್ಲಿ ಇಸ್ಕಾನ್ ಬೆಂಗಳೂರಿನ ಅಂಗಸಂಸ್ಥೆಯಾದ ಗೌರಾಂಗ ಸೇವಾ ಫೌಂಡೇಷನ್‌‌ನ ಪಾತ್ರ ಮಹತ್ವದ್ದು. ಪುರಿಯಲ್ಲೇ ಇಸ್ಕಾನ್‌ನ ಇನ್ನೊಂದು ಅಂಗ ಸಂಸ್ಥೆ ಅಕ್ಷಯಪಾತ್ರಾದ ಅಡುಗೆ ಮನೆ ಇದ್ದು, ಒಡಿಶಾ ಹಾಗೂ ಭಾರತ ಸರ್ಕಾರದ ಸಹಯೋಗದೊಂದಿಗೆ ನಿತ್ಯ 40 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತದೆ. ವಾರದಲ್ಲೊಮ್ಮೆ ಊಟದ ಜೊತೆಗೆ ಪನೀರ್ ನಿಂದ ಮಾಡಿದ ಖಾದ್ಯವನ್ನೂ ನೀಡಲಾಗುತ್ತದೆ. ಜಗನ್ನಾಥ ರಥ ಯಾತ್ರೆ ಸಂದರ್ಭದಲ್ಲಿ ಅಕ್ಷಯಪಾತ್ರಾದ ಅಡುಗೆಮನೆಯಲ್ಲೇ ಪ್ರಸಾದ ಸಿದ್ಧಪಡಿಸುವ ಗೌರಾಂಗ ಸೇವಾ ಫೌಂಡೇಷನ್ ಲಕ್ಷಾಂತರ ಹಸಿದ ಹೊಟ್ಟೆಗಳನ್ನು ತುಂಬಿಸುತ್ತದೆ. ರಥಯಾತ್ರೆಯ ಮೊದಲ ಹಾಗೂ ಕೊನೆಯ ದಿನ ಗರಿಷ್ಠ ಪ್ರಮಾಣದಲ್ಲಿ ಉಚಿತವಾಗಿ ಪ್ರಸಾದ ವಿತರಿಸುತ್ತದೆ. ತನ್ನ ಅತಿಥಿಗಳು ಹಾಗೂ ಹೊರಗಿನಿಂದ ಬರುವವರು ಎಂಬ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಒಂದೇ ಗುಣಮಟ್ಟದ ಅನ್ನ, ಸಾರು, ಪಲ್ಯ, ತೊವ್ವೆ, ಮಜ್ಜಿಗೆ, ಪಾಯಸಗಳಿರುವ ಪ್ರಸಾದ ವಿತರಣೆ ಮಾಡಲಾಗುತ್ತದೆ ಎನ್ನುತ್ತಾರೆ ಬೆಂಗಳೂರು ಇಸ್ಕಾನ್ ಪ್ರತಿನಿಧಿಗಳಾದ ಮಹೋತ್ಸಾಹ ಚೈತನ್ಯ ದಾಸ ಹಾಗೂ ವಿಮಲಕೃಷ್ಣ ದಾಸ.

Latest Videos
Follow Us:
Download App:
  • android
  • ios