ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..!

By Suvarna NewsFirst Published Sep 19, 2020, 2:12 PM IST
Highlights

ಅಧಿಕ ಮಾಸದಲ್ಲಿ ಮಾಡಿದ ದಾನ-ಧರ್ಮ, ಧಾರ್ಮಿಕ ಕಾರ್ಯಗಳು ಹತ್ತುಪಟ್ಟು ಹೆಚ್ಚು ಪುಣ್ಯವನ್ನು ಗಳಿಸಿಕೊಡುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಈ ಮಾಸದಲ್ಲಿ ಮಂಗಳ ಕಾರ್ಯಗಳನ್ನು ಮಾಡದಿದ್ದರೂ ಸಹ ದೇವರ ಆರಾಧನೆ, ಪೂಜೆ, ವ್ರತೋಪವಾಸಗಳು, ಭಜನೆ, ಕೀರ್ತನೆ, ಶ್ರೀ ಮದ್ ಭಾಗವತ ಪುರಾಣ, ವಿಷ್ಣು ಸಹಸ್ರನಾಮ, ವಿಷ್ಣು ಪುರಾಣಗಳ  ಶ್ರವಣ, ಪಠಣ ಮತ್ತು ಮನನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೇ, ಮನೋಕಾಮನೆಗಳು ಸಿದ್ಧಿಸುತ್ತವೆ. ಅಧಿಕ ಮಾಸದಲ್ಲಿ ಪುಣ್ಯಗಳಿಸಲು ಮತ್ತು ಇಷ್ಟಾರ್ಥ ಸಿದ್ಧಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಯೋಣ...

ಪುಣ್ಯಪ್ರಾಪ್ತಿಗೆ ಅತ್ಯಂತ ಪ್ರಶಸ್ತವಾದ ಮಾಸ ಅಧಿಕ ಮಾಸವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ಅಧಿಕ ಮಾಸದಲ್ಲಿ ಭಗವಂತನ ಆರಾಧನೆ, ಜಪ-ತಪ, ಧ್ಯಾನ, ಪೂಜೆ, ಮಂತ್ರ ಪಠಣ ಮತ್ತು ದಾನಗಳನ್ನು ಮಾಡಿದರೆ ಅಕ್ಷಯ ಪುಣ್ಯ ಲಭಿಸುತ್ತದೆ ಮತ್ತು ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. 

ಈ ಬಾರಿ ಸೆಪ್ಟೆಂಬರ್ 18ರಿಂದ ಪ್ರಾರಂಭವಾದ ಆಶ್ವಯುಜ ಅಧಿಕ ಮಾಸವು ಅಕ್ಟೋಬರ್ 16ಕ್ಕೆ ಸಮಾಪ್ತಿಯಾಗಲಿದೆ. ಈ ಅಧಿಕ ಮಾಸದಲ್ಲಿ ವಿಷ್ಣುವನ್ನು ಆರಾಧಿಸಲಾಗುತ್ತದೆ. ವಿಷ್ಣುವಿಗೆ ಸಂಬಂಧಪಟ್ಟ ಮಂತ್ರ, ಸ್ತೋತ್ರ, ಸಹಸ್ರನಾಮಗಳ ಪಠಣದಿಂದ ಪುಣ್ಯವನ್ನು ಗಳಿಸಿಕೊಳ್ಳಬಹುದಾಗಿದೆ. ಧಾರ್ಮಿಕ ಅನುಷ್ಠಾನಗಳಿಗೆ ಪ್ರಶಸ್ತವಾದ ಈ ಕಾಲದಲ್ಲಿ ಕೆಲವು ಪುಣ್ಯ ಕಾರ್ಯಗಳನ್ನು ಮಾಡಿದರೆ ಭಗವಂತನನ್ನು ಪ್ರಸನ್ನಗೊಳಿಸಿಕೊಳ್ಳುವುದರ ಜೊತೆಗೆ ಮೋಕ್ಷ ಪಡೆಯಲು ಇದು ರಹದಾರಿಗುತ್ತದೆ. 

ಇದನ್ನು ಓದಿ : ಅಧಿಕ ಮಾಸ ಬಹು ಶ್ರೇಷ್ಠ; ಅಂದುಕೊಂಡದ್ದು ಆಗಬೇಕೆಂದರೆ ಹೀಗೆ ಮಾಡಿ.... 

ಪವಿತ್ರ ಅಧಿಕ ಮಾಸದಲ್ಲಿ ಮಾಡಬೇಕಾದ ಪ್ರಮುಖ ಕಾರ್ಯಗಳು

• ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದು ಸಹ ಕರೆಯುತ್ತಾರೆ. ವಿಷ್ಣುವಿನ ಪ್ರಮುಖ ಹೆಸರುಗಳಲ್ಲಿ ಪುರುಷೋತ್ತಮ ಸಹ ಒಂದು, ಈ ಮಾಸಕ್ಕೆ ವಿಷ್ಣುವೇ ಅಧಿಪತಿಯಾಗಿರುತ್ತಾನೆ. ಹಾಗಾಗಿ ಅಧಿಕ ಮಾಸದಲ್ಲಿ ವಿಷ್ಣುವಿನ ಆರಾಧನೆಯೊಂದಿಗೆ, ನೈವೇದ್ಯಕ್ಕೆ ಕೀರನ್ನು ಮಾಡಿ ಅದಕ್ಕೆ ತುಳಸಿ ದಳವನ್ನಿಟ್ಟು ಸಮರ್ಪಿಸಿದರೆ ಭಗವಂತನು ಕೃಪಾ ದೃಷ್ಟಿ ನಮ್ಮ ಮೇಲಾಗುತ್ತದೆ.



• ಹಳದಿಯು ವಿಷ್ಣುವಿಗೆ ಪ್ರಿಯವಾದ ವರ್ಣವಾಗಿದ್ದು, ಹಳದಿ ವರ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂದರೆ ಹಳದಿ ವಸ್ತ್ರ, ಬೇಳೆ, ಹಣ್ಣುಗಳು ಮುಂತಾದವನ್ನು ವಿಷ್ಣುವಿಗೆ ಸಮರ್ಪಿಸುವುದಲ್ಲದೇ, ದಾನವನ್ನು ಮಾಡಿದಲ್ಲಿ ಉತ್ತಮ ಫಲ ಲಭಿಸುತ್ತದೆ.

• ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಪೂಜಿಸಬೇಕು. ಅಧಿಕ ಮಾಸದಲ್ಲಿ ತುಳಸಿಯ ಮುಂದೆ ತುಪ್ಪದ ದೀಪವನ್ನು ಬೆಳಗಬೇಕು ಮತ್ತು “ಓಂ ನಮೋ ಭಗವತೇ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ಹನ್ನೊಂದು ಬಾರಿ ತುಳಸಿಯ ಪ್ರದಕ್ಷಿಣೆ ಮಾಡಬೇಕು. ಇದರಿಂದ ದುಃಖ ದೂರವಾಗಿ, ಮನೆ- ಮನದಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಇದನ್ನು ಓದಿ : ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..! 

• ಈ ಮಾಸದಲ್ಲಿ ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ ನಂತರ ವಿಷ್ಣುವಿಗೆ ಕೇಸರಿಯುಕ್ತ ಹಾಲಿನಿಂದ ಅಭಿಷೇಕವನ್ನು ಮಾಡಬೇಕು. ನಂತರ ತುಳಸಿ ಮಾಲೆಯನ್ನು ಅರ್ಪಿಸಿ ಹನ್ನೊಂದು ಬಾರಿ “ಓಂ ನಮೋ ಭಗವತೇ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು.

• ಶ್ರೀಹರಿ ಕೃಪೆಗಾಗಿ ಈ ಮಾಸದಲ್ಲಿ ಅಶ್ವತ್ಥ ಮರಕ್ಕೆ ನೀರನ್ನು ಹಾಕಬೇಕು ಮತ್ತು ಅದರ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಅಶ್ವತ್ಥ ಮರದಲ್ಲಿ ವಿಷ್ಣುವು ವಾಸವಾಗಿರುತ್ತಾನೆಂಬ ನಂಬಿಕೆ ಇರುವುದರಿಂದ ಈ ಮರಕ್ಕೆ ನಮಸ್ಕರಿಸಿ, ಪ್ರದಕ್ಷಿಣೆ ಹಾಕುವುದರಿಂದ ಸಹ ಮನೋಕಾಮನೆಗಳು ಈಡೇರುತ್ತವೆ.

• ಅಧಿಕ ಮಾಸದಲ್ಲಿ ನಿತ್ಯವೂ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ಸೂರ್ಯನಿಗೆ ಅರ್ಘ್ಯ ನೀಡುವ ಸಂದರ್ಭದಲ್ಲಿ ವಿಷ್ಣುವನ್ನು ಪ್ರಾರ್ಥಿಸಿ, ಹಳದಿ ಬಣ್ಣದ ಪುಷ್ಪವನ್ನು ಅರ್ಪಿಸಬೇಕು. ಇದರಿಂದ ಇಷ್ಟಾರ್ಥಗಳು ಬೇಗ ಸಿದ್ಧಿಸುತ್ತವೆ.

• ಅಧಿಕ ಮಾಸದಲ್ಲಿ ಪ್ರತಿದಿನವೂ ದಕ್ಷಿಣಾವರ್ತಿ ಶಂಖವನ್ನು ಪೂಜಿಸುವುದರಿಂದ ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೆ, ಲಕ್ಷ್ಮೀ ದೇವಿಯ ಆಶೀರ್ವಾದ ಸಹ ಲಭಿಸಲಿದೆ.   

• ವ್ಯಾಪಾರ ವ್ಯವಹಾರದಲ್ಲಿ , ಉದ್ಯೋಗದಲ್ಲಿ ಏಳಿಗೆಯನ್ನು ಬಯಸುವವರು ಅಧಿಕ ಮಾಸದ ನವಮಿ ತಿಥಿಯಂದು ಕನ್ಯೆಗೆ ಭೋಜನವನ್ನು ನೀಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದಾಗಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.

ದಾನ-ಧರ್ಮಗಳಿಗೆ  ಅತಿ ಪ್ರಶಸ್ತ ಕಾಲ - ಅಧಿಕ ಮಾಸ

ಕೃಷ್ಣ ಪಕ್ಷದಲ್ಲಿ ಮಾಡಬೇಕಾದ ದಾನ 
ಬೆಳ್ಳಿ ದೀಪದಲ್ಲಿ ತುಪ್ಪವನ್ನು ಹಾಕಿ ದಾನವನ್ನು ನೀಡಬೇಕು. ಬಂಗಾರ ಅಥವಾ ಕಂಚಿನ ಪಾತ್ರೆ, ಬೆಲ್ಲ, ಬೇಳೆ, ಕರ್ಪೂರ, ಕೇಸರಿ, ಕಸ್ತೂರಿ, ಶಂಖ, ಗರುಡ ಗಂಟೆ, ಮುತ್ತಿನ ಹಾರ, ಆಭರಣಗಳನ್ನು ಶಕ್ತಿಯಿದ್ದವರು ದಾನವಾಗಿ ನೀಡಿದರೆ ಉತ್ತಮ ಫಲಪ್ರಾಪ್ತಿಯಾಗುತ್ತದೆ.

ಇದನ್ನು ಓದಿ : ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..! 

ಶುಕ್ಲ ಪಕ್ಷದಲ್ಲಿ ಮಾಡಬೇಕಾದ ದಾನ 
ಸಿಹಿ, ಕೀರಿನಿಂದ ತುಂಬಿದ ಪಾತ್ರೆ, ಮೊಸರು, ರೇಷ್ಮೆ ವಸ್ತ್ರ, ತುಪ್ಪ, ಎಳ್ಳು, ಬೆಲ್ಲ, ಅಕ್ಕಿ, ಗೋಧಿ, ಹಾಲು, ಕಿಚಡಿ, ಸಕ್ಕರೆ ಅಥವಾ ಜೇನು ತುಪ್ಪ , ತಾಮ್ರದ ಪಾತ್ರೆ ಮುಂತಾದ ವಸ್ತುಗಳನ್ನು ದಾನ ಮಾಡಿದರೆ ದೇವರ ಕೃಪೆ ಸಿಗುವುದಲ್ಲದೇ, ಅಂದುಕೊಂಡ ಕೆಲಸ ಸುಲಭವಾಗಿ ಆಗುತ್ತದೆ.

click me!