ಮನೆಯಲ್ಲಿ ಲಕ್ಷ್ಮೀಯು ಸದಾ ನೆಲೆಸಬೇಕು, ಸಂಪತ್ತು-ಸಮೃದ್ಧಿ ಮನೆಯಲ್ಲಿ ವೃದ್ಧಿಗೊಳ್ಳಬೇಕೆಂದು ಎಲ್ಲರೂ ಬಯಸುತ್ತಾರೆ. ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮೀ ವಾಸಿಸುತ್ತಾಳೆ. ಸ್ವಚ್ಛ ಮಾಡಲು ಬಳಸುವ ಪೊರಕೆ ಸಹ ಲಕ್ಷ್ಮೀದೇವಿಯ ಪ್ರತೀಕವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಪೊರಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದಿದ್ದರೆ ಮತ್ತು ಅದನ್ನು ಎಲ್ಲೆಂದರಲ್ಲಿ ಇಟ್ಟರೆ ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ಮನೆಯ ಸ್ವಚ್ಛತೆಗೆ ಉಪಯೋಗಿಸುವ ಪೊರಕೆಯನ್ನು ಯಾವೆಲ್ಲ ರೀತಿ ಬಳಸಬೇಕು ಮತ್ತು ಯಾವ ಜಾಗದಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿಯೋಣ..
ಹಿಂದೂ ಸಂಸ್ಕೃತಿಯಲ್ಲಿ ಹಲವಾರು ಆಚರಣೆಗಳಿಗೆ ಅದರದ್ದೇ ಆದ ವಿಶೇಷವಾದ ಕಾರಣಗಳಿವೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುಚಿತ್ವಕ್ಕೆ ಎಲ್ಲಿ ಆದ್ಯತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀಯು ಸದಾ ವಾಸವಾಗಿರುತ್ತಾಳೆ ಎಂಬ ನಂಬಿಕೆ ಇದೆ. ರಾತ್ರಿ ಹೊತ್ತು ಎಂಜಲಾಗಿರುವ ಪಾತ್ರೆಗಳನ್ನು ತೊಳಯದೇ ಹಾಗೇ ಬಿಟ್ಟರೆ ದರಿದ್ರ ಬರುತ್ತದೆ, ಸಂಜೆ ಲಕ್ಷ್ಮೀ ಬರುವ ಹೊತ್ತು ಕಸ ಗುಡಿಸಬಾರದು, ಹೀಗೆ ಮಾಡಿದರೆ ಮನೆಗೆ ದರಿದ್ರ ಹೀಗೆ ಮುಂತಾದ ಹತ್ತು ಹಲವು ಆಚರಣೆಗಳು ನಡೆದುಕೊಂಡು ಬಂದಿವೆ.
ಈ ಆಚರಣೆಗಳಿಗೆ ಸರಿಯಾದ ಕಾರಣ ತಿಳಿಯದೇ ಮೂಢನಂಬಿಕೆ ಎಂದು ಹೇಳುವವರು ಇದ್ದಾರೆ. ಹೀಗೆ ಮನೆಯಲ್ಲಿ ಮಾಡುವ ಕೆಲಸದಿಂದ, ಸರಿಯಲ್ಲದ ಆಚರಣೆಗಳಿಂದ ವಾಸ್ತು ದೋಷ ಉಂಟಾಗುವುದಲ್ಲದೇ, ಆರ್ಥಿಕ ನಷ್ಟವನ್ನು ಸಹ ಎದುರಿಸಬೇಕಾಗುತ್ತದೆ. ಪೊರಕೆಯು ಲಕ್ಷ್ಮೀ ದೇವಿಯ ಪ್ರತೀಕವೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಹಾಗಾಗಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿಡದಿದ್ದರೆ ವಾಸ್ತುದೋಷ ಉಂಟಾಗುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಎಲ್ಲಿಡಬೇಕು? ಯಾವ ರೀತಿ ಬಳಸಬೇಕೆಂಬುದನ್ನು ನೋಡೋಣ..
ಇದನ್ನು ಓದಿ: ಹಣೆಯ ರೇಖೆ ಹೇಳುತ್ತೆ ನಿಮ್ಮ ಭವಿಷ್ಯವನ್ನು.!
ಸೂರ್ಯಾಸ್ತದ ನಂತರ ಕಸ ಗುಡಿಸಬಾರದು
ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚಿ ಭಜನೆ ಮಾಡುಬೇಕು. ಕಸ ಗುಡಿಸಬಾರದು, ಸಂಜೆ ಲಕ್ಷ್ಮೀ ಬರುವ ಹೊತ್ತು. ಹೀಗಾಗಿ ಆ ಹೊತ್ತಿನಲ್ಲಿ ದೇವರ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂಬುದು ಪೂರ್ವಜರ ಅಭಿಪ್ರಾಯ ಮತ್ತು ಮನೆಯ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯ. ವಾಸ್ತು ಶಾಸ್ತ್ರದಲ್ಲೂ ಈ ಬಗ್ಗೆ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಕಸ ಗುಡಿಸುವುದನ್ನು ಅಶುಭವೆಂದು ಹೇಳಲಾಗಿದೆ. ಲಕ್ಷ್ಮೀ ಮನೆಗೆ ಬರುವ ಹೊತ್ತಿನಲ್ಲಿ ಕಸ ಗುಡಿಸುತ್ತಿದ್ದರೆ ದೇವಿಯು ಸಿಟ್ಟಾಗಿ ಮನೆಗೆ ದರಿದ್ರ ಉಂಟಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಹಾಗಾಗಿ ಸೂರ್ಯ ಮುಳುಗಿದ ನಂತರ ಕಸ ಗುಡಿಸಬಾರದು.
ಪೊರೆಕೆಯನ್ನು ಈ ದಿನ ಖರೀದಿಸಿದರೆ ಶುಭ
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಶನಿವಾರದಂದು ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ. ಶನಿವಾರ ಪೊರಕೆ ಖರೀದಿಸಿದರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ. ಜೊತೆಗೆ ಶನಿದೇವರ ಕೃಪೆಯೂ ಲಭಿಸುತ್ತದೆ.
ಅಡುಗೆ ಮನೆಯಲ್ಲಿ ಪೊರಕೆಯನ್ನಿಡಬಾರದು
ಅಡುಗೆ ಮನೆಯಲ್ಲಿ ಪೊರಕೆಯನ್ನಿಡುವುದರಿಂದ ವಾಸ್ತುದೋಷ ಉಂಟಾಗುತ್ತದೆ. ಸ್ವಚ್ಛವಾಗಿರಬೇಕಾದ ಸ್ಥಳದಲ್ಲಿ ಸ್ವಚ್ಛತೆಗೆ ಉಪಯೋಗಿಸುವ ವಸ್ತುಗಳನ್ನಿಟ್ಟರೆ ದರಿದ್ರ ಬರುವುದಲ್ಲದೇ, ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಅಡುಗೆ ಮನೆಯಲ್ಲಿ ಪೊರಕೆಯನ್ನಿಡುವುದರಿಂದ ಮನೆಯ ಸದಸ್ಯರಿಗೆ ಸ್ವಾಸ್ಥ್ಯ ಸಂಬಂಧಿ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಪೊರಕೆಯನ್ನು ಅಡುಗೆ ಮನೆಯಿಂದ ದೂರವಿಡುವುದು ಉತ್ತಮ.
ಇದನ್ನು ಓದಿ: ಮಾರ್ಗಿಯಾಗುತ್ತಿರುವ ಶನಿ; ಯಾವ ರಾಶಿಗಳ ಮೇಲೆ ಯಾವ ಪರಿಣಾಮ...!
ಕಣ್ಣಿಗೆ ಕಾಣುವಂತೆ ಪೊರಕೆ ಇಡಬಾರದು
ಪೊರಕೆಯನ್ನು ಯಾವಾಗಲೂ ಕಣ್ಣಿಗೆ ಕಾಣದಂತೆ ಮುಚ್ಚಿಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಎಲ್ಲರ ಕಣ್ಣಿಗೆ ಕಾಣುವಂಥ ಜಾಗದಲ್ಲಿ ಇಡಬಾರದು. ಹೊರಗೆ ಕಾಣುವಂತೆ ಇಡುವುದರಿಂದ ಧನಹಾನಿಯಾಗುತ್ತದೆ. ಹಾಗಾಗಿ ಪೊರಕೆಯನ್ನು ಕಣ್ಣಿಗೆ ಕಾಣದಂತೆ ಇಡುವುದು ಉತ್ತಮ. ಅಷ್ಟೇ ಅಲ್ಲದೇ ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ನಿಲ್ಲಿಸಿ ಇಡುವುದು ಅಪಶಕುನವೆಂದು, ಇದರಿಂದ ಮನೆಗೆ ದರಿದ್ರ ಉಂಟಾಗುವುದೆಂದು ಹೇಳಲಾಗಿದೆ. ಹಾಗಾಗಿ ಪೊರಕೆಯನ್ನು ಯಾವಾಗಲೂ ನೆಲಕ್ಕೆ ಮಲಗಿಸಿಡಬೇಕು.
ಪೊರಕೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಪೊರಕೆಯನ್ನು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿಡಬೇಕು. ಈ ದಿಕ್ಕಿನಲ್ಲಿ ಪೊರಕೆಯನ್ನಿಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಆವರಿಸುವುದಿಲ್ಲವೆಂದು ಹೇಳಲಾಗಿದೆ.
ಈಶಾನ್ಯ ದಿಕ್ಕಿನಲ್ಲಿ ಪೊರಕೆಯನ್ನಿಡಬಾರದು.
ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ದೇವತೆಗಳು ಮನೆಯನ್ನು ಪ್ರವೇಶಿಸುವುದಿಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೊರಕೆಯನ್ನು ತುಳಿಯಬಾರದು
ಪೊರಕೆಯನ್ನು ಮೆಟ್ಟಿದರೆ ಲಕ್ಷ್ಮೀಯನ್ನು ಅವಮಾನಿಸಿದಂತೆ. ಪೊರಕೆಯನ್ನು ತುಳಿಯುವುದರಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಮತ್ತು ಮನೆಗೆ ದರಿದ್ರ ಬರುತ್ತದೆ. ಹಾಗಾಗಿ ಗೊತ್ತಾಗದೇ ಪೊರಕೆಯನ್ನು ತುಳಿದರೆ ಅದಕ್ಕೆ ನಮಸ್ಕರಿಸಬೇಕೆಂದು ಶಾಸ್ತ್ರವು ಹೇಳುತ್ತದೆ. ಮುರಿದ ಪೊರಕೆಯನ್ನು ಬಳಸುವುದು ಸಹ ಅಶುಭವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಅಧಿಕ ಮಾಸ ಬಹು ಶ್ರೇಷ್ಠ; ಅಂದುಕೊಂಡದ್ದು ಆಗಬೇಕೆಂದರೆ ಹೀಗೆ ಮಾಡಿ..
ಮನೆಯವರು ಹೊರಗಡೆ ಹೊರಟ ತಕ್ಷಣ ಕಸ ಗುಡಿಸಬಾರದು
ಮನೆಯ ಸದಸ್ಯರು ಕೆಲಸದ ಮೇಲೆ ಹೊರಗಡೆ ಹೊರಟ ಕೂಡಲೇ ಕಸ ಗುಡಿಸುವುದು ಅಪಶಕುನವೆಂದು ಹೇಳಲಾಗುತ್ತದೆ. ಹಾಗಾಗಿ ಸ್ವಲ್ಪ ಸಮಯದ ನಂತರ ಕಸಗುಡಿಸದರೆ ಉತ್ತಮ.