ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

By Suvarna NewsFirst Published Nov 21, 2022, 2:54 PM IST
Highlights

ಪ್ರತಿಯೊಬ್ಬರ ಮನೆಯಲ್ಲಿ ಪ್ರತಿ ನಿತ್ಯ ದೇವರ ಪೂಜೆ ನಡೆಯುತ್ತದೆ. ಮೂರ್ತಿ ಹಾಗೂ ಫೋಟೋ ಇಟ್ಟು ಜನರು ಪೂಜೆ ಮಾಡ್ತಾರೆ. ಈ ಎರಡರ ಪೂಜೆ ವಿಧಾನ ಒಂದೇ ರೀತಿಯಲ್ಲ ಎಂಬುದು ಬಹುತೇಕರಿಗೆ ತಿಳಿದಿಲ್ಲ. 
 

ಹಿಂದೂ ಧರ್ಮ ಪಾಲನೆ ಮಾಡುವ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ಮನೆಯಲ್ಲಿ ದೇವರಿಗಾಗಿಯೇ ಒಂದು ಜಾಗ ಮೀಸಲಿಡಲಾಗುತ್ತದೆ. ದೇವರ ಮನೆಯಲ್ಲಿ ಕೆಲವರು ಮೂರ್ತಿಗಳನ್ನು ಇಟ್ಟು ಪೂಜೆ ಮಾಡ್ತಾರೆ. ಮತ್ತೆ ಕೆಲವರು ದೇವರ ಫೋಟೋ ಇಟ್ಟು ಪೂಜೆ ಮಾಡ್ತಾರೆ. ಇನ್ನು ಕೆಲವರ ಮನೆಯಲ್ಲಿ ಮೂರ್ತಿ ಹಾಗೂ ಫೋಟೋ ಎರಡರ ಪೂಜೆಯೂ ನಡೆಯುತ್ತದೆ. ಪ್ರತಿ ದಿನ ದೇವರಿಗೆ ಅಕ್ಷತೆ, ಅರಿಶಿನ, ಕುಂಕುಮ ಹಾಕಿ, ಹೂ ಏರಿಸಿ, ಆರತಿ ಬೆಳಗಿ ಪೂಜೆ ಮಾಡ್ತೇವೆ. ಮೂರ್ತಿ ಹಾಗೂ ಫೋಟೋ ಎರಡಕ್ಕೂ ಸಾಮಾನ್ಯವಾಗಿ ಒಂದೇ ರೀತಿ ಪೂಜೆ ಮಾಡ್ತೇವೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ತಪ್ಪು. ಮೂರ್ತಿ ಪೂಜೆ ಹಾಗೂ ಫೋಟೋ ಪೂಜೆಗೆ ಸಾಕಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸ ತಿಳಿಯದೆ ಒಂದೇ ರೀತಿ ಪೂಜೆ ಮಾಡಿದ್ರೆ ದೇವರ ಆರಾಧನೆ ಮಾಡಿದ ಫಲ ನಿಮಗೆ ಪ್ರಾಪ್ತಿಯಾಗುವುದಿಲ್ಲ. ನಾವಿಂದು ಮೂರ್ತಿ ಪೂಜೆ ಹಾಗೂ ದೇವರ ಪೂಜೆ ಇವೆರಡರಲ್ಲಿರುವ ವ್ಯತ್ಯಾಸವನ್ನು ನಿಮಗೆ ಹೇಳ್ತೇವೆ.

ಮೂರ್ತಿ (Idol) ಪೂಜೆ ಹಾಗೂ ಫೋಟೋ (Photo) ಪೂಜೆಗಿರುವ ವ್ಯತ್ಯಾಸ :
ಮೂರ್ತಿ ಪೂಜೆ (Worship)ಯನ್ನು ಸಿದ್ಧ ಪೂಜೆ ಎಂದು ಕರೆಯಲಾಗುತ್ತದೆ. ಫೋಟೋ ಪೂಜೆಯನ್ನು ಮಾನಸ ಪೂಜೆ ಎಂದು ಕರೆಯಲಾಗುತ್ತದೆ. ಸಿದ್ಧ ಆರಾಧನೆ ಎಂದರೆ ಪೂರ್ಣ ವಿಧಿ – ವಿಧಾನಗಳ ಮೂಲಕ ಮಾಡುವ ಪೂಜೆಯಾಗಿದೆ. ಮಾನಸ ಪೂಜೆ ಎಂದರೆ ಮಾನಸಿಕ ಅಂದರೆ ಮನಸ್ಸಿನಿಂದ ಮಾಡುವ ಪೂಜೆ ಎಂದರ್ಥವಾಗುತ್ತದೆ.

ಮೂರ್ತಿ ಪೂಜೆಯಲ್ಲಿ ಯಾವಾಗ್ಲೂ ಆಸನದ ಮೇಲೆ ಕುಳಿತುಕೊಳ್ಳಬೇಕು. ಆದರೆ ಫೋಟೋಕ್ಕೆ ಪೂಜೆ ಮಾಡುವಾಗ ನೀವು ಆಸನದ ಮೇಲೆ ಕುಳಿತುಕೊಳ್ಳಬೇಕಾಗಿಲ್ಲ. 

ಮೂರ್ತಿ ಪೂಜೆ ಮಾಡುವವರು ಪ್ರತಿ ದಿನ ಜಲಾಭಿಷೇಕ ಮಾಡಬೇಕು ಎನ್ನಲಾಗುತ್ತದೆ. ದೇವರ ಮೂರ್ತಿಗೆ ಜಲದ ಜೊತೆ ಹಾಲು, ತುಪ್ಪ ಸೇರಿದಂತೆ ಬೇರೆ ವಸ್ತುಗಳಿಂದ ಅಭಿಷೇಕ ಮಾಡಬಹುದು. ಆದ್ರೆ ಫೋಟೋ ಪೂಜೆಯಲ್ಲಿ ಅಭಿಷೇಕಕ್ಕೆ ಮಹತ್ವವಿಲ್ಲ. ನೀವು ಫೋಟೋ ಪೂಜೆ ಮಾಡುವಾಗ ಜಲಾಭಿಷೇಕ ಮಾಡುವ ಅಗತ್ಯವಿಲ್ಲ.

ಮೂರ್ತಿ ಪೂಜೆಯಲ್ಲಿ ಸಾಧನೆ ಮಾಡಬಹುದು. ಆ ಮೂಲಕ ನಿಮ್ಮ ಇಷ್ಟವನ್ನು ಈಡೇರಿಸಿಕೊಳ್ಳಬಹುದು. ಆದ್ರೆ ಫೋಟೋ ಪೂಜೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ.

ಈ ZODIAC SIGNS ಜನ ಭರವಸೆ ಈಡೇರಿಸ್ತಾರೆ ಅನ್ನೋ ನಿರೀಕ್ಷೆ ಬಿಟ್ಬಿಡಿ

ಮನೆ ಅಥವಾ ದೇವರ ಸ್ಥಾನದಲ್ಲಿ ನೀವು ಮೂರ್ತಿ ಪೂಜೆ ಮಾಡುತ್ತೀರಿ ಎಂದಾದ್ರೆ ಅದಕ್ಕೊಂದಿಷ್ಟು ನಿಯಮವಿದೆ. ನೀವು ಮೂರ್ತಿಯನ್ನು ತಂದು ಅದನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರವೇ ನೀವು ಪೂಜೆ ಶುರು ಮಾಡಬೇಕು. ಆದ್ರೆ ಫೋಟೋ ಪೂಜೆಯಲ್ಲಿ ದೇವರನ್ನು ಸ್ಥಾಪನೆ ಮಾಡುವ ಅಗತ್ಯವಿರುವುದಿಲ್ಲ. ನೀವು ದೇವರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಬಹುದು. 

ಮೂರ್ತಿ ಪೂಜೆ ವೇಳೆ ನೀವು ಪೂಜೆ ಮಾಡುವ ವಿಗ್ರಹದ ಗಾತ್ರ ಕೂಡ ಮಹತ್ವ ಪಡೆಯುತ್ತದೆ. ನೀವು ಮನೆಯಲ್ಲಿ ಪೂಜೆ ಮಾಡುವ ಮೂರ್ತಿ 6 ಇಂಚಿಗಿಂತ ದೊಡ್ಡದಿರಬಾರದು. ಫೋಟೋ ಪೂಜೆಯಲ್ಲಿ ಯಾವುದೇ ನಿಯಮ ಅನ್ವಯವಾಗುವುದಿಲ್ಲ. ನೀವು ಎಷ್ಟು ದೊಡ್ಡ ಫೋಟೋವನ್ನಾದ್ರೂ ಬಳಸಬಹುದು. 

ನೀವು ಮೂರ್ತಿ ಪೂಜೆ ಮಾಡುವಾಗ ದೇವರ ಬೀಜ ಮಂತ್ರವನ್ನು ಜಪಿಸುವ ಸ್ವಾತಂತ್ರ್ಯವಿದೆ. ಆದ್ರೆ ಫೋಟೋ ಪೂಜೆಯಲ್ಲಿ ಬೀಜ ಮಂತ್ರಗಳ ಪಠಣಿಸುವುದನ್ನು ನಿಷೇಧಿಸಲಾಗಿದೆ.

ದೇವರ ಪೂಜೆ ಮಾಡುವಾಗ ನೀವು ಸ್ನಾನ ಮಾಡಿ ಶುದ್ಧರಾಗುವುದು ಬಹಳ ಮುಖ್ಯ. ಒಂದ್ವೇಳೆ ನೀವು ಅನಾರೋಗ್ಯಕ್ಕೆ (Ill) ಒಳಗಾಗಿದ್ದು, ಸ್ನಾನ ಮಾಡುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ನೀವು ಫೋಟೋ ಪೂಜೆಯನ್ನು ಮಾಡಬಹುದು. ಫೋಟೋ ಪೂಜೆಯಲ್ಲಿ ಸ್ನಾನ ಮಾಡುವುದು ಅನಿವಾರ್ಯವಲ್ಲ. ಆದ್ರೆ ಮೂರ್ತಿ ಪೂಜೆಯಲ್ಲಿ ಸ್ನಾನ ಮಾಡುವುದು ಕಡ್ಡಾಯ.

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

ಮೂರ್ತಿ ಪೂಜೆ ವೇಳೆ ನೀವು ಯಾವ ಮೂರ್ತಿಯನ್ನು ಪೂಜೆಗೆ ಬಳಸುತ್ತಿದ್ದೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಅಷ್ಟಧಾತು ಅಥವಾ ಚಿನ್ನ – ಬೆಳ್ಳಿಯಿಂದ ಮಾಡಿದ ಮೂರ್ತಿಯನ್ನು ನೀವು ಸ್ಥಾಪನೆ ಮಾಡಬೇಕು. ಆದ್ರೆ ಫೋಟೋಕ್ಕೆ ಇದ್ಯಾವುದೂ ಅನ್ವಯಿಸುವುದಿಲ್ಲ. 
 

click me!